Idli Recipe: ಉಳಿದಿರುವ ಇಡ್ಲಿಯಿಂದ ಮಾಡಿ ಚಾಟ್ ರೆಸಿಪಿ: ಮಕ್ಕಳು ಇಷ್ಟಪಟ್ಟು ತಿನ್ನುವುದರಲ್ಲಿ ಡೌಟಿಲ್ಲ
ಕನ್ನಡ ಸುದ್ದಿ  /  ಜೀವನಶೈಲಿ  /  Idli Recipe: ಉಳಿದಿರುವ ಇಡ್ಲಿಯಿಂದ ಮಾಡಿ ಚಾಟ್ ರೆಸಿಪಿ: ಮಕ್ಕಳು ಇಷ್ಟಪಟ್ಟು ತಿನ್ನುವುದರಲ್ಲಿ ಡೌಟಿಲ್ಲ

Idli Recipe: ಉಳಿದಿರುವ ಇಡ್ಲಿಯಿಂದ ಮಾಡಿ ಚಾಟ್ ರೆಸಿಪಿ: ಮಕ್ಕಳು ಇಷ್ಟಪಟ್ಟು ತಿನ್ನುವುದರಲ್ಲಿ ಡೌಟಿಲ್ಲ

ದಕ್ಷಿಣ ಭಾರತದ ಪ್ರಖ್ಯಾತ ಉಪಹಾರಗಳಲ್ಲಿ ಒಂದಾದ ಇಡ್ಲಿಯನ್ನು ಇಷ್ಟಪಡದವರು ಬಹುಷಃ ಇರಲಿಕ್ಕಿಲ್ಲ. ಬೆಳಗ್ಗೆ ಮಾಡಿರುವ ಇಡ್ಲಿ ಉಳಿದಿದ್ದರೆ ಇದರಿಂದ ರುಚಿಕರವಾದ ಚಾಟ್ ತಯಾರಿಸಬಹುದು. ಮನೆಮಂದಿಯೆಲ್ಲಾ ಬಾಯಿ ಚಪ್ಪರಿಸಿಕೊಂಡು ತಿಂತಾರೆ. ಹಾಗಿದ್ರೆ ಅದನ್ನು ಮಾಡುವುದು ಹೇಗೆ, ಇಲ್ಲಿ ತಿಳಿಯಿರಿ.

ಇಡ್ಲಿ ಚಾಟ್ ರೆಸಿಪಿ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಇಡ್ಲಿ ಚಾಟ್ ರೆಸಿಪಿ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. (Pinterest )

ದಕ್ಷಿಣ ಭಾರತದಲ್ಲಿ ಬೆಳಗ್ಗಿನ ತಿಂಡಿಗೆ ಇಡ್ಲಿಯನ್ನು ಮಾಡದ ಅಡುಗೆ ಮನೆಗಳು ಬಹುಷಃ ಇರಲಿಕ್ಕಿಲ್ಲ. ಇದು ದಕ್ಷಿಣ ಭಾರತದ ಪ್ರಸಿದ್ಧ ಉಪಹಾರ ಭಕ್ಷ್ಯಗಳಲ್ಲೊಂದು. ಇಡ್ಲಿಯನ್ನು ಚಟ್ನಿ ಅಥವಾ ಸಾಂಬಾರ್ ಜತೆ ಸವಿದರೆ ಅದರ ಮಜಾವೇ ಬೇರೆ. ಆದರೆ, ಉಳಿದಿರುವ ಇಡ್ಲಿಗಳನ್ನು ಬಹುತೇಕ ಮಂದಿ ಫ್ರಿಡ್ಜ್ ಗಳಲ್ಲಿ ಇಡುತ್ತಾರೆ. ಫ್ರಿಡ್ಜ್ ಗಿಟ್ಟ ಇಡ್ಲಿ ಎಷ್ಟೋ ದಿನದ ಬಳಿಕ ಡಸ್ಟ್ ಬಿನ್ ಸೇರುತ್ತೆ. ಹೀಗೆ ಉಳಿದಿರುವ ಇಡ್ಲಿಯನ್ನು ತಿಪ್ಪೆಗುಂಡಿಗೆ ಎಸೆಯುವ ಮದಲು ಮನೆಯಲ್ಲೇ, ಇದರಿಂದ ಏನಾದರೂ ಖಾದ್ಯ ತಯಾರಿಸಬಹುದು.

ಹೌದು, ಉಳಿದಿರುವ ಇಡ್ಲಿಯಿಂದ ರುಚಿಕರವಾದ ಭಕ್ಷ್ಯಗಳನ್ನು ತಯಾರಿಸಬಹುದು. ಈ ತರಹ ವಿಭಿನ್ನ ರೆಸಿಪಿ ಮಾಡಿದ್ರೆ ಖಂಡಿತಾ ಮನೆ ಮಂದಿಯೆಲ್ಲಾ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಅತ್ತ ಇಡ್ಲಿಯೂ ವೇಸ್ಟ್ ಆಗುವುದಿಲ್ಲ. ಅದರಲ್ಲೂ ಸಂಜೆ ಟೀ ಜತೆ ಏನಾದರೂ ಸ್ನಾಕ್ಸ್ ತಿನ್ನಬೇಕೆಂದು ಆಸೆಯಾದರೆ ಈ ಇಡ್ಲಿ ಚಾಟ್ ರೆಸಿಪಿಯನ್ನು ಟ್ರೈ ಮಾಡಬಹುದು. ಮಕ್ಕಳು ಸಂಜೆ ಬಂದು ಮಸಾಲ್ ಪುರಿ. ಪಾನಿ ಪುರಿ ಬೇಕು ಎಂದು ಹಠ ಮಾಡಿದ್ರೆ, ಮನೆಯಲ್ಲೇ ತಯಾರಿಸಬಹುದಾದ ಇಡ್ಲಿ ಚಾಟ್ ರೆಸಿಪಿಯನ್ನು ಮಾಡಿ ಕೊಡಬಹುದು. ಖಂಡಿತಾ ಮಕ್ಕಳಿಗೂ ಇಷ್ಟವಾಗಬಹುದು. ಹಾಗಿದ್ದರೆ ಇಡ್ಲಿ ಚಾಟ್ ರೆಸಿಪಿ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ:

ಇಡ್ಲಿ ಚಾಟ್ ರೆಸಿಪಿ

ಬೇಕಾಗುವ ಪದಾರ್ಥಗಳು: ಇಡ್ಲಿ- 10-12, ಅಡುಗೆ ಎಣ್ಣೆ, ಖಾರದ ಮೆಣಸಿನ ಪುಡಿ- 1 ಟೀ ಚಮಚ, ಚಾಟ್ ಮಸಾಲಾ- 1 ಟೀ ಚಮಚ, ಜೀರಿಗೆ ಪುಡಿ- 1 ಟೀ ಚಮಚ, ಸ್ಯಾಂಡ್‌ವಿಚ್ ಮಸಾಲಾ ಪುಡಿ- ಅರ್ಧ ಟೀ ಚಮಚ, ರುಚಿಗೆ ತಕ್ಕಷ್ಟು ಉಪ್ಪು (ಕಪ್ಪು ಉಪ್ಪು/Black Salt), ಒಣಗಿದ ಮಾವಿನ ಪುಡಿ (ಆಮ್ಚೂರ್)- ½ ಟೀ ಚಮಚ, ಬೆಣ್ಣೆ- 4 ಟೀ ಚಮಚ, ಕೊತ್ತಂಬರಿ ಸೊಪ್ಪು- ಸ್ವಲ್ಪ, ನಿಂಬೆ ರಸ – 2 ಟೀ ಚಮಚ, ಮೊಸರು- ಸ್ವಲ್ಪ, ಖರ್ಜೂರ ಮತ್ತು ಹುಣಸೆ ಹಣ್ಣಿನ ಚಟ್ನಿ- ಸ್ವಲ್ಪ, ಹಸಿರು ಚಟ್ನಿ- ಸ್ವಲ್ಪ, ಮಸಾಲಾ ಕಡಲೆಕಾಯಿ- ಸ್ವಲ್ಪ, ದಾಳಿಂಬೆ ಹಣ್ಣು- ಸ್ವಲ್ಪ, ಸೇವ್- ಸ್ವಲ್ಪ

ಮಾಡುವ ವಿಧಾನ: ಇಡ್ಲಿಯನ್ನು ಸಣ್ಣಗೆ ಕತ್ತರಿಸಿ ಇಟ್ಟುಕೊಳ್ಳಿ. ಒಂದು ಕಡಾಯಿಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಇದಕ್ಕೆ ಕತ್ತರಿಸಿಟ್ಟ ಇಡ್ಲಿಯನ್ನು ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೆ ಡೀಪ್ ಫ್ರೈ ಮಾಡಿ. ಎಣ್ಣೆಯಲ್ಲಿ ಕರಿದ ಇಡ್ಲಿಯನ್ನು ಒಂದು ತಟ್ಟೆಗೆ ವರ್ಗಾಯಿಸಿ. ಇದಕ್ಕೆ ಕೆಂಪು ಮೆಣಸಿನ ಪುಡಿ, ಕಪ್ಪು ಉಪ್ಪು, ಚಾಟ್ ಮಸಾಲಾ, ಜೀರಿಗೆ ಪುಡಿ, ಸ್ಯಾಂಡ್ವಿಚ್ ಮಸಾಲಾ ಪುಡಿ, ಮಾವಿನ ಪುಡಿ, ಬೆಣ್ಣೆ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ರೆಡ್ ಚಿಲ್ಲಿ ಫ್ಲೇಕ್ಸ್ ಅನ್ನು ಸೇರಿಸಿ ಮಿಶ್ರಣ ಮಾಡಿ.

ಈ ಮಿಶ್ರಣವನ್ನು ಸರ್ವಿಂಗ್ ಪ್ಲೇಟ್‍ಗೆ ವರ್ಗಾಯಿಸಿ. ಇದಕ್ಕೆ ಸಿಹಿ ಮೊಸರು, ಖರ್ಜೂರ ಮತ್ತು ಹುಣಸೆಹಣ್ಣಿನ ಚಟ್ನಿ, ಹಸಿರು ಚಟ್ನಿ, ಸೇವ್, ಮಸಾಲೆ ಕಡಲೆಕಾಯಿ, ದಾಳಿಂಬೆ ಬೀಜ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಮೇಲೆ ನಿಂಬೆ ಹಣ್ಣಿನ ರಸ ಸಿಂಪಡಿಸಿದರೆ ರುಚಿಕರವಾದ ಇಡ್ಲಿ ಚಾಟ್ ರೆಸಿಪಿ ಸವಿಯಲು ಸಿದ್ಧ.

Whats_app_banner