ಒಂದು ದೇಶ, ಒಂದು ಚುನಾವಣೆ ಮಸೂದೆಗೆ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಒಪ್ಪಿಗೆ, ಚಳಿಗಾಲದ ಅಧಿವೇಶನದಲ್ಲೇ ಮಂಡನೆ ನಿರೀಕ್ಷೆ
ಬಿಜೆಪಿಯ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾದ ಒಂದು ದೇಶ ಒಂದು ಚುನಾವಣೆ ಮಸೂದೆಗೆ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟವು ಅನುಮೋದನೆ ನೀಡಿದೆ.
ದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಪ್ರಮುಖ ಅಜೆಂಡಾಗಳಲ್ಲಿ ಒಂದಾದ ಒಂದು ದೇಶ, ಒಂದು ಚುನಾವಣೆ' ಮಸೂದೆಗೆ ಕೇಂದ್ರ ಸಚಿವ ಸಂಪುಟವು ಗುರುವಾರ ಅನುಮೋದನೆ ಕೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಹು ನಿರೀಕ್ಷಿತ ಒಂದು ದೇಶ, ಒಂದು ಚುನಾವಣೆ ಮಸೂದೆಗೆ ಅನುಮತಿ ನೀಡಲಾಗಿದ್ದು. ಇದನ್ನು ತ್ವರಿತವಾಗಿ ಜಾರಿಗೊಳಿಸಲು ಮುಂದಾಗಿದೆ. ಈಗಾಗಲೇ ಆರಂಭಗೊಂಡಿರುವ ಸಂಸತ್ ಚಳಿಗಾಲದ ಅಧಿವೇಶನದಲ್ಲೇಒಂದು ದೇಶ, ಒಂದು ಚುನಾವಣೆ ಮಸೂದೆಯನ್ನು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರ ಮಂಡಿಸಬಹುದು ಎಂದು ಹೇಳಲಾಗುತ್ತಿದೆ.
ಸಮಿತಿ ವರದಿ ಸಲ್ಲಿಕೆ
ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ವರದಿ ಸಲ್ಲಿಸಲು ಕೇಂದ್ರ ಸರ್ಕಾರ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧ್ಯಕ್ಷತೆಯ ಕೇಂದ್ರ ಸರ್ಕಾರವು ಈಗಾಗಲೇ ಉನ್ನತ ಮಟ್ಟದ ಸಮಿತಿ ರಚಿಸಿತ್ತು. ಸಮಿತಿಯು ನಾನಾ ರಾಜ್ಯಗಳಿಗೆ ಭೇಟಿ ನೀಡಿ, ತಜ್ಞರ ಸಲಹೆಗಳನ್ನು ಆಧರಿಸಿ ವರದಿಯನ್ನು ಕಳೆದ ಸೆಪ್ಟಂಬರ್‌ಲ್ಲಿಯೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು.
ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರಕ್ಕೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದು ಪ್ರಮುಖ ಉದ್ದೇಶ. ಮೊದಲ ಹಂತದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಬೇಕು ಎನ್ನುವ ಶಿಫಾರಸ್ಸು ಆಧರಿಸಿ ಜಾರಿಗೊಳಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ́
ಇದಲ್ಲದೇ ನಗರಪಾಲಿಕೆ, ಸ್ಥಳೀಯ ಸಂಸ್ಥೆಗಳಿಗೆ ಅವಧಿ ಮುಗಿದ ನೂರು ದಿನಗಳ ಒಳಗೆ ಏಕಕಾಲದಲ್ಲಿಯೇ ಚುನಾವಣೆ ನಡೆಸಬೇಕು ಎನ್ನುವ ಇರಾದೆಯೂ ಇದೆ. ಇದನ್ನೇ ಸಮಿತಿಯೂ ಶಿಫಾರಸು ಮಾಡಿದೆ.
ಈ ಬದಲಾವಣೆಗಾಗಿ ಸಂವಿಧಾನದಲ್ಲಿ ಒಟ್ಟು ಹದಿನೆಂಟು ತಿದ್ದುಪಡಿಗಳನ್ನು ತರುವ ಅವಶ್ಯಕತೆಯಿದೆ ಎಂದು ಸಮಿತಿ ತನ್ನ ವರದಿಯನ್ನು ಉಲ್ಲೇಖಿಸಿದೆ.
ಬಿಜೆಪಿ ಉದ್ದೇಶ ಹೇಗಿದೆ
ಚುನಾವಣಾ ಆಯೋಗ, ಕಾನೂನು ಆಯೋಗ ಮತ್ತು ಸಂಸದೀಯ ಸಮಿತಿಗಳು ಸೇರಿದಂತೆ ವಿವಿಧ ಘಟಕಗಳು ಈ ಹಿಂದೆ ಹಲವಾರು ಸಂದರ್ಭಗಳಲ್ಲಿ 'ಒಂದು ರಾಷ್ಟ್ರ, ಒಂದು ಚುನಾವಣೆ' ನಡೆಸಬೇಕಾದ ಅನಿವಾರ್ಯ ಪರಿಸ್ಥಿತಿ ಕಡೆಗೆ ಬೆಳಕು ಚೆಲ್ಲುತ್ತ ಬಂದಿವೆ. ಅಲ್ಲದೆ, ಅದರ ಸಾಧಕ ಬಾಧಕಗಳ ಅಧ್ಯಯನವನ್ನೂ ಮಾಡಿವೆ. ಬಿಜೆಪಿ ಈ ವಿಚಾರವನ್ನು ತನ್ನ ಚುನಾವಣಾ ಪ್ರಣಾಳಿಕೆಯ ಭಾಗವಾಗಿ ಮಾಡಿತ್ತು. ಆದರೆ, ರಾಜಕೀಯ ಪಕ್ಷಗಳ ನಡುವೆ ಏಕಕಾಲದ ಚುನಾವಣೆ ವಿಚಾರವಾಗಿ ಒಮ್ಮತ ಮೂಡಿಲ್ಲವಾದರೂ ಚಟುವಟಿಕೆಗಳಂತೂ ನಡೆದಿವೆ.
ಚುನಾವಣಾ ಆಯೋಗವು ಮೊದಲ ಬಾರಿಗೆ 1983 ರಲ್ಲಿ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ಕಾರ್ಯಸಾಧ್ಯತೆಯನ್ನು ಅನ್ವೇಷಿಸಲು ಸಲಹೆ ನೀಡಿತು. ಭಾರತದ ಕಾನೂನು ಆಯೋಗವು 1999 ರಲ್ಲಿ ತನ್ನ 170 ನೇ ವರದಿಯಲ್ಲಿ ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವಂತೆ ಪ್ರತಿಪಾದಿಸಿತು. 2015 ರಲ್ಲಿ, ಸಂಸದೀಯ ಸ್ಥಾಯಿ ಸಮಿತಿಯು ಏಕಕಾಲಿಕ ಮತದಾನದ ಕಾರ್ಯಸಾಧ್ಯತೆಯ ಬಗ್ಗೆ ವರದಿಯನ್ನು ಸಿದ್ಧಪಡಿಸಿತು. ಕಡಿಮೆ ವೆಚ್ಚಗಳು ಮತ್ತು ಸುಧಾರಿತ ಆಡಳಿತ ದಕ್ಷತೆಯಂತಹ ಸಂಭಾವ್ಯ ಪ್ರಯೋಜನಗಳನ್ನು ಈ ವರದಿ ಉಲ್ಲೇಖಿಸಿತ್ತು.
ಅದೂ ಅಲ್ಲದೆ, ಇದನ್ನು ಕಾರ್ಯಸಾಧುವನ್ನಾಗಿಸಲು ಅಸೆಂಬ್ಲಿಗಳ ಅವಧಿಯನ್ನು 170 ದಿನಗಳವರೆಗೆ ವಿಸ್ತರಿಸಲು ಮತ್ತು 599 ದಿನಗಳವರೆಗೆ ಅವಧಿಯನ್ನು ಮೊಟಕುಗೊಳಿಸಲು ಸಮಿತಿಯು ಸಲಹೆ ನೀಡಿತ್ತು. ಇದನ್ನು 2016 ಅಥವಾ ಮುಂದಿನ 10 ವರ್ಷದ ತನಕ ಅನುಷ್ಠಾನಗೊಳಿಸುವುದು ಕಷ್ಟಸಾಧ್ಯ ಎಂದು ವರದಿ ವಿವರಿಸಿತ್ತು.
ಇದಾದ ಬಳಿಕ ವಿಶ್ರಾಂತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಸಮಿತಿಯು ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಹಂತಹಂತವಾಗಿ ಏಕಕಾಲಕ್ಕೆ ಚುನಾವಣೆ ನಡೆಸುವಂತೆ ಶಿಫಾರಸು ಮಾಡಿತ್ತು.
ಉಭಯ ಸದನಗಳಲ್ಲಿ ಚರ್ಚೆ ನಡೆದು ವಿಧೇಯಕಗಳಿಗೆ ಅಂಗೀಕಾರ ದೊರೆತು ರಾಷ್ಟ್ರಪತಿಗಳ ಅಂಕಿತ ಬಿದ್ದ ನಂತರ ಇದು ಜಾರಿಯಾಗಲಿದೆ.