ಕನ್ನಡ ಸುದ್ದಿ  /  Lifestyle  /  Swimming And Health Benefits: Swimming Not Only Cool The Body; Its Has Many Health Benefits Also

swimming and health benefits: ಈಜುವುದರಿಂದ ಬಿಸಿಲಿನ ತಾಪ ನೀಗುವುದು ಮಾತ್ರವಲ್ಲ; ಆರೋಗ್ಯಕ್ಕೂ ಉಂಟು ಹಲವು ಪ್ರಯೋಜನ

swimming and health benefits: ಈಜು ಕೇವಲ ಬಿಸಿಲಿನ ದಾಹವನ್ನು ನೀಗಿಸುವುದು ಮಾತ್ರವಲ್ಲ, ಇದು ಉತ್ತಮ ವ್ಯಾಯಾಮ ಕೂಡ ಹೌದು. ಈಜುವುದರಿಂದ ಕೇವಲ ದೇಹಕ್ಕೆ ವ್ಯಾಯಾಮ ಸಿಗುವುದು ಮಾತ್ರವಲ್ಲ; ಆರೋಗ್ಯಕ್ಕೂ ಹಲವು ರೀತಿಯ ಪ್ರಯೋಜನಗಳಿವೆ.

ಈಜುವುದು
ಈಜುವುದು

ಬೇಸಿಗೆಯಲ್ಲಿ ಬಿಸಿಲಿನ ದಾಹ ತೀರಿಸಿಕೊಳ್ಳಲು ತಣ್ಣನೆಯ ನೀರಿನಲ್ಲಿ ಮನಸೋ ಇಚ್ಛೆ ಈಜಾಡಿದರೆ ಹೇಗೆ? ಈ ಕಲ್ಪನೆಯೇ ಖುಷಿ ಕೊಡುತ್ತದೆ. ಬಿಸಿಲಿನ ತಾಪ ಏರಿಕೆಯಾಗುತ್ತಲೇ ಇರುವ ಈ ಹೊತ್ತಿನಲ್ಲಿ ಸ್ವಿಮ್ಮಿಂಗ್‌ ಅಥವಾ ಈಜಾಡುವುದು ಬಹಳ ಮುಖ್ಯ ಎನ್ನಿಸುತ್ತದೆ. ಈಜಾಡುವುದರಿಂದ ಕೇವಲ ದೇಹ ತಣ್ಣಗಾಗಿ ಮನಸ್ಸಿಗೆ ಚೈತನ್ಯ ಮೂಡುವುದು ಮಾತ್ರವಲ್ಲ; ಆರೋಗ್ಯಕ್ಕೂ ಹಲವು ರೀತಿಯ ಪ್ರಯೋಜನಗಳಿವೆ. ತಜ್ಞರ ಪ್ರಕಾರ ಈಜಾಡುವುದು ಉತ್ತಮ ವ್ಯಾಯಾಮ ವಿಧಾನವೂ ಹೌದು.

ಹಾಗಾದರೆ ಈಜಾಡುವುದರಿಂದ ದೇಹದ ತಾಪ ತಣಿಯುವ ಜೊತೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಯಾವೆಲ್ಲಾ ರೀತಿಯ ಪ್ರಯೋಜನಗಳಿವೆ ನೋಡೋಣ ಬನ್ನಿ.

ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ

ಈಜುವಾಗ ಮನುಷ್ಯರಿಗೆ ತಮ್ಮ ಜೀವನದ ಸಮಸ್ಯೆಗಳ ಬಗ್ಗೆ ಯೋಚಿಸಲು ಸಮಯ ಸಿಗುವುದಿಲ್ಲ ಎನ್ನುತ್ತದೆ ಅಧ್ಯಯನ. ಈಜು ಮಾನಸಿಕ ಆರೋಗ್ಯ ಸುಧಾರಣೆಗೆ ಒಂದು ಉತ್ತಮ ಅಭ್ಯಾಸವಾಗಿದೆ. ಈಜಾಡುವ ವೇಳೆ ಮಾನಸಿಕ ವ್ಯಥೆಗಳಿಂದ ದೂರ ಉಳಿದು, ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸಲು ಸಹಾಯವಾಗುತ್ತದೆ. ಇದು ಒತ್ತಡವನ್ನು ನಿವಾರಿಸಿ ಮಾನಸಿಕ ಶಾಂತಿ ಪಡೆಯಲು ಸಹಾಯ ಮಾಡುತ್ತದೆ.

ಉಸಿರಾಟದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

ವಿವಿಧ ರೀತಿಯ ಈಜುವಿಕೆಯ ವಿಧಾನಗಳಲ್ಲಿ ವ್ಯಕ್ತಿಯು ತನ್ನ ದೇಹವನ್ನು ಹಿಂದಕ್ಕೆ, ಮುಂದಕ್ಕೆ ಚಲಿಸುವುದನ್ನು ಒಳಗೊಂಡಿರುತ್ತದೆ. ಇದು ಉಸಿರಾಟ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸಲು ಸಹಾಯ ಮಾಡುತ್ತದೆ. ಈಜುವಾಗ ಸಾಧ್ಯವಾದಷ್ಟು ಗಾಳಿಯನ್ನು ಒಳಗೆ ತೆಗೆದುಕೊಳ್ಳಬೇಕು. ಆಗ ಇದು ಶ್ವಾಸಕೋಶದ ಸಾಮರ್ಥ್ಯವನ್ನು ಕೂ ಹೆಚ್ಚಿಸುತ್ತದೆ. ಉಸಿರನ್ನು ಹಿಡಿಟ್ಟುಕೊಳ್ಳುವುದನ್ನು ಈಜಿನಿಂದ ಕಲಿಯಬಹುದು.

ದೀರ್ಘಕಾಲದ ಆರೋಗ್ಯ ಸಮಸ್ಯೆಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ

ಹೃದಯ ಸಮಸ್ಯೆ, ಟೈಪ್‌ 2 ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳ ವಿರುದ್ಧ ಹೋರಾಡಲು ಈಜು ಉತ್ತಮ ವಿಧಾನ. ಈಜಾಡುವ ಸಮಯದಲ್ಲಿ ದೇಹದಲ್ಲಿ ಸಂತೋಷದ ಹಾರ್ಮೋನುಗಳು ಬಿಡುಗಡೆಯಾಗುತ್ತವೆ.

ದೇಹವನ್ನು ಟೋನ್‌ ಮಾಡುತ್ತದೆ

ನೀರಿನಲ್ಲಿ ಈಜುವಾಗ ವ್ಯಕ್ತಿಯ ಸಂಪೂರ್ಣ ದೇಹ ಚಲನೆಯನ್ನು ಒಳಗೊಂಡಿರುತ್ತದೆ. ಅದು ದೇಹವನ್ನು ಟೋನ್‌ ಮಾಡಲು ಸಹಾಯ ಮಾಡುತ್ತದೆ. ವಿಶೇಷವಾಗಿ ವ್ಯಕ್ತಿಯ ದೇಹದ ಮೇಲ್ಭಾಗ, ತೋಳುಗಳು, ತೊಡೆಯ ಸ್ನಾಯುಗಳಿಗೆ ಉತ್ತಮ ವ್ಯಾಯಾಮ ಸಿಗುತ್ತದೆ.

ದೈಹಿಕ ತ್ರಾಣವನ್ನು ಹೆಚ್ಚಿಸುತ್ತದೆ

ಈಜು ದೈಹಿಕ ತ್ರಾಣವನ್ನು ಹೆಚ್ಚಿಸುವ ಉತ್ತಮ ವ್ಯಾಯಾಮ ವಿಧಾನ. ಸೈಕ್ಲಿಂಗ್‌ ಹಾಗೂ ವಾಕಿಂಗ್‌ಕ್ಕಿಂತ ಈಜು ಉತ್ತಮ ಎನ್ನುವುದು ತಜ್ಞರ ಅಭಿಪ್ರಾಯ. ಯಾಕೆಂದರೆ ಈಜಿನಲ್ಲಿ ಇತರ ವ್ಯಾಯಾಮಗಳಂತೆ ದೈಹಿಕ ಒತ್ತಡ ಉಂಟಾಗುವುದಿಲ್ಲ. ಅಲ್ಲದೆ ಇದು ತ್ರಾಣವನ್ನು ಹೆಚ್ಚಿಸುತ್ತದೆ.

ಸ್ನಾಯುಗಳ ದ್ರವ್ಯರಾಶಿಯನ್ನು ಹೆಚ್ಚಿಸುತ್ತದೆ

ವಾರದಲ್ಲಿ 2 ಬಾರಿ 1 ಗಂಟೆಗಳ ಹೊತ್ತು ಕೊಳದಲ್ಲಿ ಈಜಾಡುವುದರಿಂದ ಸ್ನಾಯುಗಳಲ್ಲಿ ದ್ರವ್ಯರಾಶಿ ಹೆಚ್ಚುತ್ತದೆ. ಸ್ನಾಯುಗಳ ಸಾಮರ್ಥ್ಯವೃದ್ಧಿಗೂ ಈಜು ಉತ್ತಮ ವಿಧಾನ. ಈಜುವಾಗ ದೇಹವನ್ನು ಹಿಂದಕ್ಕೆ ಮುಂದಕ್ಕೆ ಚಲಿಸುವುದರಿಂದ ದೇಹ ತೂಕ ಇಳಿಕೆಗೂ ಸಹಕಾರಿಯಾಗುತ್ತದೆ.

ಪಾದ ಹಾಗೂ ಕೀಲುನೋವುಗಳನ್ನು ನಿವಾರಿಸುತ್ತದೆ

ನೀರು ದೇಹತೂಕದ 90 ಪ್ರತಿಶತವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇದು ಕೀಲು ನೋವು ಹಾಗೂ ಪಾದದ ನೋವು ಹಾಗೂ ನೋವಿನ ಒತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನ ಹೊಂದಿದೆ. ಹಲವು ತಜ್ಞರ ಪ್ರಕಾರ ಈಜು ಒಂದು ಉತ್ತಮ ಕಾರ್ಡಿಯೊ ವ್ಯಾಯಾಮ ಕೂಡ ಹೌದು.

ಆತಂಕ ನಿವಾರಣೆ

ಆತಂಕ ಸಮಸ್ಯೆ ಇರುವವರು ಈಜಾಡುವುದನ್ನು ಕಲಿಯುವುದು ಉತ್ತಮ ಎನ್ನುತ್ತಾರೆ ಮಾನಸಿಕ ತಜ್ಞರು. ಈಜಾಡುವುದರಿಂದ ಮಾನಸಿಕ ದುಗುಡಗಳು ದೂರಾಗುವುದು ಮಾತ್ರವಲ್ಲ ಆತಂಕದ ಸಮಸ್ಯೆಯಿಂದಲೂ ದೂರ ಉಳಿಯಬಹುದು. ಇದು ಮನಸ್ಸಿಗೆ ಚೈತನ್ಯ ನೀಡಲು ಸಹಕಾರಿ.

ವಿಭಾಗ