Maruti Invicto: ನಾಳೆ ಮಾರುತಿ ಸುಜುಕಿಯ ಇನ್ವಿಕ್ಟೊ ಎಂಪಿವಿ ಲಾಂಚ್, ಮಾರುತಿ ಕಾರು ಪ್ರಿಯರಲ್ಲಿ ಹೆಚ್ಚಾದ ಕುತೂಹಲ
Maruti Suzuki Invicto launch: ಟೊಯೊಟಾ ಇನ್ನೋವಾ ಹೈಕ್ರಾಸ್ ಆಧರಿತ ಮಾರುತಿ ಸುಜುಕಿ ಇನ್ವಿಕ್ಟೊ ಕಾರು ನಾಳೆ ಲಾಂಚ್ ಆಗಲಿದೆ. ಈ ಕಾರು ಮಾರುತಿ ಕಾರುಗಳಲ್ಲಿಯೇ ದುಬಾರಿ ಎನ್ನಲಾಗುತ್ತಿದೆ.
ಮಾರುತಿ ಸುಜುಕಿ ಕಂಪನಿಯು ಇನ್ವಿಕ್ಟೊ ಎಂಬ ಹೊಸ ಮಾಡೆಲ್ ಕಾರನ್ನು ಜೂನ್ 5ರಂದು ಲಾಮಚ್ ಮಾಡಲಿದೆ. ಈಗಾಗಲೇ ಕಂಪನಿಯು ಈ ಪ್ರೀಮಿಯಂ ಎಂಪಿವಿಯ ಟೀಸರ್ ಅನ್ನು ತನ್ನ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಬಿಡುಗಡೆ ಮಾಡಿದೆ. ಮುಂಬರುವ ಕಾರು ಹೇಗಿರಲಿದೆ ಎಂದು ಮಾರುತಿ ಕಾರು ಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ. ಇದು ಮಾರುತಿ ಕಾರುಗಳಲ್ಲಿಯೇ ದುಬಾರಿ ಕಾರು ಎನ್ನಲಾಗುತ್ತಿದೆ. ಈ ಕಾರನ್ನು ನೆಕ್ಸಾ ರಿಟೇಲ್ ನೆಟ್‌ವರ್ಕ್‌ನಲ್ಲಿ ಮಾರಾಟ ಮಾಡಲು ಕಂಪನಿ ಉದ್ದೇಶಿಸಿದೆ.
ನಾಳೆ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಇನ್ವಿಕ್ಟೊ ಸಂಪೂರ್ಣ ಹೊಸ ವಿನ್ಯಾಸದ ಕಾರಲ್ಲ. ಇದು ಟೊಯೊಟಾ ಇನ್ನೋವಾ ಹೈಕ್ರಾಸ್ ಕಾರಿನ ಹೊಸ ರೂಪವಾಗಿರಲಿದೆ. ಟೊಯೊಟಾ ಮತ್ತು ಸುಜುಕಿ ಜಾಗತಿಕ ಪಾಲುದಾರಿಕೆ ಮಾಡಿಕೊಂಡಿದ್ದು, ಇವೆರಡರ ಮೈತ್ರಿಯಲ್ಲಿ ಇನ್ವಿಕ್ಟೊ ಆಗಮಿಸುತ್ತಿದೆ. ಈಗಾಗಲೇ ಈ ಮೈತ್ರಿ ಮೂಲಕ ಟೊಯೊಟಾ ಕಂಪನಿಯು ಗ್ಲಾಂಜಾ ಮತ್ತು ಅರ್ಬನ್ ಕ್ರೂಸರ್ ಹೈರೈಡರ್ ಬಿಡುಗಡೆ ಮಾಡಿದೆ.
ಮಾರುತಿ ಕಂಪನಿಯು ಇನ್ವಿಕ್ಟೊ ಕಾರಿನ ಬುಕ್ಕಿಂಗ್ ಅನ್ನು ಈಗಾಗಲೇ ಆರಂಭಿಸಿದೆ ಆಸಕ್ತರು 25 ಸಾವಿರ ರೂಪಾಯಿ ಮುಂಗಡ ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ನೂತನ ಕಾರಿನ ಎಕ್ಸ್‌ಶೋರೂಂ ದರ ಸುಮಾರು 20-25 ಲಕ್ಷ ರೂಪಾಯಿ ಇರಬಹುದು.
Watch: ಟೊಯೊಟಾ ಇನ್ನೋವಾ ಹೈಕ್ರಾಸ್ ಫಸ್ಟ್ ಡ್ರೈವ್ ಅನುಭವ ಕಥನ
ಇನ್ವಿಕ್ಟೊ ಕಾರು ಪೆಟ್ರೋಲ್ ಮತ್ತು ಪೆಟ್ರೋಲ್ ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆಗಳಲ್ಲಿ ದೊರಕುವ ನಿರೀಕ್ಷೆಯಿದೆ. 2.0 ಲೀಟರ್‌ನ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಇರುವ ನಿರೀಕ್ಷೆಯಿದೆ. ಇದರಲ್ಲಿ ಎಂಟು ಹಂತದ ಆಟೋಮ್ಯಾಟಿಕ್ ಗಿಯರ್‌ಬಾಕ್ಸ್ ಇರುವ ಸಾಧ್ಯತೆಯಿದೆ. ಇದು 6600 ಆವರ್ತನಕ್ಕೆ 183.72 ಬಿಎಚ್‌ಪಿ ಪವರ್ ಮತ್ತು 4,398 ಆರ್‌ಪಿಎಂನಿಂದ 5,196 ಆರ್‌ಪಿಎಂವರೆಗೆ 183.72 ಬಿಎಚ್‌ಪಿ ಪೀಕ್ ಟಾರ್ಕ್ ಪವರ್ ನೀಡುವ ನಿರೀಕ್ಷೆಯಿದೆ. ಪೆಟ್ರೋಲ್ ಮಾತ್ರ ಆವೃತ್ತಿಯು ಲೀಟರ್‌ಗೆ 16.13 ಕಿ.ಮೀ. ಇಂಧನ ದಕ್ಷತೆ ಮತ್ತು ಹೈಬ್ರಿಡ್ ಆವೃತ್ತಿಯು ಲೀಟರ್‌ಗೆ 23.24 ಕಿ.ಮೀ. ಮೈಲೇಜ್ ನೀಡುವ ನಿರೀಕ್ಷೆಯಿದೆ. ಒಟ್ಟಾರೆ ನೂತನ ಮಾರುತಿ ಇನ್ವಿಕ್ಟೊ ಹೇಗಿರಲಿದೆ ಎಂಬ ಪ್ರಶ್ನೆಗೆ ಉತ್ತರ ನಾಳೆ ದೊರಕಲಿದೆ.
ಇದು ಹೈಕ್ರಾಸ್ ಪ್ಲಾಟ್‌ಫಾರ್ಮ್‌ನಲ್ಲಿ ಆಗಮಿಸಿದ್ದರೂ ಮಾರುತಿ ಕಂಪನಿಯ ಕಾರಿನಂತೆ ಗೋಚರಿಸಲು ಸಾಕಷ್ಟು ಹೊಸ ವಿನ್ಯಾಸ, ಮಾರ್ಪಾಡುಗಳು ಇರಬಹುದು. ಹೊಸ ಮುಂಭಾಗದ ಗ್ರಿಲ್, ಹೊಸ ಹೆಡ್‌ಲ್ಯಾಂಪ್, ಟೇಲ್‌ಲ್ಯಾಂಪ್‌ಗಳು, ಹಿಂಬದಿ ಮತ್ತು ಮುಂಬದಿಗೆ ಹೊಸ ಬಂಪರ್‌ಗಳು ಇರಬಹುದು. ಕಾರಿನ ಕ್ಯಾಬಿನ್‌ನೊಳಗೆ ಇಣುಕಿದರೂ ಹಲವು ಪ್ರೀಮಿಯಂ ಫೀಚರ್‌ಗಳು ಇರುವ ನಿರೀಕ್ಷೆಯಿದೆ. ಪನರೋಮಿಕ್ ಸನ್‌ರೂಫ್, ದೊಡ್ಡ ಗಾತ್ರದ ಟಚ್ ಸ್ಕ್ರೀನ್ ಇನ್‌ಫೋಟೈನ್‌ಮೆಂಟ್ ಸಿಸ್ಟಮ್, 360 ಡಿಗ್ರಿ ಕ್ಯಾಮೆರಾ, ಎಡಿಎಎಸ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಇತ್ಯಾದಿಗಳು ಇರುವ ನಿರೀಕ್ಷೆಯಿದೆ.