ಪ್ರಜ್ವಲ್ ದೇಶ ಬಿಟ್ಟು ಹೋಗಲು ಕರ್ನಾಟಕದ ಕಾಂಗ್ರೆಸ್ ಸರ್ಕಾರವೇ ಕಾರಣ, ಇಂತವರ ಪರ ಸಹನೆ ಬೇಕಿಲ್ಲ: ಪ್ರಧಾನಿ ಮೋದಿ
ಹಾಸನದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ನಡೆಸಿರುವ ಲೈಂಗಿಕ ದೌರ್ಜನ್ಯದ ಪ್ರಕರಣಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ದೆಹಲಿ: ಹಾಸನದಲ್ಲಿ ನಡೆದಿರುವ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಲೈಂಗಿಕ ದೌರ್ಜನ್ಯ ಪ್ರಕರಣ, ಈ ಕುರಿತು ಪ್ರಧಾನಿ ಮಾತನಾಡಬೇಕು ಎಂದು ಕರ್ನಾಟಕ ಕಾಂಗ್ರೆಸ್ ಒತ್ತಾಯಿಸಿದ ನಂತರ ಮೊದಲ ಬಾರಿ ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಪ್ರಜ್ವಲ್ ದೇಶ ಬಿಟ್ಟು ಹೋಗಲು ಕರ್ನಾಟಕ ಸರ್ಕಾರವೇ ಕಾರಣ. ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವ ಹೊಣೆಗಾರಿಕೆ ಕರ್ನಾಟಕ ಸರ್ಕಾರಕ್ಕೆ ಇರುವುವುದರಿಂದ ಅವರೇ ಅದಕ್ಕೆ ಮುಂದಾಗಬೇಕು. ಅದನ್ನು ಬಿಟ್ಟು ಕೇಂದ್ರ ಸರ್ಕಾರದ ಮೇಲೆ ದೂಷಿಸಿದರೆ ಏನು ಪ್ರಯೋಜನ. ಅದೂ ಅಲ್ಲದೇ ಮಹಿಳೆಯರ ಮೇಲಿನ ದೌರ್ಜನ್ಯದಂತಹ ಪ್ರಕರಣದಲ್ಲಿ ಯಾರ ಪರವೂ ಸಹನೆ ತೋರುವುದೂ ಬೇಡ ಎಂದು ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ಟೈಂಸ್ ನೌಗೆ ನೀಡಿರುವ ಸಂದರ್ಶನದಲ್ಲಿ ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ಪ್ರಧಾನಿ ವಿಸ್ತೃತವಾಗಿಯೇ ಮಾತನಾಡಿದ್ದಾರೆ. ಇದು ಕರ್ನಾಟಕದ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಚಾರ. ಇದರಲ್ಲಿ ಕೇಂದ್ರಕ್ಕಿಂತ ರಾಜ್ಯದ ಪಾತ್ರವೇ ಅಧಿಕವಾಗಿರವಾಗ ಅವರೇ ಕ್ರಮಜರುಗಿಸಬೇಕು. ಪ್ರಜ್ವಲ್ ದೇಶ ಬಿಟ್ಟು ಹೋಗಿದ್ದಾರೆ ಎಂದರೆ ಅದಕ್ಕೆ ಕಾಂಗ್ರೆಸ್ ಸರ್ಕಾರವೇ ಅವಕಾಶ ಮಾಡಿಕೊಟ್ಟಿದೆ ಎಂದು ದೂರಿದ್ದಾರೆ.
ಸಂಸದರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸಾವಿರಾರು ವಿಡಿಯೋಗಳು ಎಂದು ಕಾಂಗ್ರೆಸ್ ನವರೇ ಹೇಳುತ್ತಿದ್ದಾರೆ. ಅವೆಲ್ಲವೂ ಕಾಂಗ್ರೆಸ್ ಹಾಗೂ ಜೆಡಿಎಸ್ ಜತೆಗೆ ಹೊಂದಾಣಿಕೆ ಮಾಡಿಕೊಂಡ ಕಾಲದ್ದವು ಎನ್ನುವುದು ಇದನ್ನು ಗಮನಿಸಿದರೆ ತಿಳಿಯುತ್ತದೆ. ತಾವು ಒಟ್ಟಿಗೆ ಅಧಿಕಾರ ನಡೆಸುವಾಗಲೇ ಈ ಎಲ್ಲಾ ವಿಡಿಯೋಗಳನ್ನು ಒಟ್ಟಿಗೆ ಇರಿಸಿಕೊಂಡು ಈಗ ಬಿಡುಗಡೆ ಮಾಡಿದ್ದಾರೆ. ಅದು ಮತದಾನ ಮುಗಿದ ನಂತರ. ಅದರಲ್ಲೂ ಪ್ರಜ್ವಲ್ ದೇಶ ಬಿಟ್ಟ ಹೋದ ನಂತರ ಬಿಡುಗಡೆ ಮಾಡಿರುವುದನ್ನು ನೋಡಿದರೆ ಇದರಲ್ಲಿ ಷಡ್ಯಂತ್ರವೇ ಇರಬಹುದು ಎನ್ನುವುದು ಮೋದಿ ಅವರು ಮಾಡಿದ ಆರೋಪ.
ಕರ್ನಾಟಕದಲ್ಲಿ ಜೆಡಿಎಸ್ ಜತೆಗೆ ನಾವು ಈಗ ಮೈತ್ರಿ ಮಾಡಿಕೊಂಡಿದ್ದೇವೆ. ಆದರೆ ಕಾಂಗ್ರೆಸ್‌ನವರು 2018ರ ವಿಧಾನಸಭಾ ಚುನಾವಣೆಯ ನಂತರವೇ ಮೈತ್ರಿ ಮಾಡಿಕೊಂಡಿದ್ದಾರೆ. ಇದನ್ನು ಗಮನಿಸಬೇಕು ಎಂದು ಮೋದಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಒಕ್ಕಲಿಗ ಸಮುದಾಯ ಪ್ರಾಬಲ್ಯ ಇರುವ ಪ್ರದೇಶಗಳಲ್ಲಿ ಮತದಾನ ಮುಗಿದ ನಂತರ ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೇ ಚುನಾವಣೆ ಮುಗಿದ ಬಳಿಕ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಹೊರ ಹೋಗುವಂತೆ ಮಾಡಲಾಗಿದೆ. ಈ ಕುರಿತ ಬೆಳವಣಿಗೆಗಳು, ಹೇಳಿಕೆಗಳನ್ನು ಗಮನಿಸಿದರೆ ಸಾಕಷ್ಟು ಅನುಮಾನಗಳು ಬಾರದೇ ಇರವು ಎಂದು ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಜ್ವಲ್ ದೇಶ ಬಿಟ್ಟು ಹೋಗುತ್ತಾರೆ ಎನ್ನುವುದು ತಿಳಿದಿದ್ದರೆ ಮೊದಲೇ ನಮಗೂ ಮಾಹಿತಿ ನೀಡಬೇಕಿತ್ತು. ಅದನ್ನೂ ಕರ್ನಾಟಕ ಸರ್ಕಾರ ಮಾಡಲಿಲ್ಲ. ಈಗ ನಮ್ಮ ಮೇಲೆ ದೂಷಿಸುವ ಬದಲು ಪ್ರಜ್ವಲ್ ವಾಪಾಸ್ ಕರೆತರಲು ಮೊದಲು ಪ್ರಯತ್ನಿಸಿ. ಎಲ್ಲದಕ್ಕೂ ಹೋದರೆ, ಆದರೆ, ಹೀಗಾದರೆ ಎನ್ನುವ ಮಾತುಗಳನ್ನು ಆಡುತ್ತಾ ಕುಳಿತರೆ ಪ್ರಯೋಜನವೇನು ಎನ್ನುವುದು ಮೋದಿ ಕೇಳಿದ ಪ್ರಶ್ನೆ.
ಭಾರತದಲ್ಲಿ ಮೋದಿ, ಬಿಜೆಪಿ ಇಲ್ಲವೇ ಸಂವಿಧಾನದ ವಿಚಾರದಲ್ಲಿ ನನ್ನ ದೃಷ್ಟಿಕೋನ ಸ್ಪಷ್ಟವಾಗಿಯೇ ಇದೆ. ಈ ರೀತಿ ಕಾನೂನು ಉಲ್ಲಂಘಿಸುವವರ, ದೌರ್ಜನ್ಯ ಎಸಗುವವರ ವಿರುದ್ದ ಕಠಿಣ ಕ್ರಮ ಆಗಲೇಬೇಕು. ಯಾವುದೇ ಸಂದರ್ಭದಲ್ಲಿ ಇಂತವರ ಮೇಲೆ ಸಹಿಷ್ಣುತೆ ಎನ್ನುವುದು ಇರಬಾರದು. ಕಾನೂನಿನ ಅಡಿಯಲ್ಲಿ ಎಷ್ಟು ಸಾಧ್ಯವೋ ಶಿಕ್ಷೆಯನ್ನು ನೀಡಬೇಕು. ಇದಕ್ಕಾಗಿ ಇರುವ ಆಯ್ಕೆಗಳನ್ನು ರಾಜ್ಯ ಸರ್ಕಾರ ಬಳಕೆ ಮಾಡಿಕೊಳ್ಳಬೇಕು. ಇಂತ ಆಟಗಳನ್ನು ಕೊನೆಗಳಿಸಲು ಕಠಿಣ ಕಾನೂನು ಕ್ರಮ ಬಳಸಿಕೊಳ್ಳಬೇಕು ಎನ್ನುವುದು ಮೋದಿ ನೀಡಿದ ಉತ್ತರ.