ಒಂದೇ ರೀತಿಯ ಉಪಾಹಾರ ತಿನ್ನುವುದಿಲ್ಲವಾದರೆ ಮಕ್ಕಳಿಗಾಗಿ ಮಾಡಿ ಸಿಹಿ ಪರೋಟ; ಲಂಚ್ ಬಾಕ್ಸ್‌ಗೂ ಬೆಸ್ಟ್ ಈ ರೆಸಿಪಿ
ದಿನಾ ಬೆಳಗ್ಗೆ ಏನು ತಿಂಡಿ ಮಾಡುವುದು ಎಂದು ಗೃಹಿಣಿಯರು ಸಾಮಾನ್ಯವಾಗಿ ತಲೆಕೆಡಿಸಿಕೊಳ್ಳುತ್ತಾರೆ. ಅದರಲ್ಲೂ ಮಕ್ಕಳಂತೂ ಎಲ್ಲಾ ಬಗೆಯ ಉಪಾಹಾರಗಳನ್ನು ಇಷ್ಟಪಡುವುದಿಲ್ಲ. ಹೀಗಾಗಿ ಮಕ್ಕಳಿಗೆ ಸಿಹಿ ಪರೋಟವನ್ನು ಮಾಡಿ ಕೊಡಬಹುದು. ಮಕ್ಕಳ ಲಂಚ್ ಬಾಕ್ಸ್‌ಗೂ ಹಾಕಬಹುದು. ಬಹಳ ರುಚಿಕರವಾಗಿರುವ ಈ ರೆಸಿಪಿ ಮಾಡುವುದು ಹೇಗೆ ಎಂಬುದು ಇಲ್ಲಿದೆ.
ಚಳಿಗಾಲದಲ್ಲಿ ಬಿಸಿಬಿಸಿ ಪರೋಟಗಳನ್ನು ತಿನ್ನುವ ಮಜಾವೇ ಬೇರೆ. ಪಲ್ಯ, ಗ್ರೇವಿ, ಚಟ್ನಿ. ಬೆಣ್ಣೆ, ತುಪ್ಪದೊಂದಿಗೂ ಪರೋಟವನ್ನು ತಿನ್ನಬಹುದು. ಆದರೆ, ಮಕ್ಕಳು ಮಾತ್ರ ಸಿಹಿ ಆಹಾರವನ್ನು ಇಷ್ಟಪಡುತ್ತಾರೆ. ಮಕ್ಕಳಿಗೆ ಸಿಹಿ ಪರೋಟ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ನೀಡಲಾಗಿದೆ. ಇದನ್ನು ಬಹಳ ಬೇಗನೆ ಮಾಡಬಹುದು. ಮಕ್ಕಳಿಗಾಗಿ ಈ ರೆಸಿಪಿ ಮಾಡಿದರೆ ಉಪಾಹಾರ ಮಾತ್ರವಲ್ಲ ಮಕ್ಕಳ ಲಂಚ್ ಬಾಕ್ಸ್‌ಗೂ ಹಾಕಿ ಕಳುಹಿಸಬಹುದು. ಸಿಹಿ ಪರೋಟ ರೆಸಿಪಿ ಮಾಡುವ ಸರಳ ವಿಧಾನ ಇಲ್ಲಿದೆ.
ಸಿಹಿ ಪರೋಟ ರೆಸಿಪಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ಗೋಧಿ ಹಿಟ್ಟು- ಎರಡು ಕಪ್, ತುರಿದ ಬೆಲ್ಲ- ಅರ್ಧ ಕಪ್, ಉಪ್ಪು ರುಚಿಗೆ ತಕ್ಕಷ್ಟು, ತುಪ್ಪ- ಎರಡು ಟೀ ಚಮಚ.
ಮಾಡುವ ವಿಧಾನ: ಈ ಪರೋಟಾ ಮಾಡಲು ಚಪಾತಿ ಹಿಟ್ಟನ್ನು ಹೇಗೆ ಬೆರೆಸುತ್ತೀರೋ ಹಾಗೆಯೇ ಗೋಧಿ ಹಿಟ್ಟನ್ನು ಮಿಶ್ರಣ ಮಾಡಿ.
- ಸ್ಟೌವ್ ಮೇಲೆ ತವಾ ಇಟ್ಟು ಬಿಸಿ ಮಾಡಿ. ತವಾದ ಮೇಲೆ ತುಪ್ಪವನ್ನು ಹರಡಿ.
- ಇನ್ನೊಂದು ಕಡೆ ಗೋಧಿ ಹಿಟ್ಟಿನಿಂದ ಸಣ್ಣ ಉಂಡೆಯನ್ನು ತೆಗೆದುಕೊಂಡು ಸಣ್ಣ ಪೂರಿಯಂತೆ ಒತ್ತಿರಿ.
- ಅದರಲ್ಲಿ ತುರಿದ ಬೆಲ್ಲವನ್ನು ಉದುರಿಸಿ ಚಪಾತಿಯನ್ನು ಮಡಚಿ ಮತ್ತೊಮ್ಮೆ ಒತ್ತಿರಿ.
- ಇದನ್ನು ತವಾಗೆ ಹಾಕಿ ತುಪ್ಪದಲ್ಲಿ ಹುರಿಯಬೇಕು. ಎರಡೂ ಕಡೆ ಫ್ರೈ ಮಾಡಿದರೆ ರುಚಿಕರವಾದ ಪರೋಟ ರೆಸಿಪಿ ಸವಿಯಲು ರೆಡಿ.
ಪರೋಟವನ್ನು ಮೃದುಗೊಳಿಸಲು ಸಲಹೆಗಳು
ಮೃದುವಾದ ಮತ್ತು ಟೇಸ್ಟಿ ಸಿಹಿ ಪರೋಟ ತಿನ್ನಲು ಬಯಸಿದರೆ ಕೆಲವು ಸಲಹೆಗಳನ್ನು ಅನುಸರಿಸಬಹುದು. ಹಿಟ್ಟನ್ನು ಮಿಶ್ರಣ ಮಾಡುವಾಗ ನೀರಿನ ಬದಲಿಗೆ ಹಾಲನ್ನು ಬಳಸಬಹುದು. ಹಿಟ್ಟು ಮಿಶ್ರಣ ಮಾಡಿದ ನಂತರ ಅದನ್ನು ಮುಚ್ಚಿ, ಅರ್ಧ ಘಂಟೆಯವರೆಗೆ ಪಕ್ಕಕ್ಕೆ ಇರಿಸಿ. ಮುಚ್ಚಳದ ಬದಲಿಗೆ ಒದ್ದೆಯಾದ ಹತ್ತಿ ಬಟ್ಟೆಯನ್ನು ಬಳಸುವುದು ಉತ್ತಮ.
ಪರೋಟವನ್ನು ಬೇಯಿಸುವಾಗ, ಪ್ಯಾನ್ ಅನ್ನು ಮೊದಲು ಬಿಸಿ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಕಡಿಮೆ ಉರಿಯಲ್ಲಿ ಅಥವಾ ಹೆಚ್ಚಿನ ಉರಿಯಲ್ಲಿ ಪರೋಟವನ್ನು ಬೇಯಿಸಬೇಡಿ. ಜ್ವಾಲೆಯು ಮಧ್ಯಮ ಉರಿಯಲ್ಲಿರಲಿ. ಉತ್ತಮ ರುಚಿಗಾಗಿ ಇದನ್ನು ತುಪ್ಪದಲ್ಲಿ ತಯಾರಿಸಬಹುದು.
ನಮ್ಮ ದೇಶದಲ್ಲಿ ಮಾತ್ರವಲ್ಲದೆ ನೇಪಾಳ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಸಿಂಗಾಪುರ, ಥೈಲ್ಯಾಂಡ್, ಮಾರಿಷಸ್, ಟ್ರಿನಿಡಾಡ್ ಮತ್ತು ಮ್ಯಾನ್ಮಾರ್ ಮುಂತಾದ ದೇಶಗಳಲ್ಲಿ ಪರೋಟಗಳನ್ನು ತಿನ್ನುತ್ತಾರೆ. ನಮ್ಮ ದೇಶದ ಪ್ರತಿಯೊಂದು ರಾಜ್ಯದಲ್ಲೂ ಪರೋಟ ತಿನ್ನುವ ಅಭ್ಯಾಸವಿದೆ.
ಈ ಪರೋಟ ಆರೋಗ್ಯಕ್ಕೂ ಒಳ್ಳೆಯದು. ಇದರಲ್ಲಿ ಬೆಲ್ಲ ಬಳಸಿದ್ದೇವೆ. ಆದ್ದರಿಂದ ಇದನ್ನು ತಿನ್ನುವುದರಿಂದ ಕಬ್ಬಿಣದ ಕೊರತೆಯನ್ನು ತಡೆಯುತ್ತದೆ. ಸಿಹಿಗಾಗಿ ಸಕ್ಕರೆಗಿಂತ ಬೆಲ್ಲವನ್ನು ಅವಲಂಬಿಸುವುದು ಉತ್ತಮ.
ವಿಭಾಗ