Maruti Invicto: ಇನ್ನೋವಾ ಹೈಕ್ರಾಸ್ ತದ್ರೂಪಿ ಮಾರುತಿ ಸುಜುಕಿ ಇನ್ವಿಕ್ಟೊ ಕಾರಿನ ಬುಕ್ಕಿಂಗ್ ಜೂನ್ 19ರಿಂದ ಆರಂಭ
ಮಾರುತಿ ಸುಜುಕಿ ಕಂಪನಿಯು ತನ್ನ ನೂತನ ಇನ್ವಿಕ್ಟೊ (Maruti Suzuki Invicto) ಕಾರಿನ ಬುಕ್ಕಿಂಗ್ ಅನ್ನು ಇದೇ ಜೂನ್ 19ರಿಂದ ಆರಂಭಿಸಲಿದೆ. ಟೊಯೊಟಾ ಹೈಕ್ರಾಸ್ ಕಾರಿನ ಹೊಸರೂಪವಾದ ಈ ಇನ್ವಿಕ್ಟೊ ಕಾರಿನ ಬುಕ್ಕಿಂಗ್ ನೆಪದಲ್ಲಿ ಹೆಚ್ಚಿನ ವಿವರ ಪಡೆಯೋಣ ಬನ್ನಿ.
ಬೆಂಗಳೂರು: ಮಾರುತಿ ಸುಜುಕಿ ಕಂಪನಿಯು ತನ್ನ ಕಾರುಗಳಲ್ಲಿಯೇ ಅತ್ಯಂತ ದುಬಾರಿಯಾದ ಕಾರೊಂದನ್ನು ಭಾರತದ ರಸ್ತೆಗೆ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಈ ಕಾರಿಗೆ ಇನ್ವಿಕ್ಟೊ ಎಂದು ಹೆಸರಿಡಲಾಗಿದೆ. ಇದು ಟೊಯೊಟಾ ಇನ್ನೋವಾ ಹೈಕ್ರಾಸ್ ಕಾರಿನ ತದ್ರೂಪಿ ಅವತಾರವಾಗಿದೆ. ಮಾರುತಿ ಸುಜುಕಿಯ ಈ ಪ್ರೀಮಿಯಂ ಕಾರು ಜುಲೈ 5ರಂದು ರಸ್ತೆಗಿಳಿಯಲಿದೆ. ಬಿಡುಗಡೆ ಪೂರ್ವ ಬುಕ್ಕಿಂಗ್ ಇದೇ ಜುಲೈ 19ರಿಂದ ಆರಂಭವಾಗಲಿದೆ.
ಮಾರುತಿ ಸುಜುಕಿ ಇನ್ವಿಕ್ಟೊ ಕಾರು ನೋಡಲು ಟೊಯೊಟಾ ಇನ್ನೋವಾ ಹೈಕ್ರಾಸ್‌ನಂತೆಯೇ ಇರಲಿದೆ. ಇದಕ್ಕಾಗಿ ಮಾರುತಿ ಸುಜುಕಿ ಮತ್ತು ಇನ್ನೊವಾ ಪಾಲುದಾರಿಕೆ ಮಾಡಿದೆ. ಮೊದಲ ನೋಟಕ್ಕೆ ಇದು ಇನ್ನೋವಾ ಹೈಕ್ರಾಸ್‌ನಂತೆ ಕಾಣದೆ ಇರುವಂತೆ ಕೆಲವೊಂದು ವಿನ್ಯಾಸದ ಮಾರ್ಪಾಡುಗಳನ್ನು ನಿರೀಕ್ಷಿಸಬಹುದು.
ಇಲ್ಲಿಯವರೆಗೆ ನೂತನ ಕಾರಿನಲ್ಲಿ ಏನಿರಲಿದೆ, ಹೇಗಿರಲಿದೆ ಎಂಬ ಮಾಹಿತಿ ದೊರಕಿಲ್ಲ. ಆಟೋ ವರದಿಗಳ ಪ್ರಕಾರ ಇದರ ಮುಂಭಾಗ ಮತ್ತು ಹಿಂಭಾಗಕ್ಕೆ ಹೊಸ ಬಂಪರ್ ಇರಲಿದೆ. ಇದರೊಂದಿಗೆ ಗ್ರಿಲ್ ಕೂಡ ಕೊಂಚ ಬೇರೆ ರೀತಿ ಇರಲಿದೆ. ಹೆಡ್‌ಲ್ಯಾಂಪ್ ಮತ್ತು ಟೇಲ್ ಲ್ಯಾಂಪ್ ವಿನ್ಯಾಸವೂ ಬೇರೆ ಇರಲಿದೆ. ಇದರೊಂದಿಗೆ ಕಾರಿನೊಳಗಿನ ಅಪ್‌ಹೋಲೆಸ್ಟ್ರೆಯಲ್ಲಿಯೂ ಬದಲಾವಣೆ ನಿರೀಕ್ಷಿಸಬಹುದು.
ನೂತನ ಮಾರುತಿ ಸುಜುಕಿ ಇನ್ವಿಕ್ಟೊ ಕಾರು ಪೆಟ್ರೋಲ್ ಮತ್ತು ಪೆಟ್ರೋಲ್ ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆಗಳಲ್ಲಿ ದೊರಕುವ ನಿರೀಕ್ಷೆಯಿದೆ. 2.0 ಲೀಟರ್‌ನ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಇರುವ ನಿರೀಕ್ಷೆಯಿದೆ. ಇದರಲ್ಲಿ ಎಂಟು ಹಂತದ ಆಟೋಮ್ಯಾಟಿಕ್ ಗಿಯರ್‌ಬಾಕ್ಸ್ ಇರುವ ಸಾಧ್ಯತೆಯಿದೆ. ಇದು 6600 ಆವರ್ತನಕ್ಕೆ 183.72 ಬಿಎಚ್‌ಪಿ ಪವರ್ ಮತ್ತು 4,398 ಆರ್‌ಪಿಎಂನಿಂದ 5,196 ಆರ್‌ಪಿಎಂವರೆಗೆ 183.72 ಬಿಎಚ್‌ಪಿ ಪೀಕ್ ಟಾರ್ಕ್ ಪವರ್ ನೀಡುವ ನಿರೀಕ್ಷೆಯಿದೆ ಎಂದು ಎಚ್‌ಟಿ ಆಟೋ ವರದಿ ಮಾಡಿದೆ. ಪೆಟ್ರೋಲ್ ಮಾತ್ರ ಆವೃತ್ತಿಯು ಲೀಟರ್‌ಗೆ 16.13 ಕಿ.ಮೀ. ಇಂಧನ ದಕ್ಷತೆ ಮತ್ತು ಹೈಬ್ರಿಡ್ ಆವೃತ್ತಿಯು ಲೀಟರ್‌ಗೆ 23.24 ಕಿ.ಮೀ. ಮೈಲೇಜ್ ನೀಡುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ.
ನೂತನ ಕಾರು ಏಳು ಮತ್ತು ಎಂಟು ಸೀಟು ಆಯ್ಕೆಗಳಲ್ಲಿ ದೊರಕಲಿದೆ. ಆದರೆ, ಈ ಆವೃತ್ತಿಗಳು ಹೈಕ್ರಾಸ್‌ನಂತೆಯೇ ಇರಲಿದೆಯೇ, ಅಥವಾ ಬೇರೆ ರೀತಿ ಇರಲಿದೆಯೇ ಎಂದು ಕಾದು ನೋಡಬೇಕಿದೆ.
ಎಂಪಿವಿಯು ಮಾರುತಿ ಸುಜುಕಿಯು ಸುಜುಕಿ ಟೊಯೊಟಾ ಜಾಗತಿಕ ಪಾಲುದಾರಿಕೆಯಲ್ಲಿ ಹೊರತರುತ್ತಿರುವ ಮೊದಲ ಪ್ರಾಡಕ್ಟ್ ಆಗಿದೆ. ಈಗಾಗಲೇ ಈ ಪಾಲುದಾರಿಕೆಯಲ್ಲಿ ಎರಡು ಉತ್ಪನ್ನಗಳು ಬಿಡುಗಡೆಯಾಗಿವೆ. ಇವು ಟೊಯೊಟಾ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುತ್ತಿವೆ. ಅಂದರೆ, ಸುಜುಕಿ ಬಲೆನೊ ಆಧರಿತ ಟೊಯೊಟಾ ಗ್ಲಾಂಜಾ ಮತ್ತು ಮಾರುತಿ ಸುಜುಕಿ ಗ್ರಾಂಡ್ ವಿಟಾರ ಆಧರಿತ ಟೊಯೊಟಾ ಅರ್ಬನ್ ಕ್ರೂಷರ್ ಹೈರೈಡರ್. ಇದೀಗ ಮಾರುತಿ ಸುಜುಕಿ ಬ್ರಾಂಡ್‌ನಲ್ಲಿ ನೂತನ ಪಾಲುದಾರಿಕೆಯ ಕಾರು ಬಿಡುಗಡೆಯಾಗಲಿದೆ. ಆಸಕ್ತರು ಜೂನ್ 19ರ ಬಳಿಕ ಬುಕ್ಕಿಂಗ್ ಮಾಡಬಹುದು.