ಕನ್ನಡ ಸುದ್ದಿ  /  ಜೀವನಶೈಲಿ  /  ಹೆಣ್ಣು ಮತ್ತು ಹಸ್ತಮೈಥುನ: ಮುಚ್ಚಿಟ್ಟದ್ದು ಕೊಳೆಯುತ್ತೆ, ಬಿಚ್ಚಿಟ್ಟದ್ದು ಹೊಳೆಯುತ್ತದೆ, ಕಾಮದ ಚರ್ಚೆ ತಪ್ಪಲ್ಲ -ನಿತ್ಯಾನಂದ ವಿವೇಕವಂಶಿ ಬರಹ

ಹೆಣ್ಣು ಮತ್ತು ಹಸ್ತಮೈಥುನ: ಮುಚ್ಚಿಟ್ಟದ್ದು ಕೊಳೆಯುತ್ತೆ, ಬಿಚ್ಚಿಟ್ಟದ್ದು ಹೊಳೆಯುತ್ತದೆ, ಕಾಮದ ಚರ್ಚೆ ತಪ್ಪಲ್ಲ -ನಿತ್ಯಾನಂದ ವಿವೇಕವಂಶಿ ಬರಹ

ಸಮಾಜ ಮತ್ತು ಕಾಮ: ಸಭ್ಯತೆಯ ಮಿತಿಯನ್ನು ಮೀರದೇ ಲೈಂಗಿಕತೆಯ ಕುರಿತು ಮುಕ್ತವಾಗಿ ಮಾತನಾಡುವ ಅಭ್ಯಾಸ ಸಮಾಜದ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಆಗಿದೆ. ಆದರೆ ವ್ಯಕ್ತಿಗೆ ಹೇಗೆ ಒಂದು ಖಾಸಗಿತನವಿರುತ್ತದೆಯೋ ಸಮಾಜಕ್ಕೂ ಹಾಗೇ ಒಂದು ಖಾಸಗಿತನವಿರುತ್ತದೆ. ಅದನ್ನು ಮೀರಬೇಕು ಎಂದು ಸಮಾಜವನ್ನು ಒತ್ತಾಯಿಸಲು ಯಾರಿಗೂ ಹಕ್ಕಿಲ್ಲ.

ಹೆಣ್ಣು ಮತ್ತು ಹಸ್ತಮೈಥುನ: ಮುಚ್ಚಿಟ್ಟದ್ದು ಕೊಳೆಯುತ್ತೆ, ಬಿಚ್ಚಿಟ್ಟದ್ದು ಹೊಳೆಯುತ್ತದೆ, ಕಾಮದ ಚರ್ಚೆ ತಪ್ಪಲ್ಲ
ಹೆಣ್ಣು ಮತ್ತು ಹಸ್ತಮೈಥುನ: ಮುಚ್ಚಿಟ್ಟದ್ದು ಕೊಳೆಯುತ್ತೆ, ಬಿಚ್ಚಿಟ್ಟದ್ದು ಹೊಳೆಯುತ್ತದೆ, ಕಾಮದ ಚರ್ಚೆ ತಪ್ಪಲ್ಲ

ಹೆಣ್ಣುಮಕ್ಕಳಿಗೆ ಲೈಂಗಿಕ ಶಿಕ್ಷಣ: ಸತ್ಯಕ್ಕೆ ಹಲವಾರು ಮುಖಗಳಿರುತ್ತವೆ. ನಮ್ಮ ರಾಷ್ಟ್ರ ಲಾಂಛನದ ಸಿಂಹಗಳಂತೆ. ಕೆಲವರಿಗೆ ಒಂದು ಮುಖ ಕಂಡರೆ, ಇನ್ನು ಕೆಲವರಿಗೆ ಎರಡು ಕಾಣುತ್ತದೆ. ಮತ್ತೆ ಕೆಲವರಿಗೆ ಮೂರು ಕಂಡರೆ, ಅಪರೂಪದಲ್ಲಿ ಅಪರೂಪಕ್ಕೆ ಬಹಳ ಕಡಿಮೆ ಜನರಿಗೆ ನಾಲ್ಕೂ ಸಿಂಹಗಳೂ ಕಾಣುತ್ತವೆ. ಆದರೆ ನಾವೂ ಕಂಡದ್ದನ್ನಷ್ಟೇ ಸತ್ಯ ಎಂದು ನಂಬುವ ಮತ್ತು ವಾದಿಸುವ ನಾವುಗಳು ಪೂರ್ಣದೃಷ್ಟಿಯಿಂದ ವಂಚಿತರಾಗುತ್ತೇವೆ. ಸಂತೆಯಲ್ಲಿ ಆನೆಯನ್ನು ನೋಡಲು ಹೊರಟ ಕುರುಡರ ಗುಂಪಿನ ಹಾಗೆ. ಕಳೆದ ಎರಡು ದಿನಗಳಿಂದ ಫೇಸ್‌ಬುಕ್ ವಲಯದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿರುವ ಒಂದು ಲೇಖನ 'ಹೆಣ್ಣು ಮತ್ತು ಹಸ್ತಮೈಥುನ'. ಇದು ಬಹಳಷ್ಟು ಜನರಿಗೆ ಹೊಸ ವಿಷಯವಾಗಿದೆ.

ಟ್ರೆಂಡಿಂಗ್​ ಸುದ್ದಿ

ಲೇಖಕರು ಲೇಖನದ ಮೊದಲ ಸಾಲಿನಲ್ಲಿಯೇ 'ಈ ಲೇಖನ ಮಡಿವಂತರಿಗಲ್ಲ' ಎನ್ನುವ ವಿಶೇಷ ಸೂಚನೆಯೊಂದಿಗೆ ಈ ಲೇಖನದ ಮೂಲಕ ಜನಸಾಮಾನ್ಯರೊಳಗೆ ಒಂದು 'ವಿಚಾರ ಕ್ರಾಂತಿ' ನಡೆಯುವ ಸುಳಿವನ್ನು ನೀಡಿರುತ್ತಾರೆ. ಅವರ ಆಶಯದಂತೆಯೇ ಆಗುತ್ತಿದೆ ಕೂಡಾ. ಮಡಿವಂತ ಸಮಾಜವೇ ಹೆಚ್ಚುಹೆಚ್ಚು ಈ ವಿಷಯವನ್ನು ಶೇರ್ ಮಾಡುತ್ತಿದೆ. ಸಂತೋಷ.

ಈ ವಿಚಾರ ಕ್ರಾಂತಿಯ ಮುಂದುವರಿದ ಭಾಗವಾಗಿ ಇನ್ನೊಬ್ಬ ಲೇಖಕರು ತಮ್ಮ ಅನುಭವ ಮತ್ತು ಜ್ಞಾನದ ಆಧಾರದಲ್ಲಿ ಇನ್ನೊಂದು ಮೌಲಿಕ ಅಭಿಪ್ರಾಯವನ್ನೂ ಸಹ ವ್ಯಕ್ತಪಡಿಸಿದ್ದಾರೆ‌. ಮುಷ್ಟಿಮೈಥುನ, ಹಸ್ತಮೈಥುನ ಯಾವಾಗ ಅಪಾಯಕಾರಿ’ ಎನ್ನುವುದು ಅವರ ಲೇಖನ. ಮೇಲ್ನೋಟಕ್ಕೆ ಪರಸ್ಪರ ವಿರೋಧದಂತೆ‌ ಕಂಡುಬಂದರೂ ನನ್ನ ದೃಷ್ಟಿಯಲ್ಲಿ ಮೊದಲ ಲೇಖನದಲ್ಲಿ ಬಿಟ್ಟು ಹೋದ ಅನೇಕ ಸತ್ಯಗಳನ್ನು, ಒಳ ನೋಟಗಳನ್ನು ಈ ಲೇಖನದಲ್ಲಿ ನೀಡಿರುತ್ತಾರೆ. ಆದರೆ ಸತ್ಯ ಬಹಳ ಗಹನವಾದ್ದರಿಂದ ಪೂರ್ಣ ಸತ್ಯವನ್ನು ಅರಿಯಲು ಈ ಮಾಹಿತಿಯೂ ಸಾಲದಾಗಿದೆ.

ಖಂಡಿತಾ ಇದರಲ್ಲಿ ತಪ್ಪೇನೂ ಇಲ್ಲ. ಭಾರತೀಯ ಸಮಾಜ ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತನಾಡುವುದನ್ನು ಬಿಟ್ಟ ದಿನದಿಂದ ಇಲ್ಲಿಯವರೆಗೆ ಲೈಂಗಿಕತೆ ಎಂಬುದು ಒಂದು "ರೋಗ ಅಥವಾ ಪಾಪ"ದ ವಿಷಯ ಎಂದು ಗುರುತಿಸಿಕೊಂಡು ಬಿಟ್ಟಿದೆ. ಅದರ ಪರಿಣಾಮವಾಗಿ ಭಾರತೀಯರು ಕಾಮದ ಚೌಕಟ್ಟನ್ನು ಮೀರಿ ಮುಂದೆ ಹೋಗಲಾಗದೇ ಅಲ್ಲೇ ಸಿಕ್ಕಿಕೊಂಡು ಒದ್ದಾಡುತ್ತಿದ್ದಾರೆ. ಆತ್ಮಸಾಕ್ಷಾತ್ಕಾರದಂಥ ಉದಾತ್ತ, ವಿಶಾಲ ಮತ್ತು ಉನ್ನತ ಆದರ್ಶಗಳು ಮತ್ತು ಗುರಿಗಳು ನಮ್ಮಲ್ಲಿದ್ದಾಗ್ಯೂ ಲೈಂಗಿಕತೆಯಂಥ ಸಾಮಾನ್ಯ ವಿಷಯವನ್ನು ಮೀರಿಹೋಗಲು ಸಮಾಜಕ್ಕೆ ಸಾಧ್ಯವಾಗುತ್ತಿಲ್ಲ.

"ಮುಚ್ಚಿಟ್ಟದ್ದು ಕೊಳೆಯುತ್ತದೆ. ಬಿಚ್ಚಿಟ್ಟದ್ದು ಹೊಳೆಯುತ್ತದೆ" ಎಂಬಂತೆ ಜನರ ಮನಸ್ಸಿನಲ್ಲಿ ಈ ವಿಚಾರ ಮುಚ್ಚಿಟ್ಟು ಮುಚ್ಚಿಟ್ಟು ಒಳಗೊಳಗೇ ಕೊಳೆತು ಗಬ್ಬೆದ್ದು ನಾರುತ್ತಿದೆ. "ಕತ್ತೆ ಎಲ್ಲಿ ತಪ್ಪಿಸಿಕೊಂಡಿದೆ ಅಂದರೆ ಮೋಟುಗೋಡೆಯ ಪಕ್ಕದಲ್ಲೇ ಇದೆ". ಎಂಬಂತೆ ನಮ್ಮ ವಿಚಾರಗಳು ಅದೆಷ್ಟೇ ಗಗನ ಮುಟ್ಟಿರಲಿ ಕೊನೆಗೆ ಲೈಂಗಿಕತೆಯ ವ್ಯಾಪ್ತಿಗೆ ಬಂದು ನಿಲ್ಲುತ್ತದೆ. ಎಲ್ಲಿಯವರೆಗೆ ಎಂದರೆ ವಿವೇಕಾನಂದರ ಮಾತಿನಂತೆ ಹದ್ದಿನಂತೆ ಆಕಾಶದಲ್ಲಿ ಹಾರುತ್ತಿದ್ದರೂ ಕೊಳೆತ ಮಾಂಸ ಕಂಡೊಡನೆ ರೊಯ್ಯನೆ ಕೆಳಕ್ಕಿಳಿಯುವಂತರ ಸಾಧಕರ ಮನಸ್ಸೂ ಕ್ಷಣಾರ್ಧದಲ್ಲಿ ಅಲ್ಲಿಗೇ ಸೆಳೆಯಲ್ಪಡುತ್ತದೆ.

ಇದಕ್ಕೆ ಕಾರಣ ಅನವಶ್ಯಕವಾಗಿ ಅಥವಾ ಅಗತ್ಯತೆ ಮೀರಿ ಲೈಂಗಿಕತೆಯ ವಿಷಯವನ್ನು ಮುಚ್ಚಿಟ್ಟಿರುವುದು. ಇದರಿಂದಾಗಿ ವ್ಯಕ್ತಿ ಮತ್ತು ಸಮಾಜದ ಮನಸ್ಸಿನಲ್ಲಿ ಅದೊಂದು ಕಾಯಿಲೆಯಾಗಿ ಪರಿವರ್ತನೆಯಾಗಿದೆ. ಮನಬಿಚ್ಚಿ ಮಾತನಾಡದ ಹೊರತು ಈ ಕಾಯಿಲೆ ಖಂಡಿತಾ ಗುಣವಾಗದು.

ಹೀಗಾಗಿ ಸಭ್ಯತೆಯ ಮಿತಿಯನ್ನು ಮೀರದೇ ಲೈಂಗಿಕತೆಯ ಕುರಿತು ಮುಕ್ತವಾಗಿ ಮಾತನಾಡುವ ಅಭ್ಯಾಸ ಸಮಾಜದ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದೇ ಆಗಿದೆ. ಆದರೆ ಸದ್ಯದ ನಮ್ಮ ಸಮಾಜದ ಕುಂದಿಹೋಗಿರುವ ವಿಚಾರ ಶಕ್ತಿಯ ಮುಂದೆ ಇಂಥ ಸೂಕ್ಷ್ಮ ಮತ್ತು ಗಹನವಾದ ವಿಷಯಗಳು ಒಂದು ಅಭಿಪ್ರಾಯವನ್ನು ರೂಪಿಸಿಬಿಡುವುದಕ್ಕೆ ಸೀಮಿತವಾಗದೇ ಅದರ ಕುರಿತು ಅಧ್ಯಯನ ಮಾಡುವ, ಸಂಶೋಧನೆ ಮಾಡುವ, ಅಥವಾ ಸತ್ಯದ ಅನ್ವೇಷಣೆ ಮಾಡುವ, ತನ್ಮೂಲಕ ಪೂರ್ಣ ದೃಷ್ಟಿಯನ್ನು‌ ಪಡೆಯುವ ತಾಳ್ಮೆಯನ್ನು ಕಲಿಸಬೇಕಾಗಿದೆ.

ಹೀಗಾಗಿ ಸತ್ಯವೆಂಬ ಒಡೆದುಹೋಗಿರುವ ಚೆಂಡಿನ ಚೂರುಗಳಂತೆ ಕಾಣುತ್ತಿರುವ ಎರಡು ಚರ್ಚೆಗೆ ನನ್ನದೊಂದು ಚೂರನ್ನು ಸೇರಿಸಲು ಇಚ್ಚಿಸಿ ಈ ಬರಹವನ್ನು ಬರೆಯುತ್ತಿದ್ದೇನೆ. ಸತ್ಯಾನ್ವೇಷಕರು ತಮ್ಮ ಬಳಿ ಇರುವ ಇನ್ನಷ್ಟು ಚೂರುಗಳನ್ನು ಸೇರಿಸಿ‌ ಅಂದರೆ ತಮ್ಮ ಅನುಭವ ಮತ್ತು ಜ್ಞಾನದ ಆಧಾರದ ಮೇಲೆ ಈ ವಿಷಯದ ಬಗ್ಗೆ ಲೇಖನಗಳನ್ನು ಬರೆದು ಪ್ರೇಮ ಮತ್ತು ಸಾಮಾಜಿಕ‌ ಕಾಳಜಿಯೆಂಬ ಅಂಟಿನ ಮೂಲಕ ಚೆಂಡಿನ ಆಕಾರವನ್ನು ಪುನರ್ ರಚಿಸಲು ಪೂರ್ಣಗೊಳಿಸಲು ತಮ್ಮದೇ ಆದ ಕೊಡುಗೆಯನ್ನು ನೀಡಬಹುದಾಗಿದೆ.

ಹಸ್ತಮೈಥುನ ಪ್ರವೃತ್ತಿಯನ್ನು ಎಲ್ಲ ಸಂದರ್ಭದಲ್ಲಿ ಸಹಜ ಎಂದು ಒಪ್ಪಲು ಆಗದು

1) ಮೊದಲ ಲೇಖನದಲ್ಲಿ ಲೇಖಕರು ಮುಷ್ಟಿಮೈಥುನ ಅಥವಾ ಹಸ್ತಮೈಥುನ ಗಂಡು ಮತ್ತು ಹೆಣ್ಣುಗಳಿಬ್ಬರಿಗೂ ಸಹಜವಾದದ್ದು, ಪಾಪವಲ್ಲದ್ದು ಮತ್ತು ಅಸಹ್ಯವಲ್ಲದ್ದು ಎಂದು ಪ್ರತಿಪಾದಿಸಿದ್ದಾರೆ. ಅದು ಖಂಡಿತಾ ನೂರಕ್ಕೆ ನೂರು ನಿಜ. ಆದರೆ ಇದಕ್ಕೆ ಷರತ್ತುಗಳು ಅನ್ವಯಿಸುತ್ತವೆ.

2) ಎಲ್ಲಿಯವರೆಗೂ ಅದು ಕಡ್ಡಾಯ ಕ್ರಿಯೆಯಾಗಿ ಪರಿವರ್ತನೆಯಾಗುವುದಿಲ್ಲವೋ ಅಲ್ಲಿಯವರೆಗೂ ಅದು ಸುರಕ್ಷಿತ ಮತ್ತು ಉಪಯುಕ್ತ. ಯಾವಾಗ ಅದು 'ಕಡ್ಡಾಯ'ವಾಗುತ್ತದೋ ಅಲ್ಲಿಂದ ಅದರ ದುಷ್ಪರಿಣಾಮಗಳನ್ನು ವ್ಯಕ್ತಿ ಎದುರಿಸಲು ಆರಂಭಿಸಬೇಕಾಗುತ್ತದೆ. ಅಂತಹಾ ವ್ಯಕ್ತಿಗೆ ತಜ್ಞರು ಚಿಕಿತ್ಸೆ ನೀಡಬೇಕಾಗುತ್ತದೆ. (ಎರಡನೇ ಲೇಖನದಲ್ಲಿ ಲೇಖಕರು ಇದನ್ನು ತುಂಬಾ ಸ್ಪಷ್ಟವಾಗಿ ತಿಳಿಸಿದ್ದಾರೆ.)

3) ಮೊದಲ ಲೇಖನದಲ್ಲಿ ಲೇಖಕರು ಹೇಳಿರುವ ಇನ್ನೊಂದು ವಿಷಯ "ಹೆಣ್ಣುಮಕ್ಕಳಿಗೂ ಹಸ್ತಮೈಥುನವೆಂಬುದು ಗಂಡು ಮಕ್ಕಳಷ್ಟೇ ಸಹಜ. ಅದನ್ನು ಸಮಾಜ ಮುಕ್ತವಾಗಿ ಒಪ್ಪಿಕೊಳ್ಳಬೇಕು" ಎಂಬುದಾಗಿದೆ. ಆಶಯ ಸರಿಯಾಗಿಯೇ ಇದೆ‌. ಆದರೆ ಮೈಥುನವಾಗಲೀ, ಮುಷ್ಟಿಮೈಥುನವಾಗಲೀ ಅಥವಾ ಹಸ್ತಮೈಥುನವಾಗಲಿ ಇನ್ಯಾವುದೇ ವಿಧದ ವಿಕೃತವಲ್ಲದ ಮೈಥುನವಾಗಲಿ ಪಾಪವಲ್ಲ ನಿಜ. ಆದರೆ ಅದು ಗುಪ್ತವಾಗಿ ನಾಲ್ಕು ಗೋಡೆಗಳ ಮಧ್ಯದಲ್ಲಿ ನಡೆಯದಿದ್ದಲ್ಲಿ ಮತ್ತೊಬ್ಬರ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಅಷ್ಟೇ ಸತ್ಯ. (ವಿಶೇಷವಾಗಿ ಏನೂ ಅರಿಯದ ಚಿಕ್ಕ ಮಕ್ಕಳ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ.) ಇನ್ನೊಬ್ಬರಿಗೆ ಗೊತ್ತಾಗುವಷ್ಟು ಅದು ಮಿತಿಮೀರಿ ನಡೆಯುತ್ತಿದೆ ಎಂದರೆ ಅದು ಆ ವ್ಯಕ್ತಿಗೆ ಕಡ್ಡಾಯ ಕ್ರಿಯೆಯಾಗಿ ಪರಿವರ್ತನೆಯಾಗಿದೆ ಎಂದೇ ಅರ್ಥ. ಇದನ್ನು ಸಮಾಜ ಒಪ್ಪಿಕೊಳ್ಳುವುದು ತಾತ್ಕಾಲಿಕ ಪರಿಹಾರವಿರಬಹುದು. ಆದರೆ ಶಾಶ್ವತ ಪರಿಹಾರವಂತೂ ಖಂಡಿತಾ ಅಲ್ಲ.

4) ವ್ಯಕ್ತಿಗೆ ಹೇಗೆ ಒಂದು ಖಾಸಗಿತನವಿರುತ್ತದೆಯೋ ಸಮಾಜಕ್ಕೂ ಹಾಗೇ ಒಂದು ಖಾಸಗಿತನವಿರುತ್ತದೆ. ಅದನ್ನು ಮೀರಬೇಕು ಎಂದು ಸಮಾಜವನ್ನು ಒತ್ತಾಯಿಸಲು ಯಾರಿಗೂ ಹಕ್ಕಿಲ್ಲ. ವ್ಯಕ್ತಿ ಮತ್ತು ಸಮಾಜ ಎರಡರ ಹಿತಕ್ಕೂ ಧಕ್ಕೆಯಾಗದಂತೆ ಹಕ್ಕುಗಳು, ಅಭಿಪ್ರಾಯಗಳೂ ಮಂಡನೆಯಾಗಬೇಕು. ಒಂದು ವೇಳೆ ವ್ಯಕ್ತಿ ಹಿತವು ಸಮಾಜ ಹಿತಕ್ಕೆ ಮಾರಕವಾಗಿದ್ದರೆ ವ್ಯಕ್ತಿ ಹಿತವನ್ನು ಕಡೆಗಣಿಸಬೇಕೇ ಹೊರತು ಸಮಾಜದ ಹಿತವನ್ನಲ್ಲ.

5) ಯಾವ ಯಾವ ಕಾಲದಲ್ಲಿ ಏನು ಏನು‌ ನಡೆಯಬೇಕೋ ಅದು ಹಾಗೆಯೇ ನಡೆದರೆ ಯಾರಿಗೂ ಯಾವುದೇ ಥರದ ಸಮಸ್ಯೆಯಾಗುವುದಿಲ್ಲ. ಧರ್ಮ ಅರ್ಥ ಕಾಮ ಮೋಕ್ಷಗಳೆಂಬ ಪುರುಷಾರ್ಥಗಳನ್ನು ಸಮರ್ಥವಾಗಿ ನಿರ್ವಹಿಸಲು ನಮ್ಮ ದೇಶದಲ್ಲಿ ಮೊದಲ 25 ವರ್ಷ ಬ್ರಹ್ಮಚರ್ಯಾಶ್ರಮ (ಅಂದರೆ ಶ್ರದ್ಧೆಯ ವಿದ್ಯಾಭ್ಯಾಸ) ಮುಂದಿನ 25 ವರ್ಷ ಗೃಹಸ್ಥಾಶ್ರಮ (ಸುಖಿ ದಾಂಪತ್ಯ ಜೀವನ) ಅದರ ಮುಂದಿನ 25 ವರ್ಷ ವಾನಪ್ರಸ್ಥ (ಆತ್ಮವಿಮರ್ಶೆ ಮತ್ತು ವಿಷಯ ನಿವೃತ್ತಿಗೆ ತಯಾರಿ) ಅದರ ಮುಂದಿನ 25 ವರ್ಷ ಸನ್ಯಾಸ (ತ್ಯಾಗ ಜೀವನ ಮತ್ತು ವಿಶ್ರಾಂತಿ) ಎಂಬ ಶ್ರೇಷ್ಠ ಆದರ್ಶವನ್ನು ನೀಡಿದ್ದಾರೆ. ಬದಲಾದ ಕಾಲಮಾನದಲ್ಲಿ ಆಗಿರುವ ಅನೇಕ ವ್ಯತ್ಯಾಸಗಳಿಂದ ಈ ಪದ್ಧತಿಯ ಬುಡ ಅಲುಗಾಡಿದೆ. ಇದಕ್ಕೆ ಪರ್ಯಾಯವಾಗಿ ಮತ್ತು ಪೂರಕವಾಗಿ ಇದರ ತಳಹದಿಯ ಮೇಲೆ ಹೊಸ ಸಮಸ್ಯೆಗಳಿಗೆ ಹೊಸಾ ವೈಜ್ಞಾನಿಕ ಮತ್ತು ವೈಚಾರಿಕ, ಆಧ್ಯಾತ್ಮಿಕ ಪರಿಹಾರಗಳನ್ನು ಕಂಡುಹಿಡಿಯಬೇಕಾಗಿದೆಯೇ ಹೊರತು ಸಮಸ್ಯೆಗಳನ್ನು ಸಹಜ ಮಾಡಿಕೊಳ್ಳುವುದಲ್ಲ. ಹಾಗೆ ಮಾಡಿದರೆ ಸಿಂಹ ಕಣ್ಣೆದುರು ಬಂದಾಗ ಕಣ್ಣು ಮುಚ್ಚಿಕೊಂಡು ಇಲ್ಲ ನನ್ನ ಮುಂದೆ ಇಲ್ಲ ಎಂದು ನಮಗೆ ನಾವೇ ಹೇಳಿಕೊಂಡು ಭಯದಿಂದ ಮುಕ್ತರಾದಂತೆ‌. ಆದರೆ ಸಿಂಹ ಏನು ಮಾಡಬೇಕೋ ಅದು ಮಾಡಿಯೇ ಮಾಡುತ್ತದೆ.

ಹೆಚ್ಚುತ್ತಿರುವ ಹದಿಹರೆಯದ ಲೈಂಗಿಕ ಸಮಸ್ಯೆಗಳಿಗೆ ಏನು ಪರಿಹಾರ?

1) ಪ್ರತಿಯೊಬ್ಬ ವ್ಯಕ್ತಿಯ ಲೈಂಗಿಕ ಆಸಕ್ತಿ ಮತ್ತು ಬಯಕೆಗಳು ಬೇರೆ ಬೇರೆ ಪ್ರಮಾಣದಲ್ಲಿರುತ್ತದೆ. ಅವರವರ ಬದುಕುವ, ವಾಸ ಮಾಡುವ ಪರಿಸರವೂ ಸಹಾ ಭಿನ್ನಭಿನ್ನವಾಗಿರುತ್ತದೆ‌. ಹೀಗಾಗಿ ಎಲ್ಲರಿಗೂ ಒಂದೇ ರೀತಿಯ ಪರಿಹಾರವಿಲ್ಲ. ಒಬ್ಬನ ಅಂಗಿ ಇನ್ನೊಬ್ಬನಿಗೆ ಹೊಂದುವುದಿಲ್ಲ. ಹೀಗಾಗಿ‌ ಪ್ರತಿಯೊಬ್ಬ ವ್ಯಕ್ತಿಗೂ ಒಂದೇ ವಿಧವಾದ ಬೋಧನೆ ಸಲ್ಲದು. ಪ್ರತಿಯೊಬ್ವರಿಗೂ ಒಬ್ಬೊಬ್ಬ ಗುರುವನ್ನು ಒದಗಿಸುವುದು ಅಸಾಧ್ಯವಾದ ಕಾರಣ ಅವರವರ ಸಮಸ್ಯೆಗಳಿಗೆ ಅವರವರೇ ಪರಿಹಾರ ಹುಡುಕಿಕೊಳ್ಳುವಷ್ಟು ಸಾರ್ವಕಾಲಿಕ ಮತ್ತು ಸರ್ವವ್ಯಾಪಕ ಜ್ಞಾನವನ್ನು ಅವರಿಗೆ ಮುಕ್ತವಾಗಿ ನೀಡಬೇಕಾಗಿದೆ.

2) ಕಾಮ ಸಹಜ ಎಂಬ ತಿಳುವಳಿಕೆಯನ್ನು ಎಲ್ಲರಿಗೂ ಕೊಡಬೇಕು ನಿಜ. ಆದರೆ ಅದು ನಮ್ಮ ಹಿಡಿತದಲ್ಲಿದ್ದಾಗ ಮಾತ್ರ ಎಂಬ ತಿಳುವಳಿಕೆಯೂ ಎಲ್ಲರಿಗೂ ಬರಬೇಕು. ಅದಕ್ಕಾಗಿ ಆತ್ಮಸಂಯಮದ, ಶಿಸ್ತಿನ, ದೈಹಿಕ ಶ್ರಮದ ಮತ್ತು ವ್ಯಾಯಾಮದ ಪಾಠ ಶಾಲೆಗಳಲ್ಲಿ ಮತ್ತು ಮನೆಗಳಲ್ಲಿ ಕಡ್ಡಾಯವಾಗಬೇಕು.

3) ಗಂಡು ಮತ್ತು ಹೆಣ್ಣಿನ‌ ನಡುವೆ ಕೇವಲ ಪ್ರೇಯಸಿ ಅಥವಾ ಹೆಂಡತಿಯ ಮೇಲಿರುವ ಲೈಂಗಿಕ ಆಕರ್ಷಣೆ ಮಾತ್ರವಲ್ಲದೇ ತಾಯಿ, ಸಹೋದರಿ, ಸ್ನೇಹಿತೆ, ಮಗಳು, ಅಜ್ಜಿ ಎಂಬ ಅನ್ನೂ ಅನೇಕ ಬಲವಾದ ಸಂಬಂಧಗಳಿವೆ. ಈ ಸಂಬಂಧಗಳ ಗಾಢ ಅನುಭವ ಮಕ್ಕಳಿಗೆ ಬಾಲ್ಯದಲ್ಲೇ ಸಿಗುವ ಹಾಗೆ ಮಾಡಬೇಕು‌. ಹೆಣ್ಣಿನ ವಿವಿಧ ಆಯಾಮಗಳ ಪರಿಚಯ ಮಗುವಿಗೆ ಆಗಬೇಕು. ಹಾಗೆಯೇ ಹೆಣ್ಣುಮಕ್ಕಳಿಗೂ ಕೂಡಾ ಗಂಡಿನ ಪರಿಚಯ ತಂದೆ, ಮಗ, ಸಹೋದರ, ಸ್ನೇಹಿತ, ಅಜ್ಜನೆಂಬಂತೆ ಗಾಢವಾಗಿ ಆಗಬೇಕು. ದುರದೃಷ್ಟ ಕುಟುಂಬವೊಂದರ ಜನಸಂಖ್ಯೆ ಮೂರಕ್ಕೆ ಇಳಿದಿರುವ ಈ ಸಂದರ್ಭದಲ್ಲಿ ಇದನ್ನು ಸಾಧ್ಯಮಾಡಿಕೊಳ್ಳುವುದು ಹೇಗೆ ಎಂಬ ಸವಾಲೂ ನಮ್ಮ ನಡುವೆ ಇದೆ.

4) ಸಾಮಾನ್ಯವಾಗಿ ಒಂಟಿತನದ ಕಾರಣದಿಂದ ಉದ್ಭವವಾಗುವ ಈ ಸಮಸ್ಯೆಗಳಿಗೆ ಪರಿಹಾರವಿರುವುದೇ ಎಲ್ಲರೊಡನೆ ಬೆರೆಯುವುದರಲ್ಲಿ. ಮಕ್ಕಳಿಗೆ ಕೇವಲ ಓದು ಓದು ಎಂದು ಒತ್ತಡ ಹೇರಿ ಅಂಕಗಳೆಂಬ ಭೂತದ ವಶಕ್ಕೆ ಅವರನ್ನು ಕೊಡದೇ ಒಳ್ಳೆಯ ಸ್ನೇಹಿತರ ವಲಯಕ್ಕೆ ಅವರನ್ನು ಪರಿಚಯಿಸುವುದು ಹೇಗೆ ಎಂಬ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿದೆ. ಪಾಠದಂತೆ ಆಟಗಳನ್ನೂ ಅವರ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಬೇಕಿದೆ.

5) ದೇಹದ ಅವಶ್ಯಕತೆಯನ್ನು ಮೀರಲು ದೈಹಿಕಶ್ರಮ ಬಹಳ ಅವಶ್ಯಕ. ನಮ್ಮ ಮಕ್ಕಳನ್ನು ಮುದ್ದಿನ ಹೆಸರಲ್ಲಿ ಸೋಮಾರಿಗಳನ್ನಾಗಿಸುತ್ತಿದ್ದೇವೆ. ಕಷ್ಟಪಡುವುದರಿಂದ ತಪ್ಪಿಸಿಕೊಳ್ಳುವುದನ್ನು ಕಲಿಸುತ್ತಿದ್ದೇವೆ. ಇದೇ ಎಲ್ಲಾ ಸಮಸ್ಯೆಗಳಿಗೂ ಮೂಲ. ವ್ಯಾಯಾಮ, ಆಟ ಸೇರಿದಂತೆ ಮನೆಗೆಲಸ, ತೋಟದ ಕೆಲಸ, ಮನೆಯ ಹೊರಗಿನ ಕೆಲಸ, ಈ ರೀತಿ ಕೈತುಂಬಾ ಕೆಲಸ ನೀಡಿದಾಗ ಮಕ್ಕಳ ಶಕ್ತಿ ಸದ್ವಿನಿಯೋಗವಾಗುತ್ತದೆ. ಅನವಶ್ಯಕ ದಾರಿಗಳಲ್ಲಿ ಶಕ್ತಿ ಪೋಲಾಗುವುದು ತಪ್ಪುತ್ತದೆ‌.

6) ಶಕ್ತಿಗೆ ಎರಡು ದಾರಿಗಳಿವೆ. ಒಂದು ಸಹಸ್ರಾರ (ತಲೆ) ಇನ್ನೊಂದು ಮೂಲಾಧಾರ (ಜನನೇಂದ್ರಿಯ). ಶಕ್ತಿಯನ್ನು ಎಳವೆಯಲ್ಲೇ ಊರ್ಧ್ವಮುಖಿಯಾಗಿಸಿಬಿಟ್ಟರೆ ಅರ್ಧ ಸಮಸ್ಯೆ ಪರಿಹಾರವಾದಂತೆಯೇ. ಆದರೆ ಇದಕ್ಕೆ ತಜ್ಞರ, ಗುರುಗಳ ಮಾರ್ಗದರ್ಶನ ಬೇಕು. ಅದಕ್ಕಾಗಿ ಮಕ್ಕಳನ್ನು ಪವಿತ್ರಾತ್ಮರ, ಯೋಗಿಗಳ, ತ್ಯಾಗಿಗಳ, ಜಿತೇಂದ್ರಿಯರ ಸಂಪರ್ಕಕ್ಕೆ ತರಬೇಕು. ಕನಿಷ್ಠ ಅವರ ವಿಚಾರಗಳನ್ನಾದರೂ ಬಾಲ್ಯದಲ್ಲಿಯೇ ಕೇಳಿಸಬೇಕು. ಓದಿಸಬೇಕು.

7) ಉನ್ನತ ಆಸಕ್ತಿಗಳು ಮಾನವನ ಕೆಳಗಿನ ಆಸಕ್ತಿಗಳ ಕಡೆಗೆ ಗಮನವನ್ನು ಸಹಜವಾಗಿ ಕಡಿಮೆಗೊಳಿಸುತ್ತದೆ‌. ಸಾಹಿತ್ಯ, ಸಂಗೀತ, ನೃತ್ಯ, ಕಲೆ, ಆಟೋಟಗಳು, ಯೋಗ, ಅಡುಗೆ, ಪ್ರಕೃತಿ, ಆಧ್ಯಾತ್ಮ, ತತ್ವಶಾಸ್ತ್ರ ಇನ್ನಿತರ ಹವ್ಯಾಸಗಳಲ್ಲಿ ತೊಡಗಿಕೊಳ್ಳಲು ಅವಕಾಶ ಕಲ್ಪಿಸಬೇಕು. ಅದರಲ್ಲಿ ಆನಂದ ಪಡೆಯುವುದನ್ನು ಹೇಳಿಕೊಡಬೇಕು.

8) ಪಾಪಪ್ರಜ್ಞೆ ಎಷ್ಟು ಕೆಟ್ಟದ್ದೋ ಸ್ವೇಚ್ಛಾಚಾರವೂ ಅಷ್ಟೇ ಕೆಟ್ಟದ್ದು. ಒಂದನ್ನು ಕಡಿಮೆ ಮಾಡಲು ಇನ್ನೊಂದನ್ನು ಪ್ರೋತ್ಸಾಹಿಸುವುದು ನೆಗಡಿಗಾಗಿ ಮೂಗನ್ನು ಕೊಯ್ದಂತೆ. ಹೀಗಾಗಿ ಈ ಎರಡರ ನಡುವೆ ಒಂದು ನಿಲ್ದಾಣವಿದೆ. ಅದೇ ಆತ್ಮಸಂಯಮ. ಆ ನಿಲ್ದಾಣವನ್ನು ಹುಡುಕಿ‌ಕೊಂಡು ಮಕ್ಕಳು ಅದರ ಆಧಾರದ ಮೇಲೆ ನಿಲ್ಲುವಂತೆ ನೋಡಿಕೊಳ್ಳಬೇಕು.

9) ಉನ್ನತ ಆದರ್ಶಗಳ ಕಡೆಗೆ ತೀವ್ರ ಸೆಳೆತವು ಮಕ್ಕಳ ಭಾವನಾ ಶಕ್ತಿಯನ್ನು ಕೇಂದ್ರೀಕರಿಸುತ್ತದೆ. ಅದಕ್ಕಾಗಿ ಬಾಲ್ಯದಲ್ಲಿಯೇ ಮಕ್ಕಳಿಗೆ ದೇಶಭಕ್ತಿ, ಸಮಾಜಸೇವೆ, ಜೀವಸೇವೆ, ತ್ಯಾಗ, ಬಲಿದಾನಗಳಂಥಾ ಭಾವನೆಗಳನ್ನು ಬಿತ್ತಿ ಒಂದು ಸದೃಢ ವ್ಯಕ್ತಿತ್ವ ಸಂಪಾದನೆಯಾಗುವಂತೆ ನೋಡಿಕೊಳ್ಳಬೇಕು. ಕೆಳಕ್ಕಿಳಿಯುವ ಮನಸ್ಸಿನೊಡನೆ ಸದಾ ಸಂಘರ್ಷಕ್ಕಿಂತಾ ಅದನ್ನು ಮೀರಿ ಹೋಗುವ ಅವಕಾಶಗಳನ್ನು ಕಲ್ಪಿಸುವುದು ಉತ್ತಮ.

10) ಓಂಕಾರ ಪಠಣ ಮತ್ತು ಧ್ಯಾನಕಲೆಯು ನಮ್ಮ ಮನಸ್ಸಿನ ಮೇಲೆ ನಮ್ಮ ಪ್ರಭುತ್ವವನ್ನು ಸಾಧಿಸಲು ಬಹಳ ಅನುಕೂಲಕಾರಿ. ಸಾಧ್ಯವಾದರೆ ಬಾಲ್ಯದಲ್ಲಿಯೇ ಮಕ್ಕಳಿಗೆ ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳನ್ನು ರೂಢಿಯಾಗುವಂತೆ ಮಾಡಿಬಿಟ್ಟರೆ ಅರ್ಧ ಸಮಸ್ಯೆ ಪರಿಹಾರವಾದಂತೆ. ಇದು ಮಕ್ಕಳ ಮೆದುಳಿನಲ್ಲಿನ ಮೂರು ಭಾಗಗಳಾದ animality, humanity, divinity ಗಳ ಮೇಲೆ ಬಹಳವಾದ ಪ್ರಭಾವ ಬೀರಿ, ಮನುಷ್ಯನ basic instincts ಗಳ ಪ್ರಭಾವವನ್ನು ಕಡಿಮೆಗೊಳಿಸಿ ದಿವ್ಯತೆಯನ್ನು ಜಾಗೃತಗೊಳಿಸಬಲ್ಲುದು.

ಈ ಮೇಲಿನವಷ್ಟೇ ಅಲ್ಲದೇ ಇನ್ನೂ ಅನೇಕ ಮಾರ್ಗೋಪಾಯಗಳು ಈ ಸಮಸ್ಯೆಯನ್ನು ಪರಿಹರಿಸಲು ಲಭ್ಯವಿದೆ. ಆದರೆ ಫಾಸ್ಟ್‌ಫುಡ್ ಜಮಾನಾದಲ್ಲಿ ಎಲ್ಲ ಬಗೆಯ ಶಾರ್ಟ್‌ಕಟ್‌ಗಳನ್ನು ಜನರು ಹುಡುಕಿ ಹುಡುಕಿ ಸುಲಭ ಲಭ್ಯವನ್ನು ಮಾತ್ರ ಮಾನ್ಯಮಾಡುವ ಗಡಿಬಿಡಿಯಲ್ಲಿರುವುದರಿಂದ ಈ ಪರಿಹಾರಗಳು ಕೇವಲ ಪುಸ್ತಕರೂಪದಲ್ಲಿ ಉಳಿದುಬಿಡುತ್ತವೆ. ಆದರೆ ಕೆಲವಾದರೂ ಮನಸ್ಸುಗಳು ಇದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿದರೆ ಖಂಡಿತಾ ಅಸಾಧ್ಯವೇನೂ ಅಲ್ಲ. ಅದಕ್ಕಾಗಿ ವಿವೇಕ Viveka Vidya Vahini Trust ವಿವಿಧ ಯೋಜನೆಗಳ ಮೂಲಕ ಜನಸಾಮಾನ್ಯರಲ್ಲಿ ಮೌಲ್ಯ ಶಿಕ್ಷಣದ ಪ್ರಸಾರದ ಸಾಹಸವನ್ನು ಮಾಡುತ್ತಿದೆ ನಿಮ್ಮ ಸಹಕಾರವಿರಲಿ.

ಬರಹ: ನಿತ್ಯಾನಂದ ವಿವೇಕವಂಶಿ, ಸಂಪರ್ಕ ಸಂಖ್ಯೆ: 7259369893