ಲಾರೆನ್ಸ್ ಬಿಷ್ಣೋಯ್ ಯಾರು? ಸಲ್ಮಾನ್ ಖಾನ್ ಮೇಲ್ಯಾಕೆ ಈ ಪರಿ ದ್ವೇಷ? ಬಿಷ್ಣೋಯ್ ಗ್ಯಾಂಗ್ ಲೀಡರ್‌ನ ಕರಾಳ ಚರಿತ್ರೆ
ಲಾರೆನ್ಸ್ ಬಿಷ್ಣೋಯ್ ಯಾರು? ಸಲ್ಮಾನ್ ಖಾನ್ ಮೇಲ್ಯಾಕೆ ಈ ಪರಿ ದ್ವೇಷ? ಬಿಷ್ಣೋಯ್ ಗ್ಯಾಂಗ್ ಲೀಡರ್‌ನ ಕರಾಳ ಚರಿತ್ರೆ ಏನು ಎಂಬ ಕುತೂಹಲವೇ? ಮಹಾರಾಷ್ಟ್ರದ ಪ್ರಮುಖ ರಾಜಕಾರಣಿ ಬಾಬಾ ಸಿದ್ದಿಕ್ ಹತ್ಯೆ ಬಳಿಕ ಈತನ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ.
ಮುಂಬೈನಲ್ಲಿ ಅಂಡರ್‌ವರ್ಲ್ಡ್ ಈಗ ತುಸು ತಣ್ಣಗಾಗಿದೆ. ಆದರೆ, ಈ ಸಮಯದಲ್ಲಿ ಲಾರೆನ್ಸ್ ಬಿಷ್ನೋಯ್ ಗ್ಯಾಂಗ್ ಆಕ್ಟಿವ್ ಆದಂತೆ ಇದೆ. ಇತ್ತೀಚೆಗೆ ಮಹಾರಾಷ್ಟ್ರದ ರಾಜಕಾರಣಿ ಬಾಬಾ ಸಿದ್ದಿಕ್ ಅವರ ಹತ್ಯೆ ಬಳಿಕ ಈ ಗ್ಯಾಂಗ್‌ನ ಕುರಿತು ಮತ್ತೆ ಎಲ್ಲರಲ್ಲಿಯೂ ಭೀತಿ ಮೂಡಿದೆ. ಪಂಜಾಬಿ ಗಾಯಕ ಸಿಧು ಮೂಸೆವಾಲಾನ ಹತ್ಯೆಯ ಹಿಂದೆಯೂ ಇದೇ ಗ್ಯಾಂಗ್ ಕೈವಾಡ ಇತ್ತು. ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್‌ಗೂ ಈ ಗ್ಯಾಂಗ್ ಪದೇಪದೇ ಬೆದರಿಕೆ ಹಾಕುತ್ತಿದೆ. ಈ ಗ್ಯಾಂಗ್‌ನ ಮೂಲಗಳು, ಚಟುವಟಿಕೆಗಳು, ಈ ಗ್ಯಾಂಗ್‌ನಲ್ಲಿರುವವರ ಕುರಿತು ಹೆಚ್ಚಿನ ಮಾಹಿತಿಗಳು ಹೊರಬೀಳುತ್ತಿವೆ. ಉತ್ತರ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತ್ಯಂತ ಅಪಾಯಕಾರಿ ಕ್ರಿಮಿನಲ್ ಗ್ಯಾಂಗ್‌ನ ಲಾರೆನ್ಸ್ ಬಿಷ್ಣೋಯ್ ಬಗ್ಗೆ ಹೆಚ್ಚಿನ ವಿವರ ತಿಳಿಯೋಣ.
ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ)ಯೊಂದಿಗೆ ಸಂಬಂಧ ಹೊಂದಿದ್ದ ಮಹಾರಾಷ್ಟ್ರದ ಪ್ರಮುಖ ರಾಜಕಾರಣಿ ಬಾಬಾ ಸಿದ್ದಿಕ್ ಅವರನ್ನು ಅಕ್ಟೋಬರ್ 12ರಂದು ರಾತ್ರಿ ಗುಂಡಿಕ್ಕಿ ಕೊಲ್ಲಲಾಗಿತ್ತು. 66 ವರ್ಷ ವಯಸ್ಸಿನ ಇವರು ರಾಜಕೀಯ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದರು. ಕಾಂಗ್ರೆಸ್‌ನ ರಾಜ್ಯ ಸಚಿವರಾಗಿದ್ದರು. ಸಲ್ಮಾನ್ ಖಾನ್, ಶಾರೂಖ್‌ಖಾನ್ ಜತೆ ನಿಕಟ ಸಂಬಂಧ ಹೊಂದಿದ್ದರು. ಇದೀಗ ತನಿಖೆಯ ಬಳಿಕ ಸಿದ್ದಿಕ್ ಹತ್ಯೆಯ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡ ಇರುವುದಾಗಿ ಹೇಳಲಾಗುತ್ತಿದೆ.
ಲಾರೆನ್ಸ್ ಬಿಷ್ಣೋಯ್ ಯಾರು?
ಬಿಷ್ಣೋಯ್ ಗ್ಯಾಂಗ್ ಲೀಡರ್ ಲಾರೆನ್ಸ್ ಬಿಷ್ಣೋಯ್ ಅವರು 31 ವರ್ಷದ ವ್ಯಕ್ತಿ. ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಧತ್ತರನ್‌ವಾಲಿ ಗ್ರಾಮದ ಈತ ಉತ್ತಮ ಕೃಷಿಕ ಕುಟುಂಬದಲ್ಲಿ ಜನಿಸಿದ್ದ. ಬಿಷ್ಣೋಯ್ ಸಮುದಾಯದ ಈತ ಇದೇ ಸಮುದಾಯದ ಹೆಸರಿನಲ್ಲಿ ಗುಂಪು ಕಟ್ಟಿಕೊಂಡಿದ್ದಾನೆ. ಈ ಸಮುದಾಯ ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದ ಕೆಲವು ಭಾಗಗಳಲ್ಲಿ ಹರಡಿದೆ.
ಈತ ಉತ್ತಮ ಶೈಕ್ಷಣಿಕ ಹಿನ್ನೆಲೆಯನ್ನೂ ಹೊಂದಿದ್ದಾನೆ. 12ನೇ ತರಗತಿಯವರೆಗೆ ತನ್ನ ಶಾಲಾ ಶಿಕ್ಷಣವನ್ನು ಸ್ಥಳೀಯವಾಗಿ ಪೂರೈಸಿದ ಬಳಿಕ ಪಂಜಾಬ್ ವಿಶ್ವವಿದ್ಯಾಲಯದ ಡಿಎವಿ ಕಾಲೇಜಿಗೆ ಸೇರಿದನು. 2011-2012 ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷನಾಗಿದ್ದನು. ಬಳಿಕ ಈತ ಅಪರಾಧ ಲೋಕಕ್ಕೆ ಕಾಲಿರಿಸಿದನು. 2010ರಲ್ಲಿ ಮೊದಲ ಬಾರಿಗೆ ಕೊಲೆ ಪ್ರಯತ್ನ ಪ್ರಕರಣ ದಾಖಲಾಯಿತು. ಅಂದರೆ, ಕಾಲೇಜು ದಿನಗಳಲ್ಲಿಯೇ ಅಪರಾಧ ಚಟುವಟಿಕೆ ನಡೆಸುತ್ತಿದ್ದನು. ಸುಲಿಗೆ, ದರೋಡೆ, ಕೊಲೆ ಸೇರಿದಂತೆ ಹಲವು ಆರೋಪಗಳು, ಪ್ರಕರಣಗಳು ಈತನ ವಿರುದ್ಧ ಇವೆ. ಸಬರಮತಿ ಸೆಂಟ್ರಲ್ ಜೈಲಿನಲ್ಲಿದ್ದುಕೊಂಡೇ ತನ್ನ ಕ್ರಿಮಿನಲ್ ಕಾರ್ಯಾಚರಣೆ ಮುಂದುವರೆಸುವಲ್ಲಿ ಯಶಸ್ವಿಯಾಗಿದ್ದಾನೆ.
ಬಿಷ್ಣೋಯ್‌ಗೆ ಹಲವು ಸಹಚರರು ಇದ್ದಾರೆ. ಇವರಲ್ಲಿ ಜಸ್ವಿಂದರ್ ಸಿಂಗ್, ರಾಕಿ ಪ್ರಮುಖರು. ಪಂಜಾಬ್‌ನ ಫಾಜಿಲ್ಕಾದಿಂದ ದರೋಡೆಕೋರರಾಗಿ ಬದಲಾದ ರಾಜಕಾರಣಿ ಈತನಾಗಿದ್ದಾನೆ. ರಾಜಸ್ಥಾನ-ಪಂಜಾಬ್ ಗಡಿಯಲ್ಲಿರುವ ಶ್ರೀ ಗಂಗಾನಗರ ಮತ್ತು ಭರತ್‌ಪುರದಂತಹ ನಗರಗಳಿಗೆ ಬಿಷ್ಣೋಯ್ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು ಸಹಾಯ ಮಾಡುವಲ್ಲಿ ರಾಕಿ ಮಹತ್ವದ ಪಾತ್ರವನ್ನು ವಹಿಸಿದ್ದಾನೆ. ರಾಕಿ 2020ರ ಮೇ ತಿಂಗಳಲ್ಲಿ ಮತ್ತೊಬ್ಬ ದರೋಡೆಕೋರನಿಂದ ಹತ್ಯೆಗೀಡಾಗಿದ್ದ.
ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಹಾಕಿದ ನಂತರ ಲಾರೆನ್ಸ್ ಬಿಷ್ಣೋಯ್ ಹೆಸರು ಹೆಚ್ಚು ಪ್ರಚಲಿತದಲ್ಲಿದೆ. ಸಲ್ಮಾನ್ ಖಾನ್ ಕೃಷ್ಣ ಮೃಗವನ್ನು ಕೊಂದ ಆರೋಪ ಎದುರಿಸುತ್ತಿದ್ದರು. ಕೃಷ್ಣಮೃಗವು ಬಿಷ್ಣೋಯ್ ಸಮುದಾಯದ ಪವಿತ್ರ ಪ್ರಾಣಿ. ಇದಕ್ಕೆ ಪ್ರತಿಕಾರ ತೀರಿಸುವುದಾಗಿ ಬಿಷ್ಣೋಯ್ ಗ್ಯಾಂಗ್ ಹೇಳುತ್ತಿದೆ.
ವಿಭಾಗ