Lost Decade: ನಿಮ್ಮ ಅವಾಂತರಗಳಿಂದ ಭಾರತ ಒಂದು ದಶಕವನ್ನು ಕಳೆದುಕೊಂಡಿದೆ: ವಿಪಕ್ಷಗಳತ್ತ ಚಾಟಿ ಬೀಸಿದ ಪ್ರಧಾನಿ!
2004-2014 ಭಾರತದ ಪಾಲಿಗೆ ಅಭೂತಪೂರ್ವ ಅವಕಾಶಗಳನ್ನು ಕಳೆದುಕೊಂಡ ದಶಕವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಗುಡುಗಿದ್ದಾರೆ. ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಭಾಷಣ ಮಾಡಿದ ಪ್ರಧಾನಿ ಮೋದಿ, ವಿಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ನವದೆಹಲಿ: 2004-2014 ಭಾರತದ ಪಾಲಿಗೆ ಅಭೂತಪೂರ್ವ ಅವಕಾಶಗಳನ್ನು ಕಳೆದುಕೊಂಡ ದಶಕವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಗುಡುಗಿದ್ದಾರೆ. ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಭಾಷಣ ಮಾಡಿದ ಪ್ರಧಾನಿ ಮೋದಿ, ವಿಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಹೊಸ ಸಹಸ್ರಮಾನ 2000ಕ್ಕೆ ಭಾರತ ಕಾಲಿಟ್ಟಾಗ ಅಭೂತಪೂರ್ವ ಅವಕಾಶಗಳನ್ನು ಹೊಂದಿತ್ತು. ಆದರೆ 2004ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ, ಭ್ರಷ್ಟಾಚಾರದಲ್ಲಿ ಮುಳಗಿದ ಪರಿಣಾಮಾಗಿ, ಭಾರತ ಈ ಅಭೂತಪೂರ್ವ ಅವಕಾಶವನ್ನು ಕಳೆದುಕೊಂಡಿತು ಎಂದು ಪ್ರಧಾನಿ ಮೋದಿ ಆರೋಪಿಸಿದರು.
ಇಡೀ ಜಗತ್ತು ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಹಾತೋರೆಯುತ್ತಿದ್ದಾಗ, ಭಾರತದಲ್ಲಿ ಕಲ್ಲಿದ್ದಲು ಹಗರಣ ನಡೆಯಿತು. ಇಡೀ ವಿಶ್ವ ತಂತ್ರಜ್ಞಾನ ಹಾಗೂ ಡಿಜಿಟಲ್ ಕ್ರಾಂತಿಯತ್ತ ಗಮನಹರಿಸಿದ್ದರೆ, ಭಾರತದಲ್ಲಿ 2ಜಿ ಹಗರಣ ನಡೆಯಿತು. ವಿಶ್ವದ ಯುವ ಸಮುದಾಯ ಕ್ರೀಡಾ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡುತ್ತಿದ್ದಾಗ, ಭಾರತದಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಹಗರಣ ನಡೆಯಿತು. ಹೀಗೆ ಭಾರತ ಹಗರಣಗಳಲ್ಲೇ ಮುಳುಗಿ ಅಪೂರ್ವ ಅವಕಾಶಗಳನ್ನು ಕೈಚೆಲ್ಲಿತು ಎಂದು ಪ್ರಧಾನಿ ಮೋದಿ ತೀವ್ರ ವಾಗ್ದಾಳಿ ನಡೆಸಿದರು.
ನೀವು ಮಾಡಿದ ಅವಾಂತರಗಳಿಂದ ಭಾರತ ಒಂದು ದಶಕವನ್ನು ಕಳೆದುಕೊಂಡಿದೆ. 2004-2014 ಕಳೆದು ಹೋದ ದಶಕ ಎಂದು ಭಾರತದ ಇತಿಹಾಸದಲ್ಲಿ ದಾಖಲಾಗಿದೆ. ಆದರೆ ಭಾರತ ಮತ್ತೆ ಎಂದಿಗೂ ಇಂತಹ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ಭಾರತ ಇನ್ನೇನಿದ್ದರೂ ಅವಕಾಶಗಳನ್ನು ಬಾಚಿಕೊಳ್ಳುತ್ತದೆ ಎಂದು ಪ್ರಧಾನಿ ಮೋದಿ ಇದೇ ವೇಳೆ ಭರವಸೆ ನೀಡಿದರು.
ನೀವು ಪ್ರತಿ ಅವಕಾಶವನ್ನು ತೊಂದರೆಯನ್ನಾಗಿ ಪರಿವರ್ತಿಸಿದ್ದೀರಿ. ಆದರೆ ನಾವು ಈ ತೊಂದರೆಗಳನ್ನು ದೂರ ಮಾಡಿ, ಹೊಸ ಅವಕಾಶಗಳ ಬಾಗಿಲನ್ನು ತೆರೆದಿದ್ದೇವೆ. ಭಾರತದ ನಾಗಾಲೋಟವನ್ನು ತಡೆಯುವ ಶಕ್ತಿ ಇಡೀ ವಿಶ್ವದಲ್ಲಿಯೇ ಇಲ್ಲ. ಜಾಗತಿಕ ಭೂಪಟದಲ್ಲಿ ಭಾರತ ಪ್ರಜ್ವಲಿಸುವ ದಿನಗಳು ದೂರವಿಲ್ಲ ಎಂದು ಪ್ರಧಾನಿ ಮೋದಿ ಗಟ್ಟಿ ಧ್ವನಿಯಲ್ಲಿ ಹೇಳಿದರು.
ಭಾರತ ಈಗ ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುತ್ತಿದೆ. ದೇಶದ ಪ್ರತಿ ಹಳ್ಳಿಗೂ ವಿದ್ಯುತ್ ತಲುಪುತ್ತಿದೆ. ತಂತ್ರಜ್ಞಾನ ಹಾಗೂ ಡಿಜಿಟಲ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಯೇ ನಡೆಯುತ್ತಿದೆ. ನಮ್ಮ ಯುವ ಕ್ರೀಡಾಪಟುಗಳು ದೇಶ-ವಿದೇಶಗಳಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸುತ್ತಿದ್ದಾರೆ. ಭಾರತ ಇನ್ನೆಂದೂ ನಿಲ್ಲುವುದಿಲ್ಲ ಎಂದು ಪ್ರಧಾನಿ ಮೋದಿ ಆತ್ಮವಿಶ್ವಾಸದಿಂದ ನುಡಿದರು.
ಭಾರತದ ಸ್ಥಾನಮಾನ ಜಾಗತಿಕ ವೇದಿಕೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಗತ್ತು ಈಗ ಭಾರತದ ನಾಯಕತ್ವವನ್ನು ಬಯಸುತ್ತದೆ. ಈ ಅಭಿವೃದ್ಧಿಯ ಮಾರ್ಗದಲ್ಲಿ ಸಮಸ್ತ ಭಾರತೀಯರು ಒಂದಾಗಿ ಮುನ್ನಡೆಯುತ್ತಿದ್ದಾರೆ. ನಾವೆಲ್ಲರೂ ಒಗ್ಗೂಡಿ ಭವ್ಯ ಭಾರತವನ್ನು ನಿರ್ಮಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಬಾರತ ಏನು ಹೇಳುತ್ತಿದೆ ಎಂಬುದನ್ನು ಈಗ ವಿಶ್ವ ಕಿವಿಗೊಟ್ಟು ಕೇಳುತ್ತಿದೆ. ವಿಶ್ವಕ್ಕೆ ಭಾರತದ ತಾಕತ್ತಿನ ಪ್ರದರ್ಶನವಾಗಿದೆ. ಜಾಗತಿಕ ಬೆಳವಣಿಗೆಯಲ್ಲಿ ಭಾರತ ನಿರ್ವಹಿಸಬಹುದಾದ ಪಾತ್ರವನ್ನು ಇಡೀ ವಿಶ್ವ ಒಪ್ಪಿಕೊಂಡಿದೆ. ಆದರೆ ನಮ್ಮಲ್ಲಿಯೇ ಇರುವ ಕೆಲವು ಮನಸ್ಸುಗಳು ಈ ಸತ್ಯವನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ ಎಂದು ಪ್ರಧಾನಿ ಮೋದಿ ಪರೋಕ್ಷವಾಗಿ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.
ಭಾರತವನ್ನು ಹಿಂದಕ್ಕೆ ಕೊಂಡೊಯ್ಯಬೇಕು ಎಂಬ ಬಯಕೆ ನಮ್ಮಲ್ಲಿ ಯಾರಿಗೂ ಇಲ್ಲ ಎಂದು ನಾವು ಭಾವಿಸುತ್ತೇನೆ. ಸದೃಢ ಭಾರತ ನಿರ್ಮಾಣದಲ್ಲಿ ವಿಪಕ್ಷಗಳ ಪಾತ್ರವೂ ಇದೆ. ಹೀಗಾಗಿ ಸದಾಕಾಲ ಸರ್ಕಾರವನ್ನು ತೆಗಳುವುದರಲ್ಲೇ ಕಾಲ ಕಳೆಯುವ ಬದಲು, ದೇಶ ನಿರ್ಮಾಣ ಕಾರ್ಯದಲ್ಲಿ ರಚನಾತ್ಮಕ ಟೀಕೆಗಳನ್ನು ಮಾಡುವ ತಮ್ಮ ಜವಾಬ್ದಾರಿಯನ್ನು ವಿಪಕ್ಷಗಳು ನಿರ್ವಹಿಸಲಿವೆ ಎಂಬ ವಿಶ್ವಾಸ ನನಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ವಿಭಾಗ