ISRO News: ಇಸ್ರೊ ಸಾಧನೆಗೆ ಅಭಿನಂದನೆಗಳು ಎಂದ ಎಲಾನ್ ಮಸ್ಕ್, ಪಿಎಸ್‌ಎಲ್‌ವಿ ಸಿ55 ವಿಕ್ರಮಕ್ಕೆ ಸ್ಪೇಸ್‌ಎಕ್ಸ್ ಸ್ಥಾಪಕ ಬಹುಪರಾಕ್
ISRO News: ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೊ ಪಿಎಸ್‌ಎಲ್‌ವಿ ಸಿ55 (PSLV-C55) ರಾಕೆಟ್ ಅನ್ನು ಉಡಾವಣೆ ಮಾಡಿತ್ತು.
ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಇತ್ತೀಚೆಗೆ ಪಿಎಸ್‌ಎಲ್‌ವಿ ಸಿ55 (PSLV-C55) ರಾಕೆಟ್ ಮೂಲಕ ಸಿಂಗಾಪುರದ ಎರಡು ಉಪಗ್ರಹಗಳನ್ನು ನಿರ್ದಿಷ್ಟ ಕಕ್ಷೆಗೆ ಯಶಸ್ವಿಯಾಗಿ ತಲುಪಿಸಿದೆ. ಇಸ್ರೊದ ಈ ಸಾಧನೆಗೆ ಶತಕೋಟ್ಯಧಿಪತಿ, ಸ್ಪೇಸ್‌ಎಕ್ಸ್ ಎಂಬ ಅಂತರಿಕ್ಷ ಸಂಸ್ಥೆಯ ಸ್ಥಾಪಕ, ಟ್ವಿಟ್ಟರ್ ಮಾಲಿಕ ಎಲಾನ್ ಮಸ್ಕ್ "ಅಭಿನಂದನೆಗಳು" ಎಂದಿದ್ದಾರೆ. ಇಸ್ರೊ ಸಂಸ್ಥೆಯು ಪಿಎಸ್‌ಎಲ್‌ವಿ ಸಿ55/ಟೆಲಿಯೊಸ್ -2 ಮಿಷನ್ ಯಶಸ್ವಿ ಉಡಾವಣೆಯ ಬಳಿಕ ಟ್ವೀಟ್ ಮಾಡಿತ್ತು. ಆ ಟ್ವೀಟ್‌ಗೆ ಎಲಾನ್ ಮಸ್ಕ್ ಕಂಗ್ರಾಜ್ಯುಲೇಷನ್ ಎಂದಿದ್ದಾರೆ.
ಎರಡು ದಿನದ ಹಿಂದೆ ಅಂದರೆ, ಶನಿವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೊ ಪಿಎಸ್‌ಎಲ್‌ವಿ ಸಿ55 (PSLV-C55) ರಾಕೆಟ್ ಅನ್ನು ಉಡಾವಣೆ ಮಾಡಿತ್ತು. ಭೂಮಿಯನ್ನು ವೀಕ್ಷಣೆ ಮಾಡುವ ಸಿಂಗಾಪುರದ ಎರಡು ಉಪಗ್ರಹಗಳನ್ನು ನಿಗದಿತ ಕಕ್ಷೆಗೆ ತಲುಪಿಸಿತ್ತು.
ಶನಿವಾರ, ಇಸ್ರೋ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ PSLV-C55 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು ಮತ್ತು ಭೂಮಿಯ ವೀಕ್ಷಣೆಗಾಗಿ ಎರಡು ಸಿಂಗಾಪುರದ ಉಪಗ್ರಹಗಳನ್ನು ಉದ್ದೇಶಿತ ಕಕ್ಷೆಗೆ ಇರಿಸಿತು. "ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ತನ್ನ 57ನೇ ಹಾರಾಟದಲ್ಲಿ ಮತ್ತೊಮ್ಮೆ ತನ್ನ ವಿಶ್ವಾಸಾರ್ಹತೆ ಮತ್ತು ವಾಣಿಜ್ಯ ಉಡಾವಣೆಗೆ ಸೂಕ್ತತೆಯನ್ನು ಪ್ರದರ್ಶಿಸಿದೆ" ಎಂದು ಉಡಾವಣೆಯ ಬಳಿಕ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಹೇಳಿದ್ದರು.
ಇಸ್ರೊ ಅಂಗಸಂಸ್ಥೆ ಎನ್‌ಎಸ್‌ಐಎಲ್ (ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್) ಈ ರಾಕೆಟ್ ಉಡಾವಣೆ ಮಾಡಿದೆ. ಇದು ವಾಣಿಜ್ಯ ಉಡ್ಡಯನಕ್ಕಾಗಿ ಇರುವ ಸಂಸ್ಥೆಯಾಗಿದೆ. TeLEOS-2 ಮತ್ತು Lumelite-4 ಉಪಗ್ರಹಗಳು ತಲಾ 741 ಕೆಜಿ ಮತ್ತು 16 ಕೆಜಿ ತೂಕ ಹೊಂದಿದ್ದವು.
ಟ್ವಿಟ್ಟರ್ ಖರೀದಿ ಮೂಲಕ ಹೆಚ್ಚು ಸುದ್ದಿಯಲ್ಲಿರುವ ಎಲಾನ್ ಮಸ್ಕ್ ಅವರು ಸ್ಪೇಸ್ ಎಕ್ಸ್ ಎಂಬ ಖಾಸಗಿ ಬಾಹ್ಯಾಕಾಶ ಕಂಪನಿಯನ್ನು ಹೊಂದಿದ್ದಾರೆ. ಇತ್ತೀಚೆಗೆ, ಅವರ ಸಂಸ್ಥೆ ನಿರ್ಮಿಸಿದ ಸ್ಟಾರ್‌ಶಿಪ್ ರಾಕೆಟ್ ತನ್ನ ಮೊದಲ ಹಾರಾಟದ ಸಮಯದಲ್ಲಿ ಸ್ಫೋಟಗೊಂಡಿತ್ತು. ಸ್ಟಾರ್‌ಶಿಪ್ ಎಂಬ ಮುಂದಿನ ಪೀಳಿಗೆಯ ಬಾಹ್ಯಾಕಾಶ ನೌಕೆಯನ್ನು ಗಗನಯಾತ್ರಿಗಳನ್ನು ಚಂದ್ರ, ಮಂಗಳ ಮತ್ತು ಅದರಾಚೆಗೆ ಕಳುಹಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ.
ಸಂಪೂರ್ಣ 90 ನಿಮಿಷಗಳ ಹಾರಾಟ ಪರೀಕ್ಷೆಯನ್ನು ಪೂರ್ಣಗೊಳಿಸಲು ಮತ್ತು ಕಕ್ಷೆಯನ್ನು ತಲುಪಲು ವಿಫಲವಾದ ಹೊರತಾಗಿಯೂ "ಇದು ಯಶಸ್ವಿ ಪ್ರಯೋಗ" ಎಂದು ಎಲಾನ್ ಮಸ್ಕ್ ಹೇಳಿದ್ದರು.
ಮಾನವ ಇದುವರೆಗೆ ನಿರ್ಮಿಸಿದ ಅತ್ಯಂತ ಶಕ್ತಿಶಾಲಿ ರಾಕೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ, ಸ್ಪೇಸ್‌ಎಕ್ಸ್‌ನ ಸ್ಟಾರ್‌ಶಿಪ್ ಪರೀಕ್ಷಾರ್ಥ ಉಡಾವಣೆ ವೇಳೆ ಸ್ಫೋಟಗೊಂಡಿದೆ. ಚಂದ್ರ, ಮಂಗಳ ಮತ್ತು ಅದರಾಚೆಗೆ ಗಗನಯಾತ್ರಿಗಳನ್ನು ಕಳುಹಿಸಲು ವಿನ್ಯಾಸಗೊಳಿಸಿದ ಬಾಹ್ಯಾಕಾಶ ನೌಕೆ, ತನ್ನ ಮೊದಲ ಪರೀಕ್ಷಾರ್ಥ ಹಾರಾಟದ ಸಮಯದಲ್ಲಿ ಸ್ಫೋಟಿಸಿರುವುದು, ಜಾಗತಿಕ ಖಗೋಳಪ್ರಿಯರ ನೋವಿಗೆ ಕಾರಣವಾಗಿದೆ. ಈ ಕುರಿತ ವರದಿ ಇಲ್ಲಿದೆ ಓದಿ.
ಇದು ಸ್ಪೇಸ್‌ಎಕ್ಸ್‌ನ ಬೃಹತ್ ಸ್ಟಾರ್‌ಶಿಪ್ ಗಗನನೌಕೆ. ಭೂಮಿಯಿಂದ ಅಂತರಿಕ್ಷಕ್ಕೆ ಕಾರ್ಗೊ ಮಾತ್ರವಲ್ಲದೆ ಮನುಷ್ಯರನ್ನೂ ಕೊಂಡೊಯ್ಯುವಂತೆ ನಿರ್ಮಿಸಲಾಗಿದೆ. ಭವಿಷ್ಯದಲ್ಲಿ ಇದೇ ಸ್ಟಾರ್‌ಶಿಪ್ ಮೂಲಕ ನಾಸಾದ ಗಗನಯಾನಿಗಳನ್ನು ಅಂತರಿಕ್ಷದಲ್ಲಿ ಬಹುದೂರ ಕರೆದೊಯ್ದು ವಾಪಸ್ ಕರೆತರುವ ಯೋಜನೆ ಸ್ಪೇಸ್‌ಎಕ್ಸ್‌ಗಿದೆ. ವಿಶೇಷವಾಗಿ, ನಾಸಾದ ಗಗನಯಾನಿಗಳನ್ನು ಚಂದ್ರನಲ್ಲಿಗೆ ಕರೆದೊಯ್ಯುವ ಯೋಜನೆ ಎಲಾನ್ ಮಸ್ಕ್ ನೇತೃತ್ವದ ಸ್ಪೇಸ್ ಎಕ್ಸ್‌ಗಿದೆ.