Arjuna Death:ಅರ್ಜುನ ಸಾವಿನ ನಂತರ ಆನೆಗಳ ಸಭೆ, ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಆನೆಗಳು: ಹೀಗೊಂದು ಪತ್ರ ವೈರಲ್‌-forest news after arjuna elephant death a letter to karnataka cm viral in socia media elephants seeking protection kub ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Arjuna Death:ಅರ್ಜುನ ಸಾವಿನ ನಂತರ ಆನೆಗಳ ಸಭೆ, ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಆನೆಗಳು: ಹೀಗೊಂದು ಪತ್ರ ವೈರಲ್‌

Arjuna Death:ಅರ್ಜುನ ಸಾವಿನ ನಂತರ ಆನೆಗಳ ಸಭೆ, ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಆನೆಗಳು: ಹೀಗೊಂದು ಪತ್ರ ವೈರಲ್‌

Elephants letter to cm siddaramaiah ಕರ್ನಾಟಕದಲ್ಲಿ ಆನೆಗಳ ಸಾವಿನ ನಂತರ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ನಡುವೆ ಆನೆಗಳು ಸಭೆ ನಡೆಸಿ ಸಿಎಂ ಸಿದ್ದರಾಮಯ್ಯ( CM Siddaramaiah) ಅವರಿಗೆ ಬರೆದಿರುವ ಪತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಕರ್ನಾಟಕದ ಆನೆಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಹಕ್ಕೊತ್ತಾಯದ ಪತ್ರ ಬರೆದಿವೆ.
ಕರ್ನಾಟಕದ ಆನೆಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಹಕ್ಕೊತ್ತಾಯದ ಪತ್ರ ಬರೆದಿವೆ.

ಕರ್ನಾಟಕದಲ್ಲೀಗ ವನ್ಯಜೀವಿ ಮಾನವ ಸಂಘರ್ಷದ್ದೇ ಮಾತು.

ಅದರಲ್ಲೂ ಆನೆ, ಹುಲಿ, ಚಿರತೆ ದಾಳಿಯಿಂದ ಜನ ಸಾಯುತಿದ್ದರೆ, ಮತ್ತೊಂದು ಕಡೆ ವನ್ಯಜೀವಿಗಳೂ ಜೀವ ಬಿಡುತ್ತಿವೆ.

ಇತ್ತೀಚಿನ ಉದಾಹರಣೆ ಕಾಡಾನೆ ಸೆರೆಗೆ ಹೋಗಿ ಜೀವ ಬಿಟ್ಟ ಮೈಸೂರು ದಸರಾ ಅಂಬಾರಿ ಆನೆ ಅರ್ಜುನ. ಇದರಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯತೆ ಅಡಗಿದೆಯೋ ಗೊತ್ತಿಲ್ಲ. ಆದರೂ ಅರ್ಜುನನ ಸಾವಿನ ವಿಚಾರ ಸಾಕಷ್ಟು ಚರ್ಚೆಯಲ್ಲಿದೆ.

ಅರ್ಜುನ ಸಾವಿನ ಹಿನ್ನೆಲೆಯಲ್ಲಿ ಆನೆಗಳು ಸಭೆ ಮಾಡಿ ನಿರ್ಣಯ ಕೈಗೊಂಡು ಕರ್ನಾಟಕದ ಮುಖ್ಯಮಂತ್ರಿ ಅವರಿಗೆ ಬರೆದಂತ ಪತ್ರವೊಂದು ವೈರಲ್‌ ಆಗಿದೆ. ಇಲ್ಲಿದೆ ಅದರ ವಿವರ.

ಆನೆಗಳ ಸಭೆಯ ತೀರ್ಮಾನದಂತೆ ಮುಖ್ಯಮಂತ್ರಿಗಳಿಗೆ ಬರೆದ ಪತ್ರ.

ಗೆ,

ಮಾನ್ಯ ಮುಖ್ಯಮಂತ್ರಿಗಳು

ಕರ್ನಾಟಕ ಸರ್ಕಾರ.

ಮಾನ್ಯ ಅರಣ್ಯ ಸಚಿವರು

ಕರ್ನಾಟಕ ಸರ್ಕಾರ .

ಮತ್ತು

ಹಿರಿಯ ಅರಣ್ಯ ಅಧಿಕಾರಿಗಳು.

ಕರ್ನಾಟಕ ಸರ್ಕಾರ .

ಇಂದಾ,

ಕಾಡಿನ ಆನೆಗಳು.

ಮಾನ್ಯರೇ,

ಇತ್ತೀಚೆಗೆ ನಮ್ಮ ಗುಂಪಿನ ಆನೆಯೊಂದನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಆ ಆನೆ ಮರಣಿಸಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ಭಾವಿಸುತ್ತೇವೆ. ಅಂತಹುದೇ ಕಾರ್ಯಾಚರಣೆಯಲ್ಲಿ ಮನುಷ್ಯರು ಸೆರೆ ಹಿಡಿದು ಹಿಂಸಿಸಿ ಸಾಕಿಕೊಂಡು "ಅರ್ಜುನ" ಎಂದು ಹೆಸರಿಟ್ಟುಕೊಂಡಿದ್ದ ಆನೆಯೂ ಮರಣಿಸಿದೆಯಷ್ಟೆ. ಅದಕ್ಕಾಗಿ ತಾವು ಸಂತಾಪ ವ್ಯಕ್ತಪಡಿಸಿರುವ ಸಂಗತಿ ತಿಳಿಯಿತು. ತಮ್ಮ ಸೂಕ್ಷ್ಮತೆಗೆ ಅಭಾರಿಗಳಾಗಿದ್ದೇವೆ.

ಮನುಷ್ಯ ಲೋಕದ ತಾರತಮ್ಯದ ರೂಢಿಯಂತೆ ಎರಡೂ ಆನೆಗಳ ಸಾವಿನ ಬಗ್ಗೆಯೂ ತಾರತಮ್ಯ ದಿಂದ ಪ್ರತಿಕ್ರಿಯಿಸಿರುವುದು ವಿಷಾದನೀಯ.

ಕಾಡಿನ ಆನೆಗಳಾದ ನಮ್ಮ ಬದುಕು ಇಂದು ಅತ್ಯಂತ ಸಂಕಷ್ಟದಲ್ಲಿದೆ. ನಾವು ಓಡಾಡಿಕೊಂಡಿದ್ದ ಬಹಳಷ್ಟು ಪ್ರದೇಶಗಳು ಕೃಷಿಗಾಗಿ, ರಸ್ತೆಗಳ ನಿರ್ಮಾಣಕ್ಕಾಗಿ, ವಿವಿಧ ಅಭಿವೃದ್ಧಿ ಹೆಸರಿನ ಯೋಜನೆಗಳಿಗಾಗಿ ಬಳಸಲ್ಪಟ್ಟಿವೆ. ನಾವು ಓಡಾಡುತ್ತಿದ್ದ ದಾರಿಗಳಲ್ಲಿ ಬೇಲಿಗಳು ನಿರ್ಮಾಣವಾಗಿವೆ. ನಮ್ಮ ಕಾಡಿನ ಪ್ರದೇಶವು ನಿರಂತರವಾಗಿ ಕಡಿಮೆಯಾಗುತ್ತಿರುವುದರಿಂದ ನಮ್ಮ ಗುಂಪುಗಳು ಅನಿವಾರ್ಯವಾಗಿ ಆಹಾರ ಹುಡುಕುತ್ತಾ ಕೃಷಿ ಪ್ರದೇಶಗಳಿಗೆ ಬರುವಂತಾಗುತ್ತಿದೆ. ಇದು ಅಲ್ಲಿ ವಾಸಮಾಡುತ್ತಿರುವ ಮನುಷ್ಯರು ಮತ್ತು ನಮ್ಮ ನಡುವಿನ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಇದು ನಮ್ಮವರ ಮತ್ತು ಮನುಷ್ಯರ ಜೀವನಷ್ಟಕ್ಕೆ ಕಾರಣವಾಗುತ್ತಿದೆ.

ಮನುಷ್ಯರಂತೆಯೇ ನಾವು ಆನೆಗಳೂ ಮತ್ತು ಎಲ್ಲಾ ಜೀವಿಗಳಿಗೂ ಕೂಡ ಈ ಭೂಮಿಯ ಮೇಲೆ ಬದುಕುವ ಹಕ್ಕು ಇದೆ ಎಂಬುದನ್ನು ತಾವುಗಳು ಒಪ್ಪುತ್ತೀರಿ ಎಂದು ಭಾವಿಸುತ್ತೇವೆ.

ಅಂತೆಯೇ ಕಾಡಿನಲ್ಲಿ ಸ್ವಾತಂತ್ರ್ಯವಾಗಿ ಬದುಕಿರುವ ನಮ್ಮನ್ನು ಬಲಾತ್ಕಾರವಾಗಿ ಬಂಧಿಸಿ ಹಿಂಸಿಸಿ ಪಳಗಿಸಿಕೊಂಡು ನಿಮ್ಮ ಕೆಲಸಗಳಿಗಾಗಿ ಆಡಂಬರದ ಮೆರವಣಿಗೆಗಳಿಗಾಗಿ ಬಳಸಿಕೊಳ್ಳುವುದು ನಮ್ಮ ಬದುಕುವ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ.

ಈ ಎಲ್ಲಾ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ರೂಪಿಸಬೇಕೆಂದು ಈ ಮೂಲಕ ವಿನಂತಿಸುತ್ತಿದ್ದೇವೆ.

ನಮ್ಮ ಹಕ್ಕೊತ್ತಾಯಗಳು.

  • ಕಾಡಿನಲ್ಲಿ ನಾವು ವಾಸಿಸುತ್ತಿರುವ ಪ್ರದೇಶಗಳನ್ನು ನಮಗಾಗಿ ಮತ್ತು ಇತರ ಕಾಡಿನ ಜೀವಿಗಳಿಗಾಗಿ ಬಿಟ್ಟುಕೊಡಬೇಕು
  • ನಾವು ವಾಸಿಸುವ ಮತ್ತು ಆಹಾರಕ್ಕಾಗಿ ಓಡಾಡುವ ದಾರಿಗಳನ್ನು ಗುರುತಿಸಿ, ಆ ಪ್ರದೇಶದಲ್ಲಿ ಕೃಷಿ ಮಾಡಿಕೊಂಡು ಬದುಕುತ್ತಿರುವ ರೈತ ರ ಜಮೀನುಗಳನ್ನು ಸೂಕ್ತ ಬೆಲೆ ನೀಡಿ ಕೊಂಡುಕೊಂಡು ಕಾಡಿಗೆ ಸೇರಿಸಬೇಕು.
  • ನಾವು ವಾಸಿಸುತ್ತಿರುವ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವುದನ್ನು ನಿಲ್ಲಿಸಬೇಕು.
  • ನಾವು ವಾಸಿಸುವ ಆಸುಪಾಸಿನಲ್ಲಿ ಇರುವ ಜನರಿಗೂ ನಮಗೂ ಸಂಘರ್ಷ ವಾಗದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.
  • ನಮ್ಮನ್ನು ಸೆರೆಹಿಡಿದು ಹಿಂಸಿಸಿ ಪಳಗಿಸುವ ಪರಿಪಾಠವನ್ನು ಸೂಕ್ತ ಕಾನೂನು ರೂಪಿಸುವ ಮೂಲಕ ತಡೆಗಟ್ಟಿ ನಮ್ಮ ಬದುಕುವ ಹಕ್ಕನ್ನು ಖಾತರಿಗೊಳಿಸಬೇಕು.
  • ನಮ್ಮನ್ನು ಕೆಲಸಕ್ಕಾಗಿ, ಮೆರವಣಿಗೆಗಳಿಗಾಗಿ ಮತ್ತು ಮನರಂಜನೆಗಾಗಿ ಬಳಸುವುದನ್ನು ನಿಷೇಧಿಸಬೇಕು.
  • ಪರಿಸರ ಪ್ರವಾಸೋದ್ಯಮದ ಹೆಸರಲ್ಲಿ ನಮ್ಮ ಪ್ರದೇಶಕ್ಕೆ ಬಂದು ತೊಂದರೆ ನೀಡುವುದನ್ನು ನಿಲ್ಲಿಸಬೇಕು. ನಮಗೂ ಸ್ವತಂತ್ರ್ಯ ವಾಗಿ ಬದುಕುವ ಹಕ್ಕು ಇದೆ ಎಂಬುದನ್ನು ಗೌರವಿಸಬೇಕು.

ನಮ್ಮ ಈ ಎಲ್ಲಾ ಹಕ್ಕೊತ್ತಾಯಗಳನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ.

ಇಂತಿ ತಮ್ಮ ಸಹಜೀವಿಗಳಾದ

ಕಾಡಿನ ಆನೆಗಳು.

* ಈ ನಮ್ಮ ಮನವಿಯನ್ನು ಸರ್ಕಾರಕ್ಕೂ ಮತ್ತು ನಮ್ಮ ಪರವಾಗಿ ಚಿಂತಿಸುವವರ ಗಮನಕ್ಕೂ ತರಬೇಕಾಗಿ ವಿನಂತಿ.

mysore-dasara_Entry_Point