ರಾಜಮನೆತನದಿಂದ ರಾಜಕೀಯದತ್ತ; ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಒಡೆಯರ್ ವ್ಯಕ್ತಿಚಿತ್ರಣ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ರಾಜಮನೆತನದಿಂದ ರಾಜಕೀಯದತ್ತ; ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಒಡೆಯರ್ ವ್ಯಕ್ತಿಚಿತ್ರಣ

ರಾಜಮನೆತನದಿಂದ ರಾಜಕೀಯದತ್ತ; ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಒಡೆಯರ್ ವ್ಯಕ್ತಿಚಿತ್ರಣ

ಮೈಸೂರಿನ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗುವ ಮೂಲಕ ರಾಜಕೀಯ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಇವರ ಬದುಕಿನ ಚಿತ್ರಣ ಹೀಗಿದೆ. (ವರದಿ: ರಂಗಸ್ವಾಮಿ.ಪಿ, ಮೈಸೂರು)

ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಒಡೆಯರ್ ವ್ಯಕ್ತಿಚಿತ್ರಣ
ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಒಡೆಯರ್ ವ್ಯಕ್ತಿಚಿತ್ರಣ

ಮೈಸೂರು: ರಾಜ್ಯದ ಪ್ರತಿಷ್ಠಿತ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ರಾಜವಂಶಸ್ಥ ಯದವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಹಿರಿಯ ಸಹೋದರಿ ದಿವಂಗತ ಗಾಯತ್ರಿದೇವಿ ಮತ್ತು ದಿವಂಗತ ರಾಮಚಂದ್ರ ಅರಸ್‌ರ ಪುತ್ರಿಯಾಗಿರುವ ತ್ರಿಪುರಸುಂದರಿದೇವಿ ಮತ್ತು ಸ್ವರೂಪ್ ಗೋಪಾಲ ರಾಜೇ ಅರಸ್ ಅವರ ಪುತ್ರರಾಗಿ 1992ರ ಮಾರ್ಚ್ 24ರಂದು ಜನಿಸಿದರು. ಯದುವೀರ್‌ ಅವರಿಗೆ ಸೋದರಿ ಜಯಾತ್ಮಿಕಾ ಇದ್ದಾರೆ.

ದತ್ತು ಪುತ್ರ ಯದುವೀರ್‌

ಯದುವೀರ್ ಬೆಂಗಳೂರಿನ ವಿದ್ಯಾನಿಕೇತನ್ ಶಿಕ್ಷಣ ಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿದ ನಂತರ ಕೆನೆಡಿಯನ್ ಅಂತರರಾಷ್ಟ್ರೀಯ ಶಾಲೆಯಲ್ಲಿ ದ್ವಿತೀಯ ಪಿಯುಸಿವರೆಗೆ ವ್ಯಾಸಂಗ ಮಾಡಿದ್ದಾರೆ. ಅಮೆರಿಕದ ಬಾಸ್ಟನ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ಆಂಗ್ಲಭಾಷೆಯ ವಿಷಯಗಳಲ್ಲಿ ಬಿಎ ಪದವಿ ಪಡೆದುಕೊಂಡಿದ್ದಾರೆ. ಯದುವೀರ್ ಅವರ ಮೊದಲ ಹೆಸರು ಯದುವೀರ್ ಗೋಪಾಲರಾಜೇ ಅರಸ್ ಎಂದು ಇತ್ತು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮತ್ತು ಪ್ರಮೋದಾದೇವಿ ಒಡೆಯರ್ ದಂಪತಿಗೆ ಮಕ್ಕಳಿಲ್ಲದ್ದರಿಂದ 2013ರಲ್ಲಿ ಯದುವೀರ್ ಅವರನ್ನು ದತ್ತು ಪಡೆದುಕೊಂಡರು. ದತ್ತು ಸ್ವೀಕಾರ ಸಮಾರಂಭದ ಸಮಯದಲ್ಲಿ ಹೆಸರು ಬದಲಾವಣೆ ಮಾಡಿಕೊಂಡಿದ್ದಾರೆ.

ಮೊದಲ ಬಾರಿಗೆ ರಾಜಕೀಯ ಪ್ರವೇಶ

2015ರಲ್ಲಿ ಯದುವೀರ್ ಅವರಿಗೆ ರಾಜಮನೆತನದ ಪರಂಪರೆಗೆ ಅನುಗುಣವಾಗಿ ಪಟ್ಟಾಭಿಷೇಕವಾಗಿದ್ದು, ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ನಡೆಯುವ ರಾಜಮನೆತನದ ಖಾಸಗಿ ದರ್ಬಾರಿನಲ್ಲಿ ರತ್ನಖಚಿತ ಸಿಂಹಾಸನವನ್ನೇರಿ ಗತಕಾಲದ ವೈಭವ ಮರುಕಳಿಸುವಂತೆ ಮಾಡುತ್ತಾ ಬಂದಿದ್ದಾರೆ. ರಾಜಮನೆತನದ ಎಲ್ಲಾ ಧಾರ್ಮಿಕ ವಿಧಿಗಳನ್ನು ಪರಂಪರೆಗೆ ಅನುಸಾರವಾಗಿ ನಡೆಸುತ್ತಾ ಬಂದಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ರಾಜಮನೆತನದ ಬಗ್ಗೆ ಈಗಲೂ ಒಳ್ಳೆಯ ಅಭಿಪ್ರಾಯವಿದೆ. ಇದೀಗ ಯದುವೀರ್ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗುವ ಮೂಲಕ ರಾಜಕೀಯ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

ಮೈಸೂರು ರಾಜಮನೆತನಕ್ಕೆ ರಾಜಕೀಯ ಹೊಸದೇನಲ್ಲ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಆರು ಬಾರಿ ಸ್ಪರ್ಧಿಸಿದ್ದರು‌. 4 ಬಾರಿ ಗೆಲುವು ಸಾಧಿಸಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 2 ಬಾರಿ ಸೋಲು ಕಂಡಿದ್ದರು. ಒಮ್ಮೆ ಬಿಜೆಪಿ ಅಭ್ಯರ್ಥಿಯಾಗಿ ಪರಾಭವಗೊಂಡಿದ್ದರು. ಅಂದ ಹಾಗೆ ಈ ಮೊದಲು ಕೂಡ ಮೈಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿಯೇ ಯದುವೀರ್ ಹೆಸರು ಕೇಳಿ ಬಂದಿತ್ತು. ಆದರೆ ಆಗ ರಾಜಕೀಯ ಪ್ರವೇಶಕ್ಕೆ ನಿರಾಕರಿಸಿದ್ದ ಯದುವೀರ್ ರಾಜಕಾರಣದಿಂದ ದೂರವೇ ಉಳಿದಿದ್ದರು. ಪ್ರಮೋದಾದೇವಿ ಒಡೆಯರ್ ಕೂಡ ಯದುವೀರ್ ರಾಜಕೀಯ ಪ್ರವೇಶಕ್ಕೆ ಒಪ್ಪಿರಲಿಲ್ಲ. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗುವ ಮೂಲಕ ಅಧಿಕೃತವಾಗಿ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಿದ್ದವಾಗಿದೆ.

ವರದಿ: ರಂಗಸ್ವಾಮಿ.ಪಿ, ಮೈಸೂರು

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.