ಡೌಟೇ ಬೇಡ ಮುಂದಿನ ಅವಧಿಯಲ್ಲಿ ಏಕರೂಪದ ನಾಗರಿಕ ಸಂಹಿತೆ ಜಾರಿಯಾಗಲಿದೆ, ಒಂದು ದೇಶ ಒಂದು ಚುನಾವಣೆಯೂ ನನಸಾಗಲಿದೆ; ಸಚಿವ ಅಮಿತ್ ಷಾ ಪ್ರತಿಪಾದನೆ
ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತಕ್ಕೆ ಸಕಾರಾತ್ಮಕ ಜನಾದೇಶ ಸಿಗಲಿದೆ. ಡೌಟೇ ಬೇಡ ಮುಂದಿನ ಅವಧಿಯಲ್ಲಿ ಏಕರೂಪದ ನಾಗರಿಕ ಸಂಹಿತೆ ಜಾರಿಯಾಗಲಿದೆ. ಮತ್ತು ಒಂದು ದೇಶ ಒಂದು ಚುನಾವಣೆಯೂ ನನಸಾಗಲಿದೆ ಎಂದು ಕೇಂದ್ರ ಸಚಿವ ಅಮಿತ್ ಷಾ ಪ್ರತಿಪಾದನೆ ಮಾಡಿದ್ದಾರೆ.
ನವದೆಹಲಿ: ನರೇಂದ್ರ ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷಗಳಲ್ಲಿ ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಘೋಷಿಸಿದ್ದಾರೆ. ಅಷ್ಟೇ ಅಲ್ಲ, ದೇಶದಲ್ಲಿ ಏಕಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಅನುಷ್ಠಾನಗೊಳಿಸಲು 'ಒಂದು ರಾಷ್ಟ್ರ, ಒಂದು ಚುನಾವಣೆ' ಉಪಕ್ರಮವನ್ನೂ ಜಾರಿಗೆ ತರಲಿದೆ ಎಂದು ಅವರು ಹೇಳಿದರು.
ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ವಿಸ್ತೃತ ಸಂದರ್ಶನದಲ್ಲಿ ಅಮಿತ್ ಷಾ ಈ ಎಲ್ಲ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ವೆಚ್ಚ ಕಡಿಮೆ ಮಾಡಬಹುದಾಗಿದೆ. ಇದರಿಂದ ಸರ್ಕಾರದ ಬೊಕ್ಕಸದ ಮೇಲಿನ ಹೊರೆಯೂ ಕಡಿಮೆಯಾಗಲಿದೆ ಎಂಬುದನ್ನು ಅಮಿತ್ ಷಾ ವಿವರಿಸಿದ್ದಾರೆ.
ಏಕರೂಪ ನಾಗರಿಕ ಸಂಹಿತೆ ಬಗ್ಗೆ ಅಮಿತ್ ಷಾ ಹೇಳಿದ್ದು ಇಷ್ಟು
"ಏಕರೂಪ ನಾಗರಿಕ ಸಂಹಿತೆಯ ರಚನೆ ಎಂಬುದು ನಮ್ಮ ಸಂವಿಧಾನದ ನಿರ್ಮಾತೃಗಳು ಸ್ವಾತಂತ್ರ್ಯದ ನಂತರ ನಮಗೆ, ನಮ್ಮ ಸಂಸತ್ತಿಗೆ ಮತ್ತು ನಮ್ಮ ದೇಶದ ರಾಜ್ಯ ಶಾಸಕಾಂಗಗಳಿಗೆ ಬಿಟ್ಟ ಹೊಣೆಗಾರಿಕೆಯಾಗಿದೆ. ಸಂವಿಧಾನ ರಚನಾ ಸಭೆಯು ನಮಗಾಗಿ ನಿರ್ಧರಿಸಿದ ಮಾರ್ಗದರ್ಶಿ ತತ್ವಗಳಲ್ಲಿ ಏಕರೂಪ ನಾಗರಿಕ ಸಂಹಿತೆಯೂ ಸೇರಿದೆ. ಆ ಸಂದರ್ಭದಲ್ಲಿ ಕೆ.ಎಂ.ಮುನ್ಷಿ, ರಾಜೇಂದ್ರ ಬಾಬು, ಅಂಬೇಡ್ಕರ್ ಅವರಂತಹ ಕಾನೂನು ವಿದ್ವಾಂಸರು ಜಾತ್ಯತೀತ ದೇಶದಲ್ಲಿ ಧರ್ಮದ ಆಧಾರದ ಮೇಲೆ ಕಾನೂನುಗಳು ಇರಬಾರದು. ಏಕರೂಪ ನಾಗರಿಕ ಸಂಹಿತೆ ಇರಬೇಕು ಎಂದು ಹೇಳಿದ್ದರು" ಎಂದು ಅಮಿತ್ ಷಾ ವಿವರಿಸಿದ್ದಾರೆ.
ಇತ್ತೀಚೆಗೆ ಏಕರೂಪದ ನಾಗರಿಕ ಸಂಹಿತೆಯನ್ನು ಜಾರಿಗೆ ತಂದ ಉತ್ತರಾಖಂಡದ ಪ್ರಯತ್ನವನ್ನು ಉಲ್ಲೇಖಿಸಿದ ಅಮಿತ್ ಷಾ ಅವರು, ಪುಷ್ಕರ್ ಸಿಂಗ್ ಧಾಮಿ ಸರ್ಕಾರ ಮಾಡಿದ ಕಾನೂನು ಸಾಮಾಜಿಕ ಮತ್ತು ಕಾನೂನು ಪರಿಶೀಲನೆಗೆ ಒಳಗಾಗಬೇಕು. ಧಾರ್ಮಿಕ ಮುಖಂಡರೊಂದಿಗೆ ಅದರ ಸಾಧಕಬಾಧಕ ಸಮಾಲೋಚಿಸಬೇಕು ಎಂದು ಹೇಳಿದರು.
"ಈ ಬಗ್ಗೆ ವ್ಯಾಪಕ ಚರ್ಚೆ ನಡೆಯಬೇಕು ಎಂಬುದನ್ನು ಪ್ರತಿಪಾದಿಸುತ್ತೇನೆ. ಈ ವ್ಯಾಪಕ ಚರ್ಚೆಯ ನಂತರ ಉತ್ತರಾಖಂಡ ಸರ್ಕಾರವು ಮಾಡಿದ ಮಾದರಿ ಕಾನೂನಿನಲ್ಲಿ ಏನಾದರೂ ಬದಲಾವಣೆ ಬೇಕಾದರೆ, ಯಾರೇ ಆದರೂ ಖಂಡಿತವಾಗಿಯೂ ನ್ಯಾಯಾಲಯಕ್ಕೆ ಹೋಗುತ್ತಾರೆ. ನ್ಯಾಯಾಂಗದ ಅಭಿಪ್ರಾಯವೂ ಬರಲಿದೆ" ಎಂದು ಅಮಿತ್ ಷಾ ಹೇಳಿದರು.
"ಅದರ ನಂತರ, ದೇಶದ ರಾಜ್ಯ ಶಾಸಕಾಂಗಗಳು ಮತ್ತು ಸಂಸತ್ತು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಮತ್ತು ಕಾನೂನನ್ನು ಜಾರಿಗೆ ತರಬೇಕು. ಅದಕ್ಕಾಗಿಯೇ ಇಡೀ ದೇಶಕ್ಕೆ ಏಕರೂಪ ನಾಗರಿಕ ಸಂಹಿತೆಯನ್ನು ಹೊಂದುವ ಗುರಿಯನ್ನು ಬಿಜೆಪಿ ಹೊಂದಿದೆ ಎಂದು ನಾವು ನಮ್ಮ ಸಂಕಲ್ಪ ಪತ್ರದಲ್ಲಿ ಬರೆದಿದ್ದೇವೆ" ಎಂದು ಅಮಿತ್ ಷಾ ವಿವರಿಸಿದರು.
'ಒಂದು ರಾಷ್ಟ್ರ, ಒಂದು ಚುನಾವಣೆ'- ಅಮಿತ್ ಷಾ ಹೇಳಿದ್ದು ಹೀಗೆ
ಏಕಕಾಲದಲ್ಲಿ ಚುನಾವಣೆ ನಡೆಸುವ ಕುರಿತ ಪ್ರಶ್ನೆಗೆ ಉತ್ತರಿಸಿದ ಶಾ, "ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದ ಸಮಿತಿಯನ್ನು ರಚಿಸಿದ್ದರು. ನಾನು ಕೂಡ ಅದರ ಸದಸ್ಯನಾಗಿದ್ದೆ. ಈ ಸಮಿತಿ ಒಂದು ವರದಿಯನ್ನು ಸಲ್ಲಿಸಿದೆ. ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಯುವ ಸಮಯ ಬಂದಿದೆ.
'ಒಂದು ರಾಷ್ಟ್ರ, ಒಂದು ಚುನಾವಣೆ' ಕುರಿತು ಬಿಜೆಪಿ ಪ್ರಣಾಳಿಕೆಯಲ್ಲಿ ಮೋದಿ ಸರ್ಕಾರವು ಏಕಕಾಲಕ್ಕೆ ಚುನಾವಣೆ ನಡೆಸುವ ಸಮಸ್ಯೆಗಳನ್ನು ಪರಿಶೀಲಿಸಲು ಉನ್ನತ ಅಧಿಕಾರದ ಸಮಿತಿಯನ್ನು ರಚಿಸಿದೆ. ಸಮಿತಿಯ ಶಿಫಾರಸುಗಳ ಅನುಷ್ಠಾನ ಮಾಡುವುದಕ್ಕೆ ಸರ್ಕಾರ ಕೆಲಸ ಮಾಡುತ್ತದೆ. ಎಲ್ಲಾ ಹಂತದ ಚುನಾವಣೆಗಳಿಗೆ ಸಾಮಾನ್ಯ ಮತದಾರರ ಪಟ್ಟಿ ನಿರ್ವಹಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಷಾ ವಿವರಿಸಿದರು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.