ಸಾಮಾಜಿಕ ಜಾಲತಾಣದಲ್ಲಿ ಬಯಲಾಗುವ ಪ್ರಗತಿಪರ ಮುಖವಾಡ ಧರಿಸಿದ ಗಂಡು ಹುಳುಗಳ ಅಸಲಿ ಮುಖ; ಪ್ರಿಯಾಂಕಾ ಮಾವಿನ್‌ಕರ್ ಬರಹ
ಪ್ರಿಯಾಂಕಾ ಮಾವಿನ್‌ಕರ್ ಬರಹ: ಪ್ರಗತಿಪರ ಮುಖವಾಡ ಧರಿಸಿದ ಗಂಡು ಹುಳುಗಳಿದ್ದಾವಲ್ಲ. ಏನ್ ಏನು ಮಾತಾಡೋದು, ಏನ್ ಸುದ್ದಿ ಥೂ ಇವರ ಜನ್ಮಕ್ಕಿಷ್ಟೂ ಬೆಂಕಿ ಹಾಕಾ ಅಂತ ಅನ್ನಿಸುತ್ತೆ. ಇಂತಹ ನಾಲಾಯಕರನ್ನು ಟವೆಲ್‌ನಲ್ಲಿ ಮೆಟ್ಟ ಸುತ್ತಿ ಹೊಡಿಬಾರದು ನೇರವಾಗಿ ಮೆಟ್ಟಗಿ ಹೊಡಿಬೇಕು ಅಂತ ಅನ್ನಿಸ್ತದ.
ಸಾಮಾಜಿಕ ಜಾಲತಾಣದಿಂದ ಒಳಿತೂ ಇದೆ, ಕೆಡುಕು ಇದೆ, ಆದರೆ ಇದನ್ನು ನಾವು ಹೇಗೆ ಬಳಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದು ಹಲವರು ಹೇಳುವುದನ್ನು ನೀವು ಕೇಳಿರುತ್ತೀರಿ. ಆದರೆ ಹೆಣ್ಣುಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯಲ್ಲೂ ಸ್ವಾತಂತ್ರ್ಯವಿಲ್ಲ. ಫೇಸ್‌ಬುಕ್ ಇನ್‌ಸ್ಟಾಗ್ರಾಂ ಪ್ರೊಫೈಲ್‌ನಲ್ಲಿ ಹೆಣ್ಣುಮಕ್ಕಳ ಫೋಟೊ ಕಂಡರೆ ಸಾಕು ರಿಕ್ವೆಸ್ ಕಳುಹಿಸುವ ಪ್ರಗತಿಪರ ಮುಖವಾಡ ಧರಿಸಿದ ಗಂಡು ಹುಳಗಳು ಮೆಸೆಂಜರ್‌ನಲ್ಲಿ ಇಲ್ಲಸಲ್ಲದ ಮೆಸೇಜ್‌ಗಳನ್ನು ಕಳುಹಿಸಲು ಆರಂಭಿಸುತ್ತಾರೆ. ಮಾಡುವುದು ಅನಾಚಾರವಾದರೂ ಪ್ರಗತಿಪರ ಎಂಬ ಮುಖವಾಡ ಬೇರೆ. ಇಂತಹ ಗಂಡಸರ ಕೊಳಕು ಮನೋಭಾವದ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ ಪ್ರಿಯಾಂಕಾ ಮಾವಿನ್‌ಕರ್. ಅವರ ಬರಹ ಹೇಗಿದೆ ಎಂದು ನೀವೇ ಓದಿ.
ಪ್ರಿಯಾಂಕಾ ಮಾವಿನ್‌ಕರ್ ಬರಹ
ಸೋಶಿಯಲ್ ಮಿಡಿಯಾ ಮತ್ತು ಪ್ರಗತಿಪರ ಮುಖವಾಡದ ಗಂಡು ಹುಳುಗಳು. ಫೇಸ್‌ಬುಕ್ ವಾಟ್ಸಾಪ್, ಇನ್‌ಸ್ಟಾಗ್ರಾಂನಂತಹ ಸೋಶಿಯಲ್ ಮೀಡಿಯಾಗಳನ್ನು ಬಳಸಬೇಕು ಅಂದ್ರೆ ಇಂದಿಗೂ ಹೆಣ್ಣಮಕ್ಕಳಿಗೆ ಭಯ. ಯಾಕೆಂದರೆ ಈ ಪ್ರಗತಿಪರ ಮುಖವಾಡ ಧರಿಸಿದ ಕೆಲವೊಂದು ಗಂಡು ಹುಳುಗಳಿದ್ದಾವಲ್ಲ ಇವೆಲ್ಲಾ ತಾಯಿ ಗರ್ಭದಿಂದ ಜನನ ಪಡೆದಿಲ್ಲ. ಮತ್ ಅಕ್ಕ ತಂಗಿಯರ ಜೊತೆಗೆ ಬೆಳೆದಿಲ್ಲ ಅಂತ ಅನ್ನಿಸುತ್ತೆ. ಇಂತವರು ತಾವೇ ಹೆತ್ತ ಹೆಣ್ಮಕ್ಕಳನ್ನ ಇನ್ಯಾವ ದೃಷ್ಟಿಯಲ್ಲಿ ನೋಡ್ತಾವೊ ಅನ್ನೋ ಪ್ರಶ್ನೆ ಮೂಡುತ್ತೆ ನನಗೆ.
ಹೆಣ್ಮಕ್ಕಳು ಅಂದ್ರೆ ಇವರ ದೃಷ್ಟಿಯಿಲ್ಲಿ ಏನು? ಫೇಸ್‌ಬುಕ್‌ನ್ಯಾಗ ಹೆಣ್ಮಕ್ಕಳ ಪ್ರೊಫೈಲ್ ಇತ್ತು ಅಂದ್ರೆ Friend requestಗಳ ಮಳೆ ಸುರಿತದ. ಹೆಣ್ಮಕ್ಕಳು friend request ಒಪ್ಪಿಕೊಬೇಕು ಅಂದ್ರೂ ಹತ್ತು ಸಲ ಯೋಜನೆ ಮಾಡ್ತಾರೆ. ಅಂದ್ರೆ ಇವರ mutual friends ಯಾರು, ಅವರ ಆಲೋಚನೆ, ನಿಲುವು ಏನೆಂದು ತಿಳಿದಿಕೊಳ್ಳಿಕ್ಕೆ profile check ಮಾಡಿಕೊಂಡ ಮ್ಯಾಲೆ friend request accept ಮಾಡ್ಕೊತ್ತಾರೆ, ನಾನು ಕೂಡ ಹಾಗೆ ಮಾಡ್ತಿನಿ ಇವತ್ತಿಗೂ.
Friend request ಒಪ್ಪಿಕೊಂಡಾಗ ಬರ್ತಾವಲ್ಲ ಮೆಸೇಜ್‌ಗಳು. ಮೊದಮೊದಲಿಗೆ ಭಾರಿ ಒಳ್ಳೆಯವರ ಹಾಗೆ ಮಾತಾಡ್ತಾರೆ. ಆಮೇಲೆ ಪರ್ಸನಲ್ ಲೈಫ್ ಬಗ್ಗೆ ತಿಳಕೊಳ್ಳುವ ಕುತೂಹಲ, ಏನ್ ಮಾಡ್ತಿದ್ದೀರಿ? ಊಟ ಆಯ್ತಾ? ಹೀಗೆ ಪ್ರಶ್ನೆಗಳನ್ನು ಕೇಳತ್ತಾ ಮಾತಾಡ್ತಾ ಮಾತಿನ ದಾಟಿನೆ ಬ್ಯಾರೆ ಆಗ್ತಾದ.
ಊಟಾ ಆಯ್ತಾ? ಏನ್ ಮಾಡ್ತಿದ್ದೀರಿ? ಎಂಬ ಕೆಲಸಕ್ಕೆ ಬಾರದು ಮಾತಿನ್ಯಾಗ ನಮ್ಮ ಸಮಯನೂ ಹಾಳ ಮಾಡ್ತಾರೆ.
ನಾನು ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಬರುವ ಮೆಸೇಜ್‌ಗಳನ್ನು ಹುಣ್ಣಿಗೊಮ್ಮೆ ಅಮಾವಾಸ್ಯೆಗೊಮ್ಮೆ ನೋಡ್ತಿದ್ದೆ, ನೋಡಿದ್ರೂ ರಿಪ್ಲೈ ಮಾಡುವುದು ನನ್ಗೆ ಪರಿಚಯ ಇರುವವರಿಗೆ ಮಾತ್ರ. ಇನ್ನುಳಿದವರಿಗೆ ರಿಫ್ಲೈ ಮಾಡೊ ಗೋಜಿಗೆ ಹೋದವಳಲ್ಲ. ಆದರೆ ಇತ್ತೀಚೆಗೆ ನನ್ನ ಪುಸ್ತಕ ‘ಸ್ವಾಭಿಮಾನದ ಗತ್ತಿನ್ಯಾಗ‘ ಎಂಬ ಕವನ ಸಂಕಲನ ಬಿಡುಗಡೆಯಾದ ಮೇಲೆ ಅನೇಕ ಜನ ಹಿತೈಷಿಗಳು, ಓದುಗರು Facebook ಮೆಸೇಜ್‌ಗಳ ಮೂಲಕ ಅಭಿನಂದನೆಗಳು ತಿಳಿಸಿದ್ದಾರೆ ಮತ್ತು ಪುಸ್ತಕ ಖರೀದಿಗಾಗಿ ಮಾತಾಡಿದ್ದಾರೆ ಹಾಗಾಗಿ Facebook ನಲ್ಲಿ ಆಗಾಗ ಮೆಸೇಜ್‌ಗಳನ್ನು ಚೆಕ್ ಮಾಡ್ತಿದ್ದೆ.
ಇತ್ತೀಚೆಗೆ ಈ ಮೆಸೇಜ್‌ಗಳು ನೋಡ್ತಿದ್ದಿನಲ್ಲ ಭಾರೀ ಸಿಟ್ಟು ಬರ್ತಾದ. ಮಣ್ಣಿಗಿ ಹೋಗೊ ವಯಸ್ಸಿದ್ದರೂ ಹೆಂಗೆಲ್ಲ ಮೆಸೇಜ್ ಮಾಡ್ತಾರಲ್ಲ ಅಂತ ನನ್ನ ತಲೆನೆ ಕೆಟ್ಟ ಹೋಗ್ಯಾದ. ಯಾವನೊ ಒಬ್ಬನೂ ಪ್ರಗತಿಪರ ಸೋಗಿನಲ್ಲಿ ಇದ್ದ ನಾಲಾಯಕ ಒಂದು ಪೋಟೊ ಕಳಿಸಿದ್ದ. ಅದು ನೋಡಿ ಅವನಿಗೆ ಮೆಟ್ಟೆಗೆ ಮತ್ತೆನಾರ ಹಚ್ಚಿ ಹೊಡಿಬೇಕು ಹಂಗೆ ಹೊಡೆದರೆ ಬುದ್ದಿ ಬರಲ್ಲ ಅಂತ ಅನ್ನಸ್ತು.
ಈ ಪ್ರಗತಿಪರ ಮುಖವಾಡ ಧರಿಸಿದ ಗಂಡು ಹುಳುಗಳಿದ್ದಾವಲ್ಲ. ಏನ್ ಏನು ಮಾತಾಡೋದು ಏನ್ ಸುದ್ದಿ ಥೂ ಇವರ ಜನ್ಮಕ್ಕಿಷ್ಟೂ ಬೆಂಕಿ ಹಾಕಾ ಅಂತ ಅನ್ನಸ್ತು.
ನಾನು ಯಾರಿಗೂ ಅಗೌರವದಿಂದ ಮಾತಾಡಿಲ್ಲ ಮಾತಾಡುವುದು ಇಲ್ಲ. ಆದರೆ ಇಂತಹ ನಾಲಾಯಕರನ್ನು ಟವೆಲ್‌ನಲ್ಲಿ ಮೆಟ್ಟ ಸುತ್ತಿ ಹೊಡಿಬಾರದು ನೇರವಾಗಿ ಮೆಟ್ಟಗಿ ಇನ್ನೊಂದು ಮತ್ತೊಂದು ಹಚ್ಚಿ ಹೊಡಿಬೇಕು ಅಂತ ಅನ್ನಸ್ತಿದೆ.
ನವೆಂಬರ್ 25 ರಂದು ಪ್ರಿಯಾಂಕ ಈ ಪೋಸ್ಟ ಹಾಕಿದ್ದಾರೆ. ಈಗಾಗಲೇ 110ಕ್ಕೂ ಹೆಚ್ಚು ಜನ ಪ್ರತಿಕ್ರಿಯೆ ನೀಡಿದ್ದಾರೆ. ಇಬ್ಬರು ಇವರ ಪೋಸ್ಟ್ ಅನ್ನು ಶೇರ್ ಮಾಡಿದ್ದು, 26ಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ.
ಪ್ರಿಯಾಂಕ ಅವರ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳು ಹೀಗಿವೆ
‘ಚೆನ್ನಾಗಿ ಜಾಡಿಸಿರಿ. ತೀರಾ ಕಿರಿಕಿರಿಯಾದರೆ ಪಬ್ಲಿಕ್‌ಗೆ ತಂದು ಪೋಸ್ಟ್ ಮಾಡರಿ. ಆಗಲಾದ್ರೂ ಕೆಲವರಿಗೆ ಬುದ್ದಿ ಬರುತ್ತೆ‘ ಎಂದು ಅರುಣ ಜೋಳದಕೂಡ್ಲಿಗಿ ಕಾಮೆಂಟ್ ಮಾಡಿದ್ದಾರೆ.
‘ಹೆಸರು ಹೇಳಿಬಿಡಬೇಕಿತ್ತು..ಪ್ರಿಯಾಂಕಾ.ಉಳಿದವು ಸುಮ್ಮನಾಗ್ತವ...ವೇದಿಕೆಯಲ್ಲಿ ಹೆಣ್ಣುಮಕ್ಕಳ ಬಗ್ಗೆ ಗೌರವದಿಂದ ಮಾತಾಡ್ತಾ.. ಹಿಂದೆ ಹೀಗೆ ಮಾಡ್ತವೆ...ನಾವು ಹೊರಗೆ ಹೇಳಲ್ಲ ಅನ್ನುವ ಆಲೋಚನೆ.. ಥೂ‘ ಎಂದು ಶೀಲಾ ಹಲ್‌ಕುರಿಕೆ ಎನ್ನುವವರು ಕಾಮೆಂಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಟಾವಲ್ಗೆ ಸರಿಯಾಗಿ ಚಪ್ಪಲಿ ಸುತ್ತಿಕೊಂಡು ಹೊಡೆದಿದ್ದಿರ, ನೋಡಿದವನು ಗ್ಯಾರಂಟಿ ಸುಸೈಡ್ ಮಾಡಿಕೊಳ್ಳುತ್ತಾನೆ‘ ನಾಗರಾಜ್ ಕೆ ಕಲ್ಲಹಳ್ಳಿ ಅವರು ಕಾಮೆಂಟ್ ಮಾಡಿದ್ದಾರೆ.
‘ಪ್ರಗತಿಪರರೋ ...ಇಲ್ಲಾ ಪ್ರಗತಿಪರತೆಯ ಸೋಗು ಹಾಕಿರುವವರೋ… ಯಾಕೆಂದರೆ ಹೀಗೆಲ್ಲಾ ಇರುವವರು ಆ ಮಟ್ಟಿಗೆ ಮಹಿಳಾ ವಿರೋಧಿಗಳೋ..ಮನುಷ್ಯ ವಿರೋಧಿಗಳೋ ಆಗಿರಬೇಕಾಗುತ್ತದೆ.… ಹಾಗಿದ್ದಾಗ ಅವರುಗಳು ಆ ಮಟ್ಟಕ್ಕೆ ಸೋಗಲಾಡಿಗಳೇ ಆಗಿರಬೇಕಾಗುತ್ತದೆ... ತಾನೇ.....‘ ನಂದು ಕುಮಾರ್ ಎನ್ನುವವರು ತಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ಹೊರ ಹಾಕಿದ್ದಾರೆ.
‘ಆ ಹುಳುಗಳ ಪ್ರೊಫೈಲ್ ಫೋಟೋ ಹಾಕಿದರೆ ಇನ್ನೊಬ್ಬರು ಕೂಡ ಎಚ್ಚರಿಕೆಯಿಂದ ಇರಬಹುದು. ಅವುಗಳು ಪ್ರಗತಿಪರ ಇರಲು ಸಾಧ್ಯವಿಲ್ಲ, ಬದಲಾಗಿ ಸ್ತ್ರೀ ವಿರೋಧಿ ಮತ್ತು ಅನಫಡ್ ಗಳಾಗಿರುತ್ತವೆ. ಎಲ್ಲಾದರೂ ಕಾರ್ಯಕ್ರಮದಲ್ಲಿ ಸಿಕ್ಕಾಗ ಮೆಟ್ಟು ತಕೊಂಡು ಏಣಿಸದೆ ಬಾರಿಸಿ‘ ಚಿತ್ರಶೇನ್ ಫುಲೆ ಎನ್ನುವವರು ಕಾಮೆಂಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
‘ಅಂಥಾರನ್ನ ಯಾಕ ಪ್ರಗತಿಪರ ಅದೂ ಇದೂ ಅಂತೀರಿ? ಉಗುಳಾದ ಉಗುಳೀರಿ ಮತ್ಯಾಕ ತಡದೀರಿ. ಅಂದಾ ಬಿಡ್ರಿ.." "ಕೆರಕ್ಕ ಹೇಲ್ಹಚ್ಚಿ ಹೊಡಿಯಾದು" ಅಂತಾರ ನಮ್ಕಡೀಗೆ. ಹಿಂಗ ನಿಮ್ಹಂಗ ಅಲ್ಲಲ್ಲಿ ಒಂದಿಷ್ಟು ಹೆಣ್ಮಕ್ಳು ಕಾಲಾಗಿನವು ಕೈಯಾಗ ತಗಂಡ್ ನಿಂತ್ರಾ...ಎಲ್ಲಾರೂ ನೆಟ್ಟಗಾಕ್ಕಾರ. ನಿಮ್ಮ ಸಿಟ್ ಕರೆಕ್ಟ್ ಐತಿ. ಹಿಂಗ ಕ್ಯಾಕರಿಸಿ ಉಗುಳಿ ಚೊಲೋದಾ ಮಾಡೀರಿ. ಟೈಂ ಬಂದ್ರಾ ಫೋಟೋ ಸಹಿತ ಹೆಸರು, ಅಡ್ರೆಸ್ ಸಮೇತ ಬಯಲಿಗಿಡ್ರಿ‘ ಪೀರ್ ಬಾವಜಿ ಎನ್ನುವವರು ಕಾಮೆಂಟ್‌ನಲ್ಲಿ ಸಿಟ್ಟು ಹೊರ ಹಾಕಿದ್ದಾರೆ.
ವಿಭಾಗ