How To Exchange 2000: ನಿಮ್ಮ ಬಳಿ ಇರುವ 2000 ಮುಖಬೆಲೆಯ ನೋಟು ವಿನಿಮಯ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ
Reserve Bank of India: 'ನಮ್ಮ ಬಳಿ ಸಾಕಷ್ಟು ನೋಟುಗಳು ಉಳಿದಿವೆ, ಈಗ ರಿಸರ್ವ್ ಬ್ಯಾಂಕ್ ನಿರ್ದೇಶನದ ನಂತರ ನಮ್ಮ ಹಣ ಮೌಲ್ಯ ಕಳೆದುಕೊಂಡು ಕೇವಲ ಕಾಗದವಷ್ಟೇ ಆಗಿಬಿಡುವುದೇ' ಎಂಬ ಅನುಮಾನ ಹಲವರನ್ನು ಕಾಡುತ್ತಿದೆ. ಇಂಥ ಅನುಮಾನಗಳಿಗೆ ಇಲ್ಲಿದೆ ಉತ್ತರ.
ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India - RBI) ಶುಕ್ರವಾರ (ಮೇ 19) rU 2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಘೋಷಿಸಿದೆ. 'ಸ್ವಚ್ಛ ನೋಟು ನೀತಿ'ಯ ಭಾಗವಾಗಿ ಈ ಆದೇಶ ಹೊರಡಿಸಿರುವುದಾಗಿ ರಿಸರ್ವ್ ಬ್ಯಾಂಕ್ ತಿಳಿಸಿದೆ. 'ನಮ್ಮ ಬಳಿ ಸಾಕಷ್ಟು ನೋಟುಗಳು ಉಳಿದಿವೆ, ಈಗ ರಿಸರ್ವ್ ಬ್ಯಾಂಕ್ ನಿರ್ದೇಶನದ ನಂತರ ನಮ್ಮ ಹಣ ಮೌಲ್ಯ ಕಳೆದುಕೊಂಡು ಕೇವಲ ಕಾಗದವಷ್ಟೇ ಆಗಿಬಿಡುವುದೇ' ಎಂಬ ಅನುಮಾನ ಹಲವರನ್ನು ಕಾಡುತ್ತಿದೆ. ಇಂಥ ಅನುಮಾನಗಳಿಗೆ ಇಲ್ಲಿದೆ ಉತ್ತರ. ನೋಟು ಅಮಾನ್ಯದ ವಿವರ, ವಿನಿಮಯಕ್ಕೆ ಅನುಸರಿಸಬೇಕಾದ ಕ್ರಮದ ಬಗ್ಗೆ ನೀವು ತಿಳಿಯಬೇಕಾದ 5 ಮುಖ್ಯ ಅಂಶಗಳಿವು.
1) ಚಲಾವಣೆಯಲ್ಲಿ ಇರುತ್ತವೆ: ತನ್ನ ನಿರ್ದೇಶನದ ನಂತರವೂ ರೂ 2,000 ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿ ಇರುತ್ತವೆ. ನೀವು ಯಾವುದಾದರೂ ವಸ್ತು ಖರೀದಿಸಿದಾಗ ಇಂಥ ನೋಟುಗಳನ್ನು ನೀಡಬಹುದು. ಸೆ 30ರ ವರೆಗೆ ಈ ನೋಟುಗಳನ್ನು ಬ್ಯಾಂಕ್‌ಗಳಿಗೆ ಕೊಟ್ಟು ಇತರ ಮುಖಬೆಲೆಯ ನೋಟುಗಳಿಗೆ ವಿನಿಮಯ ಮಾಡಿಕೊಳ್ಳಬಹುದು.
2) ಮೇ 23ರ ನಂತರ ವಿನಿಮಯಕ್ಕೆ ಅವಕಾಶ: ನೋಟುಗಳ ವಿನಿಮಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರಬಹುದು ಎಂದು ನಿರೀಕ್ಷಿಸಿರುವ ಆರ್‌ಬಿಐ, ಈ ಬಗ್ಗೆ ತಕ್ಕ ಸಿದ್ಧತೆ ಮಾಡಿಕೊಳ್ಳಲು ಬ್ಯಾಂಕುಗಳಿಗೆ ಅಗತ್ಯ ಕಾಲಾವಕಾಶ ನೀಡಲಾಗಿದೆ. ಮೇ 23ರ ನಂತರ ಬ್ಯಾಂಕುಗಳಲ್ಲಿ ಪ್ರತ್ಯೇಕ ಕೌಂಟರ್ ಒಂದನ್ನು ನೋಟುಗಳ ವಿನಿಮಯಕ್ಕಾಗಿ ತೆರೆಯಲಾಗುತ್ತದೆ. ಆರ್‌ಬಿಐನ ಎಲ್ಲ 19 ಪ್ರಾದೇಶಿಕ ಕಚೇರಿಗಳಲ್ಲಿಯೂ ನೋಟು ವಿನಿಮಯಕ್ಕೆ ವ್ಯವಸ್ಥೆ ಮಾಡಲಾಗಿದೆ.
3) ವಿನಿಮಯಕ್ಕೆ ಗರಿಷ್ಠ ಮಿತಿ: ರೂ 2,000 ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಗರಿಷ್ಠ ಮಿತಿಯನ್ನು ಆರ್‌ಬಿಐ ವಿಧಿಸಿದೆ. ಒಂದು ಸಲಕ್ಕೆ ರೂ 20,000 ದವರೆಗೆ ರೂ 2,000 ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಬ್ಯಾಂಕ್‌ಗಳ ಪ್ರತಿನಿಧಿಗಳ (ಬ್ಯುಸಿನೆಸ್ ಕರೆಸ್ಪಾಂಡೆಂಟ್) ಮೂಲಕವೂ ವಿನಿಮಯಕ್ಕೆ ಅವಕಾಶವಿದೆ. ಆದರೆ ಇಂಥ ಕಡೆಗಳಲ್ಲಿ ಒಂದು ದಿನಕ್ಕೆ ಗರಿಷ್ಠ 4,000 ರೂಪಾಯಿವರೆಗೆ ವಿನಿಮಯ ಮಾಡಿಕೊಳ್ಳಬಹುದಾಗಿದೆ.
4) ಬ್ಯಾಂಕ್‌ನಲ್ಲಿ ಖಾತೆ ಇರಬೇಕಿಲ್ಲ: ನಿಮ್ಮ ಬಳಿ ಇರುವ 2,000 ಮುಖಬೆಲೆಯ ನೋಟುಗಳನ್ನು ಯಾವುದೇ ಬ್ಯಾಂಕ್‌ನ ಯಾವುದೇ ಶಾಖೆಯಲ್ಲಿ ವಿನಿಮಯ ಮಾಡಿಕೊಳ್ಳಬಹುದು. ನಿರ್ದಿಷ್ಟ ಬ್ಯಾಂಕ್‌ನ ನಿರ್ದಿಷ್ಟ ಶಾಖೆಯಲ್ಲಿ ನಿಮ್ಮ ಖಾತೆ ಇದ್ದರೆ ಮಾತ್ರ ವಿನಿಮಯ ಆಗುತ್ತದೆ ಎಂಬ ನಿಯಮ ಇಲ್ಲ. ಆದರೆ ರೂ 20,000 ಮಿತಿ ಇಲ್ಲಿಯೂ ಅನ್ವಯವಾಗಲಿದೆ.
5) ಉಚಿತ ವಿನಿಮಯ: ನಿಮ್ಮ ಬಳಿ ಇರುವ ರೂ ಮುಖಬೆಲೆಯ ನೋಟುಗಳ ವಿನಿಮಯಕ್ಕೆ ನೀವು ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಬ್ಯಾಂಕುಗಳು ಉಚಿತವಾಗಿ ವಿನಿಮಯ ಮಾಡಿಕೊಡುತ್ತವೆ. ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಆದ್ಯತೆ ಸಿಗುವಂತೆ ಮಾಡಲು ಮತ್ತು ಸಾರ್ವಜನಿಕರಿಗೆ ಅನಾನುಕೂಲ ಕಡಿಮೆ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ ನೀಡಿದೆ.
ಎಚ್‌ಟಿ ಕನ್ನಡ ವಾಟ್ಸಾಪ್ ಕಮ್ಯುನಿಟಿ ಸೇರಿ. ಫೇಸ್‌ಬುಕ್ ಪೇಜ್ ಲೈಕ್ ಮಾಡಿ, ಟ್ವಿಟರ್‌ನಲ್ಲಿ ಫಾಲೊ ಮಾಡಿ. ಯುಟ್ಯೂಬ್ ಚಾನೆಲ್ ಸಬ್‌ಸ್ಕ್ರೈಬ್ ಮಾಡಿ.
ವಿಭಾಗ