Smartphone Overuse: ಅತಿಯಾದ ಮೊಬೈಲ್‌ ಬಳಕೆಯಿಂದ ಹೆಚ್ಚುತ್ತಿದೆ ಕೀಲುನೋವಿನ ಸಮಸ್ಯೆ; ಮಕ್ಕಳನ್ನೂ ಕಾಡುತ್ತಿದೆ ಅಪಾಯ; ಇರಲಿ ಎಚ್ಚರ
ಕನ್ನಡ ಸುದ್ದಿ  /  ಜೀವನಶೈಲಿ  /  Smartphone Overuse: ಅತಿಯಾದ ಮೊಬೈಲ್‌ ಬಳಕೆಯಿಂದ ಹೆಚ್ಚುತ್ತಿದೆ ಕೀಲುನೋವಿನ ಸಮಸ್ಯೆ; ಮಕ್ಕಳನ್ನೂ ಕಾಡುತ್ತಿದೆ ಅಪಾಯ; ಇರಲಿ ಎಚ್ಚರ

Smartphone Overuse: ಅತಿಯಾದ ಮೊಬೈಲ್‌ ಬಳಕೆಯಿಂದ ಹೆಚ್ಚುತ್ತಿದೆ ಕೀಲುನೋವಿನ ಸಮಸ್ಯೆ; ಮಕ್ಕಳನ್ನೂ ಕಾಡುತ್ತಿದೆ ಅಪಾಯ; ಇರಲಿ ಎಚ್ಚರ

Excessive Use Of Mobile: ಇತ್ತೀಚೆಗೆ ಜನರಲ್ಲಿ ಕೀಲುನೋವಿನ ಸಮಸ್ಯೆ ಕಾಣಿಸುವುದು ಸಾಮಾನ್ಯವಾಗಿದೆ. ಅತಿಯಾದ ಸ್ಮಾರ್ಟ್‌ಫೋನ್‌ ಬಳಕೆಯೂ ದೊಡ್ಡವರು ಸೇರಿದಂತೆ ಮಕ್ಕಳಲ್ಲೂ ಕೀಲುನೋವಿನ ಸಮಸ್ಯೆ ಹೆಚ್ಚಲು ಕಾರಣವಾಗಿದೆ ಎನ್ನುತ್ತಾರೆ ತಜ್ಞರು. ಹಾಗಾದರೆ ಅತಿಯಾದ ಮೊಬೈಲ್‌ ಬಳಕೆಯಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗಬಹುದು ನೋಡಿ.

ಅತಿಯಾದ ಮೊಬೈಲ್‌ ಫೋನ್‌ ಬಳಕೆಯಿಂದ ಮಕ್ಕಳನ್ನೂ ಕಾಡುತ್ತಿದೆ ಕೀಲುನೋವಿನ ಸಮಸ್ಯೆ
ಅತಿಯಾದ ಮೊಬೈಲ್‌ ಫೋನ್‌ ಬಳಕೆಯಿಂದ ಮಕ್ಕಳನ್ನೂ ಕಾಡುತ್ತಿದೆ ಕೀಲುನೋವಿನ ಸಮಸ್ಯೆ

ಕಳೆದ ಹಲವು ವರ್ಷಗಳಿಂದ ಹಲವಾರು ಅಧ್ಯಯನಗಳು ಆರೋಗ್ಯದ ವಿವಿಧ ಅಂಶಗಳ ಮೇಲೆ ಸ್ಮಾರ್ಟ್‌ಫೋನ್‌ನ ಹಾನಿಕಾರಕ ಪರಿಣಾಮಗಳ ಬಗ್ಗೆ ಎಚ್ಚರಿಸಿದೆ. ಅತಿಯಾದ ಮೊಬೈಲ್‌ ಫೋನ್‌ ಬಳಕೆಯು ನಿದ್ದೆಯ ಗುಣಮಟ್ಟ, ನೆನಪಿನ ಶಕ್ತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಕಲಿಕೆ ಹಾಗೂ ಮನರಂಜನೆಯ ಉದ್ದೇಶದಿಂದ ಮಕ್ಕಳು ಇಂದು ಸ್ಮಾರ್ಟ್‌ಪೋನ್‌ ಪರದೆಗೆ ಅಂಟಿಕೊಂಡೇ ಇರುವುದು ಕಳವಳಕ್ಕೆ ಕಾರಣವಾಗಿದೆ.

ಇದರೊಂದಿಗೆ ಸ್ಮಾರ್ಟ್‌ಫೋನ್‌ ಬಳಕೆಯ ವೇಳೆ ಸರಿಯಾದ ಭಂಗಿಯಲ್ಲಿ ಇರದೇ ಇರುವುದು ಕೂಡ ಹಲವು ಸಮಸ್ಯೆಗಳನ್ನು ಉಂಟು ಮಾಡಬಹುದು ಎನ್ನುತ್ತಾರೆ ತಜ್ಞರು.

ಕುತ್ತಿಗೆಯನ್ನು ಮುಂದೆ ಚಾಚಿಕೊಂಡೇ ಕುಳಿತುಕೊಂಡಿರುವ ಭಂಗಿಯು ಗರ್ಭಕಂಠ ಹಾಗೂ ಸೊಂಟದ ಸುತ್ತಲಿನ ಬೆನ್ನುಮೂಳೆಯ ನೋವಿಗೆ ಕಾರಣವಾಗಬಹುದು. ಇದು ಅಸ್ಥಿರಜ್ಜುಗಳ ತೊಂದರೆಗೂ ಕಾರಣವಾಗಬಹುದು. ಇದು ಯುವಜನರಲ್ಲೂ ಹೆಚ್ಚು ಹೆಚ್ಚು ನೋವಿಗೆ ಕಾರಣವಾಗುತ್ತಿದೆ.

ʼಇತ್ತೀಚೆಗೆ, ಕಿರಿಯರು ಹಾಗೂ ಹದಿಹರೆಯದ ಮಕ್ಕಳಲ್ಲಿ ಕೀಲು ನೋವು ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ಕಾಳಜಿಯ ವಿಷಯವಾಗಿದೆ. ಇತ್ತೀಚೆಗೆ ಅತಿಯಾದ ಮೊಬೈಲ್‌ ಫೋನ್‌ ಬಳಕೆಯೂ ಮಕ್ಕಳಲ್ಲಿ ಕೀಲುನೋವು ಕಾಣಿಸಲು ಕಾರಣವಾಗಿದೆ, ಅಲ್ಲದೆ ಈಗ ಮೊಬೈಲ್‌ ಫೋನ್‌ ಬಳಕೆಯೂ ಅನಿವಾರ್ಯವಾಗಿದೆ. ಜನರು ವೃತ್ತಿ, ಸಾಮಾಜಿಕ ಜಾಲತಾಣ, ಕುಟುಂಬದವರು ಹಾಗೂ ಸ್ನೇಹಿತರ ಜೊತೆ ಸಂಪರ್ಕ ಸಾಧಿಸಲು, ಇದರೊಂದಿಗೆ ಅಲಾರಂ ಇರಿಸಿಕೊಳ್ಳಲು, ಶಾಪಿಂಗ್‌ ಮಾಡಲು, ಜನರು ತಮ್ಮ ದಿನನಿತ್ಯದ ಕೆಲಸಗಳಲ್ಲಿ ಜನರು ಮೊಬೈಲ್‌ ಅನ್ನು ಜೊತೆಯಾಗಿಸಿಕೊಂಡಿದ್ದಾರೆ. ಮೊಬೈಲ್ ಫೋನ್‌ಗಳ ದೀರ್ಘಾವಧಿಯ ಬಳಕೆಯು ವ್ಯಕ್ತಿಯ ಮೇಲೆ ಹಲವು ವಿಧಗಳಲ್ಲಿ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು ಮತ್ತು ಕೀಲುನೋವು ಕೂಡ ಅವುಗಳಲ್ಲಿ ಒಂದಾಗಿರಬಹುದುʼ ಎನ್ನುತ್ತಾರೆ ಗುರುಗ್ರಾಮದ ಮಣಿಪಾಲ್‌ ಆಸ್ಪತ್ರೆಯ ರುಮಟಾಲಜಿ ವಿಭಾಗದ ಹಿರಿಯ ವೈದ್ಯ ಭಾಸಿನ್‌ ಗಗ್ನೇಜ.

ಸ್ಮಾರ್ಟ್‌ಪೋನ್‌ ಬಳಕೆಯಿಂದ ಉಂಟಾಗುವ ಇತರ ಕೀಲುನೋವುಗಳ ಬಗ್ಗೆ ಡಾ. ಗಗ್ನೇಜ್‌ ಇಲ್ಲಿ ವಿವರಿಸಿದ್ದಾರೆ.

ಕುತ್ತಿಗೆ ಹಾಗೂ ಭುಜದ ನೋವು: ಪ್ರತಿನಿತ್ಯ ಎರಡರಿಂದ ಮೂರು ಗಂಟೆಗೂ ಹೆಚ್ಚು ಕಾಲ ಸ್ಮಾರ್ಟ್‌ಫೋನ್‌ಗಳನ್ನು ಬಳಸುವುದರಿಂದ ಕುತ್ತಿಗೆ ಮತ್ತು ಭುಜದ ನೋವು ಮತ್ತು ಬೆನ್ನುನೋವಿಗೆ ಕಾರಣವಾಗಬಹುದು. ಅದರಲ್ಲೂ ಮಲಗಿಕೊಂಡು ಮೊಬೈಲ್‌ ಬಳಸುವುದರಿಂದ ಈ ಸಮಸ್ಯೆ ಹೆಚ್ಚಬಹುದು ಎನ್ನುತ್ತಾರೆ ವೈದ್ಯರು.

ಅಸ್ಥಿಸಂಧಿವಾತದ ಅಪಾಯ: ಹೆಬ್ಬರಳಿನ ಮೂಲಕ ಅತಿಯಾಗಿ ಟೈಪಿಂಗ್‌ ಮಾಡುವುದು ಅಸ್ಥಿಸಂಧಿವಾತದ ಸಮಸ್ಯೆಗೆ ಕಾರಣವಾಗಬಹುದು. ಇದು ಯುವಜನರಲ್ಲಿ ಹೆಚ್ಚು ಕಂಡು ಬರುತ್ತಿದೆ. ಅಸ್ಥಿಸಂಧಿವಾತವು ವಯಸ್ಸಾದವರ ಕಾಯಿಲೆಯಾಗಿದ್ದರೂ, ಕೆಲವು ಸಂದರ್ಭಗಳಲ್ಲಿ ಯುವಜನರಲ್ಲಿ ಅತಿಯಾದ ಮೊಬೈಲ್‌ ಬಳಕೆಯಿಂದ ʼಕಾರ್ಪೋಮೆಟಾಕಾರ್ಪಲ್‌ʼ ಎಂಬ ಅಸ್ಥಿಸಂಧಿವಾತಕ್ಕೆ ಕಾರಣವಾಗಿದೆ.

ಡಿ ಕ್ವೆರ್ವೈನ್ಸ್‌ ಟೆನೊಸೈನೋವಿಟಿಸ್‌: ಇದು ಮಣಿಕಟ್ಟಿನ ರೇಡಿಯಲ್‌ ಅಂಶದ ಮೇಲೆ ಪರಿಣಾಮ ಉಂಟಾಗಿ ನೋವು ಕಾಣಿಸುವುದಾಗಿದೆ. ಮೊಬೈಲ್‌ ಫೋನ್‌ ಬಳಕೆಗೆ ಅತಿಯಾಗಿ ಕೈಯನ್ನು ಬಳಸುವುದು ಈ ನೋವಿಗೆ ಕಾರಣವಾಗಬಹುದು.

ಮೊಣಕೈ ಸೆಳೆತ ಹಾಗೂ ನೋವು: ಎಲ್ಲಾ ಸಮಯದಲ್ಲೂ ಸ್ಮಾರ್ಟ್‌ ಫೋನ್‌ ಬಳಸುವಾಗ ಮೊಣಕೈಯನ್ನು ಬೆಂಡ್‌ ಮಾಡಿ ಇರಿಸಿಕೊಳ್ಳುತ್ತೇವೆ. ಇದರಿಂದ ಮೊಣಕೈ ಸೆಳೆತ ಅಥವಾ ನೋವು ಉಂಟಾಗಬಹುದು.

ಹ್ಯಾಂಡ್‌ ಆರ್ಮ್‌ ವೈಬ್ರೇಶನ್‌ ಸಿಂಡ್ರೋಮ್‌ (ಎಚ್‌ಎವಿಎಸ್‌): ಮೊಬೈಲ್‌ ಗೇಮ್‌ಗಳನ್ನು ಆಡುತ್ತಾ ದೀರ್ಘ ಕಾಲದವರೆಗೆ ಮೊಬೈಲ್‌ ಹಿಡಿದುಕೊಂಡಿರುವ ಮಕ್ಕಳಲ್ಲಿ ಹ್ಯಾಂಡ್‌ ಆರ್ಮ್‌ ವೈಬ್ರೇಶನ್‌ ಸಿಂಡ್ರೋಮ್‌ ಕಾಣಿಸಬಹುದು. ಇದರಿಂದ ಮಕ್ಕಳಲ್ಲಿ ಮೊಬೈಲ್‌ ಬಳಸುವಾಗ ಹಾಗೂ ಹಲವು ಗಂಟೆಗಳ ಕಾಲ ಮೊಬೈಲ್‌ನಲ್ಲಿ ಗೇಮ್‌ ಆಡುವಾಗ ವಿಪರೀತ ನೋವು ಕಾಣಿಸಿಕೊಳ್ಳಬಹುದು.

ಕೀಲುಗಳು ಹಾಗೂ ಅಸ್ಥಿರಜ್ಜುಗಳ ಮೇಲೆ ಪುನರಾವರ್ತಿತ ಒತ್ತಡ: ಇದರಿಂದ ಕೈ ಹಾಗೂ ಮಣಿಕಟ್ಟಿನಲ್ಲಿ ನೋವು, ಜುಮ್ಮೆನ್ನಿಸುವಿಕೆ, ಮರಗಟ್ಟುವಿಕೆಗೆ ಕಾರಣವಾಗಬಹುದು.

ಇರಲಿ ಎಚ್ಚರ

ʼಈ ತೊಂದರೆಗಳನ್ನು ತಪ್ಪಿಸಲು ಮೊಬೈಲ್‌ ಫೋನ್‌ ಬಳಸುವಾಗ ಎರಡೂ ಕೈಗಳನ್ನು ಬಳಸಬೇಕು. ಮೊಬೈಲ್‌ ಫೋನ್‌ ಅನ್ನು ಹೇಗೆ ಬಳಸಬೇಕು ಹಾಗೂ ಅತಿಯಾಗಿ ಬಳಸುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ಕಾನೂನುಬದ್ಧ ಆರೋಗ್ಯ ಎಚ್ಚರಿಕೆಯನ್ನು ಎಲ್ಲಾ ಮೊಬೈಲ್‌ಗಳು ಹಾಗೂ ಸಂಬಂಧಿತ ಸಾಧನೆಗಳಲ್ಲಿ ಮಾರ್ಗಸೂಚಿಯನ್ನು ಪ್ರಕಟಿಸಬೇಕು. ಉತ್ಪನ್ನಗಳನ್ನು ಮಾರಾಟ ಮಾಡುವಾಗ ಎಚ್ಚರಿಕೆ ಇರಬೇಕು ಮತ್ತು ಜನರು ಹೆಚ್ಚು ಗಂಟೆಗಳ ಕಾಲ ಮೊಬೈಲ್‌ ಫೋನ್‌ಗಳನ್ನು ಬಳಸಿದಾಗ ಆರೋಗ್ಯದ ಅಪಾಯಗಳ ಪಾಪ್‌- ಅಪ್‌ ಎಚ್ಚರಿಕೆಯೂ ಬರಬೇಕುʼ ಎನ್ನುತ್ತಾರೆ ಡಾ. ಗಗ್ನೇಜಾ.

Whats_app_banner