France Protest: ಹೊತ್ತಿ ಉರಿಯುತ್ತಿದೆ ಫ್ರಾನ್ಸ್​; ಉಗ್ರ ಪ್ರತಿಭಟನೆ ಹುಟ್ಟುಹಾಕಿದ ನಹೆಲ್ ಸಾವು, ಯಾರೀತ? ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  France Protest: ಹೊತ್ತಿ ಉರಿಯುತ್ತಿದೆ ಫ್ರಾನ್ಸ್​; ಉಗ್ರ ಪ್ರತಿಭಟನೆ ಹುಟ್ಟುಹಾಕಿದ ನಹೆಲ್ ಸಾವು, ಯಾರೀತ? ಇಲ್ಲಿದೆ ಮಾಹಿತಿ

France Protest: ಹೊತ್ತಿ ಉರಿಯುತ್ತಿದೆ ಫ್ರಾನ್ಸ್​; ಉಗ್ರ ಪ್ರತಿಭಟನೆ ಹುಟ್ಟುಹಾಕಿದ ನಹೆಲ್ ಸಾವು, ಯಾರೀತ? ಇಲ್ಲಿದೆ ಮಾಹಿತಿ

Nahel shot dead: ಕಳೆದ ಮೂರು ದಿನಗಳಿಂದ ಫ್ರಾನ್ಸ್‌ ಜನತೆ ನಹೆಲ್ ಎಂಬ 17 ವರ್ಷದ ಹುಡುಗನ ಹತ್ಯೆ ವಿರುದ್ಧ ಬೀದಿಗಿಳಿದಿದ್ದು, ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿದೆ. ಯಾರೀತ? ಆತನನ್ನು ಯಾಕೆ ಕೊಂದರು? ಇಲ್ಲಿದೆ ಮಾಹಿತಿ

ಫ್ರಾನ್ಸ್​ ಪ್ರತಿಭಟನೆ
ಫ್ರಾನ್ಸ್​ ಪ್ರತಿಭಟನೆ

ಪ್ಯಾರಿಸ್: ಫ್ರಾನ್ಸ್‌ನಲ್ಲಿ ಹದಿಹರೆಯದ ಹುಡುಗನೊಬ್ಬನ ಸಾವು ಇಡೀ ದೇಶದಲ್ಲಿ ಕಳೆದ ಮೂರು ದಿನಗಳಿಂದ ಉಗ್ರ ಪ್ರತಿಭಟನೆಯನ್ನು ಹುಟ್ಟುಹಾಕಿದೆ. ಪ್ರತಿಭಟನೆ ವೇಳೆ ಕೈಗೆ ಸಿಕ್ಕಸಿಕ್ಕದ್ದನ್ನೆಲ್ಲ ಜನರು ಧ್ವಂಸಮಾಡಿದ್ದಾರೆ. ಪ್ರತಿಭಟನೆ ನಿಯಂತ್ರಿಸಲು ಸುಮಾರು 45,000 ಪೊಲೀಸರನ್ನು ನಿಯೋಜಿಸಲಾಗಿದೆ.

ಫ್ರಾನ್ಸ್‌ನ ಮಾರ್ಸಿಲ್ಲೆ, ಲಿಲ್ಲೆ ಲಿಯಾನ್, ಪೌ, ಟೌಲೌಸ್ ಮತ್ತು ಮುಂತಾದ ಪ್ರದೇಶಗಳಲ್ಲಿ ಪ್ರತಿಭಟನಾಕಾರರು ಕಟ್ಟಡಗಳಿಗೆ, ಪೊಲೀಸ್​ ವಾಹನಗಳಿಗೆ, ಬಸ್ ಡಿಪೋ, ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚಿದ್ದಾರೆ. ಕಳೆದ ಮೂರು ದಿನಗಳಿಂದ ಫ್ರಾನ್ಸ್‌ ಜನತೆ ನಹೆಲ್ ಎಂಬ 17 ವರ್ಷದ ಹುಡುಗನ ಹತ್ಯೆ ವಿರುದ್ಧ ಬೀದಿಗಿಳಿದಿದ್ದು, ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿದೆ.

ನಹೆಲ್ ಯಾರು?

ಜೂನ್​ 27 ರಂದು ನಹೆಲ್ ಎಂಬ ಹದಿಹರೆಯದ ಹುಡುಗನನ್ನು ಫ್ರಾನ್ಸ್ ರಾಜಧಾನಿಯಾದ ಪ್ಯಾರಿಸ್​ನ ನಾಂಟೆರ್ರೆ ಎಂಬಲ್ಲಿ ಪೊಲೀಸ್​ ಅಧಿಕಾರಿಯೊಬ್ಬರು ಗುಂಡು ಹಾರಿಸಿ ಹತೈಗೈದಿದ್ದರು. ಟ್ರಾಫಿಕ್​ ಸಿಗ್ನಲ್​ನಲ್ಲಿ ವಾಹನ ನಿಲ್ಲಿಸದ ಕಾರಣ ಆತನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಈತ ಈ ಹಿಂದೆ ಕೂಡ ಹಲವಾರು ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದಾನೆಂದು ಹೇಳಲಾಗಿದೆ. ಪ್ರತ್ಯಕ್ಷದರ್ಶಿಗಳ ಮಾಹಿತಿ ಮತ್ತು ಸಿಸಿ ಕ್ಯಾಮೆರಾ ವಿಡಿಯೋಗಳು ಜನರು ಇದರ ವಿರುದ್ಧ ಪ್ರತಿಭಟಿಸಲು ಬೀದಿಗಿಳಿಯುವಂತೆ ಮಾಡಿವೆ. ಸಂಚಾರ ನಿಯಮ ಉಲ್ಲಂಘನೆಗಳಿಗೆ ಶಿಕ್ಷಿಸಲು ಕಾನೂನು ಇರುವಾಗ ಪೊಲೀಸರ ದುರ್ವರ್ತನೆ ಜನರನ್ನು ಕೆರಳಿಸಿದೆ.

ನಹೆಲ್ ಮೇಲೆ ಗುಂಡು ಹಾರಿಸಿದ ಅಧಿಕಾರಿಯನ್ನು ವಶಕ್ಕೆ ಪಡೆಯಲಾಗಿದ್ದು, ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇವರು ಅನಗತ್ಯವಗಿ ಬಂದೂಕನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ನಹೆಲ್ ಯಾರಿಗಾದರು ಬಂದು ಕಾರಿನಲ್ಲಿ ಗುದ್ದಬಹುದು ಎಂಬ ಭಯದಿಂದ ಗುಂಡು ಹಾರಿಸಿರುವುದಾಗಿ ಆರೋಪಿ ಅಧಿಕಾರಿ ಹೇಳಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ನಹೆಲ್ ಫುಡ್​ ಡೆಲಿವರಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ಕಳೆದ ಮೂರು ವರ್ಷಗಳಿಂದ ಆತ ಪೈರೇಟ್ಸ್ ಆಫ್ ನಾಂಟೆರ್ರೆ ರಗ್ಬಿ ಕ್ಲಬ್‌ನ ಸಕ್ರಿಯ ಸದಸ್ಯರಾಗಿದ್ದನು. ಕುಟುಂಬಸ್ಥರು ಈತನ ಉಪನಾಮವನ್ನು ಹೇಳಿಕೊಂಡಿಲ್ಲ. ಒಬ್ಬನೇ ಮಗನಾಗಿದ್ದ ಈತ ಕುಟುಂಬವನ್ನು ನಿರ್ವಹಿಸುತ್ತಿದ್ದ. ನನ್ನ ಮಗನ ಮುಖವು ಅರಬ್​ ಪ್ರಜೆಯಂತೆ ಕಂಡಿದ್ದರಿಂದ ಅವನನ್ನು ಪೊಲೀಸರು ಕೊಂದಿದ್ದಾರೆ ಎಂದು ನಹೆಲ್​ ತಾಯಿ ಆರೋಪಿಸಿದ್ದಾರೆ. ಈತನ ಹತ್ಯೆಯು ಜನಾಂಗೀಯ ಹತ್ಯೆಯನ್ನು ಮತ್ತೆ ನೆನಪಿಸಿದೆ ಎಂದು ವರದಿಯಾಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.