Uniform Civil Code in Gujarat: ಗುಜರಾತ್‌ನಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ?: ಜೋರಾಗಿದೆ ಬಿಜೆಪಿ ಎಲೆಕ್ಷನ್ ತಯಾರಿ
ಗುಜರಾತ್ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಆಡಳಿತಾರೂಢ ಬಿಜೆಪಿ, ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಚಿಂತನೆ ನಡೆಸುತ್ತಿದೆ. ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಎಲ್ಲಾ ಅಂಶಗಳನ್ನು ಮೌಲ್ಯಮಾಪನ ಮಾಡಲು, ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಸಾಂವಿಧಾನಿಕ ಸಮಿತಿಯನ್ನು ರಚಿಸುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಮೂಲಗಳು ಖಚಿತಪಡಿಸಿವೆ.
ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಆಡಳಿತಾರೂಢ ಬಿಜೆಪಿ, ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಚಿಂತನೆ ನಡೆಸುತ್ತಿದೆ. ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಎಲ್ಲಾ ಅಂಶಗಳನ್ನು ಮೌಲ್ಯಮಾಪನ ಮಾಡಲು, ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಸಾಂವಿಧಾನಿಕ ಸಮಿತಿಯನ್ನು ರಚಿಸುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಮೂಲಗಳು ಖಚಿತಪಡಿಸಿವೆ.
ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು, ಈ ಕಾನೂನನ್ನು ಈಗಾಗಲೇ ಜಾರಿ ಮಾಡಿರುವ ಉತ್ತರಾಖಂಡ ಸರ್ಕಾರದ ಸಲಹೆ ಸೂಚನೆ ತೆಗೆದುಕೊಳ್ಳಲು ಗುಜರಾತ್ ಸರ್ಕಾರ ತೀರ್ಮಾನಿಸಿದೆ. ಅಲ್ಲಿನ ಕಾನೂನಿನ ಅಧ್ಯಯನಕ್ಕೆ ಸಾಂವಿಧಾನಿಕ ಸಮಿತಿ ಮುಂದಾಗಲಿದ್ದು, ರಾಜ್ಯಕ್ಕೆ ಅನ್ವಯವಾಗುವಂತೆ ಕೆಲವು ಮಾರ್ಪಾಡುಗಳನ್ನು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಹಿಂದೆ ಸುಪ್ರೀಂಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದ್ದ ಕೇಂದ್ರ ಸರ್ಕಾರ, ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಇದು ಸೂಕ್ತ ಸಮಯ ಎಂದು ವಾದಿಸಿತ್ತು. ಜಾತ್ಯಾತೀತ ರಾಷ್ಟ್ರವಾಗಿರುವ ಭಾರತದಲ್ಲಿ ವಿವಿಧ ಧರ್ಮಗಳು ವಿಭಿನ್ನ ನಿಯಮಗಳನ್ನು ಅನುಸರಿಸಲು ಸಾಧ್ಯವಿಲ್ಲ. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನು ಮಾಡುವ ಅಧಿಕಾರವು ಶಾಸಕಾಂಗಕ್ಕೆ ಮಾತ್ರ ಇರಬೇಕು ಎಂದು ಕೇಂದ್ರ ಸರ್ಕಾರ ಹೇಳಿತ್ತು.
ಏಕರೂಪ ನಾಗರಿಕ ಸಂಹಿತೆಯ ಅಳವಡಿಕೆಯು ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಪದೇ ಪದೇ ಸ್ಥಾನ ಪಡೆದಿದೆ. ಬಿಜೆಪಿಯ ನಿಲುವಿಗೆ ಅನುಗುಣವಾಗಿ, ಈ ವರ್ಷದ ಆರಂಭದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಚುನಾವಣಾ ಭರವಸೆಗಳಲ್ಲಿ ಏಕರೂಪ ನಾಗರಿಕ ಸಂಹಿತೆಯೂ ಒಂದಾಗಿತ್ತು. ಹಿಮಾಚಲ ಪ್ರದೇಶ ಕೂಡ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಮುಂದಡಿ ಇಟ್ಟಿದೆ. ಪ್ರಸ್ತುತ, ಗೋವಾ ಮಾತ್ರ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಿದ ರಾಜ್ಯವಾಗಿದೆ.
ಏಕರೂಪ ನಾಗರಿಕ ಸಂಹಿತೆಯು ಹೆಚ್ಚು ಪ್ರಗತಿಪರ ಸಮಾಜದತ್ತ ಸಾಗುವ ಗುರಿಯನ್ನು ಹೊಂದಿದೆ ಎಂಬುದು ಬಿಜೆಪಿಯ ವಾದ. ಶಿವಸೇನೆ ಸೇರಿದಂತೆ ಹಲವಾರು ಪಕ್ಷಗಳು ಏಕರೂಪ ನಾಗರಿಕ ಸಂಹಿತೆಯ ಜಾರಿಯನ್ನು ಬೆಂಬಲಿಸಿವೆ. ಆದರೆ ಎಐಎಂಐಎಂ ಮತ್ತು ಇತರ ಕೆಲವು ರಾಜಕೀಯ ಪಕ್ಷಗಳು ಈ ಕ್ರಮವನ್ನು ವಿಭಜಕ ಮತ್ತು ಭಾರತದ ಬಹುತ್ವವನ್ನು ನಾಶಗೊಳಿಸುವ ಹುನ್ನಾರ ಎಂದು ಟೀಕಿಸಿವೆ.
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕೂಡ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದನ್ನು ವಿರೋಧಿಸುತ್ತಿದ್ದು, ಇದು ಮುಸ್ಲಿಮರ ಧಾರ್ಮಿಕ ನಂಬಿಕೆಗಳ ಮೇಲೆ ನೇರ ದಾಳಿ ಮಾಡುತ್ತದೆ ಎಂದು ಆಪಾದಿಸಿದೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಈ ಕುರಿತು ಪ್ರಸ್ತುತವಾಗಿ ಮೌನವಾಗಿದೆ.
ಇನ್ನು ಗುಜರಾತ್‌ನಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಬಿಜೆಪಿ ಸರ್ಕಾರದ ನಿರ್ಣಯವನ್ನು, ಪ್ರತಿಪಕ್ಷಗಳು ಚುನಾವಣಾ ಗಿಮಿಕ್ ಎಂದು ಕರೆದಿವೆ. ಚುನಾವಣೆ ಹತ್ತಿರ ಬರುತ್ತಿದ್ದಂತೇ ಬಹುಸಂಖ್ಯಾತ ವೋಟ್‌ಬ್ಯಾಂಕ್ ಉಳಿಸಿಕೊಳ್ಳಲು ಬಿಜೆಪಿ ಈ ನಾಟಕ ಶುರು ಮಾಡಿದೆ ಎಂದು ವಿಪಕ್ಷಗಳು ಟೀಕಿಸಿವೆ.
ಗುಜರಾತ್‌ನಲ್ಲಿ ಮತ್ತೆ ಸರ್ಕಾರ ರಚಿಸಿದರೆ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುತ್ತೇವೆ ಎಂದು ಹೇಳಿ ಮತ ಪಡೆಯಲು ಬಿಜೆಪಿ ಮುಂದಾಗಿದೆ. ಆದರೆ ಇಷ್ಟು ವರ್ಷಗಳ ಕಾಲ ಮಾಡಲಾಗದ್ದನ್ನು, ಈಗ ಚುನಾವಣೆ ಸಮಯದಲ್ಲಿ ಮಾಡಿ ತೋರಿಸುತ್ತೇವೆ ಎಂದು ಹೇಳಿದರೆ ಅದನ್ನು ಜನರು ನಂಬಲು ಸಿದ್ಧರಿಲ್ಲ ಎಂದು ವಿಪಕ್ಷಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿವೆ.
ಗಡಿ ರಾಜ್ಯವಾಗಿರುವ ಗುಜರಾತ್‌ನ್ನು ಸುದೀರ್ಘ ಅವಧಿಯಿಂದ ಆಳುತ್ತಿರುವ ಬಿಜೆಪಿ, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಸಾಕಷ್ಟು ಪ್ರಬಲವಾಗಿರುವ ಆಮ್ ಆದ್ಮಿ ಪಕ್ಷ(ಆಪ್)ವನ್ನು ಎದುರಿಸಬೇಕಿದೆ. ಆಪ್ ಈಗಾಗಲೇ ಆಕರ್ಷಕ ಭರವಸೆಗಳೊಂದಿಗೆ ಚುನಾವಣಾ ಅಖಾಡಕ್ಕೆ ಇಳಿದಿದ್ದು, ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಆಕರ್ಷಕ ಭರವಸೆಗಳನ್ನು ಘೋಷಿಸುತ್ತಿದ್ದು, ಏಕರೂಪ ನಾಗರಿಕ ಸಂಹಿತೆ ಜಾರಿ ಈ ಪೈಕಿ ಪ್ರಮುಖ ಭರವಸೆಯಾಗಿದೆ.