ಮದುವೆಯಾಗದ ಹೆಣ್ಣುಮಕ್ಕಳನ್ನು ಹೀಯಾಳಿಸುವ ವಿಕೃತ ಮನೋಭಾವಕ್ಕಿರಲಿ ಧಿಕ್ಕಾರ – ರೇಣುಕಾ ಮಂಜುನಾಥ್ ಬರಹ-special story women respect renuka manjunath opinion on commenting about unmarried women women rights rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮದುವೆಯಾಗದ ಹೆಣ್ಣುಮಕ್ಕಳನ್ನು ಹೀಯಾಳಿಸುವ ವಿಕೃತ ಮನೋಭಾವಕ್ಕಿರಲಿ ಧಿಕ್ಕಾರ – ರೇಣುಕಾ ಮಂಜುನಾಥ್ ಬರಹ

ಮದುವೆಯಾಗದ ಹೆಣ್ಣುಮಕ್ಕಳನ್ನು ಹೀಯಾಳಿಸುವ ವಿಕೃತ ಮನೋಭಾವಕ್ಕಿರಲಿ ಧಿಕ್ಕಾರ – ರೇಣುಕಾ ಮಂಜುನಾಥ್ ಬರಹ

ಮದುವೆಯಾಗದ ಹೆಣ್ಣುಮಕ್ಕಳನ್ನು ಹೀಯಾಳಿಸುವ, ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವ, ಆಕೆಯ ಮನಃಸ್ಥಿತಿ ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುವ ವಿಕೃತ ಮನೋಭಾವದವರು ನಮ್ಮ ಸಮಾಜದಲ್ಲಿ ಹಲವರಿದ್ದಾರೆ. ಅಂತಹವರ ಮನೋಭಾವಕ್ಕೆ ಧಿಕ್ಕಾರ ಎಂದಿರುವ ರೇಣುಕಾ ಮಂಜುನಾಥ್‌ ಮದುವೆಗೂ ಹೆಣ್ಣಿನ ವರ್ತನೆ, ಸ್ಥಾನಮಾನಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ.

ಮದುವೆಯಾಗದ ಹೆಣ್ಣುಮಕ್ಕಳನ್ನು ಹೀಯಾಳಿಸುವ ವಿಕೃತ ಮನೋಭಾವಕ್ಕಿರಲಿ ಧಿಕ್ಕಾರ
ಮದುವೆಯಾಗದ ಹೆಣ್ಣುಮಕ್ಕಳನ್ನು ಹೀಯಾಳಿಸುವ ವಿಕೃತ ಮನೋಭಾವಕ್ಕಿರಲಿ ಧಿಕ್ಕಾರ (PC: Canva)

ನಾವೀಗ 21ನೇ ಶತಮಾನದಲ್ಲಿದ್ದೇವೆ. ತಂತ್ರಜ್ಞಾನದ ಹಿಂದೆ ಓಡುತ್ತಿರುವ ಈ ಕಾಲದಲ್ಲೂ ಮನಸ್ಥಿತಿಗಳು ಮಾತ್ರ ಬದಲಾಗಿಲ್ಲ. ಹೆಣ್ಣುಮಕ್ಕಳ ವಿಚಾರದಲ್ಲಿ ಕೆಲವು ಗಂಡಸರ ಮನದಲ್ಲಿ ಈಗಲೂ ಅದೇ ಕೀಳರಿಮೆಯ ಭಾವ. ಹೆಣ್ಣುಮಕ್ಕಳನ್ನು ಹೀಯಾಳಿಸಿ ಮಾತನಾಡುವ ಅದೇ ವಿಕೃತ ಮನೋಭಾವ. ಅದರಲ್ಲೂ ಮದುವೆ ವಿಚಾರಕ್ಕೆ ಬಂದಾಗ ಮದುವೆಯಾಗದ ಹೆಣ್ಣುಮಕ್ಕಳಿಗೆ ಸಮಾಜದಲ್ಲಿ ಬದುಕುವ ಅರ್ಹತೆಯೇ ಇಲ್ಲ ಎಂಬಂತೆ ಮಾತನಾಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲೂ ಅಸಹ್ಯವಾಗಿ ಬರೆದು ಪೋಸ್ಟ್ ಹಾಕುವ ಮೂಲಕ ಅಥವಾ ಕಾಮೆಂಟ್ ಮಾಡುವ ಮೂಲಕ ವಿಕೃತಿ ಮೆರೆಯುತ್ತಾರೆ.

ಇತ್ತೀಚೆಗಷ್ಟೇ ಕಳಲೆ ಪುರುಷೊತ್ತಮ ಅವರು ಮಮತಾ ಬ್ಯಾನರ್ಜಿ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾರೆ. ಅವರ ಪೋಸ್ಟ್‌ನಲ್ಲಿ ಮಮತಾ ಬ್ಯಾನರ್ಜಿ ಮದುವೆಯಾಗದೇ ಇರುವ ಕಾರಣಕ್ಕೆ ಆಕೆಯ ಮನಸ್ಥಿತಿ ಕೆಟ್ಟದಾಗಿದೆ ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ. ಇವರ ಈ ಪೋಸ್ಟ್ ಹಂಚಿಕೊಂಡಿರುವ ರೇಣುಕಾ ಮಂಜುನಾಥ್‌ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ, ಮಾತ್ರವಲ್ಲ ಮದುವೆಯಾಗದ ಹೆಣ್ಣುಮಕ್ಕಳನ್ನು ಹೀಯಾಳಿಸುವ ಮನೋಭಾವ ಎಂದಿಗೂ ಸರಿಯಲ್ಲ ಎಂದು ಪುರುಷೋತ್ತಮ ಅವರ ಅಭಿಪ್ರಾಯವನ್ನು ಖಂಡಿಸಿದ್ದಾರೆ. 

ಮದುವೆಯಾಗದ ಗಂಡು ಮಕ್ಕಳು ದೇಶ ಆಳಬಹುದು, ರಾಜಕೀಯದಲ್ಲಿ ದೊಡ್ಡ ಹುದ್ದೆ ಅಲಂಕರಿಸಬಹುದು, ಅವರ ಮನಃಸ್ಥಿತಿಯಲ್ಲಿ ಯಾವುದೇ ತೊಂದರೆ, ವರ್ತನೆಯಲ್ಲಿ ಯಾವುದೇ ಭಿನ್ನತೆ ಇರುವುದಿಲ್ಲ. ಆದರೆ ಮದುವೆಯಾಗದ ಹೆಣ್ಣುಮಕ್ಕಳ ಮನಸ್ಥಿತಿ ಮಾತ್ರ ಹಿಡಿಂಬೆಯಂತಿರುತ್ತವೆ ಎನ್ನುವ ಕಳಲೆಯವರಂತಹ ಮನಸ್ಥಿತಿಗೆ ಛೀಮಾರಿ ಹಾಕಿದ್ದಾರೆ ರೇಣುಕಾ. ಹಾಗಾದರೆ ಕಳಲೆ ಅವರ ಪೋಸ್ಟ್‌ನಲ್ಲಿ ಏನಿತ್ತು, ಅದಕ್ಕೆ ರೇಣುಕಾ ಮಂಜುನಾಥ್ ಉತ್ತರ ಏನಿದೆ ನೋಡೋಣ.

ಕಳಲೆ ಪುರುಷೋತ್ತಮ ಅವರ ಪೋಸ್ಟ್

‘ಸಮಯಕ್ಕೆ ಸರಿಯಾಗಿ ಮದುವೆ ಆಗದಿದ್ದರೆ ಅಪ್ಸರೆಯೂ ಹಿಡಂಬೆಯಾಗುತ್ತಾಳೆ ಅನ್ನುದಕ್ಕೆ ಈ ಫೋಟೋನೇ ಉದಾಹರಣೆ … ಈಕೆ ಸಮಯಕ್ಕೆ ಸರಿಯಾಗಿ ಯಾವುದೋ ಹುಡುಗನ ಮನೆಗೆ ತಲುಪಿದ್ದರೆ ಆಗ ಆ ಒಂದು ಮನೆ ಮಾತ್ರ ಹಾಳಾಗುತ್ತಿತ್ತು ಇಡೀ ಬಂಗಾಳವಲ್ಲ‘ ಎಂದು ಬರೆದುಕೊಂಡು ಮಮತಾ ಬ್ಯಾನರ್ಜಿ ಅವರ ಹಳೆಯ ಫೋಟೊ ಹಾಗೂ ಈಗಿನ ಫೋಟೊವನ್ನು ಹಂಚಿಕೊಂಡಿದ್ದಾರೆ. 

ರೇಣುಕಾ ಮಂಜುನಾಥ್ ಅವರ ಉತ್ತರ ಹೀಗಿದೆ

ಈ ಸ್ಟೇಟಸ್ ನೋಡಿ, ನಮ್ಮ ನಡುವಿನ ಪುರುಷರ ಅತಿ ಕೆಟ್ಟ ಮನಸ್ಥಿತಿಗೆ ಸಾಕ್ಷಿ ಇದು. Kalale Purushotham ಸರ್ ನಿಮ್ಮ ಬಗ್ಗೆ ಗೌರವವಿದೆ. ಇಂತಹ ಕೆಟ್ಟ ಕಾಮೆಂಟ್ ಹಾಕಿ ಮಹಿಳೆಯರ ಘನತೆಗೆ ಧಕ್ಕೆ ತರಬೇಡಿ.

ಹೆಂಡತಿ ಬಿಟ್ಟವನು ದೇಶವನ್ನೇ ಆಳುತ್ತಾನೆ, ಮದುವೆಯಾಗದವಳು ಹೆಂಡತಿ ಬಿಟ್ಟವನಿಗಿಂತ ಮೇಲಲ್ಲವೇ?

ಕ್ಷಮಿಸಿ, ನಿಮ್ಮ ಸ್ಟೇಟಸ್ ನೋಡಿ ನನಗಾದ ಬೇಸರದಿಂದಾಗಿ ಅಷ್ಟೇ ತೀವ್ರವಾಗಿ ಬರೆಯಬೇಕೆನಿಸಿದೆ. ನಿಮ್ಮ ರಾಜಕೀಯ ಭಿನ್ನಾಭಿಪ್ರಾಯಕ್ಕೂ ಮಹಿಳೆ ಮದುವೆ ಎಂಬ ವಿಷಯವನ್ನು ತಗುಲಿ ಹಾಕಬೇಡಿ..

ಒಬ್ಬಳು ಸನಾತನ ಸಂಸ್ಕೃತಿ ಬಗ್ಗೆ ಮಾತಾಡುತ್ತಿದ್ದವಳು(ಮಾಜಿ ಸಚಿವೆ) ಸ್ನೇಹಿತೆಯ ಗಂಡನನ್ನೇ ಎಗರಿಸಿದಳು. ಮತ್ತೊಬ್ಬಳು ಏರ್‌ಪೋರ್ಟ್‌ನಲ್ಲಿ ಒದೆ ತಿಂದವಳಿಗೆ ಅನ್ನ ಕೊಡುವ ರೈತರ ಬಗ್ಗೆ ಎಗ್ಗಿಲ್ಲದೆ ನಾಲಿಗೆ ಹರಿಯುತ್ತೆ. ಅವಳು ದಿನಕ್ಕೊಂದು ಮೂರ್ಖ ಹೇಳಿಕೆ ಉದುರಿಸುವಳು. ಮತ್ತೊಬ್ಬ ಮಹಾಮಹಿಮೆ ಇಬ್ಬರು ಗಣಿಲೂಟಿಕೋರರ ತಲೆ ಮೇಲೆ ಕೈ ಇಟ್ಟು ವರಮಹಾಲಕ್ಷ್ಮಿಗೆ ಬಂದು ನಮ್ಮ ಬಳ್ಳಾರಿ ಲೂಟಿಗೆ ಬೆಂಬಲಿಸಿದಳು. ಹೀಗೆ ಹೇಳುತ್ತಾ ಹೋದರೆ...

ರಾಜಕೀಯ ಪಕ್ಷಕ್ಕೂ ಮಹಿಳೆ ಮದುವೆ ನಡತೆ ಮತ್ತೊಂದು ಎಂದು ಶುರುವಾದರೆ ಎಷ್ಟು ರಾಡಿಯಾಗಬಹುದೆಂದು ಉದಾಹರಿಸಿದ್ದೇನೆ. ನಿಮಗೆ ತಿಳಿದಿರಲಿ.. ದೇಶದ ಸಂಸದ ಶಾಸಕರಲ್ಲಿ, ಅಂಕಿ–ಅಂಶಗಳ ಪ್ರಕಾರ ಕಮಲ ಪಕ್ಷದ ಕೆಸರಲ್ಲೇ ಹೆಚ್ಚು ಕ...ಹರುಕರು, ಭ್ರಷ್ಟರು, ರೌಡಿಗಳು..!

ದಯವಿಟ್ಟು ಇನ್ನು ಮುಂದೆ ನಿಮ್ಮ ರಾಜಕೀಯ ನಿಲುವನ್ನು ವೈಯಕ್ತಿಕ ಟೀಕೆಗೆ ಬಳಸಬೇಡಿ. ನಾನು ಬಹಳ ಕಟುವಾಗೇ ಬರೆದಿದ್ದೇನೆ ಕ್ಷಮಿಸಿ. ಮದುವೆಯಾಗದ ಹೆಣ್ಣುಮಕ್ಕಳ ಬಗ್ಗೆ ಮತ್ತೆಂದೂ ಇಂತಹ ಮಾತುಗಳು ನಿಮ್ಮಿಂದ ಬರಬಾರದೆಂಬ ಏಕೈಕ ಕಾರಣಕ್ಕೆ ಹೀಗೆ ಬರೆದಿದ್ದೇನೆ.

ರೇಣುಕಾ ಅವರ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳು

ಗಾಯತ್ರಿ ನಾಗರಾಜ್‌ರಾವ್‌: ಕಳಲೆಯವರ ಅಭಿಪ್ರಾಯ ಖಂಡಿತ ಖಂಡನೀಯ. ರಾಜಕೀಯ ಭಿನ್ನಾಭಿಪ್ರಾಯ ಏನೇ ಇರಲಿ, ಈ ಅಭಿಪ್ರಾಯ ಹೆಣ್ಣುಕುಲಕ್ಕೆ ಅವಮಾನ ಮಾಡಿದಂತೆ.

ಮಂಗಳ ಎನ್‌: ಸಮಯಕ್ಕೆ ಸರಿಯಾಗಿ ಮದುವೆಯಾಗುವುದು, ಬಿಡುವುದು ಅವಳ ನಿರ್ದಾರ ಮತ್ತು ಆಯ್ಕೆ. ರಾಜಕೀಯ ಭಿನ್ನಾಭಿಪ್ರಾಯದ ಬಗ್ಗೆ ಮಾತಿಲ್ಲ. ಆದರೆ ಹೆಣ್ಣಿನmarital status ಎಂಬುದು ತಮಾಷೆಯ, ಕೊಂಕಿನ ವಿಷಯ ಮಾಡುವ ಹಕ್ಕಾಗಲಿ, ಅಧಿಕಾರವಾಗಲಿ ಗಂಡು ಕುಲಕ್ಕಿಲ್ಲ. (ಯಾರಿಗೂ ಇಲ್ಲ.)ಧಿಕ್ಕಾರ ನಿಮ್ಮ ಧೋರಣೆಗೆ

ರವೀಂದ್ರ ಕೆ. ಆರ್‌. ಕುಡುವಳ್ಳಿ: ನಿಮ್ಮ ಪೋಸ್ಟ್ ಗೆ ನನ್ನ ಸಹಮತವಿದೆ ಮೇಡಂ. "ಸಮಯಕ್ಕೆ ಸರಿಯಾಗಿ ಮದುವೆಯಾಗಿದ್ದಿದ್ದರೆ" ಎಂದು ಆರಂಭಿಸುವ ಮಾತಲ್ಲೇ ಮಹಿಳೆಯನ್ನು ಮದುವೆಯಲ್ಲಿ ಕಟ್ಟಿ ಹಾಕಬೇಕು ಎನ್ನುವ ಕೆಟ್ಟ ಧೋರಣೆಯಿದೆ. ಮದುವೆ ಅವರಿಷ್ಟ. ರಾಜಕೀಯವಾಗಿ ಬಿನ್ನಮತ ವ್ಯಕ್ತ ಪಡಿಸಲು, ಟೀಕಿಸಲು dignified ದಾರಿಗಳಿವೆ. ಇಂಥಾ ಮಾತಿನ ಬಳಕೆ cheap taste ಅಷ್ಟೇ.

ಅರ್ಚನಾ ಪ್ರಕಾಶ್‌: ತಪ್ಪುಗಳೆಲ್ಲವೂ ಆಗುವುದು ಹೆಣ್ಣಿನಿಂದ ಎನ್ನುವ ಮನಸ್ಥಿತಿ ಖಂಡಿತ ಬದಲಾಗಲೇಬೇಕು.. ನೀವು ರಾಜಕೀಯ ಪಕ್ಷದ ಹೆಸರುಗಳನ್ನು ಹೇಳುವ ಅವಶ್ಯಕತೆ ಇರಲಿಲ್ಲ, ಮಮತಾ ಒಬ್ಬ ಹೆಣ್ಣಾಗಿ, ರೇಪ್ ಮಾಡಿದ ವ್ಯಕ್ತಿಗೆ ರಕ್ಷಣೆ ಕೊಡುವುದು ನಿಜವಾಗಿಯೂ ಹೆಣ್ಣು ಮಕ್ಕಳು ನಾಚಿಕೆ, ಹೇಸಿಗೆ ಪಡುವ ವಿಷಯ.

ರತ್ನಾ ರಾ‌ವ್‌: ಬಹಳ ಕೆಟ್ಟ ಮನಸ್ಥಿತಿ... ಮಾತನಾಡಲು ಉತ್ತಮ‌ ಅಂಶಗಳಿಲ್ಲದ, ಬೌದ್ದಿಕ ದಿವಾಳಿಯಾದ ಜನರಷ್ಟೇ ವೈಯಕ್ತಿಕ ಟೀಕೆಗಳಿಗಿಳಿಯುತ್ತಾರೆ...ಒಬ್ಬ ಮಹಿಳೆಗೆ ಮದುವೆಯೇ ಜೀವನದ ಪರಮೋದ್ದೇಶವಲ್ಲ..ಇದರ ಹೊರತಾಗಿ ಸಹ ಜೀವನವಿದೆ...