Nandini Milk; ದೆಹಲಿಯಲ್ಲಿರುವ ಕನ್ನಡಿಗರಿಗೊಂದು ಖುಷಿ ಸುದ್ದಿ, ಇನ್ನು ನೀವೂ ಸವಿಯಬಹುದು ನಂದಿನಿ ಹಾಲು, ಮೊಸರು-bengaluru news kmf is planing to supply nandini milk to newdelhi next month uks ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Nandini Milk; ದೆಹಲಿಯಲ್ಲಿರುವ ಕನ್ನಡಿಗರಿಗೊಂದು ಖುಷಿ ಸುದ್ದಿ, ಇನ್ನು ನೀವೂ ಸವಿಯಬಹುದು ನಂದಿನಿ ಹಾಲು, ಮೊಸರು

Nandini Milk; ದೆಹಲಿಯಲ್ಲಿರುವ ಕನ್ನಡಿಗರಿಗೊಂದು ಖುಷಿ ಸುದ್ದಿ, ಇನ್ನು ನೀವೂ ಸವಿಯಬಹುದು ನಂದಿನಿ ಹಾಲು, ಮೊಸರು

KMF Nandini Milk; ರಾಷ್ಟ್ರ ರಾಜಧಾನಿ ದೆಹಲಿ ಪ್ರವೇಶಿಸುವುದಕ್ಕೆ ನಂದಿನಿ ಸಿದ್ಧವಾಗಿದೆ. ಕೆಎಂಎಫ್‌ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಮುಂದಿನ ತಿಂಗಳು ಅಲ್ಲಿನ ಮಾರುಕಟ್ಟೆಗೆ ನಂದಿನಿ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ನಂದಿನಿ ಹಾಲು
ನಂದಿನಿ ಹಾಲು (Nandini)

ಬೆಂಗಳೂರು: ನಂದಿನಿ ಹಾಲು ಮೊಸರು ಇಷ್ಟಪಡುವ ದೆಹಲಿಯ ಕನ್ನಡಿಗರಿಗೊಂದು ಖುಷಿ ಸುದ್ದಿ. ರಾಷ್ಟ್ರ ರಾಜಧಾನಿಯಲ್ಲಿದ್ರೂ ಇನ್ನು ನೀವು ಕೂಡ ಸವಿಯಬಹುದು ನಂದಿನಿ ಹಾಲು, ಮೊಸರು. ಹೌದು. ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ಇದನ್ನು ಖಚಿತಪಡಿಸಿದೆ.

ನಂದಿನಿ ಹಾಲು, ಮೊಸರುಗಳನ್ನು ದೆಹಲಿಯ ಗ್ರಾಹಕರಿಗೆ ಪೂರೈಸಲು ಕೆಎಂಎಫ್‌ ಸಿದ್ಧತೆ ನಡೆಸಿದೆ. ಸಮೀಪದ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳದ ಮಾರುಕಟ್ಟೆ ಪ್ರವೇಶಿಸಿರುವ ನಂದಿನಿ, ಈಗ ದೆಹಲಿಯ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಗೆ ನಂದಿನಿ ಬ್ರ್ಯಾಂಡ್ ವಿಸ್ತರಿಸಲು ಹೊರಟಿರುವ ಕೆಎಂಎಫ್‌, ಅಲ್ಲಿಗೆ ನಿತ್ಯವೂ 5 ಲಕ್ಷ ಲೀಟರ್ ಹಾಲನ್ನು ಸರಬರಾಜು ಮಾಡುವ ಗುರಿಯನ್ನು ಇಟ್ಟುಕೊಂಡಿದೆ.ಮೊದಲ ಹಂತದಲ್ಲಿ 1 ಲಕ್ಷದಿಂದ 2 ಲಕ್ಷ ಲೀಟರ್ ಹಾಲನ್ನು ಸರಬರಾಜು ಮಾಡಿ, ನಂತರ ಅದನ್ನು ಹೆಚ್ಚಿಸುವ ಚಿಂತನೆಯಲ್ಲಿದೆ ಕೆಎಂಎಫ್‌.

ಸೆಪ್ಟೆಂಬರ್ ತಿಂಗಳಲ್ಲಿ ದೆಹಲಿಗೆ ನಂದಿನಿ ಪ್ರವೇಶ

ಸೆಪ್ಟೆಂಬರ್ ಮೂರನೇ ವಾರ ಅಥವಾ ಕೊನೆಯ ವಾರದಲ್ಲಿ ದೆಹಲಿಗೆ ಹಾಲು ಸರಬರಾಜು ಮಾಡುವ ಪ್ರಯತ್ನ ನಡೆದಿದೆ ಎಂದು ಕೆಎಂಎಫ್‌ ಮೂಲಗಳು ತಿಳಿಸಿದ್ದಾಗಿ ಕನ್ನಡ ಪ್ರಭ ಪತ್ರಿಕೆ ವರದಿ ಮಾಡಿದೆ.

ಹಾಸನ ಸಹಕಾರಿ ಹಾಲು ಒಕ್ಕೂಟದ ಹಾಲು ಹೈದರಾಬಾದ್‌ಗೆ, ತುಮಕೂರು ಸಹಕಾರಿ ಹಾಲು ಒಕ್ಕೂಟದ ಹಾಲು ಮುಂಬೈಗೆ, ಬೆಳಗಾವಿ ಹಾಲು ಒಕ್ಕೂಟದಿಂದ ಹಾಲು ಪುಣೆ ಸೇರಿ ಇತರೆಡೆಗೆ ಸರಬರಾಜಾಗುತ್ತಿದೆ. ಅಂತೆಯೇ ಮಂಡ್ಯ ಹಾಲು ಒಕ್ಕೂಟದ ಹಾಲನ್ನು ದೆಹಲಿಗೆ ಸರಬರಾಜು ಮಾಡಲು ಕೆಎಂಎಫ್ ನಿರ್ಧರಿಸಿದ್ದು ಅದಕ್ಕಾಗಿ ರೂಪುರೇಷೆ ಸಿದ್ದಪಡಿಸುತ್ತದೆ.

ದೆಹಲಿಗೆ ತಲುಪಲು ನಂದಿನಿಗೆ 3 ದಿನದ ಪ್ರಯಾಣ

ಮಂಡ್ಯ ಸಹಕಾರ ಹಾಲು ಒಕ್ಕೂಟದ ಹಾಲು ದೆಹಲಿ ತಲುಪಲು ಸುಮಾರು 2400 ಹೆಚ್ಚು ಕಿಲೋಮೀಟರ್ ಕ್ರಮಿಸಬೇಕಿದೆ. ಅಂದರೆ ಟ್ಯಾಂಕರ್ ಮೂಲಕ ದೆಹಲಿ ತಲುಪಲು ಎರಡೂವರೆ ದಿನ ಅಥವಾ ಮೂರು ದಿನ ಬೇಕಾಗಬಹುದು. ಈ ಅವಧಿಯಲ್ಲಿ ಹಾಲು ಕೆಡದಂತೆ ವೈಜ್ಞಾನಿಕ ವ್ಯವಸ್ಥೆಯ ಟ್ಯಾಂಕರ್ ಬಳಸಲು ಕೆಎಂಎಫ್ ನಿರ್ಧರಿಸಿದೆ. ದೆಹಲಿಗೆ ತಲುಪಿದ ಹಾಲನ್ನು ಅಲ್ಲಿ ಸ್ಥಳೀಯ ಪ್ಯಾಕಿಂಗ್‌ ಘಟಕದಲ್ಲಿ ಪ್ಯಾಕ್ ಮಾಡಿ ನಂದಿನಿ ಬ್ರ್ಯಾಂಡ್ ಹಾಲನ್ನು ಮಾರುಕಟ್ಟೆಗೆ ಪೂರೈಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಪ್ಯಾಕಿಂಗ್ ಘಟಕದ ಜೊತೆಗೆ ಮಾತುಕತೆ ಆಗಿದ್ದು, ಶೀಘ್ರವೇ ಒಪ್ಪಂದವೂ ಏರ್ಪಡಲಿದೆ ಎಂದು ಕೆಎಂಫ್‌ ಮೂಲಗಳು ತಿಳಿಸಿದ್ದಾಗಿ ವರದಿ ವಿವರಿಸಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.