ಆನ್‌ಲೈನ್‌ನಲ್ಲಿ ಮೆಸೇಜ್ ಮಾಡಿ ಕಾಟ ಕೊಡುವ ಗಂಡಸರಿಗೆ ಕಲಿಸಬೇಕಿದೆ ಪಾಠ, ಶುರುವಾಗಲಿ InBox Me too ಅಭಿಯಾನ; ಅರುಣ ಜೋಳದ ಕೂಡ್ಲಿಗಿ ಬರಹ-women safety lesson needs to taught the men who flirt in online let the inbox me too campaign begin online harrsment rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಆನ್‌ಲೈನ್‌ನಲ್ಲಿ ಮೆಸೇಜ್ ಮಾಡಿ ಕಾಟ ಕೊಡುವ ಗಂಡಸರಿಗೆ ಕಲಿಸಬೇಕಿದೆ ಪಾಠ, ಶುರುವಾಗಲಿ Inbox Me Too ಅಭಿಯಾನ; ಅರುಣ ಜೋಳದ ಕೂಡ್ಲಿಗಿ ಬರಹ

ಆನ್‌ಲೈನ್‌ನಲ್ಲಿ ಮೆಸೇಜ್ ಮಾಡಿ ಕಾಟ ಕೊಡುವ ಗಂಡಸರಿಗೆ ಕಲಿಸಬೇಕಿದೆ ಪಾಠ, ಶುರುವಾಗಲಿ InBox Me too ಅಭಿಯಾನ; ಅರುಣ ಜೋಳದ ಕೂಡ್ಲಿಗಿ ಬರಹ

‘ಫೇಸ್‌ಬುಕ್‌ನಲ್ಲಿ ಮಹಿಳೆಯರು #InboxMeToo ಅಥವಾ #MeToo_inbox ಅಭಿಯಾನ ಶುರುಮಾಡಬೇಕು. ಗಂಡುಗಳ‌ ಇನ್‌ಬಾಕ್ಸ್‌ ಕಿರಿಕಿರಿಯನ್ನು ಸ್ಕ್ರೀನ್‌ಶಾಟ್‌ ತೆಗೆದು ಬಯಲುಗೊಳಿಸಬೇಕು. ಇದು ಹೇಗೆ ನಡೆಯಬೇಕೆಂದರೆ online ನಲ್ಲಿ ಗಂಡಸರಿಗೆ inbox ಫೋಬಿಯಾ ಶುರುವಾಗಬೇಕು‘ ಎಂದು ಅರುಣ ಜೋಳದಕೂಡ್ಲಿಗಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ, ಈ ಬರಹದ ಉದ್ದೇಶ ಹೀಗಿದೆ.

 InBox Me too ಅಭಿಯಾನ
InBox Me too ಅಭಿಯಾನ (PC: Canva/ Arun Joladkudligi Facebook )

ಕಳೆದೊಂದಿಷ್ಟು ವರ್ಷಗಳಿಂದ Me too ಅಭಿಯಾನ ಚಾಲ್ತಿಯಲ್ಲಿದೆ. ಚಿತ್ರರಂಗದಲ್ಲಿ ಹೆಣ್ಣುಮಕ್ಕಳ ಮೇಲೆ ಶೋಷಣೆ ನಡೆಯುತ್ತಿದೆ ಎಂಬುದನ್ನು ಮೀ ಟೂ ಮೂಲಕ ಬಯಲಿಗೆಳೆಯಲಾಗಿತ್ತು. ಆ ನಂತರ ವಿವಿಧ ರಂಗಗಳಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿರುವುದು ಬೆಳಕಿಗೆ ಬಂದಿತು. ಇದು ಕೇವಲ ಅಷ್ಟಕ್ಕೇ ಸೀಮಿತವಾಗದೇ ಡಿಜಿಟಲ್‌ ಜಗತ್ತಿನಲ್ಲೂ ಮುಂದುವರಿದಿದೆ. ಸಾಮಾಜಿಕ ಜಾಲತಾಣಗಳ ಇನ್‌ಬಾಕ್ಸ್‌ನಲ್ಲೂ ಹೆಣ್ಣುಮಕ್ಕಳಿಗೆ ಮೆಸೇಜ್‌ ಕಳುಹಿಸುವ ಮೂಲಕ ದೌರ್ಜನ್ಯ ಮಾಡಲಾಗುತ್ತಿದೆ. ಈ ರೀತಿ ಮೆಸೇಜ್ ಕಳುಹಿಸುವ ಮೂಲಕ ಹೆಣ್ಣುಮಕ್ಕನ್ನು ಶೋಷಿಸಲಾಗುತ್ತಿದೆ. ಅಪರಿಚಿತ ಮೆಸೇಜ್‌ಗಳು ಹೆಣ್ಣುಮಕ್ಕಳಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಆ ಕಾರಣಕ್ಕೆ InBox Me too ಅಭಿಯಾನ ಶುರು ಮಾಡಬೇಕು, ಎಷ್ಟರ ಮಟ್ಟಿಗೆ ಇದರ ಪರಿಣಾಮ ಬೀರಬೇಕು ಎಂದರೆ ಆನ್‌ಲೈನ್‌ನಲ್ಲಿ ಗಂಡಸರಿಗೆ ಇನ್‌ಬಾಕ್ಸ್‌ ಫೋಬಿಯಾ ಶುರುವಾಗಬೇಕು, ಆ ಮಟ್ಟಿಗೆ ಇದರ ಪ್ರಭಾವ ಇರಬೇಕು ಎಂದು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದಾರೆ ಅರುಣ ಜೋಳದ ಕೂಡ್ಲಿಗಿ. ಅವರ ಬರಹವನ್ನು ನೀವೂ ಓದಿ.

ಅರುಣ ಜೋಳದ ಕೂಡ್ಲಿಗಿ ಬರಹ

ರೇಣುಕ ಸುರಭಿ ಅವರು InBoxನಲ್ಲಿ ಕಾಟ ಕೊಡುವ ಗಂಡುಗಳ ಬಗ್ಗೆ ಬರೆದಿದ್ದಾರೆ. ಆಗಾಗ inboxಗೆ ಬಂದು Hi, ಊಟ ಆಯ್ತಾ, ಚೆನ್ನಾಗಿದಿರಾ ಎಂದು ಮೆಸೇಜ್‌ ಮಾಡಿ ಕಾಟ ಕೊಡುವ ಗಂಡಸರ ಬಗ್ಗೆ ಕೆಲವು ಮಹಿಳೆಯರು ಬರೆಯುತ್ತಾರೆ. ಮತ್ತೆ ಕೆಲವರು Inbox Screen Shot ಹಾಕಿಯೂ ಕಟುವಾಗಿ ಬೈದದ್ದೂ ಇದೆ.

ಹೀಗೆ ಬರೆಯುವವರು ಒಂದೋ ಎರಡೋ ಪರ್ಸೆಂಟ್ ಇರಬಹುದು. ಉಳಿದ ಬಹುಸಂಖ್ಯಾತ ಮಹಿಳೆಯರು ದಿವ್ಯನಿರ್ಲಕ್ಷ್ಯ ವಹಿಸುತ್ತಾರೆ ಅಥವಾ ನೋಡಿದರೂ‌ ನೋಡದವರ ಹಾಗೆ ಒಂದು ನಗೆ ಬೀರಿ ಸುಮ್ಮನಾಗಬಹುದು. ಗಂಡಿನ ಈ ಕೀಳು ಪ್ರವೃತ್ತಿಯ ಬಗ್ಗೆ ಹೆಣ್ಣಿನ ಪ್ರತಿಕ್ರಿತೆ

ಹೀಗೆ ಹಲವು ಬಗೆಯಲ್ಲಿದೆ. ನಿರ್ಲಕ್ಷ್ಯ ಒಳ್ಳೆಯದೇ, ಆದರೆ ನಿರ್ಲಕ್ಷ್ಯ ಈ ರೋಗವನ್ನು ನಿಯಂತ್ರಿಸಲಾರದು. ಒಬ್ಬರು ನಿರ್ಲಕ್ಷಿಸಿದರೆ ಅವರು ಮತ್ತೊಬ್ಬರ ಬೇಟೆಯಲ್ಲಿ ತೊಡಗುತ್ತಾರೆ. ಗಂಡಾಳಿಕೆಯ ಹಮ್ಮಿನ ಎಳೆ ಕೂಡ ಇದರಲ್ಲಿ ಅಡಗಿದೆ.

ಹೆಣ್ಣು ಯಾವಾಗಲೂ ಗಂಡಿಗೆ ಹಾತೊರೆಯುತ್ತಾಳೆ ಎನ್ನುವ ಹುಸಿ ಮಿಥ್‌ಗಳನ್ನು ಅಡಾಲ್ಟ್ ಲಿಟರೇಚರ್ ಮತ್ತು ಪಾರ್ನ್ ಲೋಕ ಒಂದು ಕೃತಕ ಗ್ರಹಿಕೆಯನ್ನು ಕಟ್ಟಿಕೊಟ್ಟಿದೆ. ಅಂಥವು ಈಗ Online ನಲ್ಲಿ ರಾಶಿರಾಶಿ ಸಿಗುತ್ತಿದೆ.‌ಇದೆಲ್ಲಾ ಇಂತಹ ಕೀಳು ಅಭಿರುಚಿಯನ್ನು ಪೋಷಿಸುತ್ತವೆ. ಗಂಡು ಹೆಣ್ಣಿನ ವಿರುದ್ಧ ಲಿಂಗಗಳ ಸೆಳೆತದ 'ಕಾಮ'ದ ಕಂಟೆಂಟ್ Online ಮಾರ್ಕೆಟ್ಟಿನ ದೊಡ್ಡ ಆಕರ್ಷಣೆಯಾಗಿದೆ. 'Sex'ಗೆ ಸಂಬಂಧಿಸಿದಂತೆ Online ಮಾರುಕಟ್ಟೆ ಕೋಟ್ಯಾಂತರ ರೂಗಳನ್ನು ನಿತ್ಯವೂ ಸಂಪಾದಿಸುತ್ತಿದೆ.

ಇಲ್ಲಿ ಇನ್ನೊಂದು ಬಿಕ್ಕಟ್ಟಿದೆ. ಯಾರೋ ಅಪರಿಚಿತ ಗಂಡಸರು Hi, Hello ಎಂದು ಏನೇನೋ ಮೆಸೇಜ್‌ ಮಾಡಿದರೆ ಪರಿಚಯ ಇಲ್ಲದ ಕಾರಣ ಕೆಲವು ಹೆಣ್ಣುಮಕ್ಕಳು ನಿರ್ಲಕ್ಷಿಸುತ್ತಾರೆ. ಆದರೆ ದೊಡ್ಡದಾಗಿ ಪ್ರೋಗ್ರೆಸ್ಸಿವ್ ಫೋಜು ಕೊಟ್ಟು, ಚಳವಳಿ ಸಂವಿಧಾನ ಪ್ರಜಾಪ್ರಭುತ್ವ ಹೆಣ್ಣಿನ ಶೋಷಣೆ ಅಂತೆಲ್ಲಾ ಭಾಷಣ ಬಿಗಿದು. ಸಾರ್ವಜನಿಕವಾಗಿ ಒಳ್ಳೆಯ ಮುಖ ಇದ್ದು Inbox ನಲ್ಲಿ ಕೀಳು ಅಭಿರುಚಿಯ ಮೆಸೇಜ್ ‌ಮಾಡಿದಾಗ ಹೆಣ್ಣುಮಕ್ಕಳಿಗೆ ಅತೀವ ಮುಜುಗರ ಮತ್ತು ಸಿಟ್ಟು ಒಟ್ಟೊಟ್ಟಿಗೆ ಬರುತ್ತೆ. ಅವರು ಆ ಮತ್ಸದ್ದಿ ಗಂಡುಗಳ ಬಗ್ಗೆ ಹೊಂದಿರುವ ಭಾವನೆಯೆ ಬೇರೆ inboxನಲ್ಲಿ ಅವರುಗಳು ತೋರುವ ವರ್ತನೆಯೆ ಬೇರೆ. ಕೆಲವರು ತಕ್ಷಣಕ್ಕೆ ಅಖಾಡಕ್ಕಿಳಿಯುವುದಿಲ್ಲ, ಆರಂಭಕ್ಕೆ ಒಳ್ಳೆಯತನ ತೋರಿ ವಿಶ್ವಾಸ ಗಳಿಸಲೂ ಪ್ರಯತ್ನಿಸುತ್ತಾರೆ.

ಮತ್ತೊಂದು ವಯಸ್ಸು ಮೀರಿದ ವರ್ತನೆ. ಗಂಡಿಗೆ ಹೆಚ್ಚಿನ ವಯಸ್ಸಾಗಿರುತ್ತೆ, ಅಂಥವರು ಮಗಳೋ ಮೊಮ್ಮಗಳಂತಹ ಹುಡುಗಿಯರ ಜತೆ ಕೀಳು ಅಭಿರುಚಿಯ ಮೆಸೇಜ್ ಕಳಿಸುವುದು. ಇದಕ್ಕೆ 'ಮರ ಮುಪ್ಪಾದರೆ ಹುಳಿ ಮುಪ್ಪೇ..' ಎಂದು ಕೆಟ್ಟದಾಗಿ ಸಮರ್ಥನೆ ಮಾಡಿಕೊಳ್ಳುವುದು ಇರುತ್ತದೆ.

ಆಗಲೂ ಹೆಣ್ಣುಗಳು ಗಂಡಿನ ಬಗೆಗೆ ಸಿಟ್ಟು ಆಕ್ರೋಶ ಹೆಚ್ಚಿಸಿಕೊಳ್ಳುತ್ತಾರೆ. ಇದನ್ನು ಸಾರ್ವಜನಿಕವಾಗಿ ಹೇಳುವಂತೆಯೂ ಇರುವುದಿಲ್ಲ, ಹಾಗಂತ ಸುಮ್ಮನಿರಲೂ ಆಗದೇ ಹೆಣ್ಣುಮಕ್ಕಳಲ್ಲಿ ಒಂದು‌ ಬಗೆಯ ತಾಕಲಾಟವಂತೂ ನಡೆದಿರುತ್ತದೆ.

ಈ ತರಹದ ಎಲ್ಲಾ ನಡವಳಿಕೆಗಳು ಒಟ್ಟಾರೆ ಗಂಡಿನ ಬಗೆಗಿನ ತಮ್ಮ 'ಅಭಿಪ್ರಾಯ' ವನ್ನು ಸಂಶಯಾತ್ಮಕಗೊಳಿಸುತ್ತವೆ. ಯಾವುದೇ ಅಪರಿಚಿತ/ಪರಿಚಿತ ಗಂಡಿಗೆ ಪ್ರತಿಕ್ರಿಯಿಸಲು, ಖಾಸಗಿ‌ ನಂಬರ್ ಕೊಡಲು ಭಯಗೊಳ್ಳುತ್ತಾರೆ.

ಅಂತರ್ಜಾಲ ಮುಖೇಡಿಗಳ ಆಡಂಬೋಲ. ಸ್ವಂತ ಗುರುತನ್ನು ಮರೆಮಾಚಿ ಬೇರೆ ಬೇರೆ ಹೆಸರುಗಳಲ್ಲಿ ಅಕೌಂಟ್ ಕ್ರಿಯೇಟ್ ಮಾಡಿ ತನಗೆ ಹೆಚ್ಚು ಪರಿಚಯ ಇರುವ ಹೆಣ್ಣುಗಳೊಂದಿಗೇ ಕೀಳು ಅಭಿರುಚಿಯ ಚಾಟ್ ಮಾಡಲು ಶುರುಮಾಡುತ್ತಾರೆ. ಇದರಿಂದ ಕೂಡ ಹೆಣ್ಣುಮಕ್ಕಳು ಅಪರಿಚಿತ ಗಂಡುಗಳ ಜತೆ ಚಾಟ್ ಮಾಡಲು ಹಿಂದೇಟು ಹಾಕುತ್ತಾರೆ.

ಕೆಲವೊಮ್ಮೆ ಗಂಡುಗಳ ಇಂಥಹ ಕೀಳು ಪ್ರವೃತ್ತಿಯ ಕಾರಣಕ್ಕೇ ಹೆಣ್ಣುಮಕ್ಕಳು ಕೂಡ ಬೇರೆ ಬೇರೆ ಹೆಸರಲ್ಲಿ ಸಿನಿಮಾ‌ನಟಿಯರ ಪ್ರೊಫೈಲ್ ಹಾಕಿಕೊಂಡು ಚಾಲ್ತಿಯಲ್ಲಿರುತ್ತಾರೆ. ಕೆಲವೊಮ್ಮೆ ಅವರುಗಳೂ ತಮಗೆ ಪರಿಚಯ ಇರುವ ಗಂಡುಗಳನ್ನು ಪರೀಕ್ಷಿಸುವುದೂ ಇರಬಹುದು.

ಅಂತರ್ಜಾಲ ಮೊಬೈಲ್ ಎಂಬ ಪರಿಕರದ ಮೂಲಕ ಸಂವಹನದಲ್ಲಿ ಜಾಗತಿಕವಾಗಿ ಕ್ರಾಂತಿಯಾದ ಈ ದಿನಗಳಲ್ಲಿ ಗಂಡು-ಹೆಣ್ಣುಗಳ ಸಂಪರ್ಕ ಸಾಧ್ಯತೆ ಅಗಾಧವಾಗಿದೆ. ಇದರ ಮುಕ್ತತೆಯ ಒಳ್ಳೆಯ ಪರಿಣಾಮ ನೂರಿದ್ದರೂ ಅದರ ಕೆಟ್ಟ ಪರಿಣಾಮಗಳೂ ಜತೆಜತೆಗೆ ಅಂಟಿಕೊಂಡಿವೆ. ಅದರಲ್ಲಿ ಹೀಗೆ ಗಂಡುಗಳು ಹೆಣ್ಣುಗಳ ಜತೆ ಕೀಳಾಗಿ ವರ್ತಿಸುವುದೂ ಒಂದಾಗಿದೆ.‌ ರೇಣುಕಾಸ್ವಾಮಿಯಂಥವರೂ ಬಹಳಿದ್ದಾರೆ. ಕೆಲವು ಗಂಡುಗಳು ಇದನ್ನೂ ಸಮರ್ಥಿಸುವವರಿದ್ದಾರೆ. ನಾವೇನೋ‌ ಮೆಸೇಜ್ ಮಾಡುತ್ತೇವೆ. ಅವರ್ಯಾಕೆ ನಮಗೆ ಪ್ರತಿಕ್ರಿಯಿಸಬೇಕು ಎನ್ನುವುದು ಇದೆ. ಚಪ್ಪಾಳೆಗೆ ಎರಡೂ ಕೈ ಬೇಕಲ್ಲವೇ ಎನ್ನುವವರಿದ್ದಾರೆ. ಅವರು ರಿಯಾಕ್ಟ್ ಮಾಡುತ್ತಾರೋ ಇಲ್ಲವೋ ತಾನು ಮಾಡಿದ್ದು ಮಾತ್ರ ಕೀಳಲ್ಲವೇ ಎಂದರೆ ಅದಕ್ಕೆ ಅಂಥವರಲ್ಲಿ ಉತ್ತರವಿಲ್ಲ.

ಇಷ್ಟೆಲ್ಲಾ‌ ಹೇಳಿದ ಬಳಿಕ‌ ನಿನ್ನ Inbox ಕಥೆಯೇನು ಎಂದು ಕೇಳುವವರೂ ಇದ್ದಿರಬಹುದು. ನಾನು ಅಂಬೇಡ್ಕರ್ ಓದು ನಡೆಸುತ್ತಿದ್ದಾಗ faceBook ಅಕೌಂಟಲ್ಲಿ ಅವರ ಅಭಿರುಚಿಗಳನ್ನು ಗಮನಿಸಿ

ನನ್ನ ಬಳಿ ಅವರ ಖಾಸಗಿ ನಂಬರ್ ಇಲ್ಲದವರ inbox ನಲ್ಲಿ ಒಂದು 'ಅಂಬೇಡ್ಕರ್ ಓದು' ಸರಣಿ ಲಿಂಕ್ ಕಳಿಸಿ ಅಂಬೇಡ್ಕರ್ ಓದಿನ ಆಸಕ್ತಿ ಇದ್ದಲ್ಲಿ ವಾಟ್ಸಪ್ ನಂಬರ್ ಪಡೆದು ನಂತರ ವಾಟ್ಸಪ್ ‌ನಲ್ಲಿ ಅವರುಗಳ ಜತೆ ಸಂವಹನ ಮಾಡುತ್ತಿದ್ದೆ. ಕೆಲವು ಮಹಿಳೆಯರು ಪ್ರತಿಕ್ರಿಯಿಸುತ್ತಿದ್ದರು, ಮತ್ತೆ ಕೆಲವರು ರಿಯಾಕ್ಟ್ ಮಾಡುತ್ತಿರಲಿಲ್ಲ. ಅಂಥವರಿಗೆ ಮತ್ತೆ inbox ಮೆಸೇಜ್ ಮಾಡುತ್ತಿರಲಿಲ್ಲ. ಪರಿಚಿತರಿದ್ದು ಅವರ ಮೊಬೈಲ್ ನಂಬರ್ ಇಲ್ಲದಾಗ ಅವರ ನಂಬರ್ ಪಡೆಯಲು ಹೆಚ್ಚಾಗಿ inbox ಬಳಸಿರುವೆ. ಒಮ್ಮೆ ಅಕಸ್ಮಾತ್ ಒಬ್ಬ ಮಹಿಳೆಗೆ ಡಬಲ್‌ಮೀನಿಂಗ್ ಕಾಮಿಡಿ ವೀಡಿಯೊ ಅದೇಗೋ Send ಆಗಿತ್ತು. ಅವರಲ್ಲಿ ಈ ಆಕಸ್ಮಿಕ‌ ಎಡವಟ್ಟಿಗೆ ಕ್ಷಮೆ ಕೇಳಿದ್ದೆ. ಇದರಿಂದ ಒಂದು ವಾರ ಗಿಲ್ಟ್ ಫೀಲ್‌ ಮಾಡಿದ್ದೆ.

ಇಷ್ಟೆಲ್ಲಾ ಪುರಾಣ ಏಕೆ ಅಂದರೆ, Facebook ನಲ್ಲಿ ಮಹಿಳೆಯರು #InboxMeToo ಅಥವಾ #MeToo_inbox ಅಭಿಯಾನ ಶುರುಮಾಡಬೇಕು. ಗಂಡುಗಳ‌ inbox ಕಿರಿಕಿರಿಯನ್ನು Screen Shot ತೆಗೆದು ಬಯಲುಗೊಳಿಸುತ್ತಾ ಹೋಗಬೇಕು. ಇದಕ್ಕೆ ಪ್ರತಿಯಾಗಿ ಗಂಡುಗಳಿಗೆ ಹೆಣ್ಣುಗಳಿಂದ ಕಿರಿಕಿರಿಯಾಗಿದ್ದರೂ ಅಂಥವರೂ ಈ MeToo ಭಾಗವಾಗಬಹುದು. ಇದು ಹೇಗೆ ನಡೆಯಬೇಕೆಂದರೆ online ನಲ್ಲಿ ಗಂಡಸರಿಗೆ inbox ಫೋಬಿಯಾ ಶುರುವಾಗಬೇಕು.

ಇದಿಷ್ಟು ನನ್ನ ತಿಳುವಳಿಕೆಯ ಮಿತಿಯಲ್ಲಿ ಹೊಳೆದದ್ದು ಈ‌ ಸಂಗತಿಗೆ ಇನ್ನೂ ಅನೇಕ ಮುಖಗಳೂ ಇದ್ದಿರಬಹುದು. ಅದನ್ನು ತಮ್ಮ ತಮ್ಮ ಅನುಭವದ ನೆಲೆಯಲ್ಲಿ ಕಮೆಂಟಿನಲ್ಲಿ ವಿಸ್ತರಿಸಬಹುದು.

ಇಂದು (ಸೆಪ್ಟೆಂಬರ್ 20) ಬೆಳಿಗ್ಗೆ ಅರುಣ್ ಈ ಪೋಸ್ಟ್ ಹಾಕಿದ್ದಾರೆ. ಈಗಾಗಲೇ 50ಕ್ಕೂ ಹೆಚ್ಚು ಮಂದಿ ಇವರ ಪೋಸ್ಟ್ ಲೈಕ್ ಮಾಡಿದ್ದಾರೆ, ಕೆಲವರು ಕಾಮೆಂಟ್ ಮಾಡಿದ್ದಾರೆ. 

ಅರುಣ್ ಅವರ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳು ಹೀಗಿವೆ

‘ಒಳ್ಳೆಯ ವಿಚಾರ, ತೆರೆಮರೆಯಲ್ಲಿರುವವರು ಹೊರಗೆ ಬರುತ್ತಾರೆ‘ ಎಂದು ಕುಮಾರ್ ಜೆ. ಕೊಗಲಿ ಎನ್ನುವವರು ಕಾಮೆಂಟ್ ಮಾಡಿದ್ದಾರೆ. ಹಲವರು ಈ ಅಭಿಯಾನ ಶುರುವಾಗಬೇಕು, ತಮಗೆ ಇದಕ್ಕೆ ಸಹಮತ ಇದೆ ಎನ್ನುವುದನ್ನ ಕಾಮೆಂಟ್ ಮೂಲಕ ತಿಳಿಸಿದ್ದಾರೆ. 

mysore-dasara_Entry_Point