Two Wheelers Sales: ಹಬ್ಬದ ಋತುವಿನಲ್ಲಿ ಬೈಕ್, ಸ್ಕೂಟರ್ ಮಾರಾಟ ಹೆಚ್ಚಳ ನಿರೀಕ್ಷೆ, ಹೊಸ ವಾಹನ ಖರೀದಿಸಲು ಶುಭಕಾಲ
Two Wheelers Sales: ದೇಶವು ಹಬ್ಬದ ಋತುವಿನತ್ತ ಮುಖ ಮಾಡುತ್ತಿದೆ. ಈ ಸಮಯದಲ್ಲಿ ದೇಶದಲ್ಲಿ ವಾಹನ ಮಾರಾಟ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಳವಾಗುವ ಸೂಚನೆಯಿದೆ. ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಟಿವಿಎಸ್ ಮೋಟಾರ್ ಕೂಡ ಮುಂಬರುವ ದಿನಗಳಲ್ಲಿ ಬೈಕ್ ಮತ್ತು ಸ್ಕೂಟರ್ ಮಾರಾಟ ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.
ಬೆಂಗಳೂರು: ಹಬ್ಬದ ಋತುವಿನತ್ತ ದೇಶ ಮುಖ ಮಾಡುತ್ತಿದೆ. ಇದು ವಾಹನ ಕಂಪನಿಗಳಿಗೂ ಖುಷಿ ನೀಡುವ ಸಮಯ. ಭಾರತದಲ್ಲಿನ ದ್ವಿಚಕ್ರ ವಾಹನ ಉದ್ಯಮವು ಮುಂದಿನ ಕೆಲವು ತಿಂಗಳುಗಳಲ್ಲಿ ಹೆಚ್ಚು ವಾಹನ ಮಾರಾಟ ಮಾಡುವ ಕನಸಿನಲ್ಲಿದೆ. ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕರಲ್ಲಿ ಒಂದಾದ ಟಿವಿಎಸ್ ಮೋಟಾರ್ ಕೂಡ ಈ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದು, ವಿಶೇಷವಾಗಿ ಗ್ರಾಮೀಣ ಭಾಗದಿಂದ ಹೆಚ್ಚಿನ ಬೇಡಿಕೆ ಇರುವ ಸೂಚನೆ ನೀಡಿದೆ. ಕಂಪನಿಯು ಇತ್ತೀಚೆಗೆ ಟಿವಿಎಸ್ ಜುಪಿಟರ್ 110 ಸ್ಕೂಟರ್ ಬಿಡುಗಡೆ ಮಾಡಿತ್ತು.
ಕೋವಿಡ್ ಸಾಂಕ್ರಾಮಿಕದ ಬಳಿಕ ಇದೇ ಮೊದಲ ಬಾರಿಗೆ ಕಳೆದ ಏಪ್ರಿಲ್ ಜುಲೈ ನಡುವೆ ದೇಶದಲ್ಲಿ ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನ ಮಾರಾಟ ಹೆಚ್ಚಳವಾಗಿದೆ. 2023ಕ್ಕೆ ಹೋಲಿಸಿದರೆ ದ್ವಿಚಕ್ರ ವಾಹನ ಮಾರಾಟವು ಶೇಕಡ 13.5ರಷ್ಟು ಹೆಚ್ಚಾಗಿದೆ. ಗ್ರಾಮೀಣ ಭಾಗಗಳಲ್ಲಿ ಸ್ಕೂಟರ್ ಮತ್ತು ಬೈಕ್‌ಗಳಿಗೆ ಬೇಡಿಕೆಯು ಶೇಕಡ 14.5 ರಷ್ಟು ಹೆಚ್ಚಾಗಿದೆ. ಒಟ್ಟಾರೆ ದ್ವಿಚಕ್ರ ವಾಹನ ಮಾರಾಟದಲ್ಲಿ ಸ್ಕೂಟರ್ ಮಾರಾಟದ ಪಾಲು ಶೇಕಡ 32ರಷ್ಟಿದೆ. ಇದೇ ಸಮಯದಲ್ಲಿ ಟಿವಿಎಸ್ ಕಂಪನಿಯ ಸ್ಕೂಟರ್‌ಗಳು ಉತ್ತಮ ಬೇಡಿಕೆ ಪಡೆದುಕೊಂಡಿವೆ.
"ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಹೆಚ್ಚಾಗಿರುವುದು ವಾಹನೋದ್ಯಮಕ್ಕೆ ಶುಭ ಸುದ್ದಿಯಾಗಿದೆ. ಈ ಆರ್ಥಿಕ ವರ್ಷದ ಮೊದಲ ಕೆಲವು ತಿಂಗಳುಗಳ ಕಾಲ ದೇಶದ ದ್ವಿಚಕ್ರ ವಾಹನ ಮಾರಾಟವು ಶೇಕಡ 13ರಷ್ಟು ಏರಿಕೆ ಕಂಡಿದೆ. ಇದು ಕೊರೊನಾ ಬಳಿಕ ಗಮನಾರ್ಹ ಪ್ರಗತಿಯಾಗಿದೆ" ಎಂದು ಸುದ್ದಿಸಂಸ್ಥೆ ಪಿಟಿಐಗೆ ಟಿವಿಎಸ್ ಮೋಟಾರ್‌ನ ಹಿರಿಯ ಉಪಾಧ್ಯಕ್ಷ ಅನಿರುದ್ಧ ಹಾಲ್ದರ್ ಹೇಳಿದ್ದಾರೆ.
ಹಬ್ಬದ ಅವಧಿಯಲ್ಲಿ ಇನ್ನಷ್ಟು ಪ್ರಗತಿ ನಿರೀಕ್ಷೆ
ದೇಶದ ದ್ವಿಚಕ್ರ ವಾಹನ ಮಾರಾಟವು ಮುಂದಿನ ಕೆಲವು ತಿಂಗಳ ಕಾಲ ಗಮನಾರ್ಹ ಪ್ರಗತಿ ಕಾಣಲಿದೆ ಎಂದು ಅವರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಉತ್ತಮ ಮಳೆಬೆಳೆಯಾಗುತ್ತಿರುವುದು ಕೂಡ ದ್ವಿಚಕ್ರ ವಾಹನ ಮಾರಾಟ ಹೆಚ್ಚಳಕ್ಕೆ ನೆರವಾಗಬಹುದು. ಇದೇ ಸಮಯದಲ್ಲಿ ಹಬ್ಬದ ಋತುವಿನಲ್ಲಿ ಖರೀದಿ ಹೆಚ್ಚಾಗಬಹುದು ಎಂದು ಅವರು ಹೇಳಿದ್ದಾರೆ. "ಈ ವರ್ಷ ಉತ್ತಮವಾಗಿ ಮಳೆಯಾಗಿದೆ. ಕೆಲವೊಂದು ಪ್ರದೇಶಗಳಿಗೆ ಮಳೆಯಿಂದ ಸಾಕಷ್ಟು ಒಳ್ಳೆಯದಾಗಿದೆ. ಇಂತಹ ಹಲವು ಕಾರಣಗಳಿಂದ ಹಬ್ಬದ ಋತುವಿನಲ್ಲಿ ದ್ವಿಚಕ್ರ ವಾಹನ ಮಾರಾಟ ಉತ್ತಮವಾಗಿರಲಿದೆ" ಎಂದು ಅವರು ಹೇಳಿದ್ದಾರೆ.
ಟಿವಿಎಸ್ ಮೋಟಾರ್ ಕಂಪನಿಯು ಇತ್ತೀಚೆಗೆ ಜುಪಿಟರ್ 110 ಸಿಸಿ ಸ್ಕೂಟರ್ ಪರಿಚಯಿಸಿತ್ತು. ಇದರ ಎಕ್ಸ್ ಶೋರೂಂ ದರ 73,700 ರೂಪಾಯಿ. ಜುಪಿಟರ್ ದೇಶದಲ್ಲಿ ಅತ್ಯಧಿಕ ಮಾರಾಟವಾಗುವ ಸ್ಕೂಟರ್‌ಗಳಲ್ಲಿ ಒಂದಾಗಿದೆ. 2013ರಲ್ಲಿ ಬಿಡುಗಡೆಗೊಂಡ ಜುಪೀಟರ್‌ಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಬೇಡಿಕೆಯಿದೆ.
ಹಬ್ಬದ ಋತುವಿಗೆ ತಕ್ಕಂತೆ 2024ರ ಟಿವಿಎಸ್ ಜುಪಿಟರ್ ಸಾಕಷ್ಟು ಅಪ್‌ಗ್ರೇಡ್ ಆಗಿದೆ. ಹೋಂಡಾ ಆಕ್ಟಿವಾದಂತಹ ಪ್ರತಿಸ್ಪರ್ಧಿ ಸ್ಕೂಟರ್‌ಗಳ ಜತೆ ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಸ್ಪರ್ಧೆ ನಡೆಸುತ್ತಿದೆ. ಜುಪಿಟರ್ ಸ್ಕೂಟರ್‌ನ 110 ಸಿಸಿಯ ಆವೃತ್ತಿಯು 113.3 ಸಿಸಿ ಏರ್ ಕೂಲ್ಡ್, ಫ್ಯೂಯೆಲ್ ಇಂಜೆಕ್ಷನ್ ಎಂಜಿನ್ ಹೊಂದಿದೆ. ಇದರಲ್ಲಿ ಸಿವಿಟಿ ಆಟೋಮ್ಯಾಟಿಕ್ ಗಿಯರ್ ಬಾಕ್ಸ್ ಇದೆ. ಇದು 7.91 ಬಿಎಚ್‌ಪಿ ಪವರ್ ಮತ್ತು 9.2 ಎನ್‌ಎಂ ಟಾರ್ಕ್ ಒದಗಿಸುತ್ತದೆ.