Swimming and Skin care: ಬೇಸಿಗೆಯಲ್ಲಿ ಈಜುಕೊಳಕ್ಕೆ ಇಳಿಯುವ ಮುನ್ನ ಹಾಗೂ ನಂತರ ಈ ಅಂಶಗಳನ್ನು ಪಾಲಿಸಲು ಮರೆಯದಿರಿ
Swimming and Skin Care: ಬಿಸಿಲಿನ ತಾಪ ನೀಗಿಸಿಕೊಳ್ಳಲು ಈಜುಕೊಳದಲ್ಲಿ ಹೊತ್ತು ಕಳೆಯುವುದು ಸಹಜ. ಈಜಾಡುವುದರಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಆದರೆ ಈಜುಕೊಳದ ನೀರು ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೆ ಉತ್ತಮವಲ್ಲ; ಆ ಕಾರಣಕ್ಕೆ ಕೊಳಕ್ಕೆ ಇಳಿಯುವ ಹಾಗೂ ನಂತರ ಈ ಕ್ರಮಗಳನ್ನು ತಪ್ಪದೇ ಪಾಲಿಸಬೇಕು.
ಬೇಸಿಗೆಯಲ್ಲಿ ಈಜುಕೊಳದಲ್ಲಿ ಸಮಯ ಕಳೆಯುವುದರಿಂದ ಮನಸ್ಸಿಗೆ ಸಾಕಷ್ಟು ಖುಷಿ ಸಿಗುತ್ತದೆ, ಇದರೊಂದಿಗೆ ದೇಹದಲ್ಲೂ ಚೈತನ್ಯ ಮೂಡುತ್ತದೆ. ನೀರಿನಲ್ಲಿ ಈಜಾಡುವುದರಿಂದ ಹಲವು ರೀತಿಯ ಆರೋಗ್ಯ ಪ್ರಯೋಜನಗಳಿವೆ. ಇದು ಮೋಜಿನೊಂದಿಗೆ ಚಿಕಿತ್ಸೆಯನ್ನೂ ಒದಗಿಸುತ್ತದೆ.
ಆದರೆ ಕ್ಲೋರಿನ್‌ಯುಕ್ತ ಈಜುಕೊಳದ ನೀರು ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೆ ಉತ್ತಮವಲ್ಲ. ಇದರಿಂದ ಚರ್ಮದಲ್ಲಿ ತುರಿಕೆ, ಉರಿಯೂತ, ದದ್ದು ಇಂತಹ ಸಮಸ್ಯೆಗಳು ಕಾಣಿಸಬಹುದು.
ಆದರೆ ಈಜುಕೊಳಕ್ಕೆ ಇಳಿಯುವ ಮುನ್ನ ಹಾಗೂ ಇಳಿದ ನಂತರ ಒಂದಿಷ್ಟು ಮುನ್ನೆಚ್ಚರಿಕೆಯನ್ನು ವಹಿಸುವ ಮೂಲಕ ಚರ್ಮ ಹಾಗೂ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದಕ್ಕಾಗಿ ಕೆಲವು ಸಲಹೆಗಳು ಇಲ್ಲಿವೆ.
ಈಜುಕೊಳಕ್ಕೆ ಇಳಿಯುವ ಮುನ್ನ
ಸ್ನಾನ ಮಾಡಲು ಮರೆಯದಿರಿ
ಹಲವು ಈಜಕೊಳಗಳಲ್ಲಿ ಕೊಳಕ್ಕೆ ಇಳಿಯುವ ಮುನ್ನ ಸ್ನಾನ ಮಾಡುವುದನ್ನು ಕಡ್ಡಾಯ ಮಾಡಿರುತ್ತಾರೆ. ಇದನ್ನು ತಪ್ಪಿಸದೇ ಇರುವುದು ಉತ್ತಮ. ಕೊಳಕ್ಕೆ ಇಳಿಯುವ ಮುನ್ನ ಕೂದಲು ಹಾಗೂ ಚರ್ಮ ಒದ್ದೆಯಾಗಿದೆಯೇ ನೋಡಿಕೊಳ್ಳಿ. ಇದರಿಂದ ಚರ್ಮದ ಕೋಶಗಳು ಕಡಿಮೆ ಪ್ರಮಾಣದಲ್ಲಿ ಕ್ಲೋರಿನೇಟೆಡ್ ನೀರನ್ನು ಹೀರಿಕೊಳ್ಳುತ್ತವೆ.
ಸನ್‌ಸ್ಕ್ರೀನ್ ಬಳಸಿ
ಹೆಣ್ಣುಮಕ್ಕಳಾಗಲಿ, ಗಂಡು ಮಕ್ಕಳಾಗಲಿ ಈಜು ಕೊಳಕ್ಕೆ ಇಳಿಯುವ ಮುನ್ನ ಸನ್‌ಸ್ಕ್ರೀನ್ ಕ್ರೀಮ್ ಹಚ್ಚುವುದು ಬಹಳ ಅವಶ್ಯ. ವಾಟರ್ ಪ್ರೂಫ್ ಸನ್‌ಸ್ಕ್ರೀನ್ ಲೋಷನ್ ಬಳಸಿ. ಇದರಿಂದ ನೀರಿನಲ್ಲಿ ಲೋಷನ್ ತೊಳೆದು ಹೋಗಬಹುದು ಎಂಬ ಚಿಂತೆ ಇರುವುದಿಲ್ಲ. ಅಲ್ಲದೆ ಇದು ಚರ್ಮದ ರಕ್ಷಣೆಗೂ ಸಹಕಾರಿ. ಕೊಳಕ್ಕೆ ಇಳಿಯುವ 15 ನಿಮಿಷಗಳ ಮೊದಲು ಸನ್‌ಸ್ಕ್ರೀನ್ ಕ್ರೀಮ್ ಹಚ್ಚಿಕೊಳ್ಳುವುದನ್ನು ಮರೆಯದಿರಿ.
ನೀರು ಕುಡಿಯುವುದು
ಈಜುಕೊಳದಲ್ಲಿ ಸಾಕಷ್ಟು ನೀರಿದ್ದರೂ ಅದು ದೇಹದ ಹೊರಭಾಗಕ್ಕೆ ಚೈತನ್ಯ ಒದಗಿಸುತ್ತದೆ. ಈಜುಕೊಳಕ್ಕೆ ಇಳಿದ ತಕ್ಷಣ ಬಾಯಾರಿಕೆಯಾಗುವುದು ಸಹಜ. ಆ ಕಾರಣಕ್ಕೆ ಮೊದಲೇ ಸಾಕಷ್ಟು ನೀರು ಕುಡಿದಿರಬೇಕು. ಇದರೊಂದಿಗೆ ಈಜುಕೊಳಕ್ಕೆ ಹೋಗುವಾಗ ಬಾಟಲಿಯಲ್ಲಿ ನೀರು ತೆಗೆದುಕೊಂಡು ಹೋಗಿ. ಪ್ರತಿ 15 ರಿಂದ 20 ನಿಮಿಷಗಳಿಗೊಮ್ಮೆ ನೀರು ಕುಡಿಯುತ್ತಲೇ ಇರಿ.
ಈಜಾಡಿದ ನಂತರ
ಬಿಸಿನೀರಿನ ಸ್ನಾನ
ಈಜುಕೊಳದ ಕ್ಲೋರಿನ್‌ಯುಕ್ತ ನೀರನ್ನು ನಿಮ್ಮ ಚರ್ಮದಲ್ಲಿ ಒಣಗಲು ಬಿಡಬೇಡಿ. ಕೊಳದಿಂದ ಹೊರಗಡೆ ಬಂದ ತಕ್ಷಣ ಬಿಸಿ ನೀರಿನಲ್ಲಿ ಸ್ನಾನ ಮಾಡಿ. ಕೂದಲು ಹಾಗೂ ಚರ್ಮವನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಸ್ನಾನದ ಕೊನೆಯಲ್ಲಿ ತಣ್ಣೀರಿನಿಂದ ಮೈ ತೊಳೆದುಕೊಳ್ಳಿ. ಇದರಿಂದ ಚರ್ಮದ ರಂಧ್ರಗಳು ಮುಚ್ಚಿಕೊಳ್ಳುತ್ತವೆ.
ಮಾಯಿಶ್ಚರೈಸರ್ ಬಳಕೆ
ಸ್ನಾನ ಮಾಡಿದ ಮೈ ಒಣಗಿಸಿಕೊಂಡ ತಕ್ಷಣಕ್ಕೆ ಮಾಯಿಶ್ಚರೈಸರ್ ಹಚ್ಚುವುದನ್ನು ಮರೆಯಬೇಡಿ. ಚರ್ಮದ ತೇವಾಂಶ ಹೆಚ್ಚಿಸುವ ಮಾಯಿಶ್ಚರೈಸರ್ ಬಳಕೆ ಅವಶ್ಯ.
ಎಕ್ಸ್‌ಫೋಲಿಯೇಟ್
ನೀವು ಪ್ರತಿದಿನ ಅಥವಾ ವಾರದಲ್ಲಿ ಎರಡು ಮೂರು ದಿನಗಳಿಗೊಮ್ಮೆ ಈಜುಕೊಳಕ್ಕೆ ಇಳಿಯುವವರಾದರೆ ವಾರದಲ್ಲಿ ಎರಡು ಬಾರಿ ಚರ್ಮಕ್ಕೆ ಎಕ್ಸ್‌ಫೋಲಿಯೇಟ್ ಮಾಡಿ. ಮುಖ ಹಾಗೂ ಚರ್ಮಕ್ಕೆ ಸೌಮ್ಯವಾಗಿ ಸ್ಕ್ರಬ್ ಮಾಡಿಕೊಳ್ಳುವುದರಿಂದ ಕೊಳೆಯಾದ ಹಾಗೂ ನಿರ್ಜೀವ ಚರ್ಮವನ್ನು ತೊಡೆದು ಹಾಕಬಹುದು. ಇದು ಚರ್ಮವನ್ನು ಮೃದುವಾಗಿಸುತ್ತದೆ.
ಈಜಿಗೆ ಸಂಬಂಧಿಸಿದ ಈ ಸ್ಟೋರಿಯನ್ನೂ ಓದಿ
swimming and health benefits: ಈಜುವುದರಿಂದ ಬಿಸಿಲಿನ ತಾಪ ನೀಗುವುದು ಮಾತ್ರವಲ್ಲ; ಆರೋಗ್ಯಕ್ಕೂ ಉಂಟು ಹಲವು ಪ್ರಯೋಜನ
ಬೇಸಿಗೆಯಲ್ಲಿ ಬಿಸಿಲಿನ ದಾಹ ತೀರಿಸಿಕೊಳ್ಳಲು ತಣ್ಣನೆಯ ನೀರಿನಲ್ಲಿ ಮನಸೋ ಇಚ್ಛೆ ಈಜಾಡಿದರೆ ಹೇಗೆ? ಈ ಕಲ್ಪನೆಯೇ ಖುಷಿ ಕೊಡುತ್ತದೆ. ಬಿಸಿಲಿನ ತಾಪ ಏರಿಕೆಯಾಗುತ್ತಲೇ ಇರುವ ಈ ಹೊತ್ತಿನಲ್ಲಿ ಸ್ವಿಮ್ಮಿಂಗ್ ಅಥವಾ ಈಜಾಡುವುದು ಬಹಳ ಮುಖ್ಯ ಎನ್ನಿಸುತ್ತದೆ. ಈಜಾಡುವುದರಿಂದ ಕೇವಲ ದೇಹ ತಣ್ಣಗಾಗಿ ಮನಸ್ಸಿಗೆ ಚೈತನ್ಯ ಮೂಡುವುದು ಮಾತ್ರವಲ್ಲ; ಆರೋಗ್ಯಕ್ಕೂ ಹಲವು ರೀತಿಯ ಪ್ರಯೋಜನಗಳಿವೆ. ತಜ್ಞರ ಪ್ರಕಾರ ಈಜಾಡುವುದು ಉತ್ತಮ ವ್ಯಾಯಾಮ ವಿಧಾನವೂ ಹೌದು.
ವಿಭಾಗ