Brain Teaser: ಕೇಕ್ ತಿನ್ನೋದ್ರಲ್ಲಿ ನೀವು ಜಾಣರಿರಬಹುದು; ಕೇಕ್ ಕಟ್ ಮಾಡೋದ್ರಲ್ಲೂ ಬುದ್ಧಿವಂತರಾಗಿದ್ರೆ ಈ ಪ್ರಶ್ನೆಗೆ ಉತ್ತರ ಹೇಳಿ
Brain Teaser: ಈ ವೈರಲ್ ಬ್ರೈನ್ ಟೀಸರ್ ಇಂಟರ್ನೆಟ್ ಬಳಕೆದಾರರ ತಲೆಗೆ ಹುಳ ಬಿಟ್ಟಿದೆ. ಕೇಕ್ ತಿನ್ನೋಕೆ ಎಲ್ಲರಿಗೂ ಬರುತ್ತದೆ. ಆದರೆ ಸಮನಾಗಿ ಹಂಚುವುದು ಎಲ್ಲರಿಗೂ ಆಗಲ್ಲ. ಅದರಲ್ಲೂ, ಸೀಮಿತ ಕಟ್ ಮಾಡಿ ಹಂಚಬೇಕೆಂದರೆ ಹೇಗೆ? ಇಲ್ಲಿರುವ ಪ್ರಶ್ನೆ ಕೂಡಾ ಅದುವೇ. ಇದಕ್ಕೆ ತಲೆಯನ್ನು ಸರಿಯಾಗಿ ಉಪಯೋಗಿಸಿದರೆ ಮಾತ್ರ ಉತ್ತರ ಹುಡುಕಲು ಸಾಧ್ಯ.
ಕೆಲವೊಂದು ಗಣಿತದ ಪ್ರಶ್ನೆಗಳು ತಲೆಗೆ ಹುಳ ಬಿಡುತ್ತವೆ. ಎಷ್ಟೇ ಬುದ್ಧಿವಂತರಾದರೂ ಪ್ರಶ್ನೆಗೆ ಉತ್ತರ ಹೇಳಲು ಕೊಂಚ ಯೋಚಿಸಬೇಕಾಗುತ್ತದೆ. ಕೆಲವೊಂದು ಪ್ರಶ್ನೆಗಳಿಗೆ ಪೆನ್ನು ಪುಸ್ತಕ ಬಳಸಿ ಉತ್ತರ ಕಂಡುಹಿಡಿಯಬೇಕಿಲ್ಲ. ಹಾಗಂತ ಅವು ಸುಲಭವೂ ಇರುವುದಿಲ್ಲ. ಯೋಚಿಸಿದಷ್ಟು ಯೋಚನೆ ಹೆಚ್ಚಿಸುವ, ಮೆದುಳಿಗೆ ಇನ್ನಷ್ಟು ಕೆಲಸ ಕೊಡುವಂಥಾ ಇಂಥಾ ಪ್ರಶ್ನೆಗಳು ನಮ್ಮ ಯೋಚನಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮೆದುಳನ್ನು ಹೆಚ್ಚು ಚಟುವಟಿಕೆಯಿಂದ ಇರಿಸುವ ಮೂಲಕ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಇಂದು ನಾವೊಂದು ಹೊಸ ಪ್ರಶ್ನೆಯನ್ನು ನಿಮಗಾಗಿ ಹೊತ್ತು ತಂದಿದ್ದೇವೆ. ನೀವು ಜಾಣರಾಗಿದ್ದರೆ, ಯಾವುದೇ ಪ್ರಶ್ನೆಗೂ ಕ್ಷಣಮಾತ್ರದಲ್ಲೇ ಉತ್ತರ ಹೇಳುವ ಸಾಮರ್ಥ್ಯ ನಿಮ್ಮಲ್ಲಿದ್ದರೆ, ನಿಮ್ಮನ್ನು ಜಾಣರು ಎಂದು ನಾವು ಕೂಡಾ ಒಪ್ಪುತ್ತೇವೆ.
ಇನ್‌ಸ್ಟಾಗ್ರಾಮ್ ಖಾತೆ @br4inteaserhub ಹಂಚಿಕೊಂಡ ಈ ಪ್ರಶ್ನೆ ಹೀಗಿದೆ. ವೃತ್ತಾಕಾರದ ಒಂದು ಕೇಕ್ ಎಂಟು ಜನರಿಗೆ ಸಮನಾಗಿ ಹಂಚಬೇಕು. ಆದರೆ, ಮನಸಿಗೆ ಬಂದಂತೆ ಕಟ್ ಮಾಡುವ ಹಾಗಿಲ್ಲ. ಇದಕ್ಕೆ ಉತ್ತರ ಹುಡುಕಲು ಹೊರಟ ಬಳಕೆದಾರರು ತಲೆ ಕೆರೆದುಕೊಂಡಿದ್ದಾರೆ. ನಿಮಗೇನಾದರೂ ಈ ಪ್ರಶ್ನೆ ಸುಲಭ ಎನಿಸಿ ಉತ್ತರ ಹುಡುಕುವ ಪ್ರಯತ್ನ ಮಾಡುವಿರಾದರೆ, ಪ್ರಶ್ನೆ ಹೇಳುತ್ತೇವೆ ನೋಡಿ.
ಪ್ರಶ್ನೆ: ಕೇವಲ 3 ಬಾರಿ ಕಟ್ ಮಾಡಿ 8 ಜನರಿಗೆ ಕೇಕ್ ಹಂಚಬೇಕು
ವೃತ್ತಾಕಾರದ ಒಂದು ಕೇಕ್ ಇದೆ. ಒಟ್ಟು 8 ಜನರಿಗೆ ಈ ಕೇಕ್ ಅನ್ನು ಸಮನಾಗಿ ಹಂಚಬೇಕು. ಆದರೆ ಎಂಟು ಕಟ್ ಮಾಡುವ ಹಾಗಿಲ್ಲ. ಕೇವಲ 3 ಕಟ್ ಮಾಡಲು ಮಾತ್ರ ಅವಕಾಶವಿದೆ. ಈ ಸೀಮಿತ ಅವಕಾಶಗಳ ಹೊರತಾಗಿಯೂ, ಎಲ್ಲಾ 8 ಜನರಿಗೂ ಸಮನಾಗಿ ಕೇಕ್ ತುಂಡು ಹಂಚಬಹುದು. ಅದು ಹೇಗೆ ಎಂದು ಕಂಡುಹಿಡಿಯುವುದೇ ನಿಮ್ಮ ಮುಂದಿರುವ ಸವಾಲು.
ತಲೆಗೆ ಹುಳ ಬಿಟ್ಕೊಂಡ್ರಾ? ಇದು ಮೇಲ್ನೋಟಕ್ಕೆ ಸರಳವೆಂದು ತೋರಿದರೂ, ಹಲವರನ್ನು ಯೋಚನೆಗೆ ಈಡು ಮಾಡುವ ಪ್ರಶ್ನೆ. ಈ ಒಗಟು ನೆಟ್ಟಿಗರ ಗಮನ ಸೆಳೆದಿದೆ. ಹಲವು ಉತ್ಸಾಹಿಗಳು ಪ್ರಶ್ನೆಗೆ ಉತ್ತರ ಹೇಳುವ ಪ್ರಯತ್ನ ಮಾಡಿದ್ದಾರೆ. ಈ ಪೋಸ್ಟ್ ಅನ್ನು ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಜನರು ಮರುಹಂಚಿಕೆ ಮಾಡಿದ್ದಾರೆ.
ಬಳಕೆದಾರರ ಪ್ರತಿಕ್ರಿಯೆ ಹೀಗಿತ್ತು
ಇನ್‌ಸ್ಟಾಗ್ರಾಮ್ ಬಳಕೆದಾರರು ಈ ಮೆದುಳಿನ ಟೀಸರ್ ಪರಿಹರಿಸಲು ತಮ್ಮ ಸೃಜನಶೀಲ ಪ್ರಯತ್ನ ಮಾಡಿದ್ದಾರೆ. ಹಲವರು ಕಾಮೆಂಟ್ ಮೂಲಕ ಉತ್ತರಿಸಿದ್ದಾರೆ. ಒಬ್ಬ ಬಳಕೆದಾರರು ಹಾಸ್ಯದೊಂದಿಗೆ ಉತ್ತರಿಸಿದ್ದಾರೆ. “ಇಂದು ನಿಮ್ಮ ಜನ್ಮದಿನ. ಹೀಗಾಗಿ ಇಡೀ ಕೇಕ್ ನೀವೇ ತಿನ್ನಿ. ಅಲ್ಲಿಗೆ ಪ್ರಶ್ನೆ ಪರಿಹಾರ!” ಎಂದು ಸರಳವಾಗಿ ಉತ್ತರಿಸಿದ್ದಾರೆ. ಇನ್ನೊಬ್ಬರು ಬಳಕೆದಾರರು ಸ್ವಲ್ಪ ಹೆಚ್ಚು ಸಂಕೀರ್ಣವಾದ ಪರಿಹಾರ ತಂದರು. “ಮೂರು ಸಮಾನಾಂತರ ಕಟ್ ಮತ್ತು ಮಧ್ಯದಲ್ಲಿ ಒಂದು ಅಡ್ಡ ಕಡಿತ ಮಾಡಬೇಕು,” ಎಂದರು. ಆದರೆ ಈ ಉತ್ತರ ಕೂಡಾ ಪರಿಹಾರವಲ್ಲ.
ಹೀಗಿದೆ ಉತ್ತರ
ಅಂತಿಮವಾಗಿ, ಒಬ್ಬ ಕಾಮೆಂಟ್ ಮಾಡಿದ ಒಬ್ಬರು ಸರಿಯಾದ ಉತ್ತರ ನೀಡಿದ್ದಾರೆ. "ಕೇಕ್ ಅನ್ನು ಒಂದು ಬದಿಯಿಂದ ಅರ್ಧಕ್ಕೆ ಕತ್ತರಿಸಿ. ಅಂದರೆ ಕೇಕ್ ಮೇಲೊಂದು ಭಾಗ ಹಾಗೂ ಕೆಳಗೆ ಮತ್ತೊಂದು ಭಾಗ ಆಗುವಂತೆ ಸಮನಾಗಿ ಕಟ್ ಮಾಡಿ. ಕೇಕ್‌ಅನ್ನು ಬೇರ್ಪಡಿಸದೆ, ಮೇಲಿನಿಂದ X ಅಥವಾ + ಆಕಾರದಲ್ಲಿ ಎರಡು ಬಾರಿ ಕತ್ತರಿಸಿ. ಈಗ ಒಟ್ಟು ನೀವು ಮೂರು ಕಟ್ ಮಾಡಿದಂತಾಯ್ತು. ಈಗ ಎಷ್ಟು ಪೀಸ್ ಕೇಕ್ ಆಯ್ತು ಎಂಬುದನ್ನು ಲೆಕ್ಕ ಹಾಕಿ. ಸರಿಯಾದ ಉತ್ತರ ಸಿಕ್ಕಿತಲ್ಲವೇ?