ಲಿವರ್ ಸಮಸ್ಯೆ ಬಂದ ಬಳಿಕ ಮದ್ಯಪಾನ ತ್ಯಜಿಸಿದ್ರೆ ಏನಾಗುತ್ತೆ? ಅತಿಯಾಗಿ ಕುಡಿಯೋರು ಇಲ್ಲೊಮ್ಮೆ ನೋಡಿ
Alcohol effects on liver: ದೀರ್ಘಾವಧಿ ಮದ್ಯಪಾನದಿಂದಾಗಿ ಯಕೃತ್ತು, ಮೆದುಳು ಮತ್ತು ಹೃದಯ ಸೇರಿದಂತೆ ಇತರ ಅಂಗಗಳು ಹಾನಿಗೊಳಗಾಗುತ್ತದೆ. ಪಾರ್ಶ್ವವಾಯು ಅಪಾಯ ಹೆಚ್ಚಿರುತ್ತದೆ. ಆಲ್ಕೋಹಾಲ್ ಸೇವನೆಯಿಂದಾಗಿ ಪಿತ್ತಜನಕಾಂಗ ಅಥವಾ ಯಕೃತ್ತಿನಲ್ಲಿ ಕೊಬ್ಬು ಸಂಗ್ರಹಣೆಯಾಗಿ ಇದು ಮಾರಣಾಂತಿಕ ಕಾಯಿಲೆಗೆ ದೂಡುತ್ತದೆ, ಲಿವರ್ ಡ್ಯಾಮೇಜ್ ಆಗುತ್ತದೆ.
ಯಕೃತ್ತು (liver) ಮಾನವ ದೇಹದಲ್ಲಿನ ಅತಿದೊಡ್ಡ ಆಂತರಿಕ ಅಂಗವಾಗಿದೆ. ಆದರೆ ಕಳಪೆ ಜೀವನಶೈಲಿಯಿಂದಾಗಿ ಲಿವರ್ನ ಆರೋಗ್ಯ ಹದಗೆಡುತ್ತಿದೆ. ಇದರಲ್ಲಿ ಮುಖ್ಯ ಕಾರಣ ಅತಿಯಾದ ಆಲ್ಕೋಹಾಲ್ ಸೇವನೆ. ಮದ್ಯಪಾನ ಜೀವ-ಜೀವನ ಎರಡನ್ನೂ ಕಡೆಸುತ್ತದೆ ಎಂದು ತಿಳಿದಿದ್ದರೂ ಕೂಡ ಇದನ್ನು ತ್ಯಜಿಸುವವರ ಸಂಖ್ಯೆ ಮಾತ್ರ ಕಡಿಮೆ.
ದೀರ್ಘಾವಧಿ ಮದ್ಯಪಾನದಿಂದಾಗಿ ಯಕೃತ್ತು, ಮೆದುಳು ಮತ್ತು ಹೃದಯ ಸೇರಿದಂತೆ ಇತರ ಅಂಗಗಳು ಹಾನಿಗೊಳಗಾಗುತ್ತದೆ. ಪಾರ್ಶ್ವವಾಯು ಅಪಾಯ ಹೆಚ್ಚಿರುತ್ತದೆ. ಆಲ್ಕೋಹಾಲ್ ಸೇವನೆಯಿಂದಾಗಿ ಪಿತ್ತಜನಕಾಂಗ ಅಥವಾ ಯಕೃತ್ತಿನಲ್ಲಿ ಕೊಬ್ಬು ಸಂಗ್ರಹಣೆಯಾಗಿ ಇದು ಮಾರಣಾಂತಿಕ ಪಿತ್ತಜನಕಾಂಗದ ಕೊಬ್ಬಿನ ಕಾಯಿಲೆ (fatty liver disease) ನಿಮ್ಮನ್ನು ದೂಡುತ್ತದೆ. ಈ ಕಾಯಿಲೆಯು ಸಾಮಾನ್ಯವಾಗಿ ಕೊನೆಯ ಹಂತದವರೆಗೆ ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ಆದರೆ ಕೊನೆಯ ಹಂತದಲ್ಲಿ ಜಾಂಡೀಸ್, ರಕ್ತವಾಂತಿ, ತುರಿಕೆ ಹೊಟ್ಟೆ ಊದಿಕೊಳ್ಳುವುದು ಸೇರಿದಂತೆ ಗಂಭೀರ ಲಕ್ಷಣಗಳು ಕಾಡುತ್ತವೆ.
ಅಲ್ಲದೇ ಅತಿಯಾದ ಮದ್ಯಪಾನವು ಸಿರೋಸಿಸ್ ಕೂಡ ಉಂಟು ಮಾಡುತ್ತದೆ. ಸಿರೋಸಿಸ್ ಎನ್ನುವುದು ನಿಮ್ಮ ಯಕೃತ್ತು ಗಾಯಗೊಳ್ಳುವ ಮತ್ತು ಶಾಶ್ವತವಾಗಿ ಹಾನಿಗೊಳಗಾಗುವ ಸ್ಥಿತಿಯಾಗಿದೆ. ಇದು ನಿಮ್ಮ ಯಕೃತ್ತು ಕೆಲಸ ಮಾಡುವುದನ್ನು ತಡೆಯುತ್ತದೆ. ಸಿರೋಸಿಸ್ ಉಲ್ಬಣಗೊಳ್ಳುತ್ತಿದ್ದಂತೆ, ನಿಮ್ಮ ಯಕೃತ್ತು ವಿಫಲಗೊಳ್ಳಲು ಪ್ರಾರಂಭಿಸುತ್ತದೆ.ಸಿರೋಸಿಸ್ನ ಕೊನೆಯ ಹಂತಗಳಲ್ಲಿ, ಯಕೃತ್ತು ವಿಫಲವಾದಾಗ ಜನರಲ್ಲಿ ಜಾಂಡೀಸ್ ಅಥವಾ ಕಾಮಾಲೆ ಕಾಣಿಸಿಕೊಳ್ಳುತ್ತದೆ. ನಿಮ್ಮ ಚರ್ಮ ಮತ್ತು ಕಣ್ಣು ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದು ಗಂಭೀರವಾಗಿರುತ್ತದೆ ಮತ್ತು ಮಾರಕ ಕೂಡ.
ಯಕೃತ್ತಿನ ಸಮಸ್ಯೆ ಬಂದ ಬಳಿಕ ಮದ್ಯಪಾನ ತ್ಯಜಿಸಿದರೆ ಏನಾಗುತ್ತೆ?
ಇಲ್ಲಿ ನಿಮಗೊಂದು ಸಿಹಿಸುದ್ದಿ ಇದೆ. ಯಕೃತ್ತಿನ ಕೊಬ್ಬು ಹೊಂದಿರುವ ಜನರು ಕೇವಲ ಎರಡರಿಂದ ಮೂರು ವಾರಗಳವರೆಗೆ ಆಲ್ಕೋಹಾಲ್ ಅನ್ನು ತ್ಯಜಿಸಿದರೂ ಸಾಕು ಯಕೃತ್ತಿ ಸಮಸ್ಯೆ ಗುಣವಾಗುತ್ತದೆ ಮತ್ತು ಮೊದಲಿನಂತೆ ಕಾರ್ಯನಿರ್ವಹಿಸಲು ಆರಂಭಿಸುತ್ತದೆ. ನೀವು ಸಂಪೂರ್ಣವಾಗಿ ಮದ್ಯ ತ್ಯಜಿಸಿದರೆ ಸಹಜ ಸ್ಥಿತಿಗೆ ಬರುವಿರಿ. ಅಕಸ್ಮಾತ್ ಮತ್ತೆ ಕುಡಿಯಲು ಶುರು ಮಾಡಿದ್ರೆ ಪ್ರಾಣಕ್ಕೆ ಅಪಾಯ ತಪ್ಪಿದ್ದಲ್ಲ.
ಯಕೃತ್ತಿನ ಉರಿಯೂತ ಅಥವಾ ಕಡಿಮೆ ಪ್ರಮಾಣದಲ್ಲಿ ಯಕೃತ್ತಿನ ಕೊಬ್ಬು ಹೊಂದಿರುವ ಜನರಲ್ಲಿ ಆಲ್ಕೋಹಾಲ್ ತ್ಯಜಿಸಿದ ಕೇವಲ ಏಳು ದಿನಗಳಲ್ಲಿ, ಯಕೃತ್ತಿನ ಕೊಬ್ಬು, ಉರಿಯೂತದಲ್ಲಿ ಗಮನಾರ್ಹವಾದ ಇಳಿಕೆ ಕಂಡುಬರುತ್ತದೆ. ಹಲವಾರು ತಿಂಗಳುಗಳವರೆಗೆ ಆಲ್ಕೋಹಾಲ್ ಬಳಕೆಯನ್ನು ನಿಲ್ಲಿಸುವುದರಿಂದ ಯಕೃತ್ತು ಗುಣವಾಗುತ್ತದೆ ಮತ್ತು ಸಾಮಾನ್ಯ ಸ್ಥಿತಿಗೆ ಮರಳುತ್ತದೆ.
ಹೆಚ್ಚು ತೀವ್ರವಾದ ಸಮಸ್ಯೆ ಅಥವಾ ಪಿತ್ತಜನಕಾಂಗದ ವೈಫಲ್ಯವನ್ನು ಹೊಂದಿರುವ ಜನರು ಹಲವಾರು ವರ್ಷಗಳವರೆಗೆ ಆಲ್ಕೋಹಾಲ್ ಅನ್ನು ತ್ಯಜಿಸುವುದು ಯಕೃತ್ತಿನ ವೈಫಲ್ಯ ಮತ್ತು ಸಾವಿನ ಅಪಾಯದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಗಮನಿಸಿ: ಅತಿಯಾಗಿ ಕುಡಿಯುವ ಜನರು ದಿಢೀರೆಂದು ಆಲ್ಕೋಹಾಲ್ ತ್ಯಜಿಸಿದರೆ ಅದೂ ಕೂಡ ದೊಡ್ಡ ಅಪಾಯವನ್ನು ಉಂಟು ಮಾಡಬಹುದು. ಹೀಗಾಗಿ ಮದ್ಯ ಸೇವನೆಯ ಪ್ರಮಾಣ ಕಡಿಮೆ ಮಾಡುತ್ತಾ ಮಾಡುತ್ತಾ ಕ್ರಮೇಣ ಸಂಪೂರ್ಣವಾಗಿ ತ್ಯಜಿಸಿರಿ.