ಭಾರತದ ಮಕ್ಕಳನ್ನು ಕಾಡುತ್ತಿದೆ ಸೂಕ್ಷ್ಮ ಪೋಷಕಾಂಶಗಳ ಕೊರತೆ; ಪೋಷಕರು ಮಗುವಿನಲ್ಲಿ ತಪ್ಪದೇ ಗಮನಿಸಬೇಕಾದ ಅಂಶಗಳಿವು
ಪ್ರತಿಯೊಬ್ಬ ವ್ಯಕ್ತಿಗೂ ಪೋಷಕಾಂಶ ಅತ್ಯಗತ್ಯ. ಸೂಕ್ಷ್ಮ ಪೋಷಕಾಂಶಗಳ ಕೊರತೆಯು ಪ್ರತಿರಕ್ಷಣಾ ವ್ಯವಸ್ಥೆಯಿಂದ ತೂಕ ನಿರ್ವಹಣೆವರೆಗೆ ಹಲವು ವಿಚಾರಗಳ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ಸೂಕ್ಷ್ಮ ಪೋಷಕಾಂಶಗಳ ಕೊರತೆಯಿಂದ ಸಾಕಷ್ಟು ತೊಂದರೆಗಳು ಎದುರಾಗಬಹುದು. ಸೂಕ್ಷ್ಮ ಪೋಷಕಾಂಶ ಕೊರತೆಯಿಂದ ಉಂಟಾಗುವ ಈ ಲಕ್ಷಣಗಳ ಮೇಲೆ ಪೋಷಕರು ಗಮನ ಹರಿಸಲೇಬೇಕು.
ಮೂಳೆ, ಚರ್ಮ, ಸ್ನಾಯುಗಳು, ನರಗಳು ಸೇರಿದಂತೆ ದೇಹದ ವಿವಿಧ ಭಾಗಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಪೋಷಕಾಂಶಗಳು ಅತ್ಯಗತ್ಯ. ದೇಹವು ವಿಟಮಿನ್ ಡಿ, ಸತು, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ನಂತಹ ಸಾಕಷ್ಟು ಸೂಕ್ಷ್ಮ ಪೋಷಕಾಂಶಗಳನ್ನು ಪಡೆಯದಿದ್ದಾಗ, ಮಕ್ಕಳ ಬೆಳವಣಿಗೆಗೆ ನೆರವಾಗುವ ಸೂಕ್ಷ್ಮ ಪೋಷಕಾಂಶಗಳ ಕೊರತೆ ಎದುರಾಗಬಹುದು. ದೇಹವು ಈ ಪೋಷಕಾಂಶಗಳನ್ನು ಉತ್ಪಾದಿಸಬಹುದಾದ್ದರಿಂದ ಮಗುವಿನ ಆಹಾರದಲ್ಲಿ ಪೌಷ್ಟಿಕಾಂಶ-ಭರಿತ ಆಹಾರವನ್ನು ಸೇರಿಸುವುದು ಅವಶ್ಯ. ವಿಟಮಿನ್ ಡಿ, ಸತು ಮತ್ತು ಕಬ್ಬಿಣದಂತಹ ಸೂಕ್ಷ್ಮ ಪೋಷಕಾಂಶಗಳು ಮಕ್ಕಳ ಬೆಳವಣಿಗೆ ಅತ್ಯವಶ್ಯವಾಗಿದೆ. ಆ ಕಾರಣಕ್ಕೆ ಇವುಗಳನ್ನು ಸೂಕ್ಷ್ಮ ಪೋಷಕಾಂಶಗಳು ಎನ್ನಲಾಗಿದೆ. ಸದ್ಯ ಭಾರತದಾದ್ಯಂತ ಹಲವು ಮಕ್ಕಳು ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂಬ ಅಂಶ ಕಾಳಜಿಗೆ ಕಾರಣವಾಗಿದೆ.
ಮಕ್ಕಳಲ್ಲಿ ಮೈಕ್ರೋನ್ಯೂಟ್ರಿಯೆಂಟ್ ಕೊರತೆಗೆ ಕಾರಣವೇನು?
ʼಕ್ಯಾಲ್ಸಿಯಂ, ಕಬ್ಬಿಣ ಮತ್ತು ಸತುವಿನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸದೇ ಇರುವುದು ಸೂಕ್ಷ್ಮ ಪೋಷಕಾಂಶಗಳ ಕೊರತೆಗೆ ಪ್ರಮುಖ ಕಾರಣವಾಗಿದೆ. ಬಾಲ್ಯದಿಂದಲೇ ಮಕ್ಕಳಿಗೆ ಸೊಪ್ಪು, ತರಕಾರಿಯಂತಹ ಪೋಷಕಾಂಶ ಸಮೃದ್ಧ ಆಹಾರಗಳನ್ನು ನೀಡುವ ಅಭ್ಯಾಸ ಮಾಡಿಕೊಳ್ಳಬೇಕು. ಸಾಮಾನ್ಯ ಶೀತ, ಜ್ವರ, ವೈರಲ್ ಸೋಂಕಿನಂತಹ ಕೆಲವು ರೋಗಗಳು ಮಕ್ಕಳಲ್ಲಿ ಹಸಿವನ್ನು ಕಸಿಯಬಹುದು ಎಂದು ಖಾರ್‌ಘರ್‌ನ ಮದರ್‌ಹುಡ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಪ್ರಶಾಂತ್ ಮೊರಾಲ್ವಾರ್ ಇಂಡಿಯಾ ಡಾಟ್ ಕಾಮ್ ನೀಡದ ಸಂದರ್ಶನದಲ್ಲಿ ಹೇಳಿದ್ದಾರೆ.
ಸೂಕ್ಷ್ಮ ಪೋಷಕಾಂಶಗಳ ಕೊರತೆ ಸೂಚಿಸುವ ಲಕ್ಷಣಗಳು
* ಶಕ್ತಿಯ ಕೊರತೆ
* ನಿರಂತರ ಕೋಪ ಮತ್ತು ವಿಚಿತ್ರವಾಗಿ ವರ್ತಿಸುವುದು
* ಹಸಿವಾಗದೇ ಇರುವುದು, ತಟ್ಟೆಯಲ್ಲಿ ಹಾಗೇ ಆಹಾರ ಬಿಡುವುದು, ಯಾವಾಗಲೂ ಅನಾರೋಗ್ಯದ ಭಾವನೆ.
* ಸ್ಥೂಲಕಾಯವು ಪೌಷ್ಟಿಕಾಂಶದ ಕೊರತೆ, ಯಾವಾಗಲೂ ಹಸಿವಾಗುವುದು ಇಂತಹ ಭಾವನೆಗಳನ್ನು ಉಂಟು ಮಾಡಬಹುದು. ಅಂತಹ ಎಷ್ಟು ತಿಂದರೂ ತೃಪ್ತರಾಗುವುದಿಲ್ಲ.
* ಒಣ ಮತ್ತು ಸುಕ್ಕುಗಟ್ಟಿದ ಕೂದಲು
* ಗಾಯಗಳು ನಿಧಾನಕ್ಕೆ ಒಣಗುವುದು
* ಆರೋಗ್ಯಕರ ಆಹಾರ ಸೇವಿಸದೇ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವುದು.
ಮಕ್ಕಳಲ್ಲಿ ಮೈಕೋನ್ಯೂಟ್ರಿಯೆಂಟ್ ಕೊರತೆ ನೀಗಿಸಲು ಸಲಹೆ
ಪ್ರೊಟೀನ್, ಕಬ್ಬಿಣಾಂಶ, ವಿಟಮಿನ್ ಡಿ, ಸತು, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ನಾರಿನಾಂಶದ ಕೊರತೆಯು ಸೂಕ್ಷ್ಮ ಪೋಷಕಾಂಶಗಳ ಕೊರತೆಗೆ ಮುಖ್ಯ ಕಾರಣವಾಗುವುದರಿಂದ ಇವುಗಳ ಕೊರತೆಯನ್ನು ನೀಗಿಸುವ ಆಹಾರ ಸೇವನೆಗೆ ಹೆಚ್ಚು ಒತ್ತು ನೀಡಬೇಕು. ಸೇಬು, ಪೇರಳೆ ಮತ್ತು ಬೆರ್ರಿ ಹಣ್ಣುಗಳು ಪೊಟ್ಯಾಸಿಯಮ್ ಮತ್ತು ನಾರಿನಾಂಶದ ಉತ್ತಮ ಮೂಲವಾಗಿದೆ. ಇದು ಸ್ನಾಯುಗಳನ್ನು ಬಲಗೊಳಿಸುತ್ತದೆ. ಮಲಬದ್ಧತೆ ಅಥವಾ ಗ್ಯಾಸ್-ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಮೊಟ್ಟೆ, ಡೈರಿ ಉತ್ಪನ್ನಗಳು ಮತ್ತು ಸೊಪ್ಪು ತರಕಾರಿಗಳಂತಹ ಪ್ರೊಟೀನ್ ಭರಿತ ಆಹಾರವನ್ನು ಸೇವಿಸುವುದರಿಂದ ಮಕ್ಕಳಲ್ಲಿ ಪ್ರೋಟೀನ್ ಕೊರತೆಯ ಸಮಸ್ಯೆಯನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಕಬ್ಬಿಣ ಮತ್ತು ವಿಟಮಿನ್ ಡಿಯಂತಹ ಸೂಕ್ಷ್ಮ ಪೋಷಕಾಂಶಗಳನ್ನು ಪಾಲಕ್, ಕಡಲೆ, ಅಗಸೆಬೀಜಗಳು, ಸೋಯಾಬೀನ್ ಮತ್ತು ಕರಬೂಜುಗಳಂತಹ ಆಹಾರಗಳಲ್ಲಿ ಸುಲಭವಾಗಿ ಕಾಣಬಹುದು. ಸತು ಮತ್ತು ಕ್ಯಾಲ್ಸಿಯಂ ಕೊರತೆಯಿರುವ ಮಕ್ಕಳು ಉತ್ತಮ ಫಲಿತಾಂಶಕ್ಕಾಗಿ ಹೆಚ್ಚು ಡೈರಿ ಉತ್ಪನ್ನಗಳನ್ನು ಹಾಲು, ಪನೀರ್, ಮಜ್ಜಿಗೆ ಮತ್ತು ಮೊಸರು ತಿನ್ನಲು ಪ್ರಯತ್ನಿಸಬೇಕು.