UPI offline payment: ಇಂಟರ್‌ನೆಟ್ ಇಲ್ಲದೆಯೂ ಯುಪಿಐ ಹಣ ಪಾವತಿಸಿ, ಆಫ್‌ಲೈನ್ ಯುಪಿಐ ಪೇಮೆಂಟ್ ಫೀಚರ್ ಪರಿಚಯಿಸಿದ ರಿಸರ್ವ್ ಬ್ಯಾಂಕ್
RBI introduces UPI offline payment: ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಯುಪಿಐ ಲೈಟ್ ಮೂಲಕ ಪಾವತಿ ಮಿತಿಯನ್ನು 200 ರೂಪಾಯಿಯಿಂದ 500 ರೂಪಾಯಿಗೆ ಹೆಚ್ಚಿಸಿದೆ. ಏನಿದು ಯುಪಿಐ ಆಫ್‌ಲೈನ್ ಪಾವತಿ, ಸಂಭಾಷಣಾ ಪಾವತಿ ಎಂದರೇನು, ಇಲ್ಲಿದೆ ವಿವರ.
ಗೂಗಲ್ ಪೇ, ಫೋನ್‌ಪೇ, ಭೀಮ್ ಯುಪಿಐ ಇತ್ಯಾದಿ ಯುಪಿಐ ಹಣ ಪಾವತಿ ಸಂದರ್ಭದಲ್ಲಿ ಇಂಟರ್‌ನೆಟ್ ಇರಬೇಕಿರುವುದು ಅಗತ್ಯ. ಆದರೆ, ಇಂಟರ್‌ನೆಟ್ ಇಲ್ಲದ ಸಂದರ್ಭದಲ್ಲಿ ಯುಪಿಐ ಪಾವತಿ ಸಾಧ್ಯವೇ. ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ಆಫ್‌ಲೈನ್ ಯುಪಿಐ ಪಾವತಿ ಕುರಿತು ಮಹತ್ವದ ನಿರ್ಧಾರ ಪ್ರಕಟಿಸಿದೆ. ಯುಪಿಐ ಲೈಟ್‌ನಲ್ಲಿ ಸಂಭಾಷಣಾ ಪಾವತಿ ಮತ್ತು ಆಫ್‌ಲೈನ್ ಕಾರ್ಯನಿರ್ವಹಣೆ ಪರಿಚಯದ ಕುರಿತು ಆರ್‌ಬಿಐ ಗುರುವಾರ ಪ್ರಕಟಣೆ ಹೊರಡಿಸಿದೆ. ಕೇಂದ್ರ ಬ್ಯಾಂಕ್ ಇದೀಗ ಯುಪಿಐ ಲೈಟ್ ಮೂಲಕ ಪಾವತಿ ಮಿತಿಯನ್ನು 200 ರೂಪಾಯಿಯಿಂದ 500 ರೂಪಾಯಿಗೆ ಹೆಚ್ಚಿಸಿದೆ.
"ಬಳಕೆದಾರರಿಗೆ ಡಿಜಿಟಲ್ ಪಾವತಿಗಳ ಅನುಭವವನ್ನು ಹೆಚ್ಚಿಸಲು ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಯುಪಿಐನಲ್ಲಿ ಕನ್ವರ್ಷನಲ್ ಪೇಮೆಂಟ್ಸ್ ಎನೇಬಲ್ ಮಾಡುವ ಪ್ರಕ್ರಿಯೆಯಲ್ಲಿದ್ದೇವೆ. ಇದರಿಂದ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಸಿಸ್ಟಮ್ ಮೂಲಕ ಪಾವತಿ ಮಾಡಲಾಗುತ್ತದೆ. ಎನ್‌ಎಫ್‌ಸಿ ಮೂಲಕ ಆಫ್‌ಲೈನ್ ಯುಪಿಐ ಪಾವತಿ ಪರಿಚಯಿಸಲಾಗುತ್ತದೆ. ಎನ್‌ಎಫ್‌ಸಿ ಎಂದರೆ ನಿಯರ್ ಫೀಲ್ಡ್ ಕಮ್ಯುನಿಕೇಷನ್. ಮೊಬೈಲ್ ಫೋನ್‌ನಲ್ಲಿರುವ ಎನ್‌ಎಫ್‌ಸಿ ಮೂಲಕ ಈ ಆಫ್‌ಲೈನ್ ಪಾವತಿ ಸಾಧ್ಯವಾಗಲಿದೆ. ಇದು ಯುಪಿಐ ಲೈಟ್ ಮೂಲಕ ಮೊಬೈಲ್ ವ್ಯಾಲೆಟ್‌ನಲ್ಲಿ ಸಾಧ್ಯವಾಗಲಿದೆ. ಇದಕ್ಕೆ ಪಾವತಿ ಮಿತಿಯನ್ನು 200ರಿಂದ 500 ರೂ.ವರೆಗೆ ಹೆಚ್ಚಿಸಲಾಗಿದೆ. 500 ರೂಪಾಯಿವರೆಗೆ ಆಫ್‌ಲೈನ್ ಮೋಡ್‌ನಲ್ಲಿ ಎನ್‌ಎಫ್‌ಸಿ ಮೂಲಕ ಪಾವತಿಸಬಹುದು. ಒಟ್ಟಾರೆ ಪಾವತಿ ಮಿತಿ 2000 ರೂಪಾಯಿ ನಿಗದಿಪಡಿಸಲಾಗಿದೆ" ಎಂದು ಈ ಕಾರ್ಯತಂತ್ರದ ಕುರಿತು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಏನಿದು ಯುಪಿಐ ಸಂಭಾಷಣಾ ಪಾವತಿ
ಇದು ನೈಸರ್ಗಿಕ ಭಾಷಾ ಸಂವಹನ ಬಳಸಿಕೊಂಡು ವಹಿವಾಟು ನಡೆಸುವುದಾಗಿದೆ. ಅಂದರೆ, ಧ್ವನಿ ಮೂಲಕ ನೀವು ಸೂಚಿಸಿದರೆ ಆ ಪಾವತಿ ಪ್ರಕ್ರಿಯೆ ನಡೆಸಲಾಗುತ್ತದೆ. ಇದಕ್ಕಾಗಿ ಎಐ ತಂತ್ರಜ್ಞಾನ ಬಳಸಲಾಗುತ್ತದೆ.
ಯುಪಿಐ ಆಫ್‌ಲೈನ್ ಪಾವತಿ
ಸೇರ್ಪಡೆಗೊಳ್ಳಲಿರುವ ಇನ್ನೊಂದು ಪ್ರಮುಖ ಫೀಚರ್ ಆಫ್‌ಲೈನ್ ಯುಪಿಐ ಪಾವತಿ ಎಂದು ಆರ್‌ಬಿಐ ಗ್ರೂಪ್‌ನ ಚೇರ್ಮನ್ ಸುರೆನ್ ಗೋಯೆಲ್ ಹೇಳಿದ್ದಾರೆ. ಇಂಟರ್‌ನೆಟ್ ಇಲ್ಲದ ಸ್ಥಳದಲ್ಲಿ, ಇಂಟರ್‌ನೆಟ್ ಕಡಿಮೆ ಇರುವಲ್ಲಿ ಈ ಫೀಚರ್ ಬಳಸಬಹುದು. ಇಂಟರ್‌ನೆಟ್ ಇಲ್ಲದ ಸಂದರ್ಭದಲ್ಲಿ ಗ್ರಾಹಕರು ಈ ಪಾವತಿ ಪ್ರಕ್ರಿಯೆ ಆರಂಭಿಸಬಹುದು. ಇಂಟರ್‌ನೆಟ್ ಕನೆಕ್ಟ್ ಮತ್ತೆ ದೊರಕಿದಾಗ ಈ ಪಾವತಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
"ಸಣ್ಣ ಮೊತ್ತವನ್ನು ಯುಪಿಐ ಮೂಲಕ ಇಂಟರ್‌ನೆಟ್ ಇಲ್ಲದ ಸಂದರ್ಭದಲ್ಲಿಯೂ ಪಾವತಿಸಬಹುದು. ಗ್ರಾಹಕರು ಇಂಟರ್‌ನೆಟ್ ಇಲ್ಲದ ಸಂದರ್ಭದಲ್ಲಿಯೂ ಡಿಜಿಟಲ್ ಪಾವತಿ ಮಾಡುವುದನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ. ನಗದುರಹಿತ ವ್ಯವಹಾರಕ್ಕೆ ಉತ್ತೇಜನ ನೀಡುವಲ್ಲಿ ಇದು ಮಹತ್ವದ ಬದಲಾವಣೆ ತರಲಿದೆ" ಎಂದು ಅವರು ಹೇಳಿದ್ದಾರೆ.