ಕೆಲಸದ ಒತ್ತಡದಿಂದ 45 ದಿನಗಳು ನಿದ್ದೆ ಇಲ್ಲದೆ ನರಕಯಾತನೆ; 5 ಪುಟಗಳ ಡೆತ್​ನೋಟ್ ಬರೆದು ಬಜಾಜ್ ಫೈನಾನ್ಸ್ ಉದ್ಯೋಗಿ ಸೂಸೈಡ್
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕೆಲಸದ ಒತ್ತಡದಿಂದ 45 ದಿನಗಳು ನಿದ್ದೆ ಇಲ್ಲದೆ ನರಕಯಾತನೆ; 5 ಪುಟಗಳ ಡೆತ್​ನೋಟ್ ಬರೆದು ಬಜಾಜ್ ಫೈನಾನ್ಸ್ ಉದ್ಯೋಗಿ ಸೂಸೈಡ್

ಕೆಲಸದ ಒತ್ತಡದಿಂದ 45 ದಿನಗಳು ನಿದ್ದೆ ಇಲ್ಲದೆ ನರಕಯಾತನೆ; 5 ಪುಟಗಳ ಡೆತ್​ನೋಟ್ ಬರೆದು ಬಜಾಜ್ ಫೈನಾನ್ಸ್ ಉದ್ಯೋಗಿ ಸೂಸೈಡ್

Uttar Pradesh Crime News: ಬಜಾಜ್ ಫೈನಾನ್ಸ್ ಉದ್ಯೋಗಿ ತರುಣ್ ಸಕ್ಸೇನಾ ಎಂಬವರು (42) ತೀವ್ರ ಕೆಲಸದ ಒತ್ತಡ ಮತ್ತು ಹಿರಿಯರ ಮಾನಸಿಕ ತೊಂದರೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.

ಬಜಾಜ್ ಫೈನಾನ್ಸ್ ಉದ್ಯೋಗಿ ಸೂಸೈಡ್
ಬಜಾಜ್ ಫೈನಾನ್ಸ್ ಉದ್ಯೋಗಿ ಸೂಸೈಡ್

ನವದೆಹಲಿ: ಬಜಾಜ್ ಫೈನಾನ್ಸ್​ನ 42 ವರ್ಷದ ಉದ್ಯೋಗಿಯೊಬ್ಬ ತನ್ನ ಹಿರಿಯರ ಅಸಹನೀಯ ಕೆಲಸದ ಒತ್ತಡ ಮತ್ತು ಮಾನಸಿಕ ಹಿಂಸೆಯಿಂದ ಬೇಸತ್ತು ಸೆಪ್ಟೆಂಬರ್​ 29ರ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೂಸೈಡ್ ಮಾಡಿಕೊಳ್ಳುವುದಕ್ಕೂ ಮುನ್ನ ಆತ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ರೂಮ್​ನಲ್ಲಿ ಲಾಕ್ ಮಾಡಿದ್ದ. ನೇಣಿಗೆ ಶರಣಾದ ತರುಣ್ ಸಕ್ಸೇನಾ ಎಂಬವರು ಡೆತ್​ನೋಟ್ ಕೂಡ ಬರೆದಿದ್ದಾರೆ. ಉತ್ತರ ಪ್ರದೇಶದ ಝಾನ್ಸಿಯಲ್ಲಿ ಈ ದುರಂತ ನಡೆದಿದೆ.

ಬಜಾಜ್ ಫೈನಾನ್ಸ್‌ನಲ್ಲಿ ಏರಿಯಾ ಮ್ಯಾನೇಜರ್ ಆಗಿದ್ದ ತರುಣ್, ಫೈನಾನ್ಸ್ ಸಾಲಗಳ ಇಎಂಐ ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು. ತಮ್ಮ ಅತ್ಯುತ್ತಮ ಕೆಲಸದ ಹೊರತಾಗಿಯೂ ಗುರಿ ತಲುಪಲು ಸಾಧ್ಯವಾಗದ ಕಾರಣ ತೀವ್ರ ಒತ್ತಡಕ್ಕೆ ಒಳಗಾಗಿರುವುದಾಗಿ ಹೇಳಿ ಡೆತ್​ನೋಟ್ ಬರೆದಿಟ್ಟು ಸೂಸೈಡ್ ಮಾಡಿಕೊಂಡಿದ್ದಾರೆ. ಬರೋಬ್ಬರಿ 45 ದಿನಗಳಿಂದ ನಿದ್ದೆ ಮಾಡಲಿಲ್ಲ. ಸರಿಯಾಗಿ ಊಟ ಮಾಡಿಲ್ಲ. ಕಂಪನಿಯವರ ಬೆದರಿಕೆಯಿಂದ ನಾನು ತೀವ್ರ ಒತ್ತಡಕ್ಕೆ ಒಳಗಾಗಿದ್ದೆ. ನನ್ನನ್ನು ಕ್ಷಮಿಸಿ ಎಂದು ತಮ್ಮ ಕುಟುಂಬಸ್ಥರಲ್ಲಿ ಕೇಳಿಕೊಂಡಿರುವುದು ಡೆತ್​ನೋಟ್​ನಲ್ಲಿದೆ.

ಡೆತ್​ನೋಟ್​​ನಲ್ಲಿ ಏನೇನಿದೆ?

ನಾನು ನನ್ನ ಭವಿಷ್ಯ ಬಗ್ಗೆ ತುಂಬಾ ಚಿಂತನೆಗೊಳಗಾಗಿದ್ದೇನೆ. ಆದರೆ, ನಾನು ಯೋಚಿಸುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದೇನೆ. ನಾನು ಹೋಗುತ್ತಿದ್ದೇನೆ ಎಂದು ಎನ್​ಡಿಟಿವಿ ಆತ್ಮಹತ್ಯೆ ಪತ್ರವನ್ನು ಉಲ್ಲೇಖಿಸಿ ವರದಿ ಮಾಡಿದೆ. ಅಪ್ಪ ಮತ್ತು ಅಮ್ಮ.. ನಾನು ಇದುವರೆಗೂ ನಿಮ್ಮನ್ನು ಏನನ್ನೂ ಕೇಳಿಲ್ಲ. ಆದರೆ ಈಗ ಕೇಳುತ್ತಿದ್ದೇನೆ. ದಯವಿಟ್ಟು 2ನೇ ಮಹಡಿಯನ್ನು ನಿರ್ಮಿಸಿಕೊಡಿ. ಇದರಿಂದ ನನ್ನ ಪತ್ನಿ ಮತ್ತು ನನ್ನ ಮಕ್ಕಳು ಅಲ್ಲಿ ಉಳಿದುಕೊಳ್ಳಲು ನೆರವಾಗುತ್ತದೆ ಎಂದು ಡೆತ್​ನೋಟ್ ಬರೆದಿದ್ದಾರೆ.

5 ಪುಟಗಳ ಡೆತ್​ನೋಟ್​ನಲ್ಲಿ ಅಧಿಕಾರಿಗಳು ನೀಡಿದ್ದ ಮಾನಸಿಕ ಹಿಂಸೆಯ ಬಗ್ಗೆಯೂ ತಿಳಿಸಿದ್ದಾರೆ. ಮೇಲಿನ ಅಧಿಕಾರಿಗಳು ಕಳೆದ 2 ತಿಂಗಳಿಂದ ಟಾರ್ಗೆಟ್​ ರೀಚ್​ ಆಗುವಂತೆ ಮೇಲಿಂದ ಮೇಲೆ ಒತ್ತಡ ಹಾಕುತ್ತಿದ್ದರು. ಗುರಿ ತಲುಪದಿದ್ದರೆ ಸಂಬಳ ಕಡಿತ ಮಾಡುವುದಾಗಿ ಬೆದರಿಸಿದ್ದರು. ನನ್ನ ಸಾವಿಗೆ ಕಂಪನಿಯ ಇಬ್ಬರು ಅಧಿಕಾರಿಗಳೇ ನೇರ ಕಾರಣ ಎಂದು ಡೆತ್​ನೋಟ್​ನಲ್ಲಿ ಉಲ್ಲೇಖಿಸುರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ (ನಗರ) ಜ್ಞಾನೇಂದ್ರ ಕುಮಾರ್ ಸಿಂಗ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ತರುಣ್ ಅವರ ಸೋದರಸಂಬಂಧಿ ಗೌರವ್ ಸಕ್ಸೇನಾ ಮಾತನಾಡಿ, ಕಂಪನಿಯ ಪ್ರಾದೇಶಿಕ ವ್ಯವಸ್ಥಾಪಕ ಮತ್ತು ರಾಷ್ಟ್ರೀಯ ವ್ಯವಸ್ಥಾಪಕರು ಸೇರಿದಂತೆ ಮೇಲಿನ ಅಧಿಕಾರಿಗಳು ತರುಣ್ ಸಾಯುವ ಒಂದು ದಿನ ಮೊದಲು ವರ್ಚುವಲ್ ಮೀಟಿಂಗ್​ನಲ್ಲಿ ಮಾನಸಿಕವಾಗಿ ಹಿಂಸಿಸಿದ್ದರು ಎಂದು ಆರೋಪಿಸಿದ್ದಾರೆ. ಪದೆಪದೇ ಅವಮಾನಿಸಿದ್ದರು. ಮನಬಂದಂತೆ ನಿಂದಿಸಿದ್ದರು. ಹೀಗಾಗಿ ಶನಿವಾರ ರಾತ್ರಿಯಿಂದ ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ದರು. ಆದರೆ ಮರುದಿನವೇ ಸೂಸೈಡ್ ಮಾಡಿಕೊಂಡಿದ್ದಾರೆ ಎಂದು ಗೌರವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನವಾಬಾದ್‌ನ ಗುಮ್ನವಾರ ಪಿಚೋರ್‌ನಲ್ಲಿ ವಾಸಿಸುತ್ತಿದ್ದ ತರುಣ್, ಕಳೆದ ಎರಡು ತಿಂಗಳಿಂದ ಮಾನಸಿಕ ಹಿಂಸೆ ನೀಡಿದ್ದಾರೆ. ಗುರಿ ತಲುಪಲು ಸಾಧ್ಯವಾಗದ್ದಕ್ಕೆ ಕಾರಣ ವಿವರಿಸಲು ಪ್ರಯತ್ನಿಸುತ್ತಿದ್ದೆ. ಆದರೆ ಅಧಿಕಾರಿಗಳು ಕಿವಿಗೊಡುತ್ತಿರಲಿಲ್ಲ. ಟಾರ್ಗೆಟ್ ರೀಚ್ ಆಗಲಿಲ್ಲ ಎಂದರೆ ನಿನ್ನ ವೇತನ ಕಟ್ ಮಾಡುವೆ ಎಂದಿದ್ದರು. 45 ದಿನಗಳಿಂದ ನಿದ್ದೆ ಮಾಡಿಲ್ಲ. ಸರಿಯಾಗಿ ಊಟ ಮಾಡಿಲ್ಲ. ಹೀಗಾಗಿ ಸಾವೇ ಉತ್ತಮ ಎಂದು ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಡೆತ್​ನೋಟ್​ನಲ್ಲಿ ಬರೆದಿದ್ದಾರೆ. ಈ ಆರೋಪಗಳಿಗೆ ಬಜಾಜ್ ಫೈನಾನ್ಸ್ ಇನ್ನೂ ಪ್ರತಿಕ್ರಿಯಿಸಿಲ್ಲ.

ಕೆಲಸದ ಒತ್ತಡ; ಇತ್ತೀಚೆಗೆ 3ನೇ ಸಾವು

ಕೆಲಸದ ಒತ್ತಡದಿಂದ ಇತ್ತೀಚೆಗೆ ತರುಣ್ ಸೇರಿ ಮೂವರು ಸಾವನ್ನಪ್ಪಿದ್ದಾರೆ. ಅಕೌಂಟಿಂಗ್ ಸಂಸ್ಥೆ ಅರ್ನ್ಸ್ಟ್ ಅಂಡ್ ಯಂಗ್ (ಇವೈ)ನ ಕಾರ್ಮಿಕನೊಬ್ಬ ಅತಿಯಾದ ಕೆಲಸದ ಒತ್ತಡದಿಂದ ಸಾವನ್ನಪ್ಪಿದ ಘಟನೆ ಇತ್ತೀಚೆಗಷ್ಟೇ ನಡೆದಿದೆ.ಇವೈನ ಪುಣೆ ಕಚೇರಿಯಲ್ಲಿ ಸುಮಾರು ನಾಲ್ಕು ತಿಂಗಳಿಂದ ಕೆಲಸ ಮಾಡುತ್ತಿದ್ದ 26 ವರ್ಷದ ಅನ್ನಾ ಸೆಬಾಸ್ಟಿಯನ್ ಇತ್ತೀಚೆಗಷ್ಟೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಹೆಚ್​ಡಿಎಫ್​ಸಿ ಬ್ಯಾಂಕ್ ಉದ್ಯೋಗಿಯೊಬ್ಬರು ಕಚೇರಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಬೆಳಕಿಗೆ ಬಂದಿತ್ತು. ಇದಕ್ಕೆ ಕಾರಣ ಅತಿಯಾದ ಕೆಲಸದ ಒತ್ತಡ ಎಂದು ಆಕೆಯ ಸಹೋದ್ಯೋಗಿಗಳು ಹೇಳಿದ್ದರು. ಕೆಲಸದ ಒತ್ತಡದ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆಯನ್ನು ಹುಟ್ಟುಹಾಕಿವೆ.

ಆತ್ಮಹತ್ಯೆಗಳ ಬಗ್ಗೆ ಚರ್ಚಿಸುವುದು ಕೆಲವರಿಗೆ ಪ್ರಚೋದನೆ ನೀಡಬಹುದು. ಆದಾಗ್ಯೂ, ಆತ್ಮಹತ್ಯೆಗಳನ್ನು ತಡೆಗಟ್ಟಬಹುದು. ಭಾರತದಲ್ಲಿ ಕೆಲವು ಪ್ರಮುಖ ಆತ್ಮಹತ್ಯೆ ತಡೆಗಟ್ಟುವ ಸಹಾಯವಾಣಿ ಸಂಖ್ಯೆಗಳೆಂದರೆ ಸುಮೈತ್ರಿ (ದೆಹಲಿ ಮೂಲದ) 011-23389090 ಮತ್ತು ಸ್ನೇಹ ಫೌಂಡೇಶನ್ (ಚೆನ್ನೈ ಮೂಲದ) 044-24640050.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.