ತೇಜಸ್ವಿ ನೆನಪು: ಉಸಿರು ಬಿಗಿಯುವಂತೆ ಓದಿಸಿದ, ಸದಾ ಇನ್ನಷ್ಟು ಬರೆಯಬೇಕಿತ್ತು ಎನಿಸಿದ ಹೆಸರು ಪೂರ್ಣಚಂದ್ರ ತೇಜಸ್ವಿ -ಮೇದಿನಿ ಕೆಸವಿನಮನೆ ಬರಹ-medhini kesavinamane shared her words about poornachandra tejaswi on social media here it is smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ತೇಜಸ್ವಿ ನೆನಪು: ಉಸಿರು ಬಿಗಿಯುವಂತೆ ಓದಿಸಿದ, ಸದಾ ಇನ್ನಷ್ಟು ಬರೆಯಬೇಕಿತ್ತು ಎನಿಸಿದ ಹೆಸರು ಪೂರ್ಣಚಂದ್ರ ತೇಜಸ್ವಿ -ಮೇದಿನಿ ಕೆಸವಿನಮನೆ ಬರಹ

ತೇಜಸ್ವಿ ನೆನಪು: ಉಸಿರು ಬಿಗಿಯುವಂತೆ ಓದಿಸಿದ, ಸದಾ ಇನ್ನಷ್ಟು ಬರೆಯಬೇಕಿತ್ತು ಎನಿಸಿದ ಹೆಸರು ಪೂರ್ಣಚಂದ್ರ ತೇಜಸ್ವಿ -ಮೇದಿನಿ ಕೆಸವಿನಮನೆ ಬರಹ

Poornachandra Tejaswi: “ನನಗೆ ಇದುವರೆಗಿನ ಓದಿನಲ್ಲಿ ಅನಿಸಿದ ಹಾಗೆ ತೇಜಸ್ವಿಯವರ ಬರೆಹಗಳನ್ನು ಯಾರೂ ತಿರಸ್ಕರಿಸಲು ಸಾಧ್ಯವಿಲ್ಲ. ಪುಸ್ತಕ ಓದುವ ಹವ್ಯಾಸ ಇರುವವರು ತೇಜಸ್ವಿಯವರನ್ನು ಮರೆತು ಮುಂದೆ ಹೋಗುವುದಿಲ್ಲ” - ಬರಹ - ಮೇದಿನಿ ಕೆಸವಿನಮನೆ.

ಪೂರ್ಣಚಂದ್ರ ತೇಜಸ್ವಿ
ಪೂರ್ಣಚಂದ್ರ ತೇಜಸ್ವಿ

ಕನ್ನಡ ಸಾಹಿತ್ಯ ಲೋಕದ ಅದ್ವಿತೀಯ ಕವಿ ಕುವೆಂಪುರವರ ಹಿರಿಯ ಮಗ. ತಂದೆಯ ಅಪಾರ ಖ್ಯಾತಿ, ಕೀರ್ತಿ, ಗೌರವ ಈ ವ್ಯಕ್ತಿಯ ಬೆನ್ನಿಗೆ ಗಾಡ್ ಫಾದರ್ ನಂತೆ ಇದ್ದರೂ, ಅದಾವುದನ್ನೂ ಸ್ವೀಕರಿಸದೆ, ತನ್ನದೇ ದಾರಿಯಲ್ಲಿ ಮುನ್ನುಗ್ಗಿದ ಸಾಹಿತಿ ತೇಜಸ್ವಿ.

ಮಲೆನಾಡನ್ನು ಕುವೆಂಪು ನೋಡಿದ ರೀತಿಗೂ ತೇಜಸ್ವಿ ನೋಡಿದ ರೀತಿಗೂ ಬಹಳ ವ್ಯತ್ಯಾಸವಿದೆ. ತಂದೆಯ ಕಾದಂಬರಿಗಳಲ್ಲಿ ಮಲೆನಾಡಿನ ಕಾಡು ಸಂಕೀರ್ಣ, ದಟ್ಟ, ಅಗಾಧ ವ್ಯಾಪ್ತಿಯದ್ದಾದರೆ, ತೇಜಸ್ವಿಯವರ ಕೃತಿಗಳಲ್ಲಿ ಕಾಡು ಅಷ್ಟೇ ಸರಳ ಹಾಗೂ ವಾಸ್ತವಿಕವಾಗಿ ಚಿತ್ರಿತವಾಗಿದೆ. ಕುವೆಂಪು ಮನುಷ್ಯರನ್ನು ನೋಡಿದ, ಚಿತ್ರಿಸಿದ ರೀತಿಗೂ ತೇಜಸ್ವಿಯವರು ಸೃಷ್ಟಿಸಿದ ರೀತಿಗೂ ಅಗಾಧ ವ್ಯತ್ಯಾಸವಿದೆ. ಅಪ್ಪನ ಮಗನಾದ ಮಾತ್ರಕ್ಕೆ ಮಗ ಅಪ್ಪ ನೆಟ್ಟ ಆಲದ ಮರಕ್ಕೆ ಜೋತು ಬೀಳಲೇ ಇಲ್ಲ. ಹಾಗಂತ ಅಪ್ಪನನ್ನು ಎಂದೂ ತಿರಸ್ಕರಿಸಲಿಲ್ಲ.

ಯಾರೂ ತಿರಸ್ಕರಿಸಲು ಸಾಧ್ಯವಿಲ್ಲ

ನನಗೆ ಇದುವರೆಗಿನ ಓದಿನಲ್ಲಿ ಅನಿಸಿದ ಹಾಗೆ ತೇಜಸ್ವಿಯವರ ಬರೆಹಗಳನ್ನು ಯಾರೂ ತಿರಸ್ಕರಿಸಲು ಸಾಧ್ಯವಿಲ್ಲ. ಪುಸ್ತಕ ಓದುವ ಹವ್ಯಾಸ ಇರುವವರು ತೇಜಸ್ವಿಯವರನ್ನು ಮರೆತು ಮುಂದೆ ಹೋಗುವುದಿಲ್ಲ

ನಾನಂತೂ ಕೆಲವು ಕೃತಿಗಳನ್ನು ವರ್ಷಕ್ಕೊಮ್ಮೆ ಇಷ್ಟ ಪಟ್ಟು ಓದುತ್ತಲೇ ಇರುತ್ತೇನೆ. ಇವು ತೀರಾ ಇಷ್ಟವಾಗಲು ಇನ್ನು ಕಾರಣವಿದೆ, ಅದೇನೆಂದರೆ ಅವರ ಬಹುತೇಕ ಕೃತಿಗಳು ಮಾನವನ ಮತ್ತು ಪರಿಸರದ ನಡುವಿನ ಅವಿನಾಭಾವ ಸಂಬಂಧವನ್ನು ಹೇಳುತ್ತಲೇ ಹೋಗುತ್ತದೆ.

ಕೃತಿಗಳು

ಕಿರಗೂರಿನ ಗಯ್ಯಾಳಿಗಳು, ಚಿದಂಬರ ರಹಸ್ಯ, ತಬರನ‌ಕತೆ, ಜುಗಾರಿ ಕ್ರಾಸ್, ಕೃಷ್ಣೇಗೌಡನ ಆನೆ, ಕರ್ವಾಲೋ, ಅಬಚೂರಿನ ಪೋಸ್ಟಾಫೀಸು, ಕಾಡಿನ‌ಕಥೆಗಳು, ಇವುಗಳನ್ನು ಅದೆಷ್ಟು ಬಾರಿ ಓದಿದ್ದೇನೆಯೋ.

ಮಾಯಾಲೋಕ ಕೃತಿಯನ್ನಂತೂ ನಾನು ಹಾಗೂ ನನ್ನ ತಂದೆ ಒಂದೊಂದು ಪುಟದಂತೆ ಓದಿ ಚರ್ಚಿಸಿ, ಸಿಕ್ಕಾಪಟ್ಟೆ ನಗುತ್ತಿದ್ದೆವು. ಮಾಯಾ ಲೋಕ ನಿಜಕ್ಕೂ ಮಾಯಾಲೋಕವೇ ಹೌದು. ಈ ಕಾದಂಬರಿಗೆ ಅಂತ್ಯವಿಲ್ಲ. ಅದರಲ್ಲಿನ ಘಟನೆಗಳು, ಆ ಪಾತ್ರ ಚಿತ್ರಣಗಳು, ಪ್ರಕೃತಿಯ ಚಿತ್ರಣಗಳು ಕುತೂಹಲದ ಜೊತೆಗೆ ಆಹ್ಲಾದವನ್ನು ತರುತ್ತವೆ.

ಮಾಯಾಲೋಕದ ಒಂದು ಘಟನೆಯನ್ನಂತೂ ನಾನು ಎಂದಿಗೂ ಮರೆಯಲಾರೆ. ಊರಿನಲ್ಲಿ ಗದ್ದೆಗೆ ಹಂದಿ ಬರುತ್ತದೆ ಎಂಬ ಕಾರಣಕ್ಕಾಗಿ ವಿದ್ಯುತ್ ಕನೆಕ್ಷನ್ ಕೊಟ್ಟಿರುತ್ತಾರೆ. ದುರದೃಷ್ಟವಶಾತ್ ಆ ವಿದ್ಯುತ್ ಲೈನಿಗೆ ಬಡಕಲು ಎತ್ತು ಸಿಕ್ಕಿ ಸತ್ತುಬಿಡುತ್ತದೆ. ಜನರು ಹಂದಿ ಸತ್ತಿದೆ ಎಂದು ನೋಡಲು ಬಂದಾಗ ಆ ಹಂದಿ ಓಡಿ ಬರುತ್ತದೆ. ಈ ಘಟನೆಯ ಚಿತ್ರಣವು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಅಲ್ಲಿಯೇ ಮೀನು ಹಿಡಿಯುವುದು, ಮೆಣಸಿನ ಸಸಿ ಬೇಸಾಯ, ಅಕ್ಕಪಕ್ಕದ ಹಳ್ಳಿಗರ ಜಗಳ ಇತ್ಯಾದಿಗಳನ್ನು ಓದುವಾಗ ಮನಸ್ಸಿಗೊಂದು ಆಹ್ಲಾದತೆ ಸಿಗುತ್ತದೆ.

ಜುಗಾರಿ ಕ್ರಾಸ್ - ಇಪ್ಪತ್ನಾಲ್ಕು ಗಂಟೆಯಲ್ಲಿ ನಡೆಯುವ ಘಟನೆಯ ಸುತ್ತಲಿನ ಕತೆ. ಮೇದರ ಹಳ್ಳಿಯ ಅವಸಾನ, ಏಲಕ್ಕಿ ಮಾರಲು ಹೊರಟ ಗೌರಿ ಸುರೇಶ, ಕುಂಟ ರಾಮ, ಏಲಕ್ಕಿ ಚೀಲ, ಮಧ್ಯದಲ್ಲಿ ಬರುವ ಬೀಡಾ ಘಟನೆ, ಕೊಲೆಯಾಗುತ್ತೇವೆಂದು ಹೆದರಿ ಸುರಂಗದೊಳಗೆ ಜಿಗಿದದ್ದು , ಚೀಲದಲ್ಲಿ ಸೇರಿಹೋಗುವ ಗಾಂಜಾ, ಅದರ ಪತ್ತೆ ಇತ್ಯಾದಿ ಬಿಡಿ ಬಿಡಿ ಘಟನೆಗಳು ಕಾದಂಬರಿಯನ್ನು ಪೂರ್ಣವಾಗಿಸುತ್ತದೆ. ಇದೊಂದು ರೋಮಾಂಚಕ ಘಟನೆಗಳ ಮೊತ್ತ.

ಈ ಕಾದಂಬರಿ ಓದುವಾಗ, ಮಧ್ಯದಲ್ಲಿ ಬರುವ ದ್ವಿಸಂಧಾನ ಕಾವ್ಯ, ಚಿತ್ರಮೂಲ/ಚಿತ್ರಮಾಲ, ದೋಣಿ ಹೊಳೆ, ಅಲ್ಲಿ ದೊರೆಯುವ ಕೆಂಪು ಕಲ್ಲು ಇವನ್ನು ಓದಿ ನನಗೆ ಹೇಗಾದರೂ ದೋಣಿಹೊಳೆ ಎಲ್ಲಿದೆಯೆಂದು ಪತ್ತೆಮಾಡಿ ಕೆಂಪು ಕಲ್ಲು ಹುಡುಕುವ ಆಸೆ ಅತಿಯಾಗಿ ಹೋಗಿತ್ತು. ಎಲ್ಲಿ ಕೂತರೂ, ನಿಂತರೂ, ತಿನ್ನುವಾಗಲೂ, ಮಲಗುವಾಗಲೂ ಅಪ್ಪನ ಬಳಿ ಕೆಂಪು ಕಲ್ಲು, ದೋಣಿ ಹೊಳೆ ಎಂದು ಕಾಡುತ್ತಿದ್ದೆ.

ಕಿರಗೂರಿನ‌ ಗಯ್ಯಾಳಿಗಳು

ನನಗೆ ಅನಿಸಿದ ಹಾಗೆ ಕಿರಗೂರಿನ‌ ಗಯ್ಯಾಳಿಗಳು ಚಲನಚಿತ್ರವಾಗಿ ಸೋತು ಹೋಯಿತು. ಕತೆ ಮಾತ್ರ ಅತ್ಯದ್ಭುತ. ಕರ್ವಾಲೋ ಗಂಭೀರವಾಗಿ ಆರಂಭವಾದರೂ ಮಂದಣ್ಣನ ಪಾತ್ರ, ಪ್ರಭಾಕರ ಮಾಡಿಸಿದ ಮದುವೆ, ವಿಜ್ಞಾನಿ ಕರ್ವಾಲೋ, ಜೇನು ಡ್ರಮ್ ಇತ್ಯಾದಿಗಳು ಕುತೂಹಲ ಹುಟ್ಟಿಸುತ್ತವೆ. ಕರ್ವಾಲೋ ಎಂಬುದು ಒಬ್ಬ ವಿಜ್ಞಾನಿಯ ಹೆಸರಾದರೂ, ಈ ಕೃತಿಯಲ್ಲಿ, ಜೀವವಿಕಾಸ ಪಥದಲ್ಲಿ ಎಲ್ಲವೂ ಬದಲಾಗುತ್ತ ರೂಪಾಂತರ ಹೊಂದುತ್ತಾ ಬಂದಿರುವಾಗ ಹಾರುವ ಓತಿಯ ಕುರಿತು ಕುತೂಹಲ ಹುಟ್ಟಿಸುವ ಸನ್ನಿವೇಶಗಳು ಮೂಡಿ ಬಂದಿವೆ. ಇದರೊಂದಿಗೆ ಅನಾಯಾಸವಾಗಿ ಮೂಡಿಬಂದ ಹಾಸ್ಯ ಸನ್ನಿವೇಶಗಳು ಮಾತ್ರಾ ಅನನ್ಯ. ತೇಜಸ್ವಿಯ ಬರೆಹವೇ ಹಾಗೆ. ಯಾವುದೂ ಬಲವಂತವಾಗಿ ತುರುಕಲ್ಪಟ್ಟಿರುವುದಿಲ್ಲ. ಕಣ್ಣಿಗೆ ಕಟ್ಟಿದ ಹಾಗಿರುವ ಚಿತ್ರಣ, ಅಪಾರ ನಗು ತರಿಸುವ ಸನ್ನಿವೇಶಗಳು ಜೊತೆಗೆ ಗಂಭೀರವಾಗಿ ಸಾಗುವ ಕಥಾ ಹಂದರ.

ಮಿಲೇನಿಯಮ್ ಸರಣಿ

ಮಿಲೇನಿಯಮ್ ಸರಣಿಗಳ ಹದಿನಾರು ಕೃತಿಗಳು ಜಗತ್ತಿನ ವೈವಿಧ್ಯಮಯ ಕೃತಿಗಳ ಅನುವಾದ. ಇದರಲ್ಲಿ ಮಹಾಪಲಾಯನವಂತೂ ರೋಮಾಂಚನ ಉಂಟುಮಾಡುವ ಕೃತಿ. ಜೈಲಿನಲ್ಲಿದ್ದ ಆರು ಜನ‌ರು ಅಲ್ಲಿಂದ ತಪ್ಪಿಸಿಕೊಂಡು ಸೈಬೀರಿಯಾದ ಗಡಿಯಿಂದ ದಾಟಿ ಭಾರತಕ್ಕೆ ಬರುವ ಕತೆ. ಶೀತದ ವಾತಾವರಣ ಕೃತಿಯ ಘಟನೆಯಾದರೂ ಓದುವಾಗ ಮೈ ಬಿಸಿಯಗುತ್ತದೆ. ಅವರು ದಾರಿಯುದ್ದಕ್ಕೂ ಪಡುವ ಕಷ್ಟಗಳು, ಆಹಾರ ನೀರಿಗಾಗಿ ಪರದಾಟ, ಮಾರ್ಗಮಧ್ಯದಲ್ಲಿ ಕೆಲವರ ಸಾವು ಕೊನೆಗೂ ತಲುಪಿದ ನಿಲ್ದಾಣ - ಓದುವಾಗ ಉಸಿರು ಬಿಗಿಯಾಗುತ್ತದೆ.

ಮಿಸ್ಸಿಂಗ್ ಲಿಂಕ್, ಸಹಜ ಕೃಷಿ, ಹಾರುವ ತಟ್ಟೆಗಳು, ಏರೋಪ್ಲೇನ್ ಚಿಟ್ಟೆ ಇತ್ಯಾದಿಗಳು ವೈಜ್ಞಾನಿಕ ಕೃತಿಗಳು.

ಅಣ್ಣನ‌ ನೆನಪುಗಳು

"ಅಣ್ಣನ‌ ನೆನಪುಗಳು" ಕುವೆಂಪು ಹಾಗೂ ತೇಜಸ್ವಿಯವರ ಆತ್ಮೀಯತೆ, ಒಡನಾಟವನ್ನು ಒಳಗೊಂಡ ಕೃತಿ. ಸಾಹಿತ್ಯ ಲೋಕದಲ್ಲಿ ದಿಗ್ಗಜರಾಗಿದ್ದ ಕುವೆಂಪುರವರ ವೈಯಕ್ತಿಕ ಬದುಕಿನ ಸರಳತೆಯನ್ನು ಮಗನೇ ಕಟ್ಟಿ ಕೊಟ್ಟ ರೀತಿ ಸುಂದರವಾಗಿದೆ.

ಆಂಡರ್ಸನ್ ಬರೆದ ಕತೆಗಳನ್ನು ಕನ್ನಡದ ವಾತಾವರಣಕ್ಕೆ ಭಾವಾನುವಾದ ಮಾಡಿ ಬರೆದ ಕಾಡಿನ ಕತೆಗಳು- ಪೆದ್ದಚೆರುವಿನ ರಾಕ್ಷಸ, ಜಾಲಹಳ್ಳಿಯ ಕುರ್ಕ, ಬೆಳ್ಳಂದೂರಿನ‌ ನರಭಕ್ಷಕ, ಮುನಿಶಾಮಿ‌ ಮತ್ತು ಮಾಗಡಿ ಚಿರತೆ ಇವುಗಳು ಕುತೂಹಲದ ಕತೆಗಳು. ಇವು ಕನ್ನಡ ನಾಡಿನ ಮಣ್ಣಿಗೆ ಬೇಕಾದ ಹಾಗೆ ಮಾರ್ಪಾಡಾಗಿ ಬಂದ ಕತೆಗಳ ಸಂಕಲನ.

ತೇಜಸ್ವಿಯವರ ಕತೆಗಳಲ್ಲಿ ಕಂಡುಬರುವ ಪ್ಯಾರ, ಕಿವಿ, ಮಂದಣ್ಣ ಇತ್ಯಾದಿ ಪಾತ್ರಗಳು ನಮ್ಮೊಡನೆಯೂ ಬದುಕಿಬಿಡುತ್ತವೆ. ಓದುವಾಗ ನಮ್ಮ ಸುತ್ತ ನಡೆಯುವಂತೆ ಭಾಸವಾಗುತ್ತವೆ.

ಯಾವುದೇ ಸಾಹಿತ್ಯವನ್ನು ಓದಿದಾಗ ನಮಗೆ ಸಂತೋಷವಾಗಬೇಕು. ವಿಷಾದ ಅಥವಾ ದುಃಖದ ಕತೆಯನ್ನು ಓದಿದರೂ ತೃಪ್ತಿಯಾಗಬೇಕು. ಅದರಿಂದ ಒಂದು ಆಹ್ಲಾದತೆ ಸಿಗಬೇಕು. ಈ ಖುಷಿ ತೇಜಸ್ವಿಯವರ ಕೃತಿಯನ್ನು ಓದಿದಾಗ ಸಿಗುತ್ತದೆ. ಎಲ್ಲಾ ಕೃತಿಯನ್ನು ಓದಿದ ನಂತರ, ಒಮ್ಮೆಯಾದರೂ ಅವರನ್ನು ಭೇಟಿಯಾಗಲೇಬೇಕು ಎಂದು ಖಂಡಿತಾ ಅನಿಸುತ್ತದೆ. ಹಾಗೆ ನಾನು ಯೋಚಿಸುವಾಗಲೇ ಅವರ ಮರಣದ ಸುದ್ದಿ ಬಂದೆರಗಿತ್ತು.

ತೇಜಸ್ವಿಯವರು ಅಷ್ಟು ಬೇಗ ಹೋಗಬಾರದಿತ್ತು

ಮಾಯಾಲೋಕದ ಎರಡನೇ ಭಾಗವನ್ನು ಅವರು ಬರೆಯಬೇಕಿತ್ತು. ಕಂಪ್ಯೂಟರ್, ಇಂಟರ್ನೆಟ್ ಜಗತ್ತಿಗೆ ಪರಿಚಯವಾಗದ ಕಾಲದಲ್ಲಿಯೇ ಅವರು ಗಂಟೆ ಗಟ್ಟಲೆ ಅದರ ಮುಂದೆ ಕೂತು ಹೊಸದನ್ನು ಹುಡುಕುತ್ತಿದ್ದ ಅವರ ಕುತೂಹಲದ ವ್ಯಕ್ತಿತ್ವ ಇನ್ನಷ್ಟು ಕಾಲ ಇರಬೇಕಿತ್ತು.

ಅವರ ಸಿಟ್ಟು, ಸ್ಕೂಟರ್, ಗಾಳ, ಕಂಪ್ಯೂಟರ್, ಜೇನು ಕೃಷಿ ಇವುಗಳಿಗೆ ಇನ್ನಷ್ಟು ಜೀವಂತಿಕೆ ತುಂಬಲು ಅವರಿರಬೇಕಿತ್ತು.

ಕತೆಗಾರನೊಬ್ಬ ತನ್ನ ಮರಣದ ನಂತರವೂ ಜೀವಂತವಾಗಿರುವುದು ತನ್ನ ಸಾಹಿತ್ಯದ ಮೂಲಕ. ಆ ರೀತಿಯಲ್ಲಿ ತೇಜಸ್ವಿ ಜೀವಂತವಾಗಿದ್ದಾರೆ. ಅದೇ ಖುಷಿ.

mysore-dasara_Entry_Point