ವಾಷಿಂಗ್ ಮೆಷಿನ್‍ನಲ್ಲಿ ಕೊಳಕು ಅಡಗಿದ್ಯಾ: ದುರ್ವಾಸನೆ, ಬ್ಯಾಕ್ಟೀರಿಯಾ ಹೋಗಲಾಡಿಸಲು ಈ ಟಿಪ್ಸ್ ಅನುಸರಿಸಿ
ವಾಷಿಂಗ್ ಮೆಷಿನ್ ಅನ್ನು ಆಗಾಗ ಶುಚಿಗೊಳಿಸುವುದು ಅತ್ಯಗತ್ಯ. ಅದರ ಜೀವಿತಾವಧಿಯನ್ನು ಹೆಚ್ಚಿಸಲು ಸ್ವಚ್ಛಗೊಳಿಸುವುದು ತುಂಬಾನೇ ಮುಖ್ಯ. ವಾಷಿಂಗ್ ಮೆಷಿನ್ ಶುಚಿಗೊಳಿಸದಿದ್ದರೆ ಅದರಲ್ಲಿ ಕೊಳಕು, ಬ್ಯಾಕ್ಟೀರಿಯಾ ಅಡಗಿರುತ್ತದೆ. ಅಷ್ಟೇ ಅಲ್ಲ ದುರ್ವಾಸನೆ ಬರುತ್ತದೆ. ಹೀಗಾಗಿ ಮನೆಯಲ್ಲೇ ಇರುವ ಕೆಲವು ಪದಾರ್ಥಗಳನ್ನು ಬಳಸಿ ವಾಷಿಂಗ್ ಮೆಷಿನ್ ಶುಚಿಗೊಳಿಸಬಹುದು.
ಬೆಳಗ್ಗೆದ್ದು ಮನೆಗೆಲಸವೆಲ್ಲಾ ಮುಗಿಸಿ, ತಿಂಡಿ ತಿಂದು ಬಟ್ಟೆಗಳನ್ನು ಒಗೆದು ಒಣಗಿ ಹಾಕಿ ಬರಲಾಗುತ್ತಿತ್ತು. ಇಂದು ಆ ಕೆಲಸವೆಲ್ಲಾ ತುಂಬಾ ಸುಲಭವಾಗಿದೆ. ವಾಶಿಂಗ್ ಮೆಷಿನ್‌ಗೆ ಬಟ್ಟೆಗಳನ್ನು ಹಾಕಿಟ್ಟರೆ ಅವು ಸುಲಭವಾಗಿ ಒಗೆದು ಕೊಡುತ್ತವೆ. ಹಾಗಂತ ಎಲ್ಲರೂ ವಾಷಿಂಗ್ ಮೆಷಿನ್‌ನಲ್ಲೇ ಬಟ್ಟೆಗಳನ್ನು ಒಗೆಯಲ ಹಾಕುವುದಿಲ್ಲ. ಈಗಲೂ ಅನೇಕರು ಕೈಯಲ್ಲೇ ಬಟ್ಟೆ ಒಗೆಯುವವರಿದ್ದಾರೆ. ಆದರೆ, ಈ ವಾಷಿಂಗ್ ಮೆಷಿನ್ ನಮ್ಮ ಲಾಂಡ್ರಿ ದಿನಚರಿಯನ್ನು ಸರಳಗೊಳಿಸುವ ಅತ್ಯಗತ್ಯ ಸಾಧನ ಅಂದರೆ ತಪ್ಪಿಲ್ಲ. ಆದರೆ, ವಾಷಿಂಗ್ ಮೆಷಿನ್‌ನಿಂದ ಬಟ್ಟೆಗಳನ್ನು ತೆಗೆದ ನಂತರ ಅದನ್ನು ಕ್ಲೀನ್ ಮಾಡುವ ಗೋಜಿಗೆ ಯಾರೂ ಹೋಗುವುದಿಲ್ಲ. ಹೀಗಾಗಿ ಅವು ಸಾಮಾನ್ಯವಾಗಿ ಕಾಲಾನಂತರದಲ್ಲಿ ಕೊಳಕು, ಶಿಲೀಂಧ್ರ ಮತ್ತು ಅಹಿತಕರ ವಾಸನೆಗಳ ಸಂತಾನೋತ್ಪತ್ತಿಯ ಸ್ಥಳವಾಗುತ್ತವೆ. ಆಗಿಂದಾಗೆ ಸ್ವಚ್ಛಗೊಳಿಸಿದರೆ ಈ ರೀತಿ ಆಗುವುದಿಲ್ಲ.
ನಮ್ಮ ಬಟ್ಟೆಗಳನ್ನು ತಾಜಾವಾಗಿಡಲು ಬಹುತೇಕ ಮಂದಿ ವಾಷಿಂಗ್ ಮೆಷಿನ್ ಮೇಲೆ ಅವಲಂಬಿತರಾಗಿದ್ದೇವೆ. ಆದರೆ, ಯಂತ್ರಗಳ ನಿಯಮಿತ ನಿರ್ವಹಣೆಯ ಅಗತ್ಯವನ್ನು ಮಾತ್ರ ಬಹುತೇಕ ಮಂದಿ ಕಡೆಗಣಿಸುತ್ತಾರೆ. ಡಿಟರ್ಜೆಂಟ್ ಡ್ರಾಯರ್, ಡೋರ್ ಸೀಲ್‌ಗಳು ಮತ್ತು ಡ್ರಮ್‌ನಂತಹ ವಿವಿಧ ಭಾಗಗಳಲ್ಲಿ ಕೊಳಕು ಸಂಗ್ರಹವಾಗಬಹುದು. ಇದು ಮೆಷಿನ್‍ನ ಕಾರ್ಯಕ್ಷಮತೆಯನ್ನು ಮಾತ್ರವಲ್ಲದೆ ಬಟ್ಟೆಯ ಶುಚಿತ್ವದ ಮೇಲೂ ಪರಿಣಾಮ ಬೀರುತ್ತದೆ. ವಾಷಿಂಗ್ ಮೆಷಿನ್ ಅನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ವಾಷಿಂಗ್ ಮೆಷಿನ್ ಕೆಟ್ಟು ಹೋಗುವ ಸಾಧ್ಯತೆ ಇರುತ್ತದೆ. ವಾಷಿಂಗ್ ಮೆಷಿನ್ ಸ್ವಚ್ಛಗೊಳಿಸಲು ಈ ಸರಳ ಟಿಪ್ಸ್‌ಗಳನ್ನು ಅನುಸರಿಸಬಹುದು.
ವಾಷಿಂಗ್ ಮೆಷಿನ್ ಸ್ವಚ್ಛಗೊಳಿಸಲು ಈ ಟಿಪ್ಸ್ ಅನುಸರಿಸಿ
ನಿಂಬೆ ರಸ: ನಿಂಬೆಯಲ್ಲಿರುವ ಎಲ್ಲಾ ಅಂಶಗಳು ಕೊಳೆಯನ್ನು ತೊಡೆದುಹಾಕಲು ಪರಿಣಾಮಕಾರಿ ಎಂದು ಸಾಬೀತುಪಡಿಸಿದೆ. ವಾಷಿಂಗ್ ಮೆಷಿನ್‌ನ ಡ್ರಮ್‍ನಲ್ಲಿ ಎರಡು ದೊಡ್ಡ ನಿಂಬೆಹಣ್ಣುಗಳನ್ನು ಹಿಂಡಬೇಕು. ನಿಂಬೆ ರಸವು ಆಮ್ಲೀಯ ಗುಣಗಳನ್ನು ಹೊಂದಿದ್ದು, ವಾಷಿಂಗ್ ಮೆಷಿನ್‍ನಲ್ಲಿನ ಎಲ್ಲಾ ಕೊಳೆಯನ್ನು ತೆಗೆದುಹಾಕುವಲ್ಲಿ ಸಹಕಾರಿಯಾಗಿದೆ. ಅಷ್ಟೇ ಅಲ್ಲ ವಾಷಿಂಗ್ ಮೆಷಿನ್‍ನಿಂದ ಬರುವ ಕೆಟ್ಟ ವಾಸನೆಯನ್ನು ಸಹ ನಿಂಬೆಯು ತೊಡೆದುಹಾಕಬಹುದು.
ಬಿಸಿ ನೀರು: ವಾಷಿಂಗ್ ಮೆಷಿನ್ ಸ್ವಚ್ಛಗೊಳಿಸಲು ಬಿಸಿನೀರನ್ನು ಬಳಸುವುದರಿಂದ ಕೊಳಕು ಮತ್ತು ವಾಸನೆಯನ್ನು ತೊಡೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ. ಬ್ಯಾಕ್ಟೀರಿಯಾ ಇತ್ಯಾದಿಗಳ ನಾಶಕ್ಕೆ ಬಿಸಿನೀರು ಸೂಕ್ತವಾಗಿದೆ. ಬಿಳಿ ವಿನೆಗರ್ ಮತ್ತು ಅಡುಗೆ ಸೋಡಾದ ಮಿಶ್ರಣಕ್ಕೆ ಬಿಸಿ ನೀರನ್ನು ಸೇರಿಸಿ ವಾಷಿಂಗ್ ಮೆಷಿನ್ ಸ್ವಚ್ಛಗೊಳಿಸಬಹುದು. ಇದರಿಂದ ಲಾಂಡ್ರಿಯು ಸ್ವಚ್ಛವಾಗುವುದಲ್ಲದೆ, ತಾಜಾವಾಗಿ, ಪರಿಮಳಯುಕ್ತ ಸುವಾಸನೆ ಹೊಂದಿರುತ್ತದೆ.
ವಿನೆಗರ್ ಮತ್ತು ಅಡುಗೆ ಸೋಡಾ: ವಾಷಿಂಗ್ ಮೆಷಿನ್ ಒಳಗೆ 2 ಕಪ್ ವಿನೆಗರ್ ಹಾಕಿ, ನಂತರ ಅರ್ಧ ಕಪ್‍ನಷ್ಟು ಅಡುಗೆ ಸೋಡಾವನ್ನು ವಾಷಿಂಗ್ ಮೆಷಿನ್‍ನಲ್ಲಿ ಹಾಕಿ. ನಂತರ ವಾಷಿಂಗ್ ಮೆಷಿನ್ ಆನ್ ಮಾಡಿ. ವಿನೆಗರ್ ಹಾಗೂ ಅಡುಗೆ ಸೋಡಾದ ಮಿಶ್ರಣವು ವಾಷಿಂಗ್ ಮೆಷಿನ್‍ನಿಂದ ಕೊಳೆಯನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ. ಅಲ್ಲದೆ ಅದನ್ನು ಹೊಳೆಯುವಂತೆ ಮಾಡುತ್ತದೆ.
ಟೂತ್‍ಪೇಸ್ಟ್: ಕೇವಲ ಹಲ್ಲುಜ್ಜಲು ಮಾತ್ರವಲ್ಲ ವಾಷಿಂಗ್ ಮೆಷಿನ್ ಸ್ವಚ್ಛಗೊಳಿಸಲು ಸಹ ಟೂತ್‌ಪೇಸ್ಟ್ ಅನ್ನು ಬಳಸಬಹುದು. ಇದಕ್ಕಾಗಿ, ಟೂತ್‌ಪೇಸ್ಟ್ ಅನ್ನು ಟೂತ್ ಬ್ರಷ್‌ನಲ್ಲಿ ಹಾಕಿ, ವಾಷಿಂಗ್ ಮೆಷಿನ್‍ನ ಕೊಳಕು ಭಾಗಗಳಲ್ಲಿ ಉಜ್ಜಬೇಕು. ಈ ಮನೆಮದ್ದು ಸಹಾಯದಿಂದ, ವಾಷಿಂಗ್ ಮೆಷಿನ್‌ನ ಡಿಟರ್ಜೆಂಟ್ ಟ್ರೇ ಅಥವಾ ಗ್ಯಾಸ್ಕೆಟ್ ಅನ್ನು ಸ್ವಚ್ಛಗೊಳಿಸಬಹುದು.
ವಿಭಾಗ