Hindenburg Case: ಅದಾನಿ- ಹಿಂಡೆನ್ ಬರ್ಗ್ ಕೇಸ್ ತನಿಖೆ ಮುಗಿಸಲು ಸೆಬಿಗೆ 3 ತಿಂಗಳು ಸಮಯ; ಸುಪ್ರೀಂ ಕೋರ್ಟ್ ತೀರ್ಪಿನ 5 ಮುಖ್ಯ ಅಂಶಗಳು
ವಾಣಿಜ್ಯ ಜಗತ್ತಿನಲ್ಲಿ ಕುತೂಹಲ ಕೆರಳಿಸಿದ್ದ ಅದಾನಿ- ಹಿಂಡೆನ್ ಬರ್ಗ್ ಕೇಸ್‌ಗೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು (ಜ.3) ನೀಡಿದೆ. ಸೆಬಿ ತನಿಖೆಗೆ ಕಾಲಾವಕಾಶ ನೀಡಿರುವ ಕೋರ್ಟ್ ಸಿಬಿಐ ಅಥವಾ ಎಸ್‌ಐಟಿ ತನಿಖೆಯ ಬೇಡಿಕೆಯನ್ನು ತಿರಸ್ಕರಿಸಿದೆ.
ಅದಾನಿ ಹಿಂಡನ್‌ಬರ್ಗ್ ಕೇಸ್‌ನ (Adani-Hindenburg case) ವಿಚಾರಣೆಯನ್ನು ನ್ಯಾಯಾಲಯದ ನಿಗಾದಲ್ಲಿ ನಡೆಸಬೇಕು ಅಥವಾ ಸಿಬಿಐ ತನಿಖೆ ನಡೆಸಬೇಕು ಎಂಬ ಬೇಡಿಕೆಗಳನ್ನು ಪುರಸ್ಕರಿಸುವುದಕ್ಕೆ ಅಗತ್ಯ ಅಂಶಗಳು ಇಲ್ಲ ಎಂದು ಸುಪ್ರೀಂ ಕೋರ್ಟ್ (Supreme Court of India) ಬುಧವಾರ (ಜ.3) ಹೇಳಿದೆ.
ಅದಾನಿ- ಹಿಂಡೆನ್‌ಬರ್ಗ್ ಕೇಸ್‌ನ ತೀರ್ಪನ್ನು (Adani-Hindenburg case verdict) ಸುಪ್ರೀಂ ಕೋರ್ಟ್ ಇಂದು (ಜ.3) ನೀಡಿದೆ. ಹಿಂಡೆನ್‌ಬರ್ಗ್ ಸಂಶೋಧನಾ ವರದಿಯಲ್ಲಿ ಅದಾನಿ ಗ್ರೂಪ್ ಆಫ್ ಕಂಪನಿಗಳ ವಿರುದ್ಧ ಮಾಡಿರುವ ಆರೋಪಗಳ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆ ಅಥವಾ ಸಿಬಿಐ ತನಿಖೆಗೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ಗುಚ್ಛವನ್ನು ಪರಿಶೀಲಿಸಿದ ಬಳಿಕ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಪ್ರಕಟಿಸಿತು.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿದೆ.
ಅದಾನಿ - ಹಿಂಡೆನ್‌ಬರ್ಗ್ ಕೇಸ್ ತೀರ್ಪಿನ 5 ಮುಖ್ಯ ಅಂಶಗಳು
1. ಹಿಂಡೆನ್ ರಿಸರ್ಚ್ ವರದಿ ಉಲ್ಲೇಖಿಸಿರುವ ಆರೋಪಗಳ ಕುರಿತು ಸೆಬಿ ನಡೆಸುತ್ತಿರುವ ತನಿಖೆಯ ಹಳಿ ತಪ್ಪಿಸುವಂತಹ ಕೆಲವು ಬೇಡಿಕೆಗಳನ್ನು ಕೆಲವು ಅರ್ಜಿದಾರರು ಮಾಡಿದ್ದಾರೆ. ಅಂಥವನ್ನು ಪುರಸ್ಕರಿಸಲಾಗದು. ಹೀಗಾಗಿ ಅದಾನಿ- ಹಿಂಡೆನ್‌ಬರ್ಗ್ ಪ್ರಕರಣದ ತನಿಖೆಯನ್ನು ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾದಿಂದ (ಸೆಬಿ) ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವರ್ಗಾಯಿಸಲಾಗದು. ಅಂತಹ ಕ್ರಮಕ್ಕೆ ಪೂರಕವಾಗಿರುವ ಯಾವುದೇ ಆಧಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ ಹೇಳಿದರು. ಇದಕ್ಕೆ ಸಂಬಂಧಿಸಿದ ಎಲ್ಲ ಅರ್ಜಿಗಳನ್ನು ನ್ಯಾಯಪೀಠ ತಿರಸ್ಕರಿಸಿದೆ.
2. ಸೆಬಿ ಈಗಾಗಲೇ 22 ವಿಷಯಗಳ ಪೈಕಿ 20ರ ತನಿಖೆಯನ್ನು ಪೂರ್ಣಗೊಳಿಸಿದೆ. ಇನ್ನುಳಿದ 2 ಆರೋಪಗಳ ತನಿಖೆಯನ್ನು ಇನ್ನು ಮೂರು ತಿಂಗಳ ಒಳಗಾಗಿ ಪುರ್ಣಗೊಳಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ ಅವರಿದ್ದ ನ್ಯಾಯಪೀಠ ಆದೇಶಿಸಿದೆ.
3. ಒಸಿಸಿಆರ್‌ಪಿ (Organized Crime and Corruption Reporting Project) ವರದಿಯನ್ನು ಪರಿಗಣಿಸಿ ಸೆಬಿಯ ತನಿಖೆಯನ್ನು ಅನುಮಾನಿಸುವುದಕ್ಕೆ ಸಾಧ್ಯವಿಲ್ಲ. ಯಾವುದೇ ಪರಿಶೀಲನೆ ಇಲ್ಲದೇ ತೃತೀಯ ಸಂಸ್ಥೆ ಸಿದ್ಧಪಡಿಸಿದ ವರದಿಯನ್ನು ಪುರಾವೆ ಎಂದು ಸ್ವೀಕರಿಸುವುದು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಇದೇ ವೇಳೆ ಸ್ಪಷ್ಟವಾಗಿ ಹೇಳಿತು.
4. ಸೆಬಿ ಎಂಬುದು ಶಾಸನಬದ್ಧ ನಿಯಂತ್ರಕ ಸಂಸ್ಥೆ. ಪತ್ರಿಕೆಗಳ ಅಥವಾ ತೃತೀಯ ಸಂಸ್ಥೆಗಳ ವರದಿಯನ್ನು ಪರಿಗಣಿಸುತ್ತ, ಸೆಬಿಯ ನೈತಿಕ ಸ್ಥೈರ್ಯವನ್ನು ಕಡಿಮೆ ಮಾಡಲಾಗದು. ಅದು ಆತ್ಮವಿಶ್ವಾಸವನ್ನು ತುಂಬುವ ಕೆಲಸ ಮಾಡುವುದಿಲ್ಲ. ಪತ್ರಿಕೆಗಳ ಅಥವಾ ತೃತೀಯ ಸಂಸ್ಥೆಗಳ ವರದಿಯನ್ನು ಮಾಹಿತಿಗಳಾಗಿ ಪರಿಗಣಿಸಬಹುದು. ಅದರೆ ಅವು ಸೆಬಿ ತನಿಖೆಯನ್ನು ಅನುಮಾನಿಸುವುದಕ್ಕೆ ನಿರ್ಣಾಯಕವೆನಿಸುವ ಪುರಾವೆ ಅಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿತು.
5. ಶಾರ್ಟ್ ಸೆಲ್ಲಿಂಗ್ ಕುರಿತ ಹಿಂಡೆನ್‌ಬರ್ಗ್ ವರದಿಯಲ್ಲಿ ಉಲ್ಲೇಖವಾಗಿರುವಂತೆ, ಆ ಆರೋಪದ ಪ್ರಕಾರ ಯಾವುದೇ ಕಾನೂನು ಉಲ್ಲಂಘನೆ ಆಗಿದೆಯೇ ಎಂದು ತನಿಖೆ ನಡೆಸುವಂತೆ ಮತ್ತು ಹಾಗಿದ್ದಲ್ಲಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು ಸೆಬಿಗೆ ಆದೇಶಿಸಿದೆ. ನಿಯಂತ್ರಣ ಚೌಕಟ್ಟನ್ನು ಬಲಪಡಿಸಲು ತಜ್ಞರ ಸಮಿತಿಯ ಶಿಫಾರಸನ್ನು ಪರಿಗಣಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮತ್ತು ಸೆಬಿಗೆ ಕೋರ್ಟ್ ತಿಳಿಸಿದೆ.
ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾಗುತ್ತಿರುವಾಗಲೇ, ಇಂಟ್ರಾ ಡೇ ವಹಿವಾಟಿನಲ್ಲಿ ಅದಾನಿ ಗ್ರೂಪ್‌ನ ಷೇರುಗಳ ಮೌಲ್ಯ ಶೇಕಡ 3ರಿಂದ ಶೇಕಡ 18 ಏರಿದೆ.