Geometric Miracle Cave: ಕ್ಲಿಯೋಪಾತ್ರ ಸಮಾಧಿ ನಿರೀಕ್ಷೆಯಲ್ಲಿದ್ದ ಪುರಾತತ್ವಶಾಸ್ತ್ರಜ್ಞರಿಗೆ ಸಿಕ್ಕಿದ್ದು...!
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Geometric Miracle Cave: ಕ್ಲಿಯೋಪಾತ್ರ ಸಮಾಧಿ ನಿರೀಕ್ಷೆಯಲ್ಲಿದ್ದ ಪುರಾತತ್ವಶಾಸ್ತ್ರಜ್ಞರಿಗೆ ಸಿಕ್ಕಿದ್ದು...!

Geometric Miracle Cave: ಕ್ಲಿಯೋಪಾತ್ರ ಸಮಾಧಿ ನಿರೀಕ್ಷೆಯಲ್ಲಿದ್ದ ಪುರಾತತ್ವಶಾಸ್ತ್ರಜ್ಞರಿಗೆ ಸಿಕ್ಕಿದ್ದು...!

ಈಜಿಪ್ಟ್‌ನ ಪ್ರಾಚೀನ ನಗರ ತಪೋಸಿರಿಸ್ ಮ್ಯಾಗ್ನಾದಲ್ಲಿನ ದೇವಾಲಯದ ಕೆಳಗೆ ಐತಿಹಾಸಿಕ ಸುರಂಗವೊಂದು ಪತ್ತೆಯಾಗಿದ್ದು, ಪುರಾತತ್ವಶಾಸ್ತ್ರಜ್ಞರು ಇದನ್ನು "ಜ್ಯಾಮಿತೀಯ ಪವಾಡ" ಎಂದು ಕರೆದಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಈಜಿಪ್ಟ್ ಪ್ರವಾಸೋದ್ಯಮ ಮತ್ತು ಪುರಾತನ ಸಚಿವಾಲಯ, ಪ್ರಾಚೀನ ಈಜಿಪ್ಟ್‌ ರಾಣಿ ಕ್ಲಿಯೋಪಾತ್ರ ಸಮಾಧಿಯ ಹುಡುಕಾಟದ ಪ್ರಕ್ರಿಯೆಯಲ್ಲಿ ಈ ಸುರಂಗ ಪತ್ತೆಯಾಗಿದೆ ಎಂದು ಸ್ಪಷ್ಟಪಡಿಸಿದೆ.

ಪ್ರಾಚೀನ ಸುರಂಗ
ಪ್ರಾಚೀನ ಸುರಂಗ (Verified Facebook)

ಕೈರೋ: ಪ್ರಾಚೀನ ಈಜಿಪ್ಟ್‌ ಹಲವು ರೋಚಕಗಳ ಆಗರ. ಮಮ್ಮಿಗಳು(ಶವಪೆಟ್ಟಿಗೆ), ದುರಂತ ಪ್ರೇಮ ಕಥೆಗಳು, ಫೆರೋ(ರಾಜ ಅಥವಾ ರಾಣಿ)ಗಳ ವೈಭವೋಪೇತ ಆಡಳಿತ, ಪಿರಮಿಡ್‌ಗಳು ಹೀಗೆ ಹತ್ತು ಹಲವು ರೋಚಕ ಇತಿಹಾಸವನ್ನು ಈಜಿಪ್ಟ್‌ ತನ್ನ ಮಡಿಲಲ್ಲಿ ಸಂಗ್ರಹಿಸಿಟ್ಟುಕೊಂಡಿದೆ.

ಈ ರೋಚಕ ಇತಿಹಾಸವನ್ನು ಸಂಶೋಧಿಸಿದಂತೆಲ್ಲಾ, ಇಡೀ ಜಗತ್ತೇ ನಿಬ್ಬೆರಗಾಗುವಂತ ಸತ್ಯಗಳು ಬಿಚ್ಚಿಕೊಳ್ಳುತ್ತವೆ. ಅದರಂತೆ ಈಜಿಪ್ಟ್‌ನ ಪ್ರಾಚೀನ ನಗರ ತಪೋಸಿರಿಸ್ ಮ್ಯಾಗ್ನಾದಲ್ಲಿನ ದೇವಾಲಯದ ಕೆಳಗೆ ಐತಿಹಾಸಿಕ ಸುರಂಗವೊಂದು ಪತ್ತೆಯಾಗಿದ್ದು, ಪುರಾತತ್ವಶಾಸ್ತ್ರಜ್ಞರು ಇದನ್ನು "ಜ್ಯಾಮಿತೀಯ ಪವಾಡ" ಎಂದು ಕರೆದಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಈಜಿಪ್ಟ್ ಪ್ರವಾಸೋದ್ಯಮ ಮತ್ತು ಪುರಾತನ ಸಚಿವಾಲಯ, ಪ್ರಾಚೀನ ಈಜಿಪ್ಟ್‌ ರಾಣಿ ಕ್ಲಿಯೋಪಾತ್ರ ಸಮಾಧಿಯ ಹುಡುಕಾಟದ ಪ್ರಕ್ರಿಯೆಯಲ್ಲಿ ಈ ಸುರಂಗ ಪತ್ತೆಯಾಗಿದೆ ಎಂದು ಸ್ಪಷ್ಟಪಡಿಸಿದೆ.

ಭೂ ಮೇಲ್ಮೈಯಿಂದ 13 ಮೀಟರ್ (43 ಅಡಿ) ಕೆಳಗೆ ಈ ಸುರಂಗ ಪತ್ತೆಯಾಗಿದ್ದು, 2 ಮೀಟರ್ ಎತ್ತರದ ಸುರಂಗವನ್ನು ರಚಿಸಲು 1,305 ಮೀಟರ್ (4,281 ಅಡಿ) ಮರಳುಗಲ್ಲುಗಳನ್ನು ಬಳಸಿರುವುದು ಕಂಡುಬಂದಿದೆ ಎಂದು ಪುರಾತತ್ವಶಾಸ್ತ್ರಜ್ಞರು ಮಾಹಿತಿ ನೀಡಿದ್ದಾರೆ.

ಡೊಮಿನಿಕನ್ ರಿಪಬ್ಲಿಕ್‌ನ ಸ್ಯಾಂಟೋ ಡೊಮಿಂಗೊ ​​ವಿಶ್ವವಿದ್ಯಾಲಯದ ಕ್ಯಾಥ್ಲೀನ್ ಮಾರ್ಟಿನೆಜ್ ಮತ್ತವರ ಸಂಶೋಧನಾ ತಂಡ ಈ ಸುರಂಗವನ್ನು ಪತ್ತೆ ಮಾಡಿದೆ. ಕ್ಲಿಯೋಪಾತ್ರ ಸಮಾಧಿ ಇರಬಹುದು ಎಂದು ನಂಬಲಾದ ದೇವಾಲಯದ ಉತ್ಖನನ ಮತ್ತು ಅನ್ವೇಷಣೆಯ ಸಮಯದಲ್ಲಿ, ಈ ಸುರಂಗ ಪತ್ತೆಯಾಗಿದೆ ಎಂದು ಸಂಶೋಧಶನಾ ತಂಡ ತಿಳಿಸಿದೆ.

"ಪ್ರಾಥಮಿಕ ಅಧ್ಯಯನಗಳ ಪ್ರಕಾರ ಪತ್ತೆಯಾದ ಸುರಂಗದ ವಾಸ್ತುಶಿಲ್ಪದ ವಿನ್ಯಾಸವು, ಗ್ರೀಸ್‌ನ ಜುಬಿಲಿನೋಸ್ ಸುರಂಗದ ವಿನ್ಯಾಸವನ್ನು ಹೋಲುತ್ತದೆ. ಸುರಂಗದ ಒಂದು ಭಾಗವು ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿದ್ದು, ಪತ್ತೆಯಾದ ಸುರಂಗದಲ್ಲಿ ಹಲವಾರು ಮಣ್ಣಿನ ಪಾತ್ರೆಗಳು ಮತ್ತು ಆಯತಾಕಾರದ ಸುಣ್ಣದ ಕಲ್ಲುಗಳು ಪತ್ತೆಯಾಗಿವೆ ಎಂದು ಪುರಾತತ್ವ ಶಾಸ್ತ್ರದ ಸುಪ್ರೀಂ ಕೌನ್ಸಿಲ್‌ನ ಪ್ರಧಾನ ಕಾರ್ಯದರ್ಶಿ ಡಾ. ಮುಸ್ತಫಾ ವಜಿರಿ ಮಾಹಿತಿ ನೀಡಿದ್ದಾರೆ.

ತಪೋಸಿರಿಸ್ ಮ್ಯಾಗ್ನಾ ದೇವಾಲಯದ ವಿನ್ಯಾಸ ಸಂಕೀರ್ಣವಾಗಿದ್ದು, ಈ ದೇವಾಲಯದ ಬಹುತೇಕ ಬಾಗ ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿದೆ. ಅಲ್ಲದೇ ಅನೇಕ ಭೂಕಂಪಗಳನ್ನು ಎದುರಿಸಿದೆ. ಆದಾಗ್ಯೂ ಸದ್ಯ ಪತ್ತೆಯಾಗಿರುವ ಸುರಂಗ ಸುಸ್ಥಿತಿಯಲ್ಲಿರುವುದು ಆಶ್ಚರ್ಯ ತಂದಿದೆ ಎಂದು ಡಾ. ಮುಸ್ತಫಾ ವಜಿರಿ ಹೇಳಿದ್ದಾರೆ. ಇದೇ ಕಾರಣಕ್ಕೆ ಇದನ್ನು "ಜ್ಯಾಮಿತೀಯ ಪವಾಡ" ಎಂದು ಕರೆಯಲಾಗಿದೆ ಎಂದೂ ವಜಿರಿ ತಿಳಿಸಿದ್ದಾರೆ.

2004ರಿಂದ ಟಪೋಸಿರಿಸ್ ಮ್ಯಾಗ್ನಾದಲ್ಲಿ ರಾಣಿ ಕ್ಲಿಯೋಪಾತ್ರ VIIಳ ಕಳೆದುಹೋದ ಸಮಾಧಿಯ ಹುಡುಕಾಟ ನಡೆಯುತ್ತಿದೆ. ಕ್ಯಾಥ್ಲೀನ್ ಮಾರ್ಟಿನೆಜ್‌ ಈ ಸಂಶೋಧನಾ ತಂಡದ ನೇತೃತ್ವವಹಿಸಿದ್ದು, ಅವರ ಮುಂದಾಳತ್ವದಲ್ಲೇ ಈ ಸುರಂಗವನ್ನು ಕಂಡುಹಿಡಿಯಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ಈಜಿಪ್ಟ್ ರಾಣಿ ಕ್ಲಿಯೋಪಾತ್ರ ಮತ್ತು ಅವಳ ಪ್ರೇಮಿ ಮಾರ್ಕ್ ಆಂಟೋನಿ ಅವರ ಸಮಾಧಿಯನ್ನು ಪತ್ತೆಹಚ್ಚಲು, ಈ ಸುರಂಗ ಮಾರ್ಗ ನಮಗೆ ಮಾರ್ಗದರ್ಶನ ಮಾಡಬಹುದು ಎಂದು ಕ್ಯಾಥ್ಲೀನ್‌ ಮಾರ್ಟಿನೆಜ್‌ ಭರವಸೆ ವ್ಯಕ್ತಪಡಿಸಿದ್ದಾರೆ. ಸುರಂಗದ ವಿನ್ಯಾಸ ಮತ್ತು ಅದರಲ್ಲಿ ದೊರೆತ ವಸ್ತುಗಳನ್ನು ಗಮನಿಸಿದರೆ, ಇದು ಈ ಪ್ರೇಮಿಗಳಿಗಾಗಿಯೇ ನಿರ್ಮಿಸಿದ ಮಾರ್ಗ ಇರಬಹುದು ಎಂದು ಕ್ಯಾಥ್ಲೀನ್‌ ಮಾರ್ಟಿನೆಜ್‌ ಅಂದಾಜಿಸಿದ್ಧಾರೆ.

ಈ ಸುರಂಗವನ್ನು ಶತಮಾನದ ಅತ್ಯಂತ ಪ್ರಮುಖ ಆವಿಷ್ಕಾರ ಎಂದು ಕರೆದಿರುವ ಪುರಾತತ್ವಶಾಸ್ತ್ರಜ್ಞರು, ಈ ಸಂಶೋಧನಾ ತಂಡ ಮುಂದೊಂದು ದಿನ ಕ್ಲಿಯೋಪಾತ್ರ ಸಮಾಧಿಯನ್ನು ಪತ್ತೆ ಹಚ್ಚಲಿ ಎಂದು ಹಾರೈಸಿದ್ದಾರೆ. ಕ್ಲಿಯೋಪಾತ್ರ ಮತ್ತು ಮಾರ್ಕ್‌ ಅಂಟೋನಿಯ ಪ್ರೇಮಕಥೆ ಶತ ಶತಮಾನಗಳಿಂದ ಜಗತ್ತನ್ನು ಆಕರ್ಷಿಸುತ್ತಿರುವ ರೋಚಕ ಇತಿಹಾಸವಾಗಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.