Ginger Tea: ದಿನವಿಡೀ ಶುಂಠಿ ಚಹಾ ಹೀರುತ್ತೀರಾ: ಈ ಅಡ್ಡ ಪರಿಣಾಮಗಳ ಬಗ್ಗೆ ಇರಲಿ ಎಚ್ಚರ
ಶುಂಠಿ ಚಹಾವು ಜೀರ್ಣಕ್ರಿಯೆಗೆ ಸಹಾಯ ಮಾಡುವುದು,ಉರಿಯೂತವನ್ನು ಕಡಿಮೆ ಮಾಡುವುದು ಸೇರಿದಂತೆ ಹಲವಾರು ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಹಾಗಂತ ಇದನ್ನು ಅತಿ ಹೆಚ್ಚು ಸೇವಿಸಿದರೆ ಅಡ್ಡಪರಿಣಾಮಗಳು ಉಂಟಾಗಬಹುದು. ಈ ಬಗ್ಗೆ ಇಲ್ಲಿದೆ ಮಾಹಿತಿ.
ಚಳಿಗಾಲದಲ್ಲಿ ಶುಂಠಿ ಚಹಾವನ್ನು ಕುಡಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಬಹುತೇಕ ಮಂದಿ ಶುಂಠಿ ಚಹಾ ಸೇವಿಸುವುದನ್ನು ಆನಂದಿಸುತ್ತಾರೆ. ಶುಂಠಿಯನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಶುಂಠಿಯು ಉತ್ತಮ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಆದರೆ, ಶುಂಠಿ ಚಹಾವು ಆರೋಗ್ಯಕ್ಕೆ ಹಾನಿಕಾರವಾಗಿದೆಯಂತೆ. ಶುಂಠಿ ಚಹಾದ ಅತಿಯಾದ ಸೇವನೆಯು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು. ಅಲ್ಲದೆ, ಅತಿ ಹೆಚ್ಚು ಶುಂಠಿ ಚಹಾವನ್ನು ಸೇವಿಸುವುದರಿಂದ ರಕ್ತದೊತ್ತಡ ಏರುಪೇರಾಗುವ ಸಮಸ್ಯೆಯನ್ನು ಉಂಟು ಮಾಡಬಹುದು. ದಿನಕ್ಕೆ ಒಂದು ಕಪ್ ಶುಂಠಿ ಚಹಾ ಕುಡಿಯಬಹುದು. ಆದರೆ, ಅದಕ್ಕಿಂತ ಹೆಚ್ಚು ಕುಡಿಯುವುದು ಒಳ್ಳೆಯದಲ್ಲ. ಹಾಗಿದ್ದರೆ, ಶುಂಠಿ ಚಹಾದ ಅನಾನುಕೂಲಗಳು ಏನೇನು ಎಂಬುದನ್ನು ಇಲ್ಲಿ ತಿಳಿಯಿರಿ:
ಶುಂಠಿ ಚಹಾವನ್ನು ಕುಡಿಯುವುದರಿಂದ ಉಂಟಾಗುವ ಅನಾನುಕೂಲಗಳು
ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚಾಗಬಹುದು: ದಿನಕ್ಕೆ 1 ರಿಂದ 2 ಕಪ್ ಶುಂಠಿ ಚಹಾವನ್ನು ಕುಡಿಯುವುದರಿಂದ ಅಂತಹ ಹಾನಿಯಾಗುವುದಿಲ್ಲ. ಆದರೆ, ದಿನಕ್ಕೆ ಹಲವಾರು ಬಾರಿ ಚಹಾವನ್ನು ಸೇವಿಸಿದರೆ ಮತ್ತು ಚಹಾದಲ್ಲಿ ಹೆಚ್ಚು ಶುಂಠಿಯನ್ನು ಬಳಸಿದರೆ ಅದು ಗ್ಯಾಸ್, ಆಮ್ಲೀಯತೆ ಮತ್ತು ಹೊಟ್ಟೆಯ ಸೆಳೆತಕ್ಕೆ ಕಾರಣವಾಗಬಹುದು. ಹೊಟ್ಟೆ ಸಮಸ್ಯೆ ಇರುವವರು ಶುಂಠಿ ಟೀ ಕುಡಿಯಲೇಬಾರದು.
ರಕ್ತದೊತ್ತಡ ಏರುಪೇರು: ಅಧಿಕ ರಕ್ತದೊತ್ತಡ ರೋಗಿಗಳಿಗೆ ಶುಂಠಿ ಚಹಾವು ಪ್ರಯೋಜನಕಾರಿಯಾಗಿದೆ. ಆದರೆ ಬಿಪಿ ಕಡಿಮೆ ಇರುವವರು (Low BP) ಶುಂಠಿ ಚಹಾವನ್ನು ಸೇವಿಸಬಾರದು. ಶುಂಠಿಯು ರಕ್ತದೊತ್ತಡವನ್ನು ಕಡಿಮೆ ಮಾಡುವ ಅಂಶವನ್ನು ಹೊಂದಿದೆ. ಇದು ಕಡಿಮೆ ಬಿಪಿ ಇರುವ ರೋಗಿಗಳಿಗೆ ಹೆಚ್ಚಿನ ತೊಂದರೆಗಳನ್ನು ಉಂಟುಮಾಡುತ್ತದೆ.
ಗರ್ಭಾವಸ್ಥೆಯಲ್ಲಿ ಕುಡಿಯಬಾರದು: ಗರ್ಭಾವಸ್ಥೆಯಲ್ಲಿ ಶುಂಠಿ ಚಹಾವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು. ಇದು ಹೊಟ್ಟೆಯಲ್ಲಿ ಶಾಖವನ್ನು ಉಂಟುಮಾಡಬಹುದು. ಶುಂಠಿ ಚಹಾವನ್ನು ಕುಡಿಯುವುದರಿಂದ ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆ ಹೆಚ್ಚಾಗುತ್ತದೆ. ಶುಂಠಿಯನ್ನು ಅತಿಯಾಗಿ ಸೇವಿಸುವುದರಿಂದ ಗರ್ಭದಲ್ಲಿರುವ ಮಗುವಿಗೆ ಹಾನಿಯಾಗಬಹುದು.
ಅಲರ್ಜಿ ಸಂಭವಿಸಬಹುದು: ಅನೇಕ ಬಾರಿ ಜನರು ಕೆಲವು ಆಹಾರ ಪದಾರ್ಥಗಳಿಗೆ ಅಲರ್ಜಿಯನ್ನು ಹೊಂದಿರುತ್ತಾರೆ. ಹೀಗಾಗಿ ಅಲರ್ಜಿಯಿಂದ ಬಳಲುತ್ತಿರುವವರು ಶುಂಠಿ ಚಹಾವನ್ನು ಕುಡಿಯುವುದರಿಂದ ಚರ್ಮದ ಮೇಲೆ ತುರಿಕೆ, ದದ್ದುಗಳು ಮತ್ತು ಊತದಂತಹ ಸಮಸ್ಯೆಗಳನ್ನು ಎದುರಿಸಬಹುದು.
ಜೀರ್ಣಕಾರಿ ಸಮಸ್ಯೆಗಳು: ಅತಿಯಾದ ಶುಂಠಿ ಚಹಾ ಸೇವನೆಯು ವಾಕರಿಕೆ, ಹೊಟ್ಟೆ ಉಬ್ಬ ಅಥವಾ ಅತಿಸಾರ ಸೇರಿದಂತೆ ಹೊಟ್ಟೆಯ ಸಮಸ್ಯೆಗೆ ಕಾರಣವಾಗಬಹುದು. ಶುಂಠಿಯ ನೈಸರ್ಗಿಕ ಸಂಯುಕ್ತಗಳು ಜೀರ್ಣಾಂಗವನ್ನು ಉತ್ತೇಜಿಸಬಹುದು. ಹೀಗಾಗಿ ಅದನ್ನು ಅತಿಯಾಗಿ ಸೇವಿಸುವುದರಿಂದ ಅಸ್ವಸ್ಥತೆ ಉಂಟಾಗುತ್ತದೆ.
ರಕ್ತ ತೆಳುವಾಗುವುದು: ಶುಂಠಿಯು ಸ್ವಾಭಾವಿಕವಾಗಿ ರಕ್ತವನ್ನು ತೆಳುಗೊಳಿಸುವ ಗುಣ ಲಕ್ಷಣಗಳನ್ನು ಹೊಂದಿದೆ. ಇದು ಕೆಲವರಿಗೆ ಪ್ರಯೋಜನಕಾರಿಯಾಗಿದ್ದರೂ, ಮಿತಿಮೀರಿದ ಸೇವನೆಯು ರಕ್ತಸ್ರಾವದ ಅಪಾಯವನ್ನು ಹೆಚ್ಚಿಸಬಹುದು. ವಿಶೇಷವಾಗಿ ರಕ್ತವನ್ನು ತೆಳುಗೊಳಿಸುವ ಔಷಧಿಗಳನ್ನು ಸೇವಿಸುತ್ತಿದ್ದರೆ ಅಥವಾ ರಕ್ತಸ್ರಾವದ ಅಸ್ವಸ್ಥತೆಗಳನ್ನು ಹೊಂದಿದ್ದರೆ ಈ ಸಮಸ್ಯೆ ಕಾಡಬಹುದು.