ಶುಂಠಿ, ಬೆಳ್ಳುಳ್ಳಿಯನ್ನು ಫ್ರಿಡ್ಜ್‌ನಲ್ಲಿ ಇಡುವುದು ಉತ್ತಮವೇ? ತಿಂಗಳುಗಟ್ಟಲೆ ಕೆಡದಂತೆ ಶೇಖರಿಸಿಡುವುದು ಹೇಗೆ, ಇಲ್ಲಿ ತಿಳಿದುಕೊಳ್ಳಿ
ಕನ್ನಡ ಸುದ್ದಿ  /  ಜೀವನಶೈಲಿ  /  ಶುಂಠಿ, ಬೆಳ್ಳುಳ್ಳಿಯನ್ನು ಫ್ರಿಡ್ಜ್‌ನಲ್ಲಿ ಇಡುವುದು ಉತ್ತಮವೇ? ತಿಂಗಳುಗಟ್ಟಲೆ ಕೆಡದಂತೆ ಶೇಖರಿಸಿಡುವುದು ಹೇಗೆ, ಇಲ್ಲಿ ತಿಳಿದುಕೊಳ್ಳಿ

ಶುಂಠಿ, ಬೆಳ್ಳುಳ್ಳಿಯನ್ನು ಫ್ರಿಡ್ಜ್‌ನಲ್ಲಿ ಇಡುವುದು ಉತ್ತಮವೇ? ತಿಂಗಳುಗಟ್ಟಲೆ ಕೆಡದಂತೆ ಶೇಖರಿಸಿಡುವುದು ಹೇಗೆ, ಇಲ್ಲಿ ತಿಳಿದುಕೊಳ್ಳಿ

ಕೆಲವರು ಇತರ ತರಕಾರಿಗಳೊಂದಿಗೆ ಶುಂಠಿ ಮತ್ತು ಬೆಳ್ಳುಳ್ಳಿಯನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿ ಇಡುತ್ತಾರೆ. ಶುಂಠಿ, ಬೆಳ್ಳುಳ್ಳಿಯನ್ನು ಫ್ರಿಡ್ಜ್‌ನಲ್ಲಿ ಇಡುವುದು ಸರಿಯೋ, ತಪ್ಪೋ? ಹಾಗೆಯೇ ಶುಂಠಿ, ಬೆಳ್ಳುಳ್ಳಿಯನ್ನು ಕೆಡದಂತೆ ರಕ್ಷಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.

ಶುಂಠಿ, ಬೆಳ್ಳುಳ್ಳಿಯನ್ನು ಕೆಡದಂತೆ ರಕ್ಷಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.
ಶುಂಠಿ, ಬೆಳ್ಳುಳ್ಳಿಯನ್ನು ಕೆಡದಂತೆ ರಕ್ಷಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ. (freepik)

ಶುಂಠಿಯನ್ನು ಚಹಾದಿಂದ ಹಿಡಿದು ತರಕಾರಿ, ಮಾಂಸ ಖಾದ್ಯಗಳನ್ನು ತಯಾರಿಸುವವರೆಗೆ ಬಳಸಲಾಗುತ್ತದೆ. ಅದರಲ್ಲೂ ಶುಂಠಿ-ಬೆಳ್ಳುಳ್ಳಿಯನ್ನು ಚಳಿಗಾಲದಲ್ಲಿ ಹೆಚ್ಚು ಸೇವಿಸಲಾಗುತ್ತದೆ. ಶೀತ, ಕೆಮ್ಮು ಇತ್ಯಾದಿಗೆ ಇವು ಶೀಘ್ರ ಪರಿಹಾರವನ್ನು ನೀಡುತ್ತದೆ. ಆರೋಗ್ಯದ ಲಕ್ಷಣದಿಂದಲೂ ಇವು ಹೆಚ್ಚು ಪ್ರಯೋಜನಕಾರಿ. ಶುಂಠಿ ಮತ್ತು ಬೆಳ್ಳುಳ್ಳಿ ಬಹಳ ಬೇಗನೆ ಕೆಡುವುದಿಲ್ಲ. ಹೀಗಾಗಿ ಬಹಳಷ್ಟು ಮಂದಿ ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿ ಒಟ್ಟಿಗೆ ಸಂಗ್ರಹಿಸಿಡುತ್ತಾರೆ. ಇನ್ನು ಕೆಲವರು ಇತರ ತರಕಾರಿಗಳೊಂದಿಗೆ ಶುಂಠಿ ಮತ್ತು ಬೆಳ್ಳುಳ್ಳಿಯನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿ ಇಡುತ್ತಾರೆ. ಶುಂಠಿ, ಬೆಳ್ಳುಳ್ಳಿಯನ್ನು ಫ್ರಿಡ್ಜ್‌ನಲ್ಲಿ ಇಡುವುದು ಸರಿಯೋ, ತಪ್ಪೋ? ಹಾಗೆಯೇ ಶುಂಠಿ, ಬೆಳ್ಳುಳ್ಳಿಯನ್ನು ಕೆಡದಂತೆ ರಕ್ಷಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.

ಶುಂಠಿಯನ್ನು ರೆಫ್ರಿಜರೇಟರ್‌ನಲ್ಲಿ ಇಡಬೇಕೇ ಅಥವಾ ಬೇಡವೇ?

ಶುಂಠಿಯನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಬಹುದು. ಆದರೆ, ದೀರ್ಘಾವಧಿಯ ಸಂಗ್ರಹಣೆ ಅವಧಿಯನ್ನು ಖಚಿತಪಡಿಸಿಕೊಳ್ಳಲು ಮತ್ತು ಹಾಳಾಗುವುದನ್ನು ತಡೆಯಲು, ಶುಂಠಿಯನ್ನು ತೊಳೆದು ಒಣಗಿಸಿ ಮತ್ತು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿಡಬೇಕು. ಶುಂಠಿಯನ್ನು ಹೆಚ್ಚು ಹೊತ್ತು ತೆರೆದರೆ ಒಣಗುತ್ತದೆ. ಕೆಲವರು ಒದ್ದೆಯಾದ ಶುಂಠಿಯನ್ನು ಫ್ರಿಡ್ಜ್‌ನಲ್ಲಿ ಇಡುತ್ತಾರೆ. ಈ ರೀತಿ ಮಾಡುವುದರಿಂದ ಶುಂಠಿ ಕರಗಲು ಪ್ರಾರಂಭವಾಗುತ್ತದೆ ಅಥವಾ ಬೂಸ್ಟ್ ಹಿಡಿಯುತ್ತದೆ. ಶುಂಠಿಯನ್ನು ಸಂಗ್ರಹಿಸಲು ಉತ್ತಮ ಮಾರ್ಗವೆಂದರೆ ಅದನ್ನು ಚೆನ್ನಾಗಿ ತೊಳೆದು ಒಣಗಲು ಬಿಡಬೇಕು. ಶುಂಠಿ ಒಣಗಿದ ನಂತರ ಡಬ್ಬದಲ್ಲಿ ಕಾಗದವನ್ನು ಹಾಕಿ ಶುಂಠಿಯನ್ನು ಇರಿಸಬೇಕು. ಈ ರೀತಿ ಮಾಡುವುದರಿಂದ ಶುಂಠಿ ತಿಂಗಳುಗಟ್ಟಲೆ ಕೆಡುವುದಿಲ್ಲ.

ಬೆಳ್ಳುಳ್ಳಿಯನ್ನು ರೆಫ್ರಿಜರೇಟರ್‌ನಲ್ಲಿ ಇಡಬೇಕೇ ಅಥವಾ ಬೇಡವೇ?

ಅಪ್ಪಿತಪ್ಪಿಯೂ ಬೆಳ್ಳುಳ್ಳಿಯನ್ನು ರೆಫ್ರಿಜರೇಟರ್‌ನಲ್ಲಿ ಇಡಬಾರದು. ರೆಫ್ರಿಜಿರೇಟರ್‌ನಲ್ಲಿ ಬೆಳ್ಳುಳ್ಳಿಯನ್ನು ಇರಿಸಿದರೆ ಅದು ರಬ್ಬರ್‌ನಂತಾಗುತ್ತದೆ. ರೆಫ್ರಿಜಿರೇಟರ್‌ನಲ್ಲಿ ಬೆಳ್ಳುಳ್ಳಿಯನ್ನು ಸಂಗ್ರಹಿಸುವುದರಿಂದ ಬೂಸ್ಟ್ ಹಿಡಿಯಲು ಕಾರಣವಾಗಬಹುದು. ಬೆಳ್ಳುಳ್ಳಿಯನ್ನು ತರಕಾರಿಗಳೊಂದಿಗೆ ಇಟ್ಟುಕೊಂಡರೆ, ಅದು ಇತರ ತರಕಾರಿಗಳಲ್ಲಿ ಬೆಳ್ಳುಳ್ಳಿಯ ವಾಸನೆಯನ್ನು ಉಂಟುಮಾಡಬಹುದು. ಇನ್ನು ಸಿಪ್ಪೆ ಸುಲಿದ ಬೆಳ್ಳುಳ್ಳಿಯನ್ನು ಎಂದಿಗೂ ರೆಫ್ರಿಜರೇಟರ್‌ನಲ್ಲಿ ತೆರೆದಿಡಬೇಡಿ. ಇದರಿಂದ ಫ್ರಿಡ್ಜ್‌ನಲ್ಲಿಟ್ಟ ವಸ್ತುಗಳಲ್ಲಿ ಬೆಳ್ಳುಳ್ಳಿ ವಾಸನೆ ಬರಲಾರಂಭಿಸುತ್ತದೆ. ನೀವು ಸಿಪ್ಪೆ ಸುಲಿದ ಬೆಳ್ಳುಳ್ಳಿಯನ್ನು ಫ್ರಿಜ್‌ನಲ್ಲಿ ಇಡಲು ಬಯಸಿದರೆ, ಅದನ್ನು ಗಾಳಿಯಾಡದ ಬಿಗಿಯಾದ ಡಬ್ಬದಲ್ಲಿ ಮುಚ್ಚಿಡಿ. ಬೆಳ್ಳುಳ್ಳಿಯನ್ನು ರೆಫ್ರಿಜರೇಟರ್‌ನಲ್ಲಿ ಹೆಚ್ಚು ಕಾಲ ಇಡುವುದರಿಂದ ಮೊಳಕೆಯೊಡೆಯಬಹುದು. ಬೆಳ್ಳುಳ್ಳಿಯನ್ನು ರುಬ್ಬಿಕೊಂಡು ಪೇಸ್ಟ್ ಮಾಡಿ ಶೇಖರಿಸಿಟ್ಟರೆ ಉತ್ತಮ.

ಬೆಳ್ಳುಳ್ಳಿ, ಶುಂಠಿಯನ್ನು ಹೇಗೆ ಸಂಗ್ರಹಿಸುವುದು?

ಚಳಿಗಾಲದಲ್ಲಿ ರೆಫ್ರಿಜರೇಟರ್ ಇಲ್ಲದೆ ಸುಲಭವಾಗಿ ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಸಂಗ್ರಹಿಸಬಹುದು. ಬೆಳ್ಳುಳ್ಳಿಯನ್ನು ಹಾಗೆಯೇ ತೆರೆದಿಟ್ಟರೆ 6 ತಿಂಗಳಾದರೂ ಕೆಡುವುದಿಲ್ಲ. ಅದೇ ರೀತಿ ಶುಂಠಿಯನ್ನು ತೆರೆದ ಹಾಗೂ ಗಾಳಿಯಾಡದ ಜಾಗದಲ್ಲಿಟ್ಟರೆ ಅದು 1 ತಿಂಗಳು ಕೆಡದೆ ಇರುತ್ತದೆ. ಸಿಪ್ಪೆ ಸುಲಿದ ಶುಂಠಿಯನ್ನು ದೀರ್ಘಕಾಲ ಇಟ್ಟುಕೊಂಡರೆ ಕೆಲವೊಮ್ಮೆ ಒಣಗುತ್ತದೆ. ಹೀಗಾಗಿ ಅದನ್ನು ಪುಡಿಮಾಡಿಟ್ಟು ಬಳಸಬಹುದು.

ಶುಂಠಿಯ ಆರೋಗ್ಯ ಪ್ರಯೋಜನಗಳು

ಜೀರ್ಣಕಾರಿ ಆರೋಗ್ಯ: ಶುಂಠಿಯು ವಾಕರಿಕೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಹಾಗೂ ಜೀರ್ಣಕಾರಿ ಆರೋಗ್ಯಕ್ಕೂ ಉತ್ತಮವಾಗಿದೆ.

ಉರಿಯೂತದ ಗುಣಲಕ್ಷಣಗಳು: ಇದು ಉರಿಯೂತ ಮತ್ತು ನೋವನ್ನು ಕಡಿಮೆ ಮಾಡುವ ಜಿಂಜರಾಲ್‌ನಂತಹ ಸಂಯುಕ್ತಗಳನ್ನು ಹೊಂದಿರುತ್ತದೆ. ಸಂಧಿವಾತ ಮತ್ತು ಇತರ ಉರಿಯೂತದ ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.

ಪ್ರತಿರಕ್ಷಣಾ ಬೆಂಬಲ: ಶುಂಠಿಯು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಅದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ: ಕೆಲವು ಅಧ್ಯಯನಗಳ ಪ್ರಕಾರ, ಶುಂಠಿಯು ಇನ್ಸುಲಿನ್ ಸಂವೇದನೆಯನ್ನು ಸುಧಾರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

ಹೃದಯದ ಆರೋಗ್ಯಕ್ಕೆ ಸಹಾಯಕ: ಶುಂಠಿಯು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.

ಬೆಳ್ಳುಳ್ಳಿಯ ಆರೋಗ್ಯ ಪ್ರಯೋಜನಗಳು

ಹೃದಯದ ಆರೋಗ್ಯ: ಬೆಳ್ಳುಳ್ಳಿ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಟ್ಟಾರೆ ಹೃದಯ ರಕ್ತನಾಳದ ಆರೋಗ್ಯವನ್ನು ಬೆಂಬಲಿಸುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಾಯಕ: ಬೆಳ್ಳುಳ್ಳಿ ಅದರ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ ಮತ್ತು ಪ್ರತಿರಕ್ಷಣಾ ಕ್ರಿಯೆಯನ್ನು ಹೆಚ್ಚಿಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಇದು ಸಹಕಾರಿ.

ಉರಿಯೂತದ ಗುಣಲಕ್ಷಣಗಳು: ಶುಂಠಿಯಂತೆಯೇ, ಬೆಳ್ಳುಳ್ಳಿಯು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಅದು ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ.

ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು: ಬೆಳ್ಳುಳ್ಳಿಯು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಅದು ದೇಹವನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸುತ್ತದೆ.

Whats_app_banner