ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಗಗನಕ್ಕೇರುತ್ತಿರುವ ಬಂಗಾರದ ಬೆಲೆ, ಮಗಳ ಮದುವೆಗೆ ಚೂರುಪಾರು ಚಿನ್ನ ಮಾಡಿಸೋಕು ಪರದಾಡುವ ಪೋಷಕರ ಗೋಳು ಕೇಳೋರ್ಯಾರು; ಭಾರತಿ ಹೆಗಡೆ ಬರಹ

ಗಗನಕ್ಕೇರುತ್ತಿರುವ ಬಂಗಾರದ ಬೆಲೆ, ಮಗಳ ಮದುವೆಗೆ ಚೂರುಪಾರು ಚಿನ್ನ ಮಾಡಿಸೋಕು ಪರದಾಡುವ ಪೋಷಕರ ಗೋಳು ಕೇಳೋರ್ಯಾರು; ಭಾರತಿ ಹೆಗಡೆ ಬರಹ

ಚುನಾವಣಾ ಸಮಯದಲ್ಲಿ ಎಲ್ಲಾ ವಸ್ತುಗಳ ದರ ಇಳಿಕೆಯ ಭರವಸೆ ನೀಡುವ ರಾಜಕೀಯ ಪಕ್ಷಗಳು, ಚಿನ್ನದ ದರ ಏರಿಕೆಯ ಬಗ್ಗೆ ಚಿಂತಿಸುತ್ತಿಲ್ಲ. ಅಲ್ಲದೇ ಚಿನ್ನದ ದರ ಇಳಿಕೆ ಮಾಡುತ್ತೇವೆ ಎಂಬ ಬಗ್ಗೆ ಎಲ್ಲೂ ಮಾತನಾಡುತ್ತಿಲ್ಲ. ಆದರೆ ಹೆಣ್ಣು ಹೆತ್ತ ಪೋಷಕರು ಮಾತ್ರ ಮಗಳ ಮದುವೆಗೆ ಚೂರುಪಾರು ಚಿನ್ನದ ಸರ ಮಾಡಿಸೋಕು ಕಣ್ಣೀರು ಹಾಕುವಂತಾಗಿದೆ.

ಭಾರತಿ ಹೆಗಡೆ (ಬಲಚಿತ್ರ)
ಭಾರತಿ ಹೆಗಡೆ (ಬಲಚಿತ್ರ)

ಭಾರತದ ಚಿನ್ನಾಭರಣ ಪ್ರಿಯರ ದೇಶ. ಇಲ್ಲಿ ಚಿನ್ನದ ಮೇಲಿನ ಬೇಡಿಕೆ ತಗ್ಗುವುದೇ ಇಲ್ಲ. ಮದುವೆಯಂತಹ ಶುಭ ಸಮಾರಂಭಗಳಲ್ಲಿ ಚಿನ್ನ ಬೇಕೆ ಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಗಗನಕ್ಕೇರುತ್ತಿರುವ ಚಿನ್ನದ ದರ ಬಡ ಹಾಗೂ ಮಧ್ಯಮ ವರ್ಗದ ಹೆಣ್ಣು ಹೆತ್ತ ಪೋಷಕರ ಕಣ್ಣೀರಿಗೆ ಕಾರಣವಾಗಿದೆ. ಮದುವೆಯ ಸಂಪೂರ್ಣಗಿಂತ ಒಂದು ಚಿನ್ನದ ಸರ ಮಾಡಿಸುವುದೇ ದುಬಾರಿಯಾಗಿದೆ. ಇದು ಬಡ, ಮಧ್ಯಮ ವರ್ಗದವರಿಗೆ ನುಂಗಲಾರದ ತುತ್ತಾಗಿದೆ. ಚುನಾವಣಾ ಸಮಯವಾಗಿದ್ದು ರಾಜಕಾರಣಿಗಳು ಚಿನ್ನದ ಬೆಲೆ ಏರಿಕೆಯ ಬಗ್ಗೆ ಮಾತೇ ಆಡುತ್ತಿಲ್ಲ. ಈ ಬಗ್ಗೆ ಲೇಖಕಿ, ಪತ್ರಕರ್ತೆ ಭಾರತಿ ಹೆಗಡೆ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದು, ಹಲವರು ಇದಕ್ಕೆ ಕಾಮೆಂಟ್‌ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಭಾರತಿ ಹೆಗಡೆ ಅವರ ಬರಹ ಹಾಗೂ ಅವರ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳನ್ನು ನೀವೂ ಓದಿ

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಟ್ರೆಂಡಿಂಗ್​ ಸುದ್ದಿ

ಭಾರತಿ ಹೆಗಡೆ ಬರಹ

ಎಲೆಕ್ಷನ್ ಸಮಯದಲ್ಲಿ ಬೆಲೆ ಇಳಿಕೆ ಕುರಿತೇ ಪ್ರಚಾರ ಮಾಡಲಾಗುತ್ತಿರುತ್ತದೆ. ಹಾಗೆಯೇ ಏರುತ್ತಿರುವ ಚಿನ್ನದ ರೇಟಿಗೆ ಕಡಿವಾಣ ಹಾಕೋ ಬಗ್ಗೆ ದಯವಿಟ್ಟು ಚಿಂತನೆ ನಡೆಸಿ. ಬಡವರು, ಕೆಳ ಮತ್ತು ಮಧ್ಯಮ ವರ್ಗದವರ ಹೆಣ್ಣುಮಕ್ಕಳ ಮದುವೆ ಮಾಡೋದೇ ದುಸ್ತರ ಎನ್ನುವಂತಾಗಿದೆ.‌ ಮದುವೆಯ ಮಿಕ್ಕ ಎಲ್ಲ ಖರ್ಚನ್ನು ಹೇಗೋ ತೂಗಿಸಿಬಿಡಬಹುದು. ಆದರೆ ಬಂಗಾರದ ಖರ್ಚನ್ನು ಭರಿಸೋದು ತುಂಬ ಕಷ್ಟ ಎನ್ನುವಂತಾಗಿದೆ. ಜವಳಿ, ಚೌಲ್ಟ್ರಿ, ಊಟ ಇಷ್ಟೂ ಖರ್ಚನ್ನು ಸೇರಿಸಿದರೂ ಬಂಗಾರದ ರೇಟಿಗೆ ಸಮವಾಗುವುದಿಲ್ಲ. ಬೇರೇನಿಲ್ಲದರೂ ಕೂಸಿಗೆ ಒಂದು ಜೊತೆ ಓಲೆ, ಕೊರಳಿಗೊಂದು ಸರವನ್ನಾದರೂ ಮಾಡಿಸೋಕೂ ಈಗ ಲಕ್ಷ, ಎರಡು ಲಕ್ಷ ದಾಟುತ್ತಿದೆ. ಹೀಗಾದರೆ ಬಡಬಗ್ಗರು ತಮ್ಮ ತಮ್ಮ ಹೆಣ್ಣುಮಕ್ಕಳನ್ನು ಮದುವೆ ಮಾಡೋದು ಹೇಗೆ?. ಅಥವಾ ಬಂಗಾರ ರಹಿತ ಸರಳ ಮದುವೆಯನ್ನು ಜಾರಿಗೆ ತಂದು ಬಿಡಲಿ. ಹಾಗಾದರೂ ಆದರೆ ಹೆಣ್ಣು ಹೆತ್ತವರು ತುಸು ನಿಟ್ಟುಸಿರು ಬಿಟ್ಟಾರು.

ಭಾರತಿ ಅವರು ಇಂದು ಬೆಳಿಗ್ಗೆ ಈ ಪೋಸ್ಟ್‌ ಹಾಕಿದ್ದು, ಈಗಾಗಲೇ 100ಕ್ಕೂ ಅಧಿಕ ಮಂದಿ ಇವರ ಪೋಸ್ಟ್‌ಗೆ ಲೈಕ್‌ ಮಾಡಿದ್ದು, ಹಲವರು ಕಾಮೆಂಟ್‌ ಮಾಡಿದ್ದಾರೆ.

ಭಾರತಿ ಅವರ ಪೋಸ್ಟ್‌ಗೆ ಬಂದಿರುವ ಕಾಮೆಂಟ್‌ಗಳು

ಚಿನ್ನ ಕೊಡುವುದು ನಿಲ್ಲಿಸಿ: ಪದ್ಮಾ ನಾಗರಾಜ್‌

ʼಬಂಗಾರ ಕೊಡುವುದು ಬಿಡಬೇಕು. ಸಾಲ ಮಾಡಿ ಕೊಡುವುದು ಬೇಡವೇ ಬೇಡಾ ಎಂದು ಪದ್ಮಾ ನಾಗರಾಜ್‌ ಎನ್ನುವವರು ಕಾಮೆಂಟ್‌ ಮಾಡಿದ್ದರು. ಅವರ ಕಾಮೆಂಟ್‌ಗೆ ಭಾರತಿ ಹೆಗಡೆ ʼಬಿಡಬೇಕು ಎಂದರೆ ಗಂಡಿನ ಕಡೆಯವರು ಬಿಡಬೇಕಲ್ಲ?. ಜೊತೆಗೆ ಹೆಣ್ಣಿನವರೂ ಏನೇ ಆದ್ರೂ ಚೂರು ಬಂಗಾರನೂ ಕೊಡದೆ ಮದುವೆ ಮಾಡೋದೇ ಇಲ್ಲ. ಇವೆಲ್ಲ ಹೇಳಿದಷ್ಟು ಖಂಡಿತ ಸುಲಭ ಇಲ್ಲ ನಮ್ಮ ದೇಶದಲ್ಲಿ.ʼ ಎಂದು ಮರುತ್ತರ ನೀಡಿದ್ದಾರೆ.

ನನ್ನ ಒಡವೆ ನನ್ನ ಹಕ್ಕು: ವೇದಾವತಿ ಅಠಾವಳೆ

ಬಂಗಾರವೇ ಬೇಡ ಅನ್ನೋದೆಲ್ಲ ಬೀಸು ಹೇಳಿಕೆ ಅಷ್ಟೇ . ಬಂಗಾರ, ಒಡವೆ ಮಾತ್ರವಲ್ಲ ಕಷ್ಟಕ್ಕೆ ತಕ್ಷಣಕ್ಕೆ ಆಗುವ ಅಪದ್ ಬಾಂಧವ. ಅಲ್ಲದೆ ಚಿನ್ನದ ಒಡವೆ ತೊಟ್ಟರೆ ಖುಷಿ ಅನಿಸೋ ಹಾಗಿದ್ರೆ #ನನ್ನಒಡವೆನನ್ನಹಕ್ಕು. ಒಂದು ವೇಳೆ ಯಾವ್ ಒಬ್ಬ ಗಂಡು ಚಿನ್ನ ಬೇಡ ಅಂದರುನೂ ಮಗಳನ್ನು ಚಿನ್ನದ ಒಡವೆ ಇಲ್ಲದೆ ಕಳಿಸಕ್ಕೆ ಯಾವ ತಂದೆ ತಾಯಿನೂ ಒಪ್ಪಲ್ಲʼ ಎಂದು ಕಾಮೆಂಟ್‌ ಮಾಡಿದ್ದಾರೆ.

ಮದುವೆ ಮಾಡಿ ಕೊಡುತ್ತಿರುವ ಮಗಳೇ ಚಿನ್ನ

ʼಹುಡುಗನ ಮನೆಗೆ ಕೊಡುತ್ತಿರುವ ಕೂಸೇ ಚಿನ್ನ, ರನ್ನ ಎಲ್ಲಾ ಆಗಿರೋದ್ರಿಂದ ಬೇರೆ ಚಿನ್ನ ಕೊಡೋ ಪ್ರಶ್ನೆ ಇಲ್ಲ ಅಂತ ಹೆಣ್ಣು ಮಕ್ಕಳ ತಂದೆ ತಾಯಿಯರು ನಿರ್ದಾಕ್ಷಿಣ್ಯವಾಗಿ ಹೇಳುವ ಪರಂಪರೆ ಬೆಳೆಯಲಿʼ ಎಂದು ಸೀತಾರಾಮ್‌ ಎನ್ನುವವರು ಕಾಮೆಂಟ್‌ ಮಾಡಿದ್ದಾರೆ.

ಪ್ರದರ್ಶನದ ತೆವಲು: ಪ್ರಭಾಕರ ಎಸ್‌. ಡೊಂಗ್ರೆ

ʼನಮ್ಮ ಜನರಿಗೆ ಪ್ರದರ್ಶನದ ತೆವಲು ಇರುವವರೆಗೆ ಇದು ಏನೂ ಬದಲಾವಣೆ ಆಗುವುದಿಲ್ಲ.ಇನ್ನು ಬಂಗಾರದ ವಿಷಯಕ್ಕೆ ಬಂದರೆ ಅದು ವ್ಯಾಮೋಹ.ಕಾರ್ಯಕ್ರಮಗಳಲ್ಲಿ ಮನೆ ಯಜಮಾನನನ್ನು ನೋಡಿ, ಎಂದೂ ಇಲ್ಲದ ಬ್ರೇಸ್ ಲೆಟ್, ಉಂಗುರಗಳು, ಉಡದಾರ ಸಹಿತ ಅಲಂಕೃತರಾಗಿರ್ತಾರೆ.ಇನ್ನು ಮೂವತ್ತೈದು ಅಡಿಗೆ ಬಾವಿ ನೀರು ಸಿಗುವಲ್ಲಿ ಬಾಟಲ್ ನೀರು ಕೊಡುವ ನಮ್ಮ ತೆವಲಿಗೆ ಯಾರೂ ಏನೂ ಮಾಡಕ್ಕಾಗಲ್ಲ. ಟೊಮೆಟೋ ರೇಟ್ ಎಂಬತ್ತರ ಆಸುಪಾಸಿನಲ್ಲಿ ಇದ್ದರೆ ಅದಕ್ಕೆ ಬಹಿಷ್ಕಾರ ಹಾಕಿ ಎಂದು ಕರೆ ಕೊಡುವವರು ಬಂಗಾರವಿಲ್ಲದೇ ಬದುಕಬಹುದು ಎಂದೇಕೆ ಕರೆ ಕೊಡಬಾರದು.ಮಾರ್ಯಮ್ಮನಂತೆ ಬಂಗಾರ ಹೇರಿಕೊಳ್ಳುವುದನ್ನು ಬಿಟ್ಟರೆ ಇದು ಸರಿಯಾಗುತ್ತದೆ.

ಗಂಡಿನ ಮನೆಯವರಿಗೂ ಇದೆ ಖರ್ಚು: ವೀಣಾ ಶಿವಣ್ಣ

ಕೆಲವು ಮನೆಯವರ ಮದುವೆಯಲ್ಲಿ, ಚಿನ್ನ ಅಂತ ಬಂದಾಗ ಗಂಡಿನ ಮನೆಯವರಿಗೆ ಹೆಚ್ಚು ಖರ್ಚು . ಮಾಂಗಲ್ಯ ಸರ, ಬಳೆ ಜೊತೆಗೆ ನೆಕ್ಲೆಸ್ ಸಹ. (50+20+25). ಹೆಣ್ಣಿನ ಮನೆಯವರು ವರನಿಗೆ ಉಂಗುರ ಸರ ಕೊಡ್ತಾರೆ. 10+15/18 = 25/28gms ..ಹೆಣ್ಣು ಓದಿರುವ ಕಾರಣ ವರದಕ್ಷಿಣೆ ಅಥವಾ ಇಲ್ಲ. ಮದುವೆ ಖರ್ಚು ಸಹ ಈಗೀಗ ಹೆಣ್ಣಿನ ಮನೆಯವರು fixed amount ಕೊಟ್ಟು ಗಂಡಿನ ಕಡೆಯವರು ಮಾಡಿಕೊಳ್ಳೋ ಹಾಗೆ ಸಹ ಇದೆ. ಹೆಣ್ಣು ಸಿಗದೆ ಇರೋ ಕಾರಣ, ಹೆಣ್ಣು ಮಕ್ಕಳಿಗೆ ಡಿಮ್ಯಾಂಡ್ ಇದೆ, no girls father is on hurry and ಗಂಡಿನ ಕಡೆಯವರು has no choice either. !

ಚಿನ್ನ ಖರೀದಿಗೂ ಬರಲಿ ಎಪಿಎಲ್‌, ಬಿಪಿಎಲ್‌ ಮೀಸಲಾತಿ

ಬಂಗಾರ ಖರೀದಿಗೂ APL / BPL ಕಾರ್ಡ್ ಅಥವಾ ಮೀಸಲಾತಿ ಪದ್ಧತಿ ಜಾರಿಗೆ ತರುವಲ್ಲಿ ಯಾರು ಹಾ (ಹೋ)ರಾಟ ಮಾಡುತ್ತಿಲ್ಲವಲ್ಲ ಏಕೆ? ಶಾಲಾ ದಾಖಲಾತಿಗೆ ಕೇಳುವ ದಾಖಲೆಗಳನ್ನು ಎಲ್ಲಾ ಕಡೆಯು ಕೇಳಿದರೆ ಒಳ್ಳೆಯದು.. ಹೀಗೊಂದು ಗೊಂದಲ ಈಗ ಕಾಡಿದ್ದುʼ ಎಂದು ಲತಾ ಕೆ.ಎಸ್‌. ಹೆಗಡೆ ಅವರು ಕಾಮೆಂಟ್‌ ಮಾಡಿದ್ದಾರೆ.

IPL_Entry_Point