George Soros: ಮೋದಿ ವಿರುದ್ಧ ವಿದೇಶಿ ಶಕ್ತಿಗಳಿಂದ ಷಡ್ಯಂತ್ರ: ಜಾರ್ಜ್ ಸೊರೊಸ್ ಮೇಲೆ ಮುಗಿಬಿದ್ದ ಬಿಜೆಪಿ!
ಭಾರತೀಯ ಉದ್ಯಮಿ ಗೌತಮ್ ಅದಾನಿ ಪ್ರಕರಣವು 'ಭಾರತದಲ್ಲಿ ಪ್ರಜಾಪ್ರಭುತ್ವದ ಪುನರುಜ್ಜೀವನ'ಕ್ಕೆ ಉತ್ತೇಜನ ನೀಡುತ್ತದೆ ಎಂದಿರುವ ಅಮೆರಿಕದ ಖ್ಯಾತ ಹೂಡಿಕೆದಾರ ಜಾರ್ಜ್ ಸೊರೊಸ್, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಕುರಿತಾದ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಜಾರ್ಜ್ ಸೊರೊಸ್ ಅವರ ಹೇಳಿಕೆಯನ್ನು ಬಿಜೆಪಿ ಅತ್ಯುಗ್ರವಾಗಿ ಖಂಡಿಸಿದೆ.
ನವದೆಹಲಿ: ಭಾರತೀಯ ಉದ್ಯಮಿ ಗೌತಮ್ ಅದಾನಿ ಪ್ರಕರಣವು 'ಭಾರತದಲ್ಲಿ ಪ್ರಜಾಪ್ರಭುತ್ವದ ಪುನರುಜ್ಜೀವನ'ಕ್ಕೆ ಉತ್ತೇಜನ ನೀಡುತ್ತದೆ ಎಂದಿರುವ ಅಮೆರಿಕದ ಖ್ಯಾತ ಹೂಡಿಕೆದಾರ ಜಾರ್ಜ್ ಸೊರೊಸ್, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಕುರಿತಾದ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಜಾರ್ಜ್ ಸೊರೊಸ್ ಅವರ ಹೇಳಿಕೆಯನ್ನು ಅತ್ಯುಗ್ರವಾಗಿ ಖಂಡಿಸಿರುವ ಬಿಜೆಪಿ, ಪ್ರಧಾನಿ ಮೋದಿ ವಿರುದ್ಧ ವಿದೇಶಿ ಶಕ್ತಿಗಳು ಷಡ್ಯಂತ್ರ ರೂಪಿಸಿವೆ ಎಂದು ಗಂಭೀರ ಆರೋಪ ಮಾಡಿದೆ.
ಈ ಕುರಿತು ಮಾತನಾಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಪ್ರಧಾನಿ ಮೋದಿ ಹಾಗೂ ಭಾರತದ ಮೇಲೆ ನಿರಂತರ ದಾಳಿ ಮಾಡುತ್ತಿರುವ ವಿದೇಶಿ ಶಕ್ತಿಗಳ ವಿರುದ್ಧ ಭಾರತೀಯರು ಒಗ್ಗಟ್ಟಾಗಿ ಪ್ರತಿಕ್ರಿಯಿಸಬೇಕಿದೆ ಎಂದು ಹೇಳಿದ್ದಾರೆ. ಭಾರತದ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಲ್ಲಿ ಮಧ್ಯಪ್ರವೇಶಿಸಲು ಪ್ರಯತ್ನಿಸುತ್ತಿರುವ ವಿದೇಶಿ ಶಕ್ತಿಗಳಿಗೆ ನಾವು ಅವಕಾಶ ಕೊಡಬಾರದು ಎಂದು ಸ್ಮೃತಿ ಇರಾನಿ ಅಭಿಪ್ರಾಯಪಟ್ಟಿದ್ದಾರೆ.
ಜಾರ್ಜ್ ಸೊರೊಸ್ ಅವರ ಹೇಳಿಕೆಯನ್ನು 'ಭಾರತದ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ನಾಶಪಡಿಸುವ ಘೋಷಣೆ' ಎಂದು ಕರೆದಿರುವ ಸ್ಮೃತಿ ಇರಾನಿ, ನಮ್ಮ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದ ವಿದೇಶಿ ಶಕ್ತಿಗಳನ್ನು ಭಾರತೀಯರು ಈ ಹಿಂದೆಯೂ ಸೋಲಿಸಿದ್ದಾರೆ ಹಾಗೆಯೇ ಮುಂದೆಯೂ ಸೋಲಿಸಲಿದ್ದಾರೆ ಎಂದು ಗುಡುಗಿದ್ದಾರೆ.
ಜಾರ್ಜ್ ಸೊರೊಸ್ ಭಾರತದ ಕಡೆಗೆ ತನ್ನ ಕೆಟ್ಟ ಉದ್ದೇಶವನ್ನು ಘೋಷಿಸಿದ 'ಆರ್ಥಿಕ ಯುದ್ಧ ಅಪರಾಧಿ' ಎಂದು ಆರೋಪಿಸಿದ ಸ್ಮೃತಿ ಇರಾನಿ, "ಬ್ಯಾಂಕ್ ಆಫ್ ಇಂಗ್ಲೆಂಡ್ ಅನ್ನು ನಾಶಪಡಿಸಿದ ವ್ಯಕ್ತಿ, ಈಗ ಭಾರತೀಯ ಪ್ರಜಾಪ್ರಭುತ್ವವನ್ನು ಮುರಿಯುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.." ಎಂದು ಕಿಡಿಕಾರಿದ್ದಾರೆ.
"ಜಾರ್ಜ್ ಸೊರೊಸ್ ವಿಶೇಷವಾಗಿ ಪ್ರಧಾನಿ ಮೋದಿಯಂತಹ ನಾಯಕರನ್ನು ಗುರಿಯಾಗಿಸಲು, ಒಂದು ಶತಕೋಟಿ ಡಾಲರ್‌ಗೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದಾರೆ. ಆದರೆ ಪ್ರಧಾನಿ ಮೋದಿ ಭಾರತೀಯರ ಮನದಲ್ಲಿ ನೆಲೆಸಿದ್ದು, ಎಷ್ಟೇ ಷಡ್ಯಂತ್ರ ನಡೆಸಿದರೂ ಪ್ರಧಾನಿ ಮೋದಿ ಅವರ ವರ್ಚಸ್ಸನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಸ್ಮೃತಿ ಇರಾನಿ ಹೇಳಿದರು.
"ಭಾರತ-ಅಮೆರಿಕ ಸಂಬಂಧಗಳು ಬಲಗೊಳ್ಳುತ್ತಿರುವಾಗ, ಭಾರತವು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುತ್ತಿರುವಾಗ, ನಾವು ಒಗ್ಗಟ್ಟಾಗಿ ನಿಲ್ಲಬೇಕು ಮತ್ತು ಇಂತಹ ಶಕ್ತಿಗಳಿಗೆ ಪ್ರಧಾನಿ ಮೋದಿ ತಲೆಬಾಗುವುದಿಲ್ಲ ಎಂದು ತಿಳಿಸಬೇಕು.."ಎಂದು ಸ್ಮೃತಿ ಇರಾನಿ ಆಗ್ರಹಿಸಿದರು.
ಅಲ್ಲದೇ ಜಾರ್ಜ್ ಸೊರೊಸ್ ಹೇಳಿಕೆಯನ್ನು ಬೆಂಬಲಿಸುವ ಭಾರತದ ರಾಜಕೀಯ ಪಕ್ಷಗಳು, ಚುನಾವಣಾ ಸಮಯದಲ್ಲಿ ಜನತೆಯ ಮುಂದೆ ನಿಲ್ಲಬೇಕಾಗುತ್ತದೆ ಎಂಬುದನ್ನು ಮರೆಯಬಾರದು ಎಂದೂ ಸ್ಮೃತಿ ಇರಾನಿ ಇದೇ ವೇಳೆ ಎಚ್ಚರಿಸಿದ್ದಾರೆ.
ಇನ್ನು ಜಾರ್ಜ್ ಸೊರೊಸ್ ಹೇಳಿಕೆಯನ್ನು ಟೀಕಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, "ನಮ್ಮ ದೇಶದ ಆಂತರಿಕ ವಿಚಾರಗಳಿಗೂ ಜಾರ್ಜ್ ಸೊರೊಸ್ ಅವರಿಗೂ ಯಾವುದೇ ಸಂಬಂಧಿವಲ್ಲ. ಆದರೆ ಅದಾನಿ ಪ್ರಕರಣವು ಭಾರತದಲ್ಲಿ ಪ್ರಜಾಪ್ರಭುತ್ವದ ಪುನರುಜ್ಜೀವನ'ಕ್ಕೆ ಉತ್ತೇಜನ ನೀಡುವುದೋ ಅಥವಾ ಇಲ್ಲವೋ ಎಂಬುದು ಕಾಂಗ್ರೆಸ್, ವಿರೋಧ ಪಕ್ಷಗಳು ಹಾಗೂ ನಮ್ಮ ಚುನಾವಣಾ ಪ್ರಕ್ರಿಯೆಗಳ ಮೇಲೆ ಅವಲಂಬಿತವಾಗಿದೆ.." ಎಂದು ಟ್ವೀಟ್ ಮಾಡಿದ್ದಾರೆ.
92 ವರ್ಷದ ಜಾರ್ಜ್ ಸೊರೊಸ್ ಅವರು ಗುರುವಾರ 2023ರ ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಭಾಷಣ ಮಾಡುವಾಗ, ಗೌತಮ್ ಅದಾನಿ ಅವರ ವ್ಯವಹಾರದ ತೊಂದರೆಗಳಿಂದ ಪ್ರಧಾನಿ ಮೋದಿ ದುರ್ಬಲರಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಅವರ ಕಂಪನಿಗಳು ಯುಎಸ್ ಮೂಲದ ಸಣ್ಣ ಮಾರಾಟಗಾರರ ನಂತರ ಭಾರಿ ಷೇರು ಮಾರುಕಟ್ಟೆ ಸೋಲನ್ನು ಎದುರಿಸುತ್ತಿವೆ. ಹಿಂಡೆನ್‌ಬರ್ಗ್ ವರದಿಯು ಭಾರತದಲ್ಲಿ ಪ್ರಜಾಪ್ರಭುತ್ವದ ಪುನರುಜ್ಜೀವನಕ್ಕೆ ಬಾಗಿಲು ತೆರೆಯುತ್ತದೆ ಎಂಧು ಜಾರ್ಜ್ ಸೊರೊಸ್ ಹೇಳಿದ್ದರು.
ವಿಭಾಗ