Matcha Tea: ಏನಿದು ಮಚ್ಚಾ ಚಹಾ? ಇದನ್ನು ಪ್ರತಿದಿನ ಕುಡಿಯುವುದರಿಂದ ತೂಕ ನಷ್ಟದ ಜೊತೆಗೆ ಆರೋಗ್ಯಕ್ಕೂ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ-health tips matcha tea is good for those trying to weight loss health benefits of matcha tea weight loss with food ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Matcha Tea: ಏನಿದು ಮಚ್ಚಾ ಚಹಾ? ಇದನ್ನು ಪ್ರತಿದಿನ ಕುಡಿಯುವುದರಿಂದ ತೂಕ ನಷ್ಟದ ಜೊತೆಗೆ ಆರೋಗ್ಯಕ್ಕೂ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

Matcha Tea: ಏನಿದು ಮಚ್ಚಾ ಚಹಾ? ಇದನ್ನು ಪ್ರತಿದಿನ ಕುಡಿಯುವುದರಿಂದ ತೂಕ ನಷ್ಟದ ಜೊತೆಗೆ ಆರೋಗ್ಯಕ್ಕೂ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಜಪಾನ್‌ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವ ಮಚ್ಚಾ ಟೀ ಸದ್ಯ ವೈಟ್‌ ಲಾಸ್‌ ಪ್ರಿಯರಿಗೆ ಅಚ್ಚುಮೆಚ್ಚು. ಇದರಲ್ಲಿರುವ ಉತ್ಕರ್ಷಣ ನಿರೋಧಕ ಅಂಶವು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ನೀಡುತ್ತದೆ. ಹೃದಯದ ಆರೋಗ್ಯ ಸುಧಾರಣೆ,ತೂಕ ನಷ್ಟ ಸೇರಿದಂತೆ ಮಚ್ಚಾ ಗ್ರೀನ್‌ ಟೀ ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ (ಬರಹ:ಪ್ರಿಯಾಂಕ ಪಿ.)

ಮಚ್ಚಾ ಚಹಾದ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ
ಮಚ್ಚಾ ಚಹಾದ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ

ಮಚ್ಚಾ ಟೀ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ವಿಶೇಷವಾಗಿ ಬೆಳೆದ ಮತ್ತು ಸಂಸ್ಕರಿಸಿದ ಟೀ ಎಲೆಗಳಿಂದ ಮಾಡಿದ ಪುಡಿಯನ್ನು ಮಚ್ಚಾ ಟೀ ಎಂದು ಕರೆಯುತ್ತಾರೆ. ಚೀನಾದಲ್ಲಿ ಹುಟ್ಟಿಕೊಂಡಿದ್ದರೂ, ಇದು ಅಭಿವೃದ್ಧಿಯಾಗಿದ್ದು ಮಾತ್ರ ಜಪಾನ್‍ನಲ್ಲಿ. ಗ್ರೀನ್‌ ಟೀಯಂತೆ ಮಚ್ಚಾ ಚಹವನ್ನು ಕ್ಯಾಮೆಲಿಯಾ ಸಿನೆನ್ಸಿಸ್ ಸಸ್ಯದಿಂದ ತಯಾರಿಸಲಾಗುತ್ತದೆ. ಗ್ರೀನ್‌ ಟೀ (Green Tea) ಎಲೆಗಳನ್ನು ಒಣಗಿಸಿ ನಂತರ ಸಂಸ್ಕರಿಸುವ ಮೂಲಕ ತಯಾರಿಸಿದರೆ, ಮಚ್ಚಾ ಚಹಾವನ್ನು ಎಲೆಗಳನ್ನು ಕಾಂಡದಿಂದ ಬೇರ್ಪಡಿಸಿದ ನಂತರ ಅದನ್ನು ಕುದಿಸಿ, ಒಣಗಿಸಿ ಬಳಿಕ ಅದರ ಪುಡಿಯನ್ನು ತಯಾರಿಸಲಾಗುತ್ತದೆ. ಮಚ್ಚಾ ಚಹಾ ನೀರಿನಲ್ಲಿ ಸುಲಭವಾಗಿ ಕರಗುತ್ತದೆ. ಹೀಗಾಗಿ ಇದನ್ನು ನೀರಿನಲ್ಲಿ ಹಾಕಿದ ನಂತರ ಫಿಲ್ಟರ್ ಮಾಡಬೇಕೆಂದಿಲ್ಲ.

ಮಚ್ಚಾ ಚಹಾ ಎಲೆಯು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಸಾಮಾನ್ಯವಾಗಿ ಹಸಿರು ಚಹಾದಲ್ಲಿ ಇರುವುದಕ್ಕಿಂತ ಹೆಚ್ಚು ಕೆಫೀನ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಇದು ಹೊಂದಿರುತ್ತದೆ. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಮಚ್ಚಾ ಚಹಾವು ಯಕೃತ್ತನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ ಹಾಗೂ ತೂಕ ನಷ್ಟಕ್ಕೆ ಸಹಕಾರಿಯಾಗಿದೆ.

ಮಚ್ಚಾ ಚಹಾ ಸೇವನೆಯ ಆರೋಗ್ಯ ಪ್ರಯೋಜನಗಳು  

ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧ: ಮಚ್ಚಾ ಕ್ಯಾಟೆಚಿನ್‌ಗಳಲ್ಲಿ ಸಮೃದ್ಧವಾಗಿದ್ದು, ನೈಸರ್ಗಿಕ ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತದೆ. ಆಂಟಿಆಕ್ಸಿಡೆಂಟ್‌ಗಳು ಹಾನಿಕಾರಕ ಸ್ವತಂತ್ರ ರಾಡಿಕಲ್‌ಗಳನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಮಚ್ಚಾ ಚಹಾವನ್ನು ಸೇವಿಸುವುದರಿಂದ ನಿಮ್ಮ ಉತ್ಕರ್ಷಣ ನಿರೋಧಕವನ್ನು ಹೆಚ್ಚಿಸಬಹುದು. ಇದು ಜೀವಕೋಶದ ಹಾನಿಯನ್ನು ತಡೆಯಲು ಮತ್ತು ಹಲವಾರು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉರಿಯೂತವನ್ನು ತಡೆಯುವಲ್ಲಿ, ಕ್ಯಾನ್ಸರ್ ಮುಂತಾದ ದೀರ್ಘಕಾಲದ ಕಾಯಿಲೆಗಳಿಂದ ರಕ್ಷಣೆ ಮಾಡುತ್ತದೆ.

ಯಕೃತ್ತನ್ನು ರಕ್ಷಿಸಲು ಸಹಕಾರಿ: ಮಚ್ಚಾ ಚಹಾವು ಯಕೃತ್ತಿನ ಆರೋಗ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ. ಅಲ್ಲದೆ, ಇದು ಯಕೃತ್ತಿನ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ.

ಮೆದುಳಿನ ಕಾರ್ಯ ಹೆಚ್ಚಿಸಲು ಸಹಕಾರಿ: ಮೆದುಳಿನ ಕಾರ್ಯವನ್ನು ಹೆಚ್ಚಿಸಲು ಮಚ್ಚಾ ಚಹಾ ಸಹಕಾರಿಯಾಗಿದೆ. ಈ ಬಗ್ಗೆ ಅಧ್ಯಯನ ನಡೆಸಿದ ಸಂಶೋಧಕರು, ಮಚ್ಚಾ ಚಹಾವನ್ನು ಸೇವಿಸುವವರು ಉಳಿದವರಿಗೆ ಹೋಲಿಸಿದರೆ ಗಮನ, ಪ್ರತಿಕ್ರಿಯೆ ಸಮಯ ಮತ್ತು ಸ್ಮರಣೆಯಲ್ಲಿ ಸುಧಾರಣೆಗಳನ್ನು ಕಂಡುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೊಂದು ಅಧ್ಯಯನದಲ್ಲಿ 2 ತಿಂಗಳ ಕಾಲ ಪ್ರತಿದಿನ 2 ಗ್ರಾಂ ಮಚ್ಚಾ ಚಹಾದ ಪುಡಿಯನ್ನು ಸೇವಿಸುವುದರಿಂದ ವೃದ್ಧರಲ್ಲಿ ಮೆದುಳಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ.

ಕ್ಯಾನ್ಸರ್ ತಡೆಗಟ್ಟಲು ಸಹಕಾರಿ: ಮಚ್ಚಾದಲ್ಲಿ ಎಪಿಗಲ್ಲೊ ಕಾಟೆಚಿನ್-3-ಗ್ಯಾಲೇಟ್ (EGCG) ನಿಂದ ಅಧಿಕವಾಗಿದೆ. ಇದು ಪ್ರಬಲವಾದ ಕ್ಯಾನ್ಸರ್-ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವ ಒಂದು ರೀತಿಯ ಕ್ಯಾಟೆಚಿನ್ ಆಗಿದೆ. ಪ್ರಾಣಿಗಳಲ್ಲಿ ನಡೆಸಿದ ಕೆಲವು ಅಧ್ಯಯನದಿಂದ ಮಚ್ಚಾ ಕ್ಯಾನ್ಸರ್ ಅನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ.

ಹೃದಯದ ಆರೋಗ್ಯವನ್ನು ಉತ್ತೇಜಿಸಲು ಸಹಕಾರಿ: ಮಚ್ಚಾ ಚಹಾವನ್ನು ಸೇವಿಸುವುದರಿಂದ ಹೃದ್ರೋಗಕ್ಕೆ ಸಹಕಾರಿಯಾಗಿದೆ ಎಂದು ಕೆಲವು ಸಂಶೋಧನೆಯಿಂದ ತಿಳಿದು ಬಂದಿದೆ. ಇದರ ಸೇವನೆಯಿಂದ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತದೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಕೆಲವು ಅಧ್ಯಯನಗಳ ಪ್ರಕಾರ ಹೃದಯ ಕಾಯಿಲೆ ಇರುವ ಜನರಲ್ಲಿ ಅಧಿಕ ರಕ್ತದೊತ್ತಡ ಮತ್ತು ಇತರ ತೊಡಕುಗಳ ಅಪಾಯವನ್ನು ಕಡಿಮೆ ಮಾಡಲು ಮಚ್ಚಾ ಸಹಕಾರಿ ಎಂದು ತಿಳಿದು ಬಂದಿದೆ.

ತೂಕವನ್ನು ಕಳೆದುಕೊಳ್ಳಲು ಸಹಕಾರಿ: ತೂಕ ಇಳಿಸಲು ಪ್ರಯತ್ನ ಪಡುತ್ತಿರುವವರು ಈ ಮಚ್ಚಾ ಚಹಾವನ್ನು ಸೇವಿಸಬಹುದು. ವ್ಯಾಯಾಮದ ಜೊತೆಗೆ, 12 ವಾರಗಳವರೆಗೆ ದಿನಕ್ಕೆ 500 ಮಿ.ಗ್ರಾಂ ನಷ್ಟು ಮಚ್ಚಾ ಚಹಾವನ್ನು ಸೇವಿಸುವುದರಿಂದ ತೂಕ ಕಳೆದುಕೊಳ್ಳಬಹುದು. ಇಂದು ಬಹುತೇಕ ಮಂದಿ ಸ್ಥೂಲಕಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯ ವಿರುದ್ಧ ಮಚ್ಚಾ ಹೋರಾಡುತ್ತದೆ. ಹೀಗಾಗಿ ತಮ್ಮ ಬೊಜ್ಜನ್ನು ಕರಗಿಸಲು ಬಯಸುವವರು ಮಚ್ಚಾ ಚಹಾವನ್ನು ಸೇವಿಸಬಹುದು.