ಕನ್ನಡ ಸುದ್ದಿ  /  Nation And-world  /  Delhi News After Delhi Cm Aravind Kejriwal Arrest His Wife Sunita Kejriwal Former Irs Officer May Take Over Top Post Kub

Sunita Kejriwal: ಅರವಿಂದ ಕೇಜ್ರಿವಾಲ್‌ ಬದಲು ದೆಹಲಿ ಸಿಎಂ ಆಗಿ ಪತ್ನಿ ಸುನೀತಾ ಕೇಜ್ರಿವಾಲ್‌?

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಪತ್ನಿ ಸುನೀತಾ ಕೇಜ್ರಿವಾಲ್‌ ಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ಕುರಿತು ಸಾಧ್ಯತೆಗಳಿವೆ.

ಸುನೀತಾ ಅಗರವಾಲ್‌.
ಸುನೀತಾ ಅಗರವಾಲ್‌.

ದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಅಬಕಾರಿ ನೀತಿ ಹಗರಣದಲ್ಲಿ ಕೇಂದ್ರೀಯ ಜಾರಿ ನಿರ್ದೇಶನಾಲಯ( ED) ಬಂಧಿಸಿ ವಾರವೇ ಕಳೆದಿದೆ. ಜಾರಿ ನಿರ್ದೇಶನಾಲಯದ ಸುಪರ್ದಿಯಲ್ಲಿರುವ ಅರವಿಂದ ಕೇಜ್ರಿವಾಲ್‌ ಅಲ್ಲಿಂದಲೇ ಆಡಳಿತ ನಡೆಸುತ್ತಿದ್ದಾರೆ. ಜಾಮೀನಿಗಾಗಿ ಅರ್ಜಿ ಸಲ್ಲಿಸಿದರೂ ಇನ್ನೂ ಅದು ಪುರಸ್ಕೃತವಾಗಿಲ್ಲ. ಇದರಿಂದ ತಮ್ಮ ಸಹದ್ಯೋಗಿ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ, ಸಚಿವರ ರೀತಿಯಲ್ಲಿಯೇ ಜೈಲಿಗೆ ಕಳುಹಿಸಬಹುದು ಎನ್ನುವ ಆತಂಕ ಅರವಿಂದ ಕೇಜ್ರಿವಾಲ್‌ ಅವರಲ್ಲಿದೆ. ಸತತ ಎರಡನೇ ಬಾರಿಗೆ ಭಾರೀ ಬಹುಮತದೊಂದಿಗೆ ದೆಹಲಿ ಸಿಎಂ ಆಗಿರುವ ಅರವಿಂದ ಕೇಜ್ರಿವಾಲ್‌ ಅವರು ಅಧಿಕಾರ ಬಿಡುವ ಪರಿಸ್ಥಿತಿ ಬಂದರೆ ಏನು ಮಾಡಬಹುದು. ಯಾರನ್ನು ಅಧಿಕಾರಕ್ಕೆ ತರಬಹುದು ಎನ್ನುವ ಚರ್ಚೆಗಳು ನಡೆದಿವೆ.

ಅರವಿಂದ ಕೇಜ್ರಿವಾಲ್‌ ಅವರು ರಾಜಕೀಯ ಕಾರಣಗಳಿಗೆ ಮುಖ್ಯಮಂತ್ರಿ ಗಾದಿ ತೊರೆಯುವ ಸನ್ನಿವೇಶ ಎದುರಾದರೆ ಅವರು ತಮ್ಮ ಪತ್ನಿ ಸುನೀತಾ ಕೇಜ್ರಿವಾಲ್‌ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸಬಹುದು ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಆ ಸ್ಥಾನವನ್ನು ಪತ್ನಿ ನಿಲ್ಲುವಂತೆ ಮಾಡುವ ಉದ್ದೇಶ ಹೊಂದಿದ್ದಾರೆ ಎನ್ನುತ್ತವೆ ಕೇಜ್ರಿವಾಲ್‌ ಆಪ್ತ ಮೂಲಗಳು.

ಇದೇ ಕಾರಣದಿಂದ ಏಕಾಏಕಿ ಸುನೀತಾ ಕೇಜ್ರಿವಾಲ್‌ ಅವರು ಸಾರ್ವಜನಿಕವಾಗಿ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಪತಿ ಬಂಧನದ ವಿಚಾರದಲ್ಲೂ ಪ್ರತಿಕ್ರಿಯೆಯನ್ನು ತಾವೇ ನೀಡುತ್ತಿದ್ದಾರೆ ಎನ್ನಲಾಗಿದೆ.

ಬಿಜೆಪಿ ಪ್ರತಿಕ್ರಿಯೆ

ಇದೇ ವಿಷಯವಾಗಿ ಬಿಜೆಪಿ ಕೂಡ ಪ್ರತಿಕ್ರಿಯೆ ನೀಡಿದೆ. ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ ಮಾತನಾಡಿ, ಕೇಜ್ರಿವಾಲ್‌ ಅವರ ಮುಖ್ಯಮಂತ್ರಿ ಅವಧಿ ಮುಗಿಯಲು ಬರುತ್ತಿದೆ. ತಾವು ರಾಜೀನಾಮೆ ನೀಡಿದರೆ ಪತ್ನಿ ಸುನೀತಾ ಕೇಜ್ರಿವಾಲ್‌ ಅವರನ್ನು ತಂದು ಕೂರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಸುನೀತಾ ಕೇಜ್ರಿವಾಲ್‌ ಅವರು ಕೇಜ್ರಿವಾಲ್‌ ಅವರಿಗೆ ಆದಾಯ ತೆರಿಗೆ ಇಲಾಖೆಯ ಸಹದ್ಯೋಗಿ ಮಾತ್ರವೇ ಆಗಿರಲಿಲ್ಲ. ನಂತರ ಮದುವೆಯಾದರು. ಈಗ ರಾಜಕೀಯ ಸನ್ನಿವೇಶದಲ್ಲಿ ಆಪ್‌ನಲ್ಲಿ ಎಲ್ಲರನ್ನೂ ಹಿಂದಿಕ್ಕಿ ದೆಹಲಿ ಉನ್ನತ ಹುದ್ದೆ ಅಲಂಕರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.

ಕೇಜ್ರಿವಾಲ್‌ ಅವರು ಅಬಕಾರಿ ಹಗರಣದಲ್ಲಿ ಒಂಬತ್ತು ಬಾರಿ ಸಮನ್ಸ್‌ಗೆ ಉತ್ತರ ನೀಡಲೇ ಇಲ್ಲ. ಆಗ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೇಜ್ರಿವಾಲ್‌ ಮನೆಗೆ ಹೋದರು ಎಂದು ಪುರಿ ಹೇಳಿದರು.

ಯಾರು ಸುನೀತಾ

ಸುನೀತಾ ಕೇಜ್ರಿವಾಲ್‌ ಅವರು 1994 ನೇ ಬ್ಯಾಚ್‌ನ ಭಾರತೀಯ ಆದಾಯ ತೆರಿಗೆ ಇಲಾಖೆ( IRS) ಅಧಿಕಾರಿ. ಆದಾಯ ತೆರಿಗೆ ಇಲಾಖೆಯಲ್ಲಿ 22 ವರ್ಷಗಳ ಕಾಲ ಕೆಲಸ ಮಾಡಿರುವ ಸುನೀತಾ ನಂತರ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ. ಕೇಜ್ರಿವಾಲ್‌ ಅವರು 1995 ನೇ ಬ್ಯಾಚ್‌ ನ ಐಆರ್‌ ಎಸ್‌ ಅಧಿಕಾರಿ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ತರಬೇತಿಗೆಂದು ಹೋದಾಗ ಪರಿಚಯವಾದ ಸುನೀತಾ ಅವರನ್ನು ವಿವಾಹವಾಗಿದ್ದರು.

58 ವರ್ಷದ ಸುನೀತಾ ಕೇಜ್ರಿವಾಲ್‌ ಅವರು 2016ರಲ್ಲಿ ದೆಹಲಿಯಲ್ಲಿ ಆದಾಯ ತೆರಿಗೆ ಮೇಲ್ಮನವಿ ಮಂಡಳಿಯ ಮುಖ್ಯಸ್ಥರಾಗಿದ್ದರು. ಅದೇ ಅವರು ಕಾರ್ಯನಿರ್ವಹಿಸಿದ ಕೊನೆಯ ಹುದ್ದೆ.

ಇದಾದ ನಂತರ ಕೇಜ್ರಿವಾಲ್‌ ಅವರೊಂದಿಗೆ ಭ್ರಷ್ಟಾಚಾರ ವಿರೋಧಿ ಹೋರಾಟಗಳಲ್ಲಿ ಅವರು ಪಾಲ್ಗೊಳ್ಳುತ್ತಿದ್ದರು. ವಾರಣಾಸಿಯಲ್ಲಿ ನರೇಂದ್ರ ಮೋದಿ ವಿರುದ್ದ 2014ರಲ್ಲಿ ಲೋಕಸಭೆ ಚುನಾವಣೆಗೆ ಕೇಜ್ರಿವಾಲ್‌ ಸ್ಪರ್ಧಿಸಿದಾಗ ಅಲ್ಲಿಗೆ ರಜೆ ಹಾಕಿ ಸುನೀತಾ ಬಂದು ಪತಿ ಪರವಾಗಿ ಕೆಲಸ ಮಾಡಿದ್ದರು.

2015ರಲ್ಲಿ ಮೊದಲ ಬಾರಿಗೆ ದೆಹಲಿ ಚುನಾವಣೆಯಲ್ಲಿ ಆಪ್‌ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗ ಅರವಿಂದ ಕೇಜ್ರಿವಾಲ್‌ ಅವರು ಸುನೀತಾ ಅವರಿಗೆ ಗೆಲುವಿನ ಶ್ರೇಯವನ್ನು ಸಲ್ಲಿಸಿ ಟ್ವೀಟ್‌ ಮಾಡಿದ್ದರು.

ಮುಂದಿನ ವರ್ಷ ದೆಹಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಕಾರಣದಿಂದ ಆಮ್‌ ಆದ್ಮಿ ಪಕ್ಷಕ್ಕೆ ನಾಯಕತ್ವದ ಕೊರತೆ ಎದುರಾಗಲಿದೆ. ಇದನ್ನು ಸುನೀತಾ ತುಂಬಬಹುದು ಎನ್ನುವ ಲೆಕ್ಕಾಚಾರಗಳು ನಡೆದಿವೆ.

IPL_Entry_Point