Vastu Tips: ಮನೆಯಲ್ಲಿ ಸದಾ ಶಾಂತಿ, ನೆಮ್ಮದಿ ನೆಲೆಸಿ, ದಂಪತಿಗಳ ನಡುವೆ ಪ್ರೀತಿ ಹೆಚ್ಚಲು ಈ ಸಿಂಪಲ್ ವಾಸ್ತು ಟಿಪ್ಸ್ ಫಾಲೋ ಮಾಡಿ
ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಲು ವಾಸ್ತವೂ ಕಾರಣವಾಗುತ್ತದೆ ಎನ್ನುತ್ತಾರೆ. ಇದರೊಂದಿಗೆ ದಂಪತಿಗಳ ನಡುವೆ ಭಾಂದವ್ಯ ವೃದ್ಧಿಯಾಗಲೂ ವಾಸ್ತು ಅವಶ್ಯ. ಮನೆಯಲ್ಲಿ ಫಿಶ್ ಅಕ್ವೇರಿಯಂ ಹಾಗೂ ಲವ್‌ಬರ್ಡ್ಸ್ ಇರಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ, ಅವನ್ನು ಹೇಗೆ ಯಾವ ದಿಕ್ಕಿನಲ್ಲಿ ಇರಿಸಬೇಕು ಎಂಬಿತ್ಯಾದಿ ವಿವರ ಇಲ್ಲಿದೆ.
ಅನಾದಿ ಕಾಲದಿಂದಲೂ ಭಾರತದ ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ವಾಸ್ತುಶಾಸ್ತ್ರಕ್ಕೆ ತನ್ನದೇ ಆದ ಸ್ಥಾನವಿದೆ. ವಾಸ್ತುಶಿಲ್ಪ ಹಾಗೂ ವಿನ್ಯಾಸ ತತ್ವಗಳಲ್ಲಿ ವಾಸ್ತುಶಾಸ್ತ್ರವು ಬೇರೂರಿದೆ. ವಾಸ್ತುವಿಗೆ ತಕ್ಕಂತೆ ಮನೆ, ಕಚೇರಿ ಅಥವಾ ಯಾವುದೇ ಸ್ಥಳವನ್ನು ನಿರ್ಮಾಣ ಮಾಡುವುದರಿಂದ ಆ ಜಾಗದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ ಎಂಬುದು ನಂಬಿಕೆ. ವಾಸ್ತುವು ಜನರ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮವನ್ನು ಉತ್ತೇಜಿಸುವ ಪರಿಸರವನ್ನು ಸೃಷ್ಟಿಸುವ ಗುರಿ ಹೊಂದಿದೆ. ಇದು ಯಾವುದೇ ಜಾಗದಲ್ಲಿ ಸಕಾರಾತ್ಮಕ ಭಾವ ಮೂಡಲು ಕಾರಣವಾಗುತ್ತದೆ.
ಮನೆಯಲ್ಲಿ ಕೆಲವು ಪ್ರಾಣಿ, ಪಕ್ಷಿಗಳನ್ನು ಸಾಕುವುದು ಕೂಡ ವಾಸ್ತುವಿಗೆ ಅನುಗುಣವಾಗಿ ಇರಬೇಕು, ಇದು ವಾಸ್ತುವಿನ ಭಾಗವಾಗಿದೆ ಎನ್ನುತ್ತಾರೆ ವಾಸ್ತುಶಾಸ್ತ್ರಜ್ಞರು. ಮನೆಯಲ್ಲಿ ಮೀನು, ಪಕ್ಷಿಗಳನ್ನು ಯಾವ ರೀತಿ ಸಾಕಬೇಕು, ಇವು ಶಾಂತಿ, ಸಾಕಾರಾತ್ಮಕ ಭಾವ ಮತ್ತು ಸಮೃದ್ಧಿಯನ್ನು ಹೇಗೆ ಹೆಚ್ಚಿಸುತ್ತವೆ ಎಂಬುದನ್ನು ಹುಕ್ಡ್ ಆನ್ ಫಿಶಸ್‌ನ ಸಂಸ್ಥಾಪಕ ಹುಸೇನ್ ಜರಿವಾಲಾ ಅವರು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ವಾಸ್ತುಪ್ರಕಾರ ಫಿಶ್ ಅಕ್ವೇರಿಯಂ ಅನ್ನು ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಿಸುವುದು ಮಂಗಳಕರ. ನೀರಿನೊಂದಿಗೆ ಸಂಬಂಧ ಹೊಂದಿರುವ ಈ ದಿಕ್ಕಿನಲ್ಲಿ ಅಕ್ವೇರಿಯಂ ಇರಿಸುವುದರಿಂದ ಆ ಪ್ರದೇಶದಲ್ಲಿ ಧನಾತ್ಮಕ ಅಂಶ ಹೆಚ್ಚಿರುತ್ತದೆ. ವೈವಾಹಿಕ ಜೀವನದಲ್ಲಿ ಪರಸ್ಪರ ಪ್ರೀತಿ, ಸೌಹಾರ್ದ ಕಾಪಾಡಿಕೊಳ್ಳಲು ಅಕ್ವೇರಿಯಂ ಅನ್ನು ಮುಖ್ಯ ಬಾಗಿಲಿನ ಎಡಭಾಗದಲ್ಲಿ ಇರಿಸಲು ಸಲಹೆ ನೀಡಲಾಗಿದೆ.
ಅಕ್ವೇರಿಯಂ ನೀರು ಬದಲಿಸುವುದು
ವಾಸ್ತುಪ್ರಕಾರ, ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ಅಕ್ವೇರಿಯಂನಲ್ಲಿರುವ ನೀರನ್ನು ಆಗಾಗ ಬದಲಿಸಬೇಕು. ನಿಂತ ನೀರು ಆರ್ಥಿಕವಾಗಿ ಸುಧಾರಣೆ ಕಾಣಲು ಅಡ್ಡಿಯಾಗಬಹುದು. ಅಕ್ವೇರಿಯಂನಲ್ಲಿ ಯಾವುದೇ ಕಾರಣಕ್ಕೂ ಪಾಚಿ ಕಟ್ಟದಂತೆ ನೋಡಿಕೊಳ್ಳಿ. ಇದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿ, ಮನೆಯಲ್ಲಿನ ಕೆಲಸಗಳಿಗೆ ತೊಂದರೆ ಉಂಟಾಗಬಹುದು.
ಮೀನುಗಳು ಸಂಖ್ಯೆ
ಅಕ್ವೇರಿಯಂನಲ್ಲಿ ನಿರ್ದಿಷ್ಟ ಸಂಖ್ಯೆಯ ಮೀನುಗಳು ಇರಬೇಕು. ಬೆಸ ಸಂಖ್ಯೆಯ ಮೀನುಗಳನ್ನು ಇಡುವುದು ಮಂಗಳಕರ ಎಂದು ಪರಿಗಣಿಸಲಾಗಿದೆ. ಒಂಬತ್ತು ಮೀನುಗಳ ಅಕ್ವೇರಿಯಂ ಇರಿಸುವುದು ಬಹಳ ಉತ್ತಮ. ಈ ಒಂಬತ್ತು ಮೀನುಗಳಲ್ಲಿ ಎಂಟು ಗೋಲ್ಡ್ ಫಿಶ್ ಹಾಗೂ ಬ್ಲ್ಯಾಕ್‌ಫಿಶ್ ಇರಿಸಬೇಕು. ಇದರಿಂದ ಧನಾತ್ಮಕತೆ ಹೆಚ್ಚಬಹುದು.
ಅದೃಷ್ಟದ ಮೀನು
ವಾಸ್ತುಶಾಸ್ತ್ರದ ಪ್ರಕಾರ ಫ್ಲವರ್‌ಹಾರ್ನ್ ಮತ್ತು ಅರೋವಾನಾ ಮುಂತಾದ ಮೀನುಗಳನ್ನು ಬಹಳ ಅದೃಷ್ಟವೆಂದು ಪರಿಗಣಿಸಲಾಗುತ್ತದೆ.
ಪ್ರಣಯಕ್ಕಾಗಿ ಲವ್‌ಬರ್ಡ್ಸ್
ಪ್ರೇಮ, ಪ್ರಣಯದ ಜೀವನ ಚೆನ್ನಾಗಿರಬೇಕು ಎಂದರೆ ಲವ್‌ಬರ್ಡ್‌ಗಳು ಸಹಾಯ ಮಾಡುತ್ತವೆ. ದಂಪತಿಗಳ ನಡುವಿನ ವಿರಸ ದೂರ ಮಾಡಲು ಇವು ಸಹಕಾರಿ. ಪ್ರೇಮಿಗಳು ಅಥವಾ ದಂಪತಿಗಳ ನಡುವಿನ ಸಾಮರಸ್ಯದ ಕೊಂಡಿ ಈ ಲವ್‌ಬರ್ಡ್ಸ್‌ಗಳಾಗಿವೆ. ಪ್ರೀತಿಯ ಬಳ್ಳಿ ಹಬ್ಬಲು ಮಲಗುವ ಕೋಣೆಯ ನೈರುತ್ಯ ದಿಕ್ಕಿನಲ್ಲಿ ಲವ್‌ಬರ್ಡ್ಸ್‌ಗಳನ್ನು ಇರಿಸಿ. ಕೇವಲ ಎರಡು ಲವ್‌ಬರ್ಡ್‌ಗಳನ್ನು ಮಾತ್ರ ಇರಿಸಿಕೊಳ್ಳಬೇಕು. ಮೂರು ಲವ್‌ಬರ್ಡ್ಸ್‌ಗಳನ್ನು ಇರಿಸಿದರೆ ಪ್ರೇಮಿಗಳು ಅಥವಾ ದಂಪತಿಗಳ ನಡುವೆ ಮೂರನೇಯವರು ಬರುತ್ತಾರೆ ಎಂದು ನಂಬಲಾಗಿದೆ.
ಫಿಶ್ ಟ್ಯಾಂಕ್‌ನೊಂದಿಗೆ ಪಾಸಿಟಿವ್ ವೈಬ್
ಫಿಶ್ ಟ್ಯಾಂಕ್ ಮನೆಯಲ್ಲಿ ಇರಿಸುವುದರಿಂದ ಶಾಂತಿ, ಸಮೃದ್ಧಿ, ಸಾಮರಸ್ಯ, ಸಂತೋಷ, ಪ್ರೀತಿ ಮತ್ತು ಬೆಳಕನ್ನು ತರುತ್ತವೆ. ಬೇರೆಯವರಿಗೆ ಉಡುಗೊರೆ ನೀಡುವುದಿದ್ದರೆ ಫಿಶ್ ಟ್ಯಾಂಕ್ ಅಥವಾ ಅಕ್ವೇರಿಯಂ ಉಡುಗೊರೆ ನೀಡುವುದು ಉತ್ತಮ.