ಕನ್ನಡ ಸುದ್ದಿ  /  Nation And-world  /  Bs Yediyurappa Meets Prime Minister Narendra Modi In New Delhi

BSY Meets PM Modi: ಮೋದಿ ಭೇಟಿ ಮಾಡಿದ ಬಿಎಸ್‌ವೈ: ರಾಜಾಹುಲಿ ಹೆಗಲಿಗೆ ಕರ್ನಾಟಕ ದಂಡಯಾತ್ರೆಯ ಸಾರಥ್ಯ..?

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಲು, ಬಿಎಸ್‌ವೈ ರಾಷ್ಟ್ರ ರಾಜಧಾನಿ ನವದೆಹಲಿಗೆ ತೆರಳಿದ್ದಾರೆ. ಈ ವೇಳೆ ಮಾಜಿ ಸಿಎಂ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಉಭಯ ನಾಯಕರ ನಡುವೆ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆದಿದೆ ಎಂದು ಮೂಲಗಳು ಖಚಿತಪಡಿಸಿವೆ. ಈ ಕುರಿತು ಇಲ್ಲಿದೆ ಮಾಹಿತಿ..

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (Verified Twitter)

ನವದೆಹಲಿ: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು, ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಜನಪ್ರಿಯತೆ ಪ್ರಮುಖ ಆಧಾರ ಎಂಬುದು ಬಿಜೆಪಿ ಹೈಕಮಾಂಡ್‌ಗೆ ಸ್ಪಷ್ಟವಾಗಿದೆ. ಅಧಿಕಾರದಲ್ಲಿರಲಿ ಅಥವಾ ಇಲ್ಲದಿರಲಿ, ಕರ್ನಾಟಕದ ಮಟ್ಟಿಗೆ ಬಿಎಸ್‌ವೈ ಅವರೇ ಬಿಜೆಪಿಯ ಪರಮೋಚ್ಛ ನಾಯಕ ಎಂಬುದು ಹಲವು ಬಾರಿ ಸಾಬೀತಾಗಿದೆ.

ಇದೇ ಕಾರಣಕ್ಕೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ವೈ ಅವರ ಸುದೀರ್ಘ ರಾಜಕೀಯ ಅನುಭವದ ಬನೆರವು ಪಡೆಯಲು ಬಿಜೆಪಿ ಹೈಕಮಾಂಡ್‌ ನಿರ್ಧರಿಸಿದೆ. ಇದಕ್ಕೆ ಪುಷ್ಠಿ ಎಂಬಂತೆ, ಬಿಜೆಪಿ ಕಾರ್ಯಕಾರಣಿ ಸಭೆ ನೇಪಥ್ಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಬಿಎಸ್‌ ಯಡಿಯೂರಪ್ಪ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದಾರೆ.

ಹೌದು, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಲು, ಬಿಎಸ್‌ವೈ ರಾಷ್ಟ್ರ ರಾಜಧಾನಿ ನವದೆಹಲಿಗೆ ತೆರಳಿದ್ದಾರೆ. ಈ ವೇಳೆ ಮಾಜಿ ಸಿಎಂ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಉಭಯ ನಾಯಕರ ನಡುವೆ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆದಿದ್ದು, ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ಪಕ್ಷದ ರಣತಂತ್ರದ ಕುರಿತು ಇಬ್ಬರೂ ಉನ್ನತ ನಾಯಕರು ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಈ ವರ್ಷ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಒಟ್ಟು ಒಂಬತ್ತು ರಾಜ್ಯಗಳ ವಿಧಾನಸಭಾ ಚುನಾವಣಾ ಕಾರ್ಯತಂತ್ರವು ನವದೆಹಲಿಯಲ್ಲಿ ನಡೆಯುತ್ತಿರುವ ಎರಡು ದಿನಗಳ ಕಾರ್ಯಕಾರಿ ಸಭೆಯ ಪ್ರಮುಖ ಕಾರ್ಯಸೂಚಿಯಾಗಿದೆ.

ದಕ್ಷಿಣದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಏಕೈಕ ರಾಜ್ಯ ಕರ್ನಾಟಕ. ಇಲ್ಲಿ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಬಿಎಸ್‌ವೈ ಅವರ ಪಾತ್ರ ಬಹಳಷ್ಟಿದೆ. ಆದರೆ ಹೈಕಮಾಂಡ್‌ ಸೂಚನೆ ಮೇರೆಗೆ ಬಿಎಸ್‌ವೈ ಇದೀಗ ಮುಖ್ಯಮಂತ್ರಿ ಹುದ್ದೆ ತ್ಯಜಿಸಿದ್ದಾರೆ. ಆದರೆ ಇದೊಂದೇ ಕಾರಣಕ್ಕೆ ಬಿಎಸ್‌ವೈ ಅವರ ನಾಯಕತ್ವವನ್ನು ತಿರಸ್ಕರಿಸುವ ಇರಾದೆ ಹೈಕಮಾಂಡ್‌ಗೆ ಖಂಡಿತವಾಗಿಯೂ ಇಲ್ಲ.

ಲಿಂಗಾಯತ ಬೆಂಬಲಿಗರ ದೊಡ್ಡ ನೆಲೆಯನ್ನು ಹೊಂದಿರುವ ಯಡಿಯೂರಪ್ಪ, ಈ ಸಮುದಾಯದ ಮತಗಳನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಬಲ್ಲರು. ಇದೇ ಕಾರಣಕ್ಕೆ ಹೈಕಮಾಂಡ್‌ ಬಿಎಸ್‌ವೈ ಅವರಿಗೆ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಿದೆ. ನಾಲ್ಕು ಬಾರಿ ರಾಜ್ಯದ ಸಿಎಂ ಆಗಿರುವ ಅನುಭವ ಹೊಂದಿರುವ ಬಿಎಸ್‌ವೈ, ಪಕ್ಷ ಸಂಘಟನೆಯಲ್ಲೂ ಎತ್ತಿದ ಕೈ ಎಂಬುದು ಹೈಕಮಾಂಡ್‌ಗೆ ಚೆನ್ನಾಗಿ ಗೊತ್ತಿದೆ.

ಸದ್ಯ ಕರ್ನಾಟಕದ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿವೆ. ಪ್ರತಿಪಕ್ಷ ಕಾಂಗ್ರೆಸ್‌ ನಿರಂತರವಾಗಿ ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸುತ್ತಿದೆ. ಪ್ರತಿಪಕ್ಷಗಳ ಈ ತಂತ್ರಗಳಿಗೆ ಪ್ರತಿತಂತ್ರ ಹೆಣೆಯಲು, ಬಿಜೆಪಿ ಹೈಕಮಾಂಡ್‌ ಬಿಎಸ್‌ವೈ ಅವರ ನೆರವು ಕೇಳಿದೆ ಎನ್ನಲಾಗಿದೆ.

ಬಿಜೆಪಿಯ ಪ್ರಮುಖ ಚುನಾವಣಾ ಕಾರ್ಯತಂತ್ರಗಾರ ಅಮಿತ್‌ ಶಾ, ಕರ್ನಾಟಕ ಘಟಕಕ್ಕೆ "ಮಿಷನ್ 136" ಸವಾಲನ್ನು ನೀಡಿದ್ದಾರೆ. ಈ ಸವಾಲನ್ನು ಸ್ವೀಕರಿಸಲು ಮತ್ತು ಈ ಅಗ್ನಿಪರೀಕ್ಷೆಯಲ್ಲಿ ಗೆಲುವು ಸಾಧಿಸಲು ರಾಜ್ಯ ಬಿಜೆಪಿ ಘಟಕಕ್ಕೂ ಬಿಎಸ್‌ವೈ ಅವರ ಮಾರ್ಗದರ್ಶನದ ಅವಶ್ಯಕತೆ ಇದ್ದೇ ಇದೆ.

ಈ ಎಲ್ಲಾ ಕಾರಣಗಳಿಂದಾಗಿ ಪ್ರಧಾನಿ ಮೋದಿ ಮತ್ತು ಬಿಎಸ್ ಯಡಿಯೂರಪ್ಪ ಅವರ ನಡುವಿನ ಮಾತುಕತೆ ಇದೀಗ ಮಹತ್ವ ಪಡೆದುಕೊಂಡಿದ್ದು, ಬಿಎಸ್‌ವೈ ಇಲ್ಲದೇ ರಾಜ್ಯ ಬಿಜೆಪಿ ಇಲ್ಲ ಎಂಬ ಅವರ ಬೆಂಬಲಿಗರ ಅಭಿಪ್ರಾಯ ಮತ್ತಷ್ಟು ಗಟ್ಟಿಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ದಕ್ಷಿಣದ ದಂಡಯಾತ್ರೆಯನ್ನು ಕರ್ನಾಟಕದಿಂದ ಆರಂಭಿಸಲು ಬಯಸಿರುವ ಬಿಜೆಪಿ, ಇದಕ್ಕಾಗಿ ಬಿಎಸ್‌ವೈ ಅವರ ಮಾರ್ಗದರ್ಶನ ಪಡೆಯಲಿರುವುದು ರಾಜ್ಯ ರಾಜಕಾರಣದ ಗಮನ ಸೆಳೆದಿದೆ.

IPL_Entry_Point