ಎಲ್‌ಐಸಿ ಗೋಲ್ಡನ್ ಜುಬಿಲಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ; ಕೊನೆಯ ದಿನಾಂಕ, ಅರ್ಜಿ ಸಲ್ಲಿಕೆ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ
ಎಲ್‌ಐಸಿ ಗೋಲ್ಡನ್ ಜುಬಿಲಿ ಸ್ಕಾಲರ್‌ಶಿಪ್‌ಗೆ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ವಿಧಾನ, ಕೊನೆಯ ದಿನಾಂಕ ಸೇರಿ ಪೂರ್ಣ ಮಾಹಿತಿ ತಿಳಿಯಿರಿ.
ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮ-ಎಲ್‌ಐಸಿ (LIC) ಗೋಲ್ಡನ್ ಜುಬಿಲಿ ವಿದ್ಯಾರ್ಥಿವೇತನ ನೀಡಲು ಆರ್ಥಿಕವಾಗಿ ಹಿಂದುಳಿದ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಎಲ್‌ಐಸಿ ಗೋಲ್ಡನ್ ಜುಬಿಲಿ ವಿದ್ಯಾರ್ಥಿವೇತನ ಯೋಜನೆ 2023ರ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಮತ್ತು ಉದ್ಯೋಗಕ್ಕೆ ಉತ್ತಮ ಅವಕಾಶಗಳನ್ನು ಒದಿಸುವ ನಿಟ್ಟಿನಲ್ಲಿ ಸ್ಕಾಲರ್‌ಶಿಪ್ ನೀಡಲಾಗುತ್ತದೆ.
ವಿದ್ಯಾರ್ಥಿವೇತನವನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಒಂದು ಸಾಮಾನ್ಯ ವಿದ್ಯಾರ್ಥಿವೇತನ ಮತ್ತೊಂದು ಹೆಣ್ಣು ಮಕ್ಕಳಿಗೆ ವಿಶೇಷ ವಿದ್ಯಾರ್ಥಿ ವೇತನ. ಸಾಮಾನ್ಯ ವಿದ್ಯಾರ್ಥಿವೇತನ ವಿಭಾಗದಲ್ಲಿ10 ಮತ್ತು 12ನೇ ತರಗತಿ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಪಡೆಯಬಹುದು.
12ನೇ ತರಗತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಸಾಮಾನ್ಯ ಸ್ಕಾಲರ್ಶಿಪ್‌ಗೆ ಅರ್ಹತೆ
12ನೇ ತರಗತಿ ಮತ್ತು ಇದಕ್ಕೆ ಸಮಾನವಾದ ಕೋರ್ಸ್‌ಗಳಲ್ಲಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. ವೃತ್ತಿಪರ, ಡಿಪ್ಲೊಮಾ ಅಡಿಯಲ್ಲಿ 12 ತರಗತಿಯಲ್ಲಿ ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ಇತರೆ ಯಾವುದೇ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ವೃತ್ತಿಪರ ಕ್ಷೇತ್ರದಲ್ಲಿ ಉನ್ನತ ಶಿಕ್ಷಣವನ್ನು ಪಡೆಯುವವರಿಗೂ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುತ್ತಾರೆ.
10ನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಾಮಾನ್ಯ ಸ್ಕಾಲರ್ಶಿಪ್ ಅರ್ಹತೆ
10ನೇ ತರಗತಿ ಮತ್ತು ಅದಕ್ಕೆ ಸಮಾನವಾದ ತರಗತಿಗಳಲ್ಲಿ ಉತ್ತೀರ್ಣರಾದವರು, ವೃತ್ತಿಪರ ಅಥವಾ ಡಿಪ್ಲೊಮಾ ಕೋರ್ಸ್‌ಗಳ ಕ್ಷೇತ್ರದಲ್ಲಿ ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಸಾಮಾನ್ಯ ಸ್ಕಾಲರ್ಶಿಪ್‌ಗೆ ಅರ್ಹತೆ ಹೊಂದಿರುತ್ತಾರೆ. ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಯೋಜನೆಗೆ ಅರ್ಹರಾಗಿರುತ್ತಾರೆ.
ವಿಶೇಷ ಸ್ಕಾಲರ್‌ಶಿಪ್ ಪಡೆಯಲು ಹೆಣ್ಣು ಮಕ್ಕಳಿಗೆ ಇರಬೇಕಾದ ಅರ್ಹತೆ
10ನೇ ತರಗತಿ ಮತ್ತು ಅದಕ್ಕೆ ಸಮಾನವಾದ ಶಿಕ್ಷಣ, 10 + 2 ಮಾದರಿ, ವೃತ್ತಿಪರ ಅಥವಾ ಡಿಪ್ಲೊಮಾ ಕೋರ್ಸ್‌ಗಳಲ್ಲಿ ಉನ್ನತ ವ್ಯಾಸಂಗ ಮಾಡುವ ಹೆಣ್ಣು ಮಕ್ಕಳಿಗೆ ವಿಶೇಷ ಸ್ಕಾಲರ್‌ಶಿಪ್ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಇಂದು (ಜನವವರಿ 14, ಭಾನುವಾರ) ಕೊನೆಯ ದಿನವಾದಿದೆ.
ಎಲ್‌ಐಸಿ ಗೋಲ್ಡನ್ ಜುಬಿಲಿ ಸ್ಕಾಲರ್ಶಿಪ್‌ಗೆ ಬೇಕಾದ ಇತರೆ ಅರ್ಹತೆಗಳು
- ಎಲ್‌ಐಸಿ ಗೋಲ್ಡನ್ ಜುಬಿಲಿ ಸ್ಕಾಲರ್ಶಿಪ್ ಪಡೆಯಲು 10 ಮತ್ತು 12ನೇ ಅಥವಾ ಇವುಗಳಿಗೆ ಸಮಾನವಾದ ಕೋರ್ಸ್‌ಗಳನ್ನು 2022-23ನೇ ಸಾಲಿನಲ್ಲಿ ಕನಿಷ್ಠ 60 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು
- ಸರ್ಕಾರದ ಅಧೀನಕ್ಕೊಳಪಟ್ಟ ಕಾಲೇಜು ಹಾಗೂ ಇತರೆ ಶಿಕ್ಷಣ ಸಂಸ್ಥೆಗಳಲ್ಲಿ 2023-24ನೇ ಸಾಲಿನಲ್ಲಿ ಐಟಿಐ ಸೇರಿದಂತೆ ಉನ್ನತ ವ್ಯಾಸಂಗ ಮಾಡುತ್ತಿರಬೇಕು
- ವಿದ್ಯಾರ್ಥಿಯ ಪೋಷಕರ ಆದಾಯ ವಾರ್ಷಿಕವಾಗಿ ಎಲ್ಲಾ ಮೂಲಗಳಿಂದ 2,50,000 ರೂಪಾಯಿ ಮೀರುವಂತೆ ಇರಬಾರದು
- ಮಹಿಳೆ (ವಿಧವೆ, ಒಂಟಿ ತಾಯಿ, ಅವಿವಾಹಿತ) ಕುಟುಂಬದಲ್ಲಿ ಏಕೈಕ ಸಂಪಾದನೆ ಮಾಡುತ್ತಿರುವ ಪ್ರಕರಣಗಳಲ್ಲಿ ಮಾತ್ರ ವಾರ್ಷಿಕ ಆದಾಯದ ಗರಿಷ್ಠ ಮಿತಿ 4 ಲಕ್ಷ ರೂಪಾಯಿ ವರೆಗೆ ಇರುತ್ತದೆ.
ಯಾವ ಕೋರ್ಸ್‌ಗೆ ಎಷ್ಟು ಸ್ಕಾಲರ್‌ಶಿಪ್ ಸಿಗುತ್ತೆ?
- ಸಾಮಾನ್ಯ ವಿದ್ಯಾರ್ಥಿವೇತನದಲ್ಲಿ ವೈದ್ಯಕೀಯ ಕೋರ್ಸ್‌ಗಳನ್ನು ಮಾಡುವ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ 40 ಸಾವಿರ ರೂಪಾಯಿ ನೀಡಲಾಗುತ್ತದೆ. 3 ಕಂತುಗಳಲ್ಲಿ (ಮೊದಲ ಹಂತದಲ್ಲಿ 12,000, ಎರಡನೇ ಹಂತದಲ್ಲಿ 12,000 ಹಾಗೂ ಮೂರನೇ ಹಂತದಲ್ಲಿ 16,000 ರೂಪಾಯಿ) ಸ್ಕಾಲರ್‌ಶಿಪ್ ಸಿಗಲಿದೆ.
- ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ 30,000 ರೂಪಾಯಿ ಸಿಗುತ್ತದೆ. 3 ಕಂತುಗಳಲ್ಲಿ (9,000+9,000+12,000)
- ಇತರೆ ಯಾವುದೇ ವಿಭಾಗದಲ್ಲಿ ಪದವಿ, ಇಂಟಿಗ್ರೇಟೆಡ್ ಕೋರ್ಸ್‌ಗಳು, ಯಾವುದೇ ಕ್ಷೇತ್ರದಲ್ಲಿ ಡಿಪ್ಲೊಮಾ ಕೋರ್ಸ್ ಅಥವಾ ಇದಕ್ಕೆ ಸಮಾನ ಕೋರ್ಸ್‌ಗಳು, ವೃತ್ತಿಪರ ಕೋರ್ಸ್‌ಗಳಿಗೆ ವಾರ್ಷಿಕವಾಗಿ 20 ಸಾವಿರ ರೂಪಾಯಿ ನೀಡಲಾಗುತ್ತದೆ. ಮೂರು ಕಂತುಗಳಲ್ಲಿ (6,000+6,000+8,000) ಹಣ ಸಿಗಲಿದೆ.
- ಹೆಣ್ಣು ಮಕ್ಕಳ ವಿಶೇಷ ವಿದ್ಯಾರ್ಥಿವೇತನದಲ್ಲಿ ಅರ್ಹ ವಿದ್ಯಾರ್ಥಿನಿಯರಿಗೆ ವಾರ್ಷಿಕವಾಗಿ 15,000 ರೂಪಾಯಿಗಳನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. (4,500+4,500+6,000)
ಸ್ಕಾಲರ್‌ಶಿಪ್‌ಗೆ ಸಂಬಂಧಿಸಿದಂತೆ ನಿಯಮಗಳು, ಷರತ್ತುಗಳು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಹಾಗೂ ಇತರೆ ಮಾಹಿತಿಗಾಗಿ https://licindia.in/ ಗೆ ಭೇಟಿ ನೀಡಿ.