Ganesh Karanth Interview: ಬಹುಮುಖ ಪ್ರತಿಭೆ ಈ ಕರಾವಳಿ ಹುಡುಗ...ಹಿನ್ನೆಲೆ ಗಾಯಕ, ಕಾಮಿಡಿಯನ್‌ ಗಣೇಶ್‌ ಕಾರಂತ್‌ ಸಂದರ್ಶನ
ಕನ್ನಡ ಸುದ್ದಿ  /  ಜೀವನಶೈಲಿ  /  Ganesh Karanth Interview: ಬಹುಮುಖ ಪ್ರತಿಭೆ ಈ ಕರಾವಳಿ ಹುಡುಗ...ಹಿನ್ನೆಲೆ ಗಾಯಕ, ಕಾಮಿಡಿಯನ್‌ ಗಣೇಶ್‌ ಕಾರಂತ್‌ ಸಂದರ್ಶನ

Ganesh Karanth Interview: ಬಹುಮುಖ ಪ್ರತಿಭೆ ಈ ಕರಾವಳಿ ಹುಡುಗ...ಹಿನ್ನೆಲೆ ಗಾಯಕ, ಕಾಮಿಡಿಯನ್‌ ಗಣೇಶ್‌ ಕಾರಂತ್‌ ಸಂದರ್ಶನ

ನನಗೆ ಬಾಲ್ಯದಿಂದಲೂ ಸಂಗೀತದಲ್ಲಿ ಬಹಳ ಆಸಕ್ತಿ. ಆದ್ದರಿಂದ ಉಡುಪಿಯಲ್ಲಿದ್ದಾಗ ಕರ್ನಾಟಕ ಸಂಗೀತ ಕಲಿತೆ. ಆಗಿನಿಂದಲೂ ನನಗೆ ಸಿನಿಮಾ ಹಿನ್ನೆಲೆ ಗಾಯಕನಾಗುವ ಆಸಕ್ತಿ ಇತ್ತು. ಕೆಲಸಕ್ಕಾಗಿ ಬೆಂಗಳೂರಿಗೆ ಬಂದ ನಂತರ ವೃತ್ತಿಯ ಜೊತೆಗೆ ಪ್ಲೇ ಬ್ಯಾಕ್‌ ಸಿಂಗಿಂಗ್‌ನಲ್ಲೂ ತೊಡಗಿಸಿಕೊಂಡೆ. ಇತ್ತೀಚೆಗೆ ಯುವ ದಸರಾ ವೇದಿಕೆಯಲ್ಲಿ ಹಾಡಿದ್ದೇನೆ.

ಗಣೇಶ್‌ ಕಾರಂತ್‌ ಸಂದರ್ಶನ

ಗಣೇಶ್‌ ಕಾರಂತ್‌ ಸಂದರ್ಶನ (PC: Ganesh Karanth Facebook)

ಸೋಷಿಯಲ್‌ ಮೀಡಿಯಾ ಬಳಕೆದಾರರಿಗೆ ಗಣೇಶ್‌ ಕಾರಂತ್‌ ಬಹಳ ಪರಿಚಯ ಇರುವ ಪ್ರತಿಭೆ. ಕೇವಲ ಪ್ರತಿಭೆ ಎಂಬ ಪದ ಬಳಸುವುದಕ್ಕಿಂತ ಇವರಿಗೆ ಬಹುಮುಖ ಪ್ರತಿಭೆ ಎಂದರೆ ಸೂಕ್ತ. ಗಣೇಶ್‌ ಕಾರಂತ್‌ ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್.‌ ಪ್ರವೃತ್ತಿಯಲ್ಲಿ ಸಿನಿಮಾ ಹಿನ್ನೆಲೆ ಗಾಯಕ, ಅಷ್ಟೇ ಅಲ್ಲ ಕಾಮಿಡಿ ವಿಡಿಯೋಗಳನ್ನು ಮಾಡುವುದರಲ್ಲಿ ಕೂಡಾ ಎತ್ತಿದ ಕೈ. ಜೊತೆಗೆ ತಮ್ಮ ಯೂಟ್ಯೂಬ್‌ ಚಾನೆಲ್‌ ಮೂಲಕ ಕ್ರಿಕೆಟ್‌, ಸಿನಿಮಾ ರಿವ್ಯೂ ಕೂಡಾ ಮಾಡ್ತಾರೆ.

ಗಣೇಶ್‌ ಕಾರಂತ್‌ ಮೂಲತ: ಉಡುಪಿಯವರು. ತಂದೆ ಕೆ. ಶಿವರಾಮ್‌ ಕಾರಂತ್‌ ನಿವೃತ್ತ ಬಿಎಸ್‌ಎನ್‌ಎಲ್‌ ಡಿಜಿಎಂ, ತಾಯಿ ಯಶೋಧಾ ಕಾರಂತ್‌ ಗೃಹಿಣಿ. ಓರ್ವ ಸಹೋದರಿ ಇದ್ದಾರೆ. ಕಂಪ್ಯೂಟರ್‌ ಸೈನ್ಸ್‌ನಲ್ಲಿ ಇಂಜಿಯರಿಂಗ್‌ ಪದವಿ ಪಡೆದಿರುವ ಗಣೇಶ್‌ ಕಾರಂತ್‌, ಕಳೆದ 8 ವರ್ಷಗಳಿಂದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. 2021 ಡಿಸೆಂಬರ್‌ನಲ್ಲಿ ಚಿಕ್ಕಬಳ್ಳಾಪುರದ ಶ್ರೀವಿದ್ಯಾ ಅವರನ್ನು ಗಣೇಶ್‌ ಕಾರಂತ್‌ ಕೈ ಹಿಡಿದಿದ್ದಾರೆ. ತಮ್ಮ ವೃತ್ತಿ, ಗಾಯನ ಕ್ಷೇತ್ರ, ಕಾಮಿಡಿ ವಿಡಿಯೋಗಳ ಬಗ್ಗೆ ಹಿಂದುಸ್ತಾನ್‌ ಟೈಮ್ಸ್‌ ಜೊತೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇಲ್ಲಿದೆ ಅವರೊಂದಿಗಿನ ಕಿರು ಸಂದರ್ಶನ.‌

ಹಿನ್ನೆಲೆ ಗಾಯಕ ಗಣೇಶ್‌ ಕಾರಂತ್

ಹಿನ್ನೆಲೆ ಗಾಯಕ ಗಣೇಶ್‌ ಕಾರಂತ್

ಐಟಿ ವೃತ್ತಿ, ಗಾಯನ ಕ್ಷೇತ್ರದ ಬ್ಯುಸಿ ಕೆಲಸಗಳ ನಡುವೆಯೂ ಕಾಮಿಡಿ ವಿಡಿಯೋ ಮಾಡಬೇಕೆನಿಸಿದ್ದು ಏಕೆ..?

ನನಗೆ ಕಾಮಿಡಿ ವಿಡಿಯೋಗಳನ್ನು ಮಾಡಲು ಕೂಡಾ ಬಹಳ ದಿನಗಳಿಂದ ಆಸಕ್ತಿ ಇತ್ತು. ನಾನು ಮೊದಲು ಗುರುತಿಸಿಕೊಂಡಿದ್ದು ಗಾಯನ ಕ್ಷೇತ್ರದಲ್ಲಿ. ಆಗ ಒಂದೆರಡು ವಿಡಿಯೋಗಳನ್ನು ಮಾಡಿದ್ದೆ. ಆದರೆ ಅದಕ್ಕೆ ಅಷ್ಟು ಪಾಸಿಟಿವ್‌ ಪ್ರತಿಕ್ರಿಯೆ ದೊರೆಯಲಿಲ್ಲ. ಆ ಕಾರಣಕ್ಕೆ ಅದರ ಬಗ್ಗೆ ಹೆಚ್ಚಿನ ಗಮನ ಹರಿಸಿರಲಿಲ್ಲ. ಆದರೆ ಲಾಕ್‌ಡೌನ್‌ ಸಮಯದಲ್ಲಿ ವರ್ಕ್‌ ಫ್ರಮ್‌ ಹೋಂ ಶುರುವಾಯ್ತು. ಸಿನಿಮಾ ನಿರ್ದೇಶನ, ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿರುವ ಎಷ್ಟೋ ಮಂದಿ ಹಾಸ್ಯ ಕಲಾವಿದರಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಹೇಗೋ ಸಮಯ ಇದೆ. ಈಗ ಸೀರಿಯಸ್‌ ಆಗಿ ಟ್ರೈ ಮಾಡೋಣ ಎನಿಸಿ, ಕಾಮಿಡಿ ವಿಡಿಯೋಗಳನ್ನು ಮಾಡಲು ಆರಂಭಿಸಿದೆ. ನನ್ನ ಕಾಮಿಡಿ ವಿಡಿಯೋಗೆ ಅಮ್ಮ ಕೂಡಾ ಸಪೋರ್ಟ್‌ ಮಾಡಿದರು. ಈಗ ಪತ್ನಿ ಕೂಡಾ ಇನ್ವಾಲ್ವ್‌ ಆಗಿದ್ದಾರೆ. ಜನರಿಂದ ಉತ್ತಮ ಪ್ರತಿಕ್ರಿಯೆ ಬಂತು. ಅಲ್ಲಿಂದ ಅದನ್ನು ಮುಂದುವರೆಸಿಕೊಂಡು ಬರುತ್ತಿದ್ದೇನೆ.

ಜನಾರ್ಧನ್‌ ಸರ್‌, ಬಿಯರ್ಡ್‌ ಬಾಲಕನ ಕಾನ್ಸೆಪ್ಟ್‌ ಬಂದಿದ್ದು ಹೇಗೆ..?

ಕಾಮಿಡಿ ವಿಡಿಯೋಗಳನ್ನು ಮಾಡುವಾಗ ಅದಕ್ಕೆ ಪ್ರತ್ಯೇಕ ಬಾಡಿ ಲಾಂಗ್ವೇಜ್‌ ಇರಬೇಕು. ಆದ್ದರಿಂದ ಮೊದಲು ಜನಾರ್ಧನ್‌ ಸರ್‌ ಎಂಬ ಕಾನ್ಸೆಪ್ಟ್‌ ಶುರು ಮಾಡಿದೆ. ಅದು ಕ್ರಿಕೆಟ್‌ನಲ್ಲಿ ಬಹಳ ಆಸಕ್ತಿ ಇರುವ ಪಾತ್ರ. ನಂತರ ಸ್ನಾಪ್‌ಚಾಟ್‌ ಫಿಲ್ಟರ್‌ ಬಳಸಿ ಬಿಯರ್ಡ್‌ ಬಾಲಕ ಎಂಬ ಪಾತ್ರ ಸೃಷ್ಟಿಸಿದೆ. ಬಿಯರ್ಡ್‌ ಬಾಲಕ ಬಹಳ ದಡ್ಡ, ಆದರೆ ಆತನ ತಲೆಯಲ್ಲಿ ನಾನೇ ಬುದ್ಧಿವಂತ ಎಂಬ ಭಾವನೆ ಇದೆ. ಕೊನೆಗೆ ಇಬ್ಬರನ್ನೂ ಅಪ್ಪ-ಮಗನನ್ನಾಗಿ ಮಾಡಿ ವಿಡಿಯೋ ಆರಂಭಿಸಿದೆ. ಇದು ಜನರಿಗೆ ಬಹಳ ಇಷ್ಟವಾಯ್ತು. ಜನಾರ್ಧನ್‌ ಸರ್‌ ತಂದೆ, ಗಣಪತಿ ಭಟ್‌ ಎಂಬ ಮತ್ತೊಂದು ಪಾತ್ರ ಇದೆ. ಆದರೆ ಅದನ್ನು ಹೆಚ್ಚಿಗೆ ಬಳಸಿಲ್ಲ. ಒಂದೊಂದು ಪಾತ್ರಕ್ಕೂ ಒಂದೊಂದು ಬಾಡಿ ಲಾಂಗ್ವೇಜ್‌ ಹಾಗೂ ಲುಕ್‌ ಇರಬೇಕು. ಹೆಚ್ಚು ಪಾತ್ರಗಳು ಜನರಿಗೆ ಗೊಂದಲ ಆಗಬಹುದು ಎಂಬ ಕಾರಣಕ್ಕೆ ಸದ್ಯಕ್ಕೆ 2 ಪಾತ್ರಗಳ ಮೂಲಕವೇ ವಿಡಿಯೋಗಳನ್ನು ಮಾಡುತ್ತಿದ್ದೇನೆ.‌

ಬಿಯರ್ಡ್‌ ಬಾಲಕ ಹಾಗೂ ಜನಾರ್ಧನ್‌ ಸರ್‌ ಪಾತ್ರದಲ್ಲಿ ಗಣೇಶ್

ಬಿಯರ್ಡ್‌ ಬಾಲಕ ಹಾಗೂ ಜನಾರ್ಧನ್‌ ಸರ್‌ ಪಾತ್ರದಲ್ಲಿ ಗಣೇಶ್

ಹೊರಗೆ ಹೋದಾಗ ಜನರು ಹೇಗೆ ರಿಯಾಕ್ಟ್‌ ಮಾಡ್ತಾರೆ..?

ಪುಟ್ಟ ಮಕ್ಕಳಿಗೆ ಬಿಯರ್ಡ್‌ ಬಾಲಕನ ಪಾತ್ರ ಬಹಳ ಇಷ್ಟವಾಗಿದೆ. ನಾನು ಸಂಗೀತ ಕಾರ್ಯಕ್ರಮಗಳಿಗೆ ಹೊರಗೆ ಹೋದಾಗ ಪೋಷಕರು ನನ್ನ ಬಳಿ ಬಂದು ಮಾತನಾಡಿಸುತ್ತಾರೆ. ನಮ್ಮ ಮಕ್ಕಳಿಗೆ ನಿಮ್ಮ ವಿಡಿಯೋಗಳು ಬಹಳ ಇಷ್ಟ ಎಂದು ಹೇಳಿದಾಗ ಬಹಳ ಖುಷಿಯಾಗುತ್ತದೆ. ಬಿಯರ್ಡ್‌ ಬಾಲಕ ಎಂಬ ಹುಡುಗನೊಬ್ಬ ಇದ್ದಾನೆ ಅಂತಾನೇ ಮಕ್ಕಳು ನಂಬಿದ್ದಾರೆ. ಹಿರಿಯರು, ಮಕ್ಕಳು ನೋಡಬಹುದಾದ ವಿಡಿಯೋ ಮಾಡಬೇಕೆಂಬುದು ನನ್ನ ಆಸೆಯಾಗಿತ್ತು. ಈ ರೀತಿಯ ಕಾಮೆಂಟ್‌ಗಳನ್ನು ಕೇಳಿದಾಗ, ಮಾಡಿದ್ದೂ ಸಾರ್ಥಕ ಎನ್ನಿಸುತ್ತದೆ. ನಾನು ಸಿಂಗರ್‌ ಎಂಬುದು ಬಹಳ ಜನರಿಗೆ ಗೊತ್ತು. ಆದರೆ ಕಾಮಿಡಿ ವಿಡಿಯೋಗಳಿಂದ ಮತ್ತಷ್ಟು ಹೆಸರು ದೊರೆತಿದೆ.

ಮದುವೆಯಾಗುವಾಗ ರೀಲ್ಸ್‌ಗೆ ಸಪೋರ್ಟ್ ಮಾಡಬೇಕು ಅಂತ ಪತ್ನಿಗೆ ಕಂಡಿಷನ್‌ ಹಾಕಿದ್ರಾ ಹೇಗೆ..?

ಖಂಡಿತ ಇಲ್ಲ, ಕಳೆದ ವರ್ಷ ಡಿಸೆಂಬರ್‌ನಲ್ಲಿ ನನ್ನ ಮದುವೆ ಆಯ್ತು. ವಿದ್ಯಾ ಕೂಡಾ ಸಾಫ್ಟ್‌ವೇರ್‌ ಉದ್ಯೋಗಿ. ''ನಿಮ್ಮದು ಲವ್‌ ಮ್ಯಾರೇಜಾ..? ಕಾಮಿಡಿ ವಿಡಿಯೋಗಳಲ್ಲಿ ನಟಿಸಬೇಕು ಅಂತ ಕಂಡಿಷನ್‌ ಹಾಕಿದ್ರಾ..?'' ಎಂದು ನನಗೆ ಬಹಳಷ್ಟು ಜನರಿಂದ ಪ್ರಶ್ನೆ ಎದುರಾಗಿದೆ. ನಿಜ ಹೇಳಬೇಕೆಂದರೆ ವಿದ್ಯಾಗೆ ನಾನು ಸಿಂಗರ್‌ ಅಥವಾ ಕಾಮಿಡಿ ವಿಡಿಯೋ ಮಾಡುತ್ತೇನೆ ಅನ್ನೋದೆ ಗೊತ್ತಿರಲಿಲ್ಲ. ನಮ್ಮದು ಪಕ್ಕಾ ಅರೇಂಜ್‌ ಮ್ಯಾರೇಜ್.‌ ನಾನು ನಿಮ್ಮ ಕಾಮಿಡಿ ವಿಡಿಯೋಗಳಲ್ಲಿ ನಟಿಸೋದಿಲ್ಲ ಅಂತ ವಿದ್ಯಾ ಹೇಳಿದ್ದರು. ಆದರೆ ಈಗ ಆಕೆಯೇ ಆಸಕ್ತಿಯಿಂದ ಇನ್ವಾಲ್ವ್‌ ಆಗ್ತಿದ್ದಾರೆ. ಆಕೆ ಬಹಳ ಸಪೋರ್ಟಿವ್.‌ ಅರೇಂಜ್‌ ಮ್ಯಾರೇಜ್‌ನಲ್ಲಿ ನನಗೆ ಹೊಂದುವಂತ ಹುಡುಗಿ ಸಿಕ್ಕಿದ್ದು ನಿಜಕ್ಕೂ ನಾನು ಬಹಳ ಲಕ್ಕಿ.‌

ತಂದೆ, ತಾಯಿ, ಪತ್ನಿಯೊಂದಿಗೆ ಗಣೇಶ್‌ ಕಾರಂತ್

ತಂದೆ, ತಾಯಿ, ಪತ್ನಿಯೊಂದಿಗೆ ಗಣೇಶ್‌ ಕಾರಂತ್

ಕಾಮಿಡಿ ವಿಡಿಯೋ ಮಾಡುವಾಗ ಅಮ್ಮ ಹಾಗೂ ಪತ್ನಿಗೆ ಹೇಗೆ ಟ್ರೈನ್‌ ಅಪ್‌ ಮಾಡ್ತೀರಾ..?

ಮನಸ್ಸಿನಲ್ಲಿ ಒಂದು ಕಾನ್ಸೆಪ್ಟ್‌ ಬಂದಾಗ ಮೊದಲು ಅದನ್ನು ಹೇಗೆ ಮಾಡಬಹುದು ಅನ್ನೋದನ್ನು ಪ್ಲಾನ್‌ ಮಾಡ್ತೀನಿ. ಅಮ್ಮನಿಗಾಗಲೀ, ಪತ್ನಿಗಾಗಲೇ ನಾನು ಮೊದಲು ಆಕ್ಟ್‌ ಮಾಡಿ ತೋರಿಸುತ್ತೇನೆ. ಅಮ್ಮನಿಗೆ ಉಡುಪಿ ಕನ್ನಡದಲ್ಲೇ ಮಾತನಾಡಲು ಹೇಳುತ್ತೇನೆ. ಅವರಿಗೆ ಬೆಂಗಳೂರು, ಮಂಡ್ಯ, ಮೈಸೂರು ಭಾಗದ ಕನ್ನಡ ಬರುವುದಿಲ್ಲ. ಹಾಗೇ ಪತ್ನಿಗೆ ಉಡುಪಿ ಕನ್ನಡ ಬರುವುದಿಲ್ಲ. ಅವರಿಗೆ ಯಾವುದು ಪರಿಪೂರ್ಣತೆ ಇದೆಯೋ ಹಾಗೇ ಮಾತನಾಡುತ್ತಾರೆ. ಕೆಲವೊಂದು ವಿಡಿಯೋಗಳಿಗೆ 20-25 ಶಾಟ್ಸ್‌ ತೆಗೆದುಕೊಂಡಿದ್ದಾರೆ. ಆದರೆ ಔಟ್‌ ಪುಟ್‌ ಬಹಳ ಚೆನ್ನಾಗಿರುತ್ತದೆ. ವಿಡಿಯೋಗಳಲ್ಲಿ ನಾಟಕೀಯತೆ ಇರುವುದಿಲ್ಲ, ಎಲ್ಲವೂ ನೈಜವಾಗಿ ಮಾಡಲು ಹೇಳುತ್ತೇನೆ. ಆದ್ದರಿಂದಲೇ ವಿಡಿಯೋಗಳು ಜನರಿಗೆ ಕನೆಕ್ಟ್‌ ಆಗ್ತಿದೆ.

ಮಂಡ್ಯ ರಮೇಶ್‌ ಕೂಡಾ ನಿಮ್ಮ ವಿಡಿಯೋ ಮೆಚ್ಚಿ ಕಮೆಂಟ್‌ ಮಾಡಿದ್ದರು, ಇದರ ಬಗ್ಗೆ ಏನು ಹೇಳ್ತೀರಿ..?

ನಾಟಕರಂಗ, ರಂಗಭೂಮಿಯಲ್ಲಿ ಮಂಡ್ಯ ರಮೇಶ್‌ ದೊಡ್ಡ ಹೆಸರು ಮಾಡಿದ್ದಾರೆ. ನಟನ ಎಂಬ ಸಂಸ್ಥೆ ಮೂಲಕ ಅವರು ಪ್ರತಿಭೆಗಳಿಗೆ ತರಬೇತಿ ನೀಡುತ್ತಿದ್ದಾರೆ. ಅವರಂತ ಹೆಸರಾಂತ ನಟರು ನನ್ನ ಕಾಮಿಡಿ ವಿಡಿಯೋಗಳನ್ನು ಮೆಚ್ಚಿ ಕಮೆಂಟ್‌ ಮಾಡಿರುವುದು ನಿಜಕ್ಕೂ ಖುಷಿಯ ವಿಚಾರ. ನಿಮ್ಮೊಳಗೆ ಒಬ್ಬ ಉತ್ತಮ ನಟ ಇದ್ದಾನೆ, ಕಾಮಿಡಿ ವಿಡಿಯೋಗಳನ್ನು ಹೀಗೇ ಮುಂದುವರೆಸಿ ಎಂದು ಅವರು ಕಮೆಂಟ್‌ ಮಾಡಿದ್ದು ಬಹಳ ಖುಷಿ ಇದೆ. ಅದನ್ನು ವ್ಯಕ್ತಪಡಿಸಲು ಸಾಧ್ಯವೇ ಇಲ್ಲ.‌

ಗಣೇಶ್‌ ಕಾರಂತ್‌ ತಾಯಿ ಹಾಗೂ ಪತ್ನಿ

ಗಣೇಶ್‌ ಕಾರಂತ್‌ ತಾಯಿ ಹಾಗೂ ಪತ್ನಿ

ತುತ್ತಾ ಮುತ್ತಾ ವಿಡಿಯೋಗೆ ರಮೇಶ್‌ ಸಿನಿಮಾ ಸ್ಫೂರ್ತೀನಾ ಅಥವಾ ಬೇರೆ..?

ಖಂಡಿತ ಹೌದು, ಹಾಗೇ ಬಹುತೇಕ ಪುರುಷರು ಈ ಪರಿಸ್ಥಿತಿ ಎದುರಿಸಿದ್ದಾರೆ. ಆ ವಿಡಿಯೋ ನೋಡಿದ ಕೆಲವರು ನಮ್ಮ ಮನೆಯಲ್ಲಿ ಕೂಡಾ ಅತ್ತೆ-ಸೊಸೆಗೆ ಹೊಂದಾಣಿಕೆ ಇಲ್ಲ ಎಂದು ತಪ್ಪು ತಿಳಿದಿದ್ದಾರೆ. ಆದರೆ ನಮ್ಮ ಮನೆಯಲ್ಲಿ ಆ ರೀತಿ ಇಲ್ಲ. ನನ್ನ ಅಮ್ಮ ಹಾಗೂ ವಿದ್ಯಾ ಫ್ರೆಂಡ್ಸ್‌ ರೀತಿ ಇದ್ದಾರೆ. ಜನರಿಗೆ ಇದು ಕನ್ವೇ ಆಗಲೆಂದೇ ತೆರೆ ಹಿಂದಿನ ವಿಡಿಯೋವನ್ನು ಕೂಡಾ ಸೇರಿಸಿದ್ದೇನೆ.

ಶೂಟಿಂಗ್‌ ಹಾಗೂ ಎಡಿಟಿಂಗ್‌ ಎಷ್ಟು ಸಮಯ ಹಿಡಿಯುತ್ತೆ..?

ಶೂಟಿಂಗ್‌ ಮಾಡೋದು ಸುಲಭದ ಕೆಲಸ, ಆದರೆ ಎಡಿಟಿಂಗ್‌ ಬಹಳ ಕಷ್ಟ. ಅಮ್ಮ, ಪತ್ನಿಯದ್ದು ಬಹಳ ಶಾಟ್‌ಗಳಿರುತ್ತವೆ. ಅದನ್ನು ಫೈನಲಸ್‌ ಮಾಡೋದು ಕಷ್ಟ. ಹಾಗೇ ನಾನೇನು ದೊಡ್ಡ ಕ್ಯಾಮರಾದಲ್ಲಿ ರೆಕಾರ್ಡ್‌ ಮಾಡುವುದಿಲ್ಲ. ಹಾಗೇ ಲೊಕೇಶನ್‌ ಕೂಡಾ ಹುಡುಕೊಲ್ಲ. ಮನೆಯಲ್ಲಿ, ನನ್ನ ಮೊಬೈಲ್‌ನಲ್ಲೇ ರೆಕಾರ್ಡ್‌ ಮಾಡ್ತೇನೆ. ಆಫೀಸ್‌ ಕೆಲಸ, ಸಿಂಗಿಂಗ್‌ ಜೊತೆಗೆ ಈ ಕೆಲಸ ಕೂಡಾ ಮಾಡಬೇಕು. ಒಂದು ವಿಡಿಯೋಗೆ ಒಂದು ದಿನ ಆದ್ರೂ ಬೇಕಾಗುತ್ತೆ.

ತಮ್ಮ ಮೆಚ್ಚಿನ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಜೊತೆ ಗಣೇಶ್‌ ಕಾರಂತ್

ತಮ್ಮ ಮೆಚ್ಚಿನ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಜೊತೆ ಗಣೇಶ್‌ ಕಾರಂತ್

ಸಂಗೀತದಲ್ಲಿ ಮೊದಲಿನಿಂದಲೂ ಆಸಕ್ತಿ ಇತ್ತಾ..?

ನನಗೆ ಬಾಲ್ಯದಿಂದಲೂ ಸಂಗೀತದಲ್ಲಿ ಬಹಳ ಆಸಕ್ತಿ. ಆದ್ದರಿಂದ ಉಡುಪಿಯಲ್ಲಿದ್ದಾಗ ಕರ್ನಾಟಕ ಸಂಗೀತ ಕಲಿತೆ. ಆಗಿನಿಂದಲೂ ನನಗೆ ಸಿನಿಮಾ ಹಿನ್ನೆಲೆ ಗಾಯಕನಾಗುವ ಆಸಕ್ತಿ ಇತ್ತು. ಕೆಲಸಕ್ಕಾಗಿ ಬೆಂಗಳೂರಿಗೆ ಬಂದ ನಂತರ ವೃತ್ತಿಯ ಜೊತೆಗೆ ಪ್ಲೇ ಬ್ಯಾಕ್‌ ಸಿಂಗಿಂಗ್‌ನಲ್ಲೂ ತೊಡಗಿಸಿಕೊಂಡೆ. ರೇಡಿಯೋ ಸಿಟಿ ಸೂಪರ್‌ ಸಿಂಗರ್‌ ಸೀಸನ್‌ 8 ವಿನ್ನರ್‌, ಕಲರ್ಸ್‌ ಕನ್ನಡದ ಕನ್ನಡ ಕೋಗಿಲೆ ಕಾರ್ಯಕ್ರಮದಲ್ಲಿ ಫೈನಲ್‌ ಹಂತದಲ್ಲಿ ಭಾಗವಹಿಸಿದ್ದೆ. ಇತ್ತೀಚೆಗೆ ಯುವ ದಸರಾ ವೇದಿಕೆಯಲ್ಲಿ ಹಾಡಿದ್ದೇನೆ. ಇದನ್ನು ಹೊರತುಪಡಿಸಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಸಾಕಷ್ಟು ವೇದಿಕೆಗಳಲ್ಲಿ ಹಾಡಿದ್ದೇನೆ.

ರಮೇಶ್‌ ಅರವಿಂದ್‌ ಅವರ ಪುಷ್ಪಕವಿಮಾನ ಚಿತ್ರದ ಈ ಸೃಷ್ಠಿಯ......, ಹುಲಿರಾಯ ಚಿತ್ರದ ಹೇ ಹುಡುಗಿ....ಇರುವುದೆಲ್ಲವ ಬಿಟ್ಟು ಚಿತ್ರದ ಈ ಜೀವನ....ಸೇರಿ 8 ಸಿನಿಮಾಗಳಲ್ಲಿ ಲೀಡ್‌ ಸಿಂಗರ್‌ ಆಗಿ ಹಾಡಿದ್ದೇನೆ. 50ಕ್ಕೂ ಹೆಚ್ಚು ಸಿನಿಮಾಗಳಿಗೆ ಕೆಲಸ ಮಾಡಿದ್ದೇನೆ.

ಕಾರ್ಯಕ್ರಮವೊಂದರಲ್ಲಿ ಗಾಯಕಿ ಸುನಿತಾ ಜೊತೆ ಹಾಡುತ್ತಿರುವ ಗಣೇಶ್‌ ಕಾರಂತ್

ಕಾರ್ಯಕ್ರಮವೊಂದರಲ್ಲಿ ಗಾಯಕಿ ಸುನಿತಾ ಜೊತೆ ಹಾಡುತ್ತಿರುವ ಗಣೇಶ್‌ ಕಾರಂತ್

ನಿಮ್ಮ ಮೆಚ್ಚಿನ ಗಾಯಕ ಯಾರು...ಫ್ಯೂಚರ್‌ ಪ್ಲಾನ್‌ ಏನಿದೆ..?

ನನಗೆ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಎಂದರೆ ಬಹಳ ಇಷ್ಟ. ಅವರೇ ನನಗೆ ದೊಡ್ಡ ಸ್ಫೂರ್ತಿ. ಸಿನಿಮಾ ಸಂಗೀತದ ಬಗ್ಗೆ ನನಗೆ ಬಹಳ ಆಸಕ್ತಿ ಇದೆ. ಫ್ಯೂಚರ್‌ ಬಗ್ಗೆ ಹೇಳುವುದಾದರೆ ಹಿನ್ನೆಲೆ ಗಾಯನದಲ್ಲಿ ಇನ್ನಷ್ಟು ಹೆಸರು ಮಾಡುವ ಆಸೆ, ಅನೇಕ ಹಾಡುಗಳನ್ನು ಹಾಡಿದ್ದರೂ ಒಂದೊಳ್ಳೆ ಬ್ರೇಕ್‌ಗಾಗಿ ಕಾಯುತ್ತಿದ್ದೇನೆ.

ಗಣೇಶ್‌ ಕಾರಂತ್‌ ಮತ್ತಷ್ಟು ಹೆಸರು ಮಾಡಲಿ, ಅವರ ಆಸೆಯಂತೆ ಹಿನ್ನೆಲೆ ಗಾಯನ ಕ್ಷೇತ್ರದಲ್ಲಿ ಬ್ರೇಕ್‌ ದೊರೆಯಲಿ ಎಂದು ಹಾರೈಸೋಣ.

ಗಿಟಾರ್‌ ಜೊತೆಗೆ ಬಿಯರ್ಡ್‌ ಬಾಲಕ

ಗಿಟಾರ್‌ ಜೊತೆಗೆ ಬಿಯರ್ಡ್‌ ಬಾಲಕ
Whats_app_banner