ayodhya Ram mandir: ಅಯೋಧ್ಯೆ ರಾಮಮಂದಿರ ಉದ್ಘಾಟನೆ ದಿನ 5 ರಾಜ್ಯಗಳಲ್ಲಿ ಮದ್ಯ ಸಿಗೋಲ್ಲ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ayodhya Ram Mandir: ಅಯೋಧ್ಯೆ ರಾಮಮಂದಿರ ಉದ್ಘಾಟನೆ ದಿನ 5 ರಾಜ್ಯಗಳಲ್ಲಿ ಮದ್ಯ ಸಿಗೋಲ್ಲ

ayodhya Ram mandir: ಅಯೋಧ್ಯೆ ರಾಮಮಂದಿರ ಉದ್ಘಾಟನೆ ದಿನ 5 ರಾಜ್ಯಗಳಲ್ಲಿ ಮದ್ಯ ಸಿಗೋಲ್ಲ

liquor ban ರಾಮಮಂದಿರ ಉದ್ಘಾಟನೆಯಾಗುವ ಜನವರಿ 22ರಂದು ಐದು ರಾಜ್ಯಗಳು ಒಣ ದಿನ ಘೋಷಿಸಿವೆ. ಆ ದಿನ ಮದ್ಯ ಮಾರಾಟ ಇರುವುದಿಲ್ಲ ಎನ್ನುವ ಆದೇಶ ಹೊರಡಿಸಲಾಗಿದೆ.

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ದಿನ ಐದು ರಾಜ್ಯಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ದಿನ ಐದು ರಾಜ್ಯಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

ದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಎಲ್ಲೆಡೆ ಉತ್ಸಾಹ, ಉಮೇದು ಜೋರಾಗಿಯೇ ಇದೆ. ಭಕ್ತಿಭಾವದ ರೂಪದಲ್ಲಿ ಇಡೀ ಕಾರ್ಯಕ್ರಮ ರೂಪಿಸುವ ಚಟುವಟಿಕೆಗಳು ನಡೆದಿವೆ. ಇದರ ನಡುವೆ ಹಲವು ರಾಜ್ಯಗಳು ರಾಮಮಂದಿರ ಉದ್ಘಾಟನೆ ದಿನವಾದ ಜನವರಿ 22ರಂದು ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿವೆ. ಅಯೋಧ್ಯೆ ಇರುವ ಉತ್ತರ ಪ್ರದೇಶವೇ ಮೊದಲು ಇಂತಹದೊಂದು ನಿರ್ಧಾರ ತೆಗೆದುಕೊಂಡಿದ್ದು, ಇತರೆ ರಾಜ್ಯಗಳೂ ಅಂದು ಮದ್ಯ ಮಾರಾಟ ನಿಷೇಧ ಮಾಡಿ ಆದೇಶಿಸಿವೆ.

ಈವರೆಗೂ ಉತ್ತರ ಪ್ರದೇಶ ಸೇರಿ 5 ರಾಜ್ಯಗಳು ಭಾನುವಾರದಂದು ಮದ್ಯದಂಗಡಿಗಳ ಬಂದ್‌, ವಹಿವಾಟು ಸ್ಥಗಿತಗೊಳಿಸಿ ಆದೇಶ ಜಾರಿ ಮಾಡಿದ್ದು, ಇನ್ನೂ ಕೆಲವು ರಾಜ್ಯಗಳಲ್ಲೂ ಇದು ಜಾರಿಯಾಗಬಹುದು.

ಇದೊಂದು ಐತಿಹಾಸಿಕ ಕಾರ್ಯಕ್ರಮ. ಇಡೀ ದೇಶವೇ ನಮ್ಮ ಕಾರ್ಯಕ್ರಮ ಎನ್ನುವ ರೀತಿಯಲ್ಲಿ ಸ್ಪಂದಿಸುತ್ತಿದೆ. ಈ ಕಾರ್ಯಕ್ರಮಕ್ಕೆ ಧಾರ್ಮಿಕ ಮಹತ್ವವೂ ಇದೆ. ಸಾಂಸ್ಕೃತಿಕವಾಗಿಯೂ ಅಂದು ಜನ ನೆನಪಿನಲ್ಲಿಟ್ಟುಕೊಳ್ಳುವ ದಿನ. ಅಂದು ಒಣ ದಿನ ಘೋಷಿಸಿದರೆ ಜನರೂ ಅದಕ್ಕೆ ಗೌರವಿಸುತ್ತಾರೆ ಎನ್ನುವ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಲಾಗಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಮೊದಲು ಈ ಕುರಿತು ಆದೇಶ ಜಾರಿಗೊಳಿಸಿದ್ದಾರೆ. ಅಯೋಧ್ಯೆ ಮಾತ್ರವಲ್ಲದೇ ಇಡೀ ರಾಜ್ಯದಲ್ಲಿ ಶಾಂತಿಯುತ ವಾತಾವರಣ ಇರಲಿ ಎನ್ನುವ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಯೋಗಿ ಆದಿತ್ಯನಾಥ್‌ ತಿಳಿಸಿದ್ಧಾರೆ.

ಅದೇ ರೀತಿ ರಾಜಸ್ಥಾನ ರಾಜ್ಯದಲ್ಲೂ ಆ ದಿನ ಮದ್ಯ ಸಿಗುವುದಿಲ್ಲ. ಎಲ್ಲ ಬಾರ್‌ಗಳನ್ನು ಮುಚ್ಚಿ ವಹಿವಾಟು ಬಂದ್‌ ಮಾಡುವಂತೆ ಅಬಕಾರಿ ಇಲಾಖೆ ಸೂಚನೆ ನೀಡಿದೆ.

ಬಿಜೆಪಿ ಆಡಳಿತ ಇರುವ ಅಸ್ಸಾಂನಲ್ಲೂ ಈ ಆದೇಶ ಜಾರಿಯಾಗಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರ್ಮ ಅವರು ರಾಮಮಂದಿರ ಉದ್ಘಾಟನೆ ದಿನ ಗೌರವ ಸೂಚಕವಾಗಿ ಅಂದು ಮದ್ಯ ಮಾರಾಟ ಇರುವುದಿಲ್ಲ ಎಂದು ಹೇಳಿದ್ದಾರೆ.

ಛತ್ತೀಸಗಢದಲ್ಲೂ ಕೂಡ ಅಂದು ದಿನವಿಡೀ ಮದ್ಯ ಮಾರಾಟ ಇರುವುದಿಲ್ಲ. ಛತ್ತೀಸಗಢಕ್ಕೂ ರಾಮನಿಗೂ ನಂಟು ಇರುವುದರಿಂದ ಅಂದು ನಾವೂ ರಾಮಮಂದಿರ ಉದ್ಘಾಟನೆ ಸಡಗರದಲ್ಲಿ ಭಾಗಿಯಾಗುತ್ತೇವೆ. ಇದಕ್ಕಾಗಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ತಿಳಿಸಲಾಗಿದೆ.

ಪ್ರಮುಖ ಧಾರ್ಮಿಕ ಪ್ರವಾಸಿ ರಾಜ್ಯವಾಗಿರುವ ಉತ್ತರಾಖಂಡದಲ್ಲೂ ಅಂದು ಮದ್ಯ ಮಾರಾಟ ನಿಷೇಧ ಮಾಡಿ ಆದೇಶ ಹೊರಡಿಸಲಾಗಿದೆ.

ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಶಾಂತಿಯುತವಾಗಿ ಕಾರ್ಯಕ್ರಮ ನಡೆಯಬೇಕು. ಯಾವುದೇ ಅನಾಹುತಗಳು ಈ ದಿನ ನಡೆಯಬಾರದು ಎನ್ನುವ ಕಾರಣದಿಂದಲೇ ಆದೇಶ ಜಾರಿಯಾಗಲಿದೆ. ಅಯೋಧ್ಯೆ ಮಾತ್ರವಲ್ಲದೇ ದೇಶದ ಹಲವು ಕಡೆ ಅಂದು ಜನ ಸೇರಿ ಚಟುವಟಿಕಗಳಲ್ಲಿ ಭಾಗಿಯಾಗುವ ಸಾಧ್ಯತೆಗಳೂ ಇವೆ. ಇದನ್ನೇ ಬಹುತೇಕ ರಾಜ್ಯಗಳು ಆದೇಶದಲ್ಲಿ ಉಲ್ಲೇಖಿಸಿವೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.