ಮೂತ್ರದ ದುರ್ವಾಸನೆಯಿಂದ ಬೇಸತ್ತಿದ್ದೀರಾ; ಈ ಆಹಾರಗಳ ಸೇವನೆಗೆ ಕಡಿವಾಣ ಹಾಕಿ
ಕೆಲವರಿಗೆ ಮೂತ್ರ ವಿಸರ್ಜನೆ ಮಾಡಿದಾಗ ದುರ್ನಾತ ಬರುತ್ತದೆ. ಈ ಸಮಸ್ಯೆಗೆ ವೈದ್ಯರ ಬಳಿ ತೋರಿಸಿದಾಗಲೂ ಪರಿಹಾರ ಸಿಕ್ಕಿರುವುದಿಲ್ಲ. ಕೆಲವೊಮ್ಮೆ ಇದನ್ನು ಬೇರೆಯವರ ಬಳಿ ಹೇಳಿಕೊಳ್ಳಲು ಮುಜಗರವಾಗಿರುತ್ತದೆ. ಹಾಗಾದರೆ ಮೂತ್ರ ಈ ರೀತಿಯ ವಾಸನೆ ಬರಲು ಕಾರಣವೇನು ಎಂದು ಎಂದಾದರೂ ಯೋಚಿಸಿದ್ದೀರಾ? ಅದಕ್ಕೆ ಇಲ್ಲಿದೆ ಉತ್ತರ.
ಕೆಲವರಿಗೆ ಮೂತ್ರದ ದುರ್ವಾಸನೆಯ ಸಮಸ್ಯೆ ಇರುತ್ತದೆ. ಇದಕ್ಕೆ ಕಾರಣ ಏನು ಎಂಬುದು ತಿಳಿದಿರುವುದಿಲ್ಲ. ಆದರೆ ಇದನ್ನು ಬೇರೆಯವರ ಬಳಿ ಹೇಳಿಕೊಳ್ಳಲು ಮುಜುಗರವಾಗುತ್ತದೆ. ಹಾಗಂತ ಈ ಸಮಸ್ಯೆಗೆ ಕಾರಣವಿಲ್ಲ ಎಂದಲ್ಲ. ಕೆಲವೊಮ್ಮೆ ನಮ್ಮ ಆರೋಗ್ಯ ಸಮಸ್ಯೆಯೂ ಮೂತ್ರದ ವಾಸನೆಗೆ ಕಾರಣವಾಗುತ್ತದೆ. ಇನ್ನೂ ಕೆಲವೊಮ್ಮೆ ನಾವು ಸೇವಿಸುವ ಆಹಾರಗಳು ಮೂತ್ರದ ದುರ್ನಾತಕ್ಕೆ ಕಾರಣವಾಗುತ್ತದೆ. ಆದರೆ ಕಾರಣಗಳು ಏನೇ ಇರಲಿ, ಕೆಲವೊಮ್ಮೆ ಮೂತ್ರದ ದುರ್ನಾತವು ಅಸಹನೀಯವಾಗಿರುತ್ತದೆ. ಅಲ್ಲದೆ ಇದರಿಂದ ಆತಂಕವೂ ಕಾಡಬಹುದು.
ಹಾಗಂತ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಅದು ತಾನಾಗಿಯೇ ಕಡಿಮೆ ಆಗುತ್ತದೆ. ಆದರೆ ದಿನೇ ದಿನೇ ಈ ಸಮಸ್ಯೆ ಉಲ್ಬಣವಾಗುತ್ತಿದ್ದರೆ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಮೂತ್ರವು ಕೆಟ್ಟ ವಾಸನೆಯಿಂದ ಕೂಡಿರುವುದು ವಿವಿಧ ದೈಹಿಕ ಸಮಸ್ಯೆಗಳ ಲಕ್ಷಣವಾಗಿರಬಹುದು, ಜೊತೆಗೆ ಇದು ಕೆಲವು ಆಹಾರಗಳ ಸೇವನೆಯಿಂದಲೂ ಉಂಟಾಗಬಹುದು. ಹಾಗಾದರೆ ಆ ಆಹಾರಗಳು ಯಾವುವು ನೋಡಿ.
ಜೀವನಶೈಲಿಗೆ ಸಂಬಂಧಿಸಿ ಇನ್ನಷ್ಟು ಲೇಖನಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ
ನಾವು ಸೇವಿಸುವ ಆಹಾರವು ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ವ್ಯಕ್ತಿ ಸೇವಿಸುವ ಆಹಾರ ಮತ್ತು ಪಾನೀಯಗಳು ಮೂತ್ರದ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ ಎನ್ನುತ್ತಾರೆ ತಜ್ಞರು.
ಅತಿಯಾಗಿ ಕಾಫಿ ಕುಡಿಯುವುದು
ಹೆಚ್ಚು ಕಾಫಿ ಕುಡಿಯುವುದರಿಂದ ಮೂತ್ರದ ದುರ್ನಾತಕ್ಕೆ ಕಾರಣವಾಗಬಹುದು. ಕಾಫಿಯಲ್ಲಿರುವ ಸಂಯುಕ್ತಗಳು ಮೂತ್ರವು ಕೆಟ್ಟ ವಾಸನೆ ಬರಲು ಕಾರಣವಾಗುತ್ತದೆ. ಅಲ್ಲದೆ, ಕಾಫಿಯಲ್ಲಿರುವ ಕೆಫಿನ್ ಅಂಶದಿಂದ ಪದೇ ಪದೇ ಮೂತ್ರ ವಿರ್ಸಜನೆ ಮಾಡುವಂತಾಗಬಹುದು. ದಿನದಲ್ಲಿ ಹಲವು ಬಾರಿ ಕಾಫಿ ಕುಡಿಯುವುದರಿಂದ ಮೂತ್ರ ವಿಸರ್ಜನೆ ಹೆಚ್ಚಾಗುತ್ತದೆ. ಪರಿಣಾಮವಾಗಿ, ದೇಹವು ನಿರ್ಜಲೀಕರಣಗೊಳ್ಳುತ್ತದೆ. ಇದರಿಂದ ಮೂತ್ರ ಕೆಟ್ಟ ವಾಸನೆ ಬರುತ್ತದೆ. ಮೂತ್ರದ ಬಣ್ಣವೂ ಬದಲಾಗುತ್ತದೆ.
ಹೆಚ್ಚು ಬೆಳ್ಳುಳ್ಳಿ, ಈರುಳ್ಳಿ ಸೇವನೆ
ಬೆಳ್ಳುಳ್ಳಿ ಹಾಗೂ ಈರುಳ್ಳಿಯನ್ನು ಅತಿಯಾಗಿ ಸೇವಿಸುವುದರಿಂದ ಮೂತ್ರದ ದುರ್ವಾಸನೆ ಉಂಟಾಗುತ್ತದೆ. ಏಕೆಂದರೆ ಬೆಳ್ಳುಳ್ಳಿ ಮತ್ತು ಈರುಳ್ಳಿಯಲ್ಲಿ ಸಲ್ಫರಸ್ ರಾಸಾಯನಿಕಗಳಿವೆ. ಪರಿಣಾಮವಾಗಿ, ಮೂತ್ರವು ಕೆಟ್ಟ ವಾಸನೆಯನ್ನು ಹೊಂದಿರುತ್ತದೆ.
ಮಸಾಲೆಯುಕ್ತ ಆಹಾರ ಸೇವನೆ
ಮಸಾಲೆಯುಕ್ತ ಆಹಾರವನ್ನು ಸೇವಿಸಿದರೆ ಮೂತ್ರದ ವಾಸನೆಯೂ ಬರುತ್ತದೆ. ಜೀರಿಗೆ, ಅರಿಸಿನ ಮತ್ತು ಕೊತ್ತಂಬರಿ ಮುಂತಾದ ಮಸಾಲೆಗಳ ಅತಿಯಾದ ಸೇವನೆಯು ಮೂತ್ರದ ಕೆಟ್ಟ ವಾಸನೆಗೆ ಕಾರಣವಾಗಬಹುದು. ವಾಸ್ತವವಾಗಿ, ಈ ಮಸಾಲೆಗಳಲ್ಲಿ ಇರುವ ಆರೊಮ್ಯಾಟಿಕ್ ರಾಸಾಯನಿಕಗಳು ನಮ್ಮ ದೇಹದಲ್ಲಿ ಇರುತ್ತವೆ. ಆಹಾರ ಜೀರ್ಣವಾದ ನಂತರ ಮೂತ್ರ ವಾಸನೆ ಬರುತ್ತದೆ.
ಕಡಿಮೆ ನೀರು ಕುಡಿಯುವುದು
ಕಡಿಮೆ ನೀರು ಕುಡಿಯುವುದರಿಂದ ಮೂತ್ರದ ದುರ್ನಾತ ಉಂಟಾಗುತ್ತದೆ. ಇದರಿಂದ ಮೂತ್ರವು ಹಳದಿ ಬಣ್ಣಕ್ಕೆ ತಿರುಗುತ್ತದೆ. ದುರ್ವಾಸನೆಯ ಮೂತ್ರವು ನಿರ್ಜಲೀಕರಣದ ಸೂಚನೆಯಾಗಿದೆ. ಮೂತ್ರವು ಅಮೋನಿಯಾವನ್ನು ಹೊಂದಿರುತ್ತದೆ. ದೇಹವು ನಿರ್ಜಲೀಕರಣಗೊಂಡಾಗ, ಅಮೋನಿಯದ ಸಾಂದ್ರತೆಯು ಹೆಚ್ಚಾಗುತ್ತದೆ. ಪರಿಣಾಮವಾಗಿ, ವಾಸನೆ ಕೂಡ ಹೆಚ್ಚಾಗುತ್ತದೆ.
ಮೂತ್ರ ದುರ್ವಾಸನೆ ಅನಾರೋಗ್ಯದ ಲಕ್ಷಣವೇ?
ಮೂತ್ರದ ದುರ್ವಾಸನೆಯ ಬಗ್ಗೆ ಚಿಂತಿಸಬೇಕಾಗಿಲ್ಲ. ಆದರೆ ಇದು ಉರಿಮೂತ್ರ, ಪದೇ ಪದೇ ಮೂತ್ರ ವಿಸರ್ಜನೆ, ಸಾಮಾನ್ಯಕ್ಕಿಂತ ಹೆಚ್ಚು ಮೂತ್ರ ವಿಸರ್ಜನೆಯಂತಹ ಇತರ ರೋಗಲಕ್ಷಣಗಳೊಂದಿಗೆ ಇದ್ದರೆ, ಇದು ಮೂತ್ರನಾಳದ ಸೋಂಕಿನ ಸಂಕೇತವಾಗಿರಬಹುದು. ಟೈಪ್ 2 ಡಯಾಬಿಟಿಸ್ ಮತ್ತು ಮೂತ್ರಪಿಂಡದ ಕಲ್ಲುಗಳು ಮೂತ್ರದ ದುರ್ವಾಸನೆಗೆ ಕಾರಣವಾಗಬಹುದು. ಹಾಗಾಗಿ ಮೂತ್ರದ ದುರ್ವಾಸನೆ ಸಮಸ್ಯೆಯು ದೀರ್ಘಕಾಲದವರೆಗೆ ಮುಂದುವರಿದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ವಿಭಾಗ