ಭಾರತದಲ್ಲಿ 76000 ರೂ ದಾಟಿ ಹೊಸ ದಾಖಲೆ ಬರೆದ ಬಂಗಾರ; ಚಿನ್ನಕ್ಕೆ ಇನ್ನಷ್ಟು ಹೊಳಪು ನೀಡಿದ 7 ಅಂಶಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಭಾರತದಲ್ಲಿ 76000 ರೂ ದಾಟಿ ಹೊಸ ದಾಖಲೆ ಬರೆದ ಬಂಗಾರ; ಚಿನ್ನಕ್ಕೆ ಇನ್ನಷ್ಟು ಹೊಳಪು ನೀಡಿದ 7 ಅಂಶಗಳು

ಭಾರತದಲ್ಲಿ 76000 ರೂ ದಾಟಿ ಹೊಸ ದಾಖಲೆ ಬರೆದ ಬಂಗಾರ; ಚಿನ್ನಕ್ಕೆ ಇನ್ನಷ್ಟು ಹೊಳಪು ನೀಡಿದ 7 ಅಂಶಗಳು

ಭಾರತದ ಚಿನಿವಾರ ಪೇಟೆಯಲ್ಲಿ ಚಿನ್ನದ ದರ 76000 ರೂ ದಾಟಿದ್ದು, ಬಂಗಾರ ಹೊಸ ದಾಖಲೆ ಬರೆದಿದೆ. ಚಿನ್ನಕ್ಕೆ ಇನ್ನಷ್ಟು ಹೊಳಪು ನೀಡಿದ 7 ಅಂಶಗಳ ವಿವರ ಇಲ್ಲಿದೆ.

ಚಿನ್ನಕ್ಕೆ ಇನ್ನಷ್ಟು ಹೊಳಪು ನೀಡಿದ 7 ಅಂಶಗಳು
ಚಿನ್ನಕ್ಕೆ ಇನ್ನಷ್ಟು ಹೊಳಪು ನೀಡಿದ 7 ಅಂಶಗಳು

ಬೆಂಗಳೂರು: ಭಾರತದಲ್ಲಿ ಚಿನ್ನದ ಬೆಲೆಯು ಮೊದಲ ಬಾರಿಗೆ 10 ಗ್ರಾಂಗೆ 76,000 ರೂಪಾಯಿಯ ಮಹತ್ವದ ಮೈಲಿಗಲ್ಲನ್ನು ದಾಟಿದೆ. ಬೆಳ್ಳಿ ಕೂಡ ಏರಿಕೆಯ ಹಾದಿಯಲ್ಲಿದ್ದು, ಒಟ್ಟಾರೆ ಚಿನಿವಾರ ಪೇಟೆಯಲ್ಲಿ ಚಿನ್ನ ಬೆಳ್ಳಿ ದರಗಳು ಗಗನಮುಖಿಯಾಗಿ ಹೊಸ ಹೊಸ ದಾಖಲೆ ಬರೆಯುವತ್ತ ಸಾಗಿವೆ. ದೆಹಲಿ, ಜೈಪುರ ಮತ್ತು ಲಕ್ನೋ, ಮುಂಬಯಿ, ಚೆನ್ನೈ, ಬೆಂಗಳೂರು ಮುಂತಾದೆಡೆ ಚಿನ್ನದ ದರ 10 ಗ್ರಾಂಗೆ 76,000 ರೂಪಾಯಿ ದಾಟಿರುವುದಾಗಿ ಗುಡ್‌ ರಿಟರ್ನ್ಸ್ ಉಲ್ಲೇಖಿಸಿದೆ. ಜಾಗತಿಕ ಆರ್ಥಿಕ ವಿಚಾರಗಳು, ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಕಡಿತ ಮತ್ತು ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆ ಸಾಧನವಾಗಿ ಪರಿಗಣಿಸುತ್ತಿರುವುದು ಇದಕ್ಕೆ ಕಾರಣ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಜಾಗತಿಕವಾಗಿ ಸ್ಪಾಟ್ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ ಕಾರಣ, ಈ ವರ್ಷ 27 ಪ್ರತಿಶತ ಏರಿಕೆಯಾಗಿದೆ. ಇದು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಗೋಚರಿಸಿದೆ. ಚಾಲ್ತಿಯಲ್ಲಿರುವ ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳು ಮತ್ತು ಇಳಿಮುಖವಾಗುತ್ತಿರುವ ಬಡ್ಡಿದರದ ವಿದ್ಯಮಾನಗಳ ಕಾರಣ ಹೂಡಿಕೆದಾರರಿಗೆ ಚಿನ್ನವು ಹೆಚ್ಚು ಆಕರ್ಷಕವಾಗುತ್ತಿದೆ ಎಂಬುದು ತಜ್ಞರ ಅಭಿಮತ.

ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿರುವ 7 ಅಂಶಗಳಿವು

1) ಜಾಗತಿಕ ಆರ್ಥಿಕ ಪರಿಸ್ಥಿತಿಗಳು- ಯುಎಸ್ ಫೆಡರಲ್‌ ರಿಸರ್ವ್‌ ಬಡ್ಡಿದರ ಕಡಿತ ಮಾಡಿದ್ದು, ಚಿನ್ನದ ಬೆಲೆಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿದೆ. ಬಡ್ಡಿ ದರಗಳು ಕುಸಿಯುವ ಸನ್ನಿವೇಶವು ಸುರಕ್ಷಿತ ಭಾವದಿಂದ ಚಿನ್ನ ಖರೀದಿ ಸಂಗ್ರಹಿಸಿಟ್ಟುಕೊಳ್ಳುವಂತೆ ಹೆಚ್ಚಿನ ಹೂಡಿಕೆದಾರರನ್ನು ಪ್ರೇರೇಪಿಸುತ್ತದೆ.

2) ಭೌಗೋಳಿಕ ರಾಜಕೀಯ ಬಿಕ್ಕಟ್ಟು- ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷವು ರಕ್ಷಣಾತ್ಮಕ ಹೂಡಿಕೆಯಾಗಿ ಚಿನ್ನದ ಬೇಡಿಕೆಯನ್ನು ಹೆಚ್ಚಿಸಿದೆ. ಹೂಡಿಕೆದಾರರು ಸಾಮಾನ್ಯವಾಗಿ ಅಸ್ಥಿರತೆಯ ಸಮಯದಲ್ಲಿ ಚಿನ್ನದ ಕಡೆಗೆ ಒಲವು ತೋರುತ್ತಾರೆ. ಅದರ ಮೌಲ್ಯವನ್ನು ಹೆಚ್ಚಿಸುತ್ತಾರೆ.

3) ಅಂತಾರಾಷ್ಟ್ರೀಯ ಮಾರುಕಟ್ಟೆ ಗರಿಷ್ಠ ಮಟ್ಟಕ್ಕೆ - ಜಾಗತಿಕವಾಗಿ, ಚಿನ್ನವು ಹೊಸ ಎತ್ತರವನ್ನು ತಲುಪಿದೆ. ಸ್ಪಾಟ್ ಬೆಲೆಗಳು ಪ್ರತಿ ಔನ್ಸ್‌ಗೆ 2,630 ಅಮೆರಿಕನ್ ಡಾಲರ್‌ಗಿಂತ ಹೆಚ್ಚಾಗಿದೆ. ಈ ಪ್ರವೃತ್ತಿಯು ಚಿನ್ನಕ್ಕೆ ಬಲವಾದ ಬೇಡಿಕೆ ಇರುವುದನ್ನು ಪ್ರತಿಬಿಂಬಿಸುತ್ತದೆ. ಭಾರತದಲ್ಲಿ ಕೂಡ ಸ್ಥಳೀಯ ಬೆಲೆಯ ಮೇಲೆ ಇದು ಮತ್ತಷ್ಟು ಪ್ರಭಾವ ಬೀರುತ್ತದೆ.

4) ಮಾರುಕಟ್ಟೆಯಲ್ಲಿ ಏರಿಕೆ ಭಾವ - ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳು ಮತ್ತು ಕಡಿಮೆ-ಬಡ್ಡಿ ದರಗಳು ಮುಂದುವರಿಯುವವರೆಗೆ ಚಿನ್ನದ ಬೆಲೆ ಏರಿಕೆಯ ಭಾವದಲ್ಲಿ ಮುಂದುವರಿಯಲಿದೆ. ಈ ಭಾವನೆಯು ಚಿನ್ನದ ಮೇಲೆ ಹೆಚ್ಚಿನ ಹೂಡಿಕೆಯನ್ನು ಉತ್ತೇಜಿಸುತ್ತದೆ ಎಂದು ವಿಶ್ಲೇಷಕರು ಊಹಿಸುತ್ತಾರೆ.

5) ಹೂಡಿಕೆ ತಂತ್ರ ಪರಿಗಣನೆ - ಈ ಡೈನಾಮಿಕ್ಸ್ ಅನ್ನು ಅರ್ಥಮಾಡಿಕೊಂಡು ಹೂಡಿಕೆ ಮಾಡುವುದು ಹೂಡಿಕೆದಾರರ ಮಟ್ಟಿಗೆ ನಿರ್ಣಾಯಕ. ಚಿನ್ನವು ಕಡಿಮೆ-ಆಸಕ್ತಿಯ ವಾತಾವರಣದಲ್ಲಿ ಹೆಚ್ಚಿನ ಲಾಭಾಂಶದ ಅವಕಾಶಗಳನ್ನು ಒದಗಿಸುತ್ತದೆ. ಆದ್ದರಿಂದ ಮಾರುಕಟ್ಟೆಯ ಚಂಚಲತೆ ಮತ್ತು ಭೌಗೋಳಿಕ ರಾಜಕೀಯ ಅಪಾಯಗಳನ್ನು ನಿರ್ಣಯಿಸುವುದು ಅತ್ಯಗತ್ಯ.

6) ಮುಂದಿನ ಅಡ್ಡಿ - ಚಿನ್ನದದ ದರದ ಮುಂದಿನ ಪ್ರತಿರೋಧ ಮಟ್ಟವು ಔನ್ಸ್‌ಗೆ 2700 ಡಾಲರ್ ಆಗಿರಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಆದಾಗ್ಯೂ, ಪ್ರಸ್ತುತ ಸನ್ನಿವೇಶವು ಬೆಲೆ ಏರಿಕೆಯ ಮುನ್ಸೂಚನೆಯನ್ನು ನೀಡುತ್ತಿವೆ ಎಂಬುದು ಪರಿಣತರ ಅಭಿಪ್ರಾಯ.

7) ದೀರ್ಘಾವಧಿ ದೃಷ್ಟಿಕೋನ - ಹೂಡಿಕೆದಾರರು ಚಿನ್ನವನ್ನು ಕೇವಲ ಅಲ್ಪಾವಧಿಯ ಹೂಡಿಕೆಯಾಗಿ ನೋಡುವಂತೆ ಹೇಳಲಾಗುತ್ತಿದೆ. ಆದಾಗ್ಯೂ, ಆರ್ಥಿಕ ಅನಿಶ್ಚಿತತೆಯ ಸಮಯದಲ್ಲಿ ದೀರ್ಘಾವಧಿಯ ಹೂಡಿಕೆಯ ತಂತ್ರದಲ್ಲಿ ಚಿನ್ನವೇ ಮುಖ್ಯ ಭೂಮಿಕೆಯಲ್ಲಿರುತ್ತದೆ.

ಇಂದೆಷ್ಟಿದೆ ಚಿನ್ನದ ದರ: ಗುಡ್‌ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರಲ್ಲಿ ಇಂದು (ಸೆಪ್ಟೆಂಬರ್ 23) 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 69,800 ರೂಪಾಯಿ ಮತ್ತು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 76,150 ರೂಪಾಯಿ ಆಗಿದೆ.

ಈ ಲೇಖನ ಹೂಡಿಕೆ ಮಾಡುವುದಕ್ಕೆ ಶಿಫಾರಸಲ್ಲ. ಚಿನ್ನದ ಮೇಲಿನ ಹೂಡಿಕೆ ವಿಚಾರಕ್ಕೆ ಬರುವುದಾದರೆ ಪ್ರತಿಯೊಂದು ವಿದ್ಯಮಾನವನ್ನೂ ಸೂಕ್ಷ್ಮವಾಗಿ ಅವಲೋಕಿಸಿ ಹೂಡಿಕೆ ನಿರ್ಧಾರ ಮಾಡಬಹುದು. ಅಗತ್ಯ ಇದೆ ಎಂದು ನಿಮಗನಿಸಿದರೆ ಪರಿಣತರ ಸಲಹೆಯನ್ನೂ ಪಡೆದುಕೊಳ್ಳಿ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.