Sadguru Jaggi Vasudev: ಸದ್ಗುರು ಜಗ್ಗಿ ವಾಸುದೇವ್ ಅಸ್ವಸ್ಥ, ದೆಹಲಿಯಲ್ಲಿ ಶಸ್ತ್ರ ಚಿಕಿತ್ಸೆ
ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ತಲೆನೋವು ಕಾಣಿಸಿಕೊಂಡು ರಕ್ತಸ್ರಾವದಿಂದ ತಲೆಬುರುಡೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಈಗ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
ದೆಹಲಿ; ಕಳೆದ ವಾರವಿನ್ನೂ ಶಿವರಾತ್ರಿ ಹಬ್ಬವನ್ನು ಸಡಗರದಿಂದ ಆಚರಿಸಿ ಲಕ್ಷಾಂತರ ಭಕ್ತರಲ್ಲಿ ಉತ್ತೇಜನ ತುಂಬಿದ್ದ ಇಶಾ ಫೌಂಡೇಷನ್‌ನ ಜಗ್ಗಿ ವಾಸುದೇವ್ ಅಸ್ವಸ್ಥಗೊಂಡಿದ್ದು, ಅವರಿಗೆ ದೆಹಲಿಯಲ್ಲಿ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದೆ. ಮೆದುಳಿನಲ್ಲಿ ರಕ್ತ ಸ್ರಾವವಾಗಿ ಸಮಸ್ಯೆಯಾಗಿದ್ದರಿಂದ ಬುಧವಾರವೇ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಈಗ ನಿಧಾನವಾಗಿ ಜಗ್ಗಿ ವಾಸುದೇವ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಮಾರ್ಚ್ 14ರಂದು ದೆಹಲಿಗೆ ಬಂದಿದ್ದ ಸದ್ಗುರು ಅವರಿಗೆ ತೀವ್ರ ತಲೆನೋವು ಕಾಣಿಸಿಕೊಂಡಿತ್ತು. ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಆನಂತರ ತಪಾಸಣೆ ಮಾಡಿದಾಗ ಮೆದುಳಿನಲ್ಲಿ ರಕ್ತಸ್ರಾವವಾಗಿರುವುದು ಕಂಡು ಬಂದಿತ್ತು. ಇದಕ್ಕೆ ಶಸ್ತ್ರ ಚಿಕಿತ್ಸೆ ಆಗಬೇಕು ಎನ್ನುವುದನ್ನು ತಜ್ಞ ವೈದ್ಯರು ತಿಳಿಸಿದ್ದರು. ಅವರ ಸೂಚನೆಯಂತೆ ಶಸ್ತ್ರ ಚಿಕಿತ್ಸೆ ನಡೆದಿದೆ.
ಅಪೋಲೋ ಆಸ್ಪತ್ರೆಯ ನರರೋಗ ತಜ್ಞರು ನನ್ನ ತಲೆ ಬುರುಡೆಯನ್ನು ಕತ್ತರಿಸಿ ಏನನ್ನೋ ಹುಡುಕಿದಾರೆ. ಆದರೆ ಅವರಿಗೆ ಏನೂ ಸಿಕ್ಕಿಲ್ಲ. ಎಲ್ಲವೂ ಖಾಲಿಯಿದೆ. ನಾನು ದೆಹಲಿಯಲ್ಲಿದ್ದೇನೆ. ಇಲ್ಲಿ ನನ್ನ ತಲೆ ಬುರುಡೆಯನ್ನು ಸರಿಪಡಿಸಿದ್ದಾರೆ. ಏನೂ ಹಾನಿಯಾಗಿಲ್ಲ ಎಂದು ಲಘು ಹಾಸ್ಯದಾಟಿಯಲ್ಲಿ ಸದ್ಗುರು ಅವರು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಸದ್ಗುರು ಅವರ ಆರೋಗ್ಯದ ಕುರಿತು ಆಸ್ಪತ್ರೆಯಿಂದ ಹೇಳಿಕೆ ಬಿಡುಗಡೆ ಮಾಡಲಾಗಿದ್ದು. ಸದ್ಗುರು ಅವರು ನಾಲ್ಕು ವಾರದಿಂದ ತಲೆನೋವಿಗೆ ಒಳಗಾಗಿದ್ದರು. ಆದರೆ ತಮ್ಮೆಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸದೇ ಭಾಗಿಯಾಗಿದ್ದರು. ಮಹಾಶಿವರಾತ್ರಿಯಲ್ಲೂ ಕೂಡ ಭಾಗಿಯಾಗಿದ್ದರು. ತಲೆನೋವು ಅತಿಯಾದ ನಂತರ ದೆಹಲಿಗೆ ಆಗಮಿಸಿ ಇಂದ್ರಪ್ರಸ್ತ ಅಪೋಲೋ ಆಸ್ಪತ್ರೆಯ ಡಾ.ವಿನೀತ್ ಸೂರಿ ಅವರ ಮಾರ್ಗದರ್ಶನದಂತೆ ಎಂಆರ್‌ಐ ಸ್ಕ್ಯಾನ್‌ಗೆ ಒಳಗಾಗಿದ್ದರು. ಆಗ ಭಾರೀ ರಕ್ತಸ್ರಾವ ಮೆದುಳಿನಲ್ಲಿ ಆಗಿರುವುದು ಕಂಡು ಬಂದಿತ್ತು. ಆದರೂ ಅವರು ದೆಹಲಿಯ ತಮ್ಮ ಪೂರ್ವ ನಿಯೋಜಿತ ಕಾರ್ಯಕ್ರಮ ರದ್ದುಪಡಿಸುವುದಿಲ್ಲ ಎಂದು ಹೇಳಿದ್ದರು. ಎರಡು ದಿನದ ಹಿಂದೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ನಿಶಕ್ತಿ., ಎಡ ಗಾಲಿನಲ್ಲಿ ನೋವು ಹಾಗೂ ವಾಂತಿ, ತಲೆನೋವಿನ ಪ್ರಮಾಣ ಅಧಿಕವಾಗಿರುವುದಾಗಿ ತಿಳಿಸಿದ್ದರು. ಆನಂತರ ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆ ಮೂಲಕ ರಕ್ತಸ್ರಾವ ತಡೆಗಟ್ಟಲಾಗಿದೆ ಎಂದು ತಿಳಿಸಲಾಗಿದೆ.
ವಿಭಾಗ