ಆಧಾರ್‌ ಕಾರ್ಡ್‌ ಪರಿಷ್ಕರಣೆ ಮಾಡಲು ಇಂದು ಕೊನೆದಿನ, ಅಪ್‌ಡೇಟ್‌ ಇಲ್ಲದಿದ್ದರೂ ಮರುದೃಢೀಕರಣ ಮಾಡುವುದು ಕಡ್ಡಾಯ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಆಧಾರ್‌ ಕಾರ್ಡ್‌ ಪರಿಷ್ಕರಣೆ ಮಾಡಲು ಇಂದು ಕೊನೆದಿನ, ಅಪ್‌ಡೇಟ್‌ ಇಲ್ಲದಿದ್ದರೂ ಮರುದೃಢೀಕರಣ ಮಾಡುವುದು ಕಡ್ಡಾಯ

ಆಧಾರ್‌ ಕಾರ್ಡ್‌ ಪರಿಷ್ಕರಣೆ ಮಾಡಲು ಇಂದು ಕೊನೆದಿನ, ಅಪ್‌ಡೇಟ್‌ ಇಲ್ಲದಿದ್ದರೂ ಮರುದೃಢೀಕರಣ ಮಾಡುವುದು ಕಡ್ಡಾಯ

Aadhaar Card Update: ಉಚಿತವಾಗಿ ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಮಾಡಲು ಇಂದು ಕೊನೆಯ ದಿನವಾಗಿದೆ. ಹತ್ತು ವರ್ಷ ಹಳೆಯ ಆಧಾರ್‌ ಕಾರ್ಡ್‌ ಹೊಂದಿರುವವರು ಕಡ್ಡಾಯವಾಗಿ ತಮ್ಮ ಮಾಹಿತಿಯನ್ನು ಅಪ್‌ಡೇಟ್‌ ಮಾಡಬೇಕಿದೆ. ಆಧಾರ್‌ ಪರಿಷ್ಕರಣೆ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಆಧಾರ್‌ ಕಾರ್ಡ್‌ ಪರಿಷ್ಕರಣೆ ಮಾಡಲು ಇಂದು ಕೊನೆದಿನ
ಆಧಾರ್‌ ಕಾರ್ಡ್‌ ಪರಿಷ್ಕರಣೆ ಮಾಡಲು ಇಂದು ಕೊನೆದಿನ

ಆಧಾರ್‌ ಕಾರ್ಡ್‌ ಅಪ್‌ಡೇಟ್‌ಗೆ ಸೆಪ್ಟೆಂಬರ್‌ 14 ಅಂದರೆ ಇಂದು ಕೊನೆಯ ದಿನ. ಹತ್ತು ವರ್ಷ ಹಳೆಯ ಆಧಾರ್‌ ಕಾರ್ಡ್‌ ಹೊಂದಿರುವವರು ಆನ್‌ಲೈನ್‌ ಅಥವಾ ಆಫ್‌ಲೈನ್‌ ವಿಧಾನಗಳ ಮೂಲಕ ಇಂದು ಉಚಿತವಾಗಿ ಅಪ್‌ಡೇಟ್‌ ಮಾಡಿಕೊಳ್ಳಬಹುದು. ನಾಳೆಯಿಂದ ಅಪ್‌ಡೇಟ್‌ ಮಾಡುವಿರಾದರೆ ಶುಲ್ಕ ಪಾವತಿಸಿ ಅಪ್‌ಡೇಟ್‌ ಮಾಡಬೇಕಿದೆ. ಈ ಸಂದರ್ಭದಲ್ಲಿ ಜನರಲ್ಲಿ ಹಲವು ಪ್ರಶ್ನೆಗಳು ಮೂಡಿದೆ. ನಮ್ಮ ವಿಳಾಸ, ಫೋನ್‌ ನಂಬರ್‌ ಇತ್ಯಾದಿಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಹೀಗಿದ್ದರೂ ನಾವು ಅಪ್‌ಡೇಟ್‌ ಮಾಡಬೇಕೇ ಎಂಬ ಪ್ರಶ್ನೆಯೆದ್ದಿದೆ. ಇದಕ್ಕೆ ಉತ್ತರ, ಹೌದು. ಹತ್ತು ವರ್ಷಕ್ಕೊಮ್ಮೆ ಎಲ್ಲರೂ ತಮ್ಮ ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಮಾಡಬೇಕು ಎಂದಿದೆ ಭಾರತದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಸೂಚನೆ.

ಉಚಿತವಾಗಿ ಆಧಾರ್‌ ಕಾರ್ಡ್‌ ಅಪ್‌ಡೇಟ್‌ಗೆ ಅವಕಾಶ

ಯಾರು ಆಧಾರ್‌ ಕಾರ್ಡ್‌ ಪಡೆದು ಹತ್ತು ವರ್ಷವಾಗಿದೆಯೋ ಅವರು ಕಡ್ಡಾಯವಾಗಿ ಇದೇ ಸೆಪ್ಟೆಂಬರ್‌ 14ರ ಮೊದಲು ಪರಿಷ್ಕರಿಸಬೇಕು. ಈ ರೀತಿ ಅಪ್‌ಡೇಟ್‌ ಮಾಡಲು ಹಲವು ತಿಂಗಳ ಹಿಂದೆಯೇ ಕೊನೆಯ ದಿನವಾಗಿತ್ತು. ಆದರೆ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಈ ರೀತಿ ಉಚಿತವಾಗಿ ಅಪ್‌ಡೇಟ್‌ ಮಾಡುವ ಅವಕಾಶವನ್ನು ಸೆಪ್ಟೆಂಬರ್‌ 14ರ ವರೆಗೆ ವಿಸ್ತರಿಸಿತ್ತು. ಇಂದು ಕೊನೆಯ ದಿನವಾಗಿದ್ದು, ಉಚಿತವಾಗಿ ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಮಾಡುವ ಅವಕಾಶವನ್ನು ಬಳಸಿಕೊಳ್ಳಬಹುದು.

ನನ್ನ ಆಧಾರ್‌ನಲ್ಲಿ ಏನೂ ಬದಲಾವಣೆ ಇಲ್ಲ, ನಾನೂ ಅಪ್‌ಡೇಟ್‌ ಮಾಡಬೇಕೇ?

ಹತ್ತು ವರ್ಷಗಳಿಗೊಮ್ಮೆ ಬಹುತೇಕರ ವಿಳಾಸ, ಫೋನ್‌ನಂಬರ್‌ ಇತ್ಯಾದಿಗಳಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ಹತ್ತು ವರ್ಷಕ್ಕೊಮ್ಮೆ ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಮಾಡಬೇಕೆಂದು ತಿಳಿಸಲಾಗಿದೆ. ಆದರೆ, ಹತ್ತು ವರ್ಷ ಕಳೆದರೂ ವಿಳಾಸ, ಫೋನ್‌ ನಂಬರ್‌ ಬದಲಾಯಿಸದೆ ಇರುವ ಸಾಕಷ್ಟು ಜನರು ಇದ್ದಾರೆ. ಇವರು ಆಧಾರ್‌ ಅಪ್‌ಡೇಟ್‌ ಮಾಡುವ ಅಗತ್ಯವಿದೆಯೇ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಉತ್ತರ "ಹೌದು", ಹತ್ತು ವರ್ಷ ಹಳೆಯ ಆಧಾರ್‌ ಕಾರ್ಡ್‌ ಹೊಂದಿರುವ ಪ್ರತಿಯೊಬ್ಬರೂ ತಮ್ಮ ಮಾಹಿತಿಯನ್ನು ಮರು ದೃಢೀಕರಣ ಮಾಡಿಕೊಳ್ಳುವ ಅಗತ್ಯವಿದೆ.

"ಆಧಾರ್‌ ಕಾರ್ಡ್‌ ಪಡೆದು 10 ವರ್ಷ ಕಳೆದಿದ್ದರೆ, ಇಲ್ಲಿಯವರೆಗೆ ಅಪ್‌ಡೇಟ್‌ ಮಾಡದೆ ಇದ್ದರೆ ನೀವು ನಿಮ್ಮ ಗುರುತಿನ ದಾಖಲೆ ಮತ್ತು ವಿಳಾಸದ ದಾಖಲೆ ನೀಡಿ ಮರು ದೃಢೀಕರಣ ಮಾಡಿಕೊಳ್ಳಬೇಕು. ಈ ಮೂಲಕ ಆಧಾರ್‌ ಕಾರ್ಡ್‌ನಲ್ಲಿರುವ ಮಾಹಿತಿಯನ್ನು ಮರು ದೃಢೀಕರಣ ಮಾಡಿಕೊಳ್ಳಬೇಕು. ಸೆಪ್ಟೆಂಬರ್‌ 14ರ ಬಳಿಕ ಆನ್‌ಲೈನ್‌ ಅಪ್ಲೋಡಿಂಗ್‌ ಶುಲ್ಕ 25 ರೂಪಾಯಿ ಮತ್ತು ಆಫ್‌ಲೈನ್‌ ಅಪ್‌ಡೇಟ್‌ ಶುಲ್ಕ 50 ರೂಪಾಯಿ ಇರುತ್ತದೆ" ಎಂದು ಯುಐಡಿಎಐ ಈ ಹಿಂದೆಯೇ ಸ್ಪಷ್ಟಪಡಿಸಿದೆ.

ಆಧಾರ್‌ ಅಪ್‌ಡೇಟ್‌ ಮಾಡಲು ಸೂಚನೆ

ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಮಾಡಲು ನೀವು myaadhaar.uidai.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಅಲ್ಲಿ ಇರುವ ಸೂಚನೆ ಈ ಮುಂದಿನಂತೆ ಇದೆ. "ನಿಮ್ಮ ಆಧಾರ್‌ ಡೇಟಾಬೇಸ್‌ನಲ್ಲಿ ಮಾಹಿತಿ ಪರಿಷ್ಕರಣೆ ಮಾಡಲು ಇತ್ತೀಚಿನ ನಿಮ್ಮ ಗುರುತಿನ ಪತ್ರ, ವಿಳಾಸ ಮಾಹಿತಿ ನೀಡಬೇಕು. ನೀವು ನೀಡಿರುವ ದಾಖಲೆಗಳು ನಿಮ್ಮ ಆಧಾರ್‌ನಲ್ಲಿರುವ ವಿವರಕ್ಕೆ ಹೊಂದಿಕೆಯಾಗಬೇಕು. ಇದರಿಂದ ಆಧಾರ್‌ ಡೇಟಾಬೇಸ್‌ನಲ್ಲಿ ನಿಮ್ಮ ಕುರಿತು ಸರಿಯಾದ ಮಾಹಿತಿ ಹೊಂದಿರಲು ಸಾಧ್ಯವಾಗುತ್ತದೆ. ನೀವು ಈಗಾಗಲೇ ಯಾವುದಾದರೂ ಆಧಾರ್‌ ಎನ್‌ರೋಲ್‌ಮೆಂಟ್‌ ಕೇಂದ್ರಗಳಲ್ಲಿ ಅಥವಾ ಮೈ ಆಧಾರ್‌ ಪೋರ್ಟಲ್‌ನಲ್ಲಿ ಆಧಾರ್‌ ಅಪ್‌ಡೇಟ್‌ ಮಾಡಲು ಅರ್ಜಿ ಸಲ್ಲಿಸಿದರೆ ಅದು ಅಂಗೀಕಾರ ಅಥವಾ ನಿರಾಕರಣೆಯಾಗುವ ತನಕ ಕಾಯಿರಿ" ಎಂದು ಮಾಹಿತಿ ನೀಡಲಾಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.