Starship Rocket: ಪರೀಕ್ಷಾರ್ಥ ಉಡಾವಣೆ ವೇಳೆ ಸ್ಫೋಟಿಸಿದ ಸ್ಪೇಸ್‌ಎಕ್ಸ್ ರಾಕೆಟ್; ಮಸ್ಕ್ ಬಾಹ್ಯಾಕಾಶ ದಂಡಯಾತ್ರೆಗೆ ಮತ್ತೊಂದು ಅಡ್ಡಿ
ಮಾನವ ಇದುವರೆಗೆ ನಿರ್ಮಿಸಿದ ಅತ್ಯಂತ ಶಕ್ತಿಶಾಲಿ ರಾಕೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ, ಸ್ಪೇಸ್‌ಎಕ್ಸ್‌ನ ಸ್ಟಾರ್‌ಶಿಪ್ ಪರೀಕ್ಷಾರ್ಥ ಉಡಾವಣೆ ವೇಳೆ ಸ್ಫೋಟಗೊಂಡಿದೆ. ಚಂದ್ರ, ಮಂಗಳ ಮತ್ತು ಅದರಾಚೆಗೆ ಗಗನಯಾತ್ರಿಗಳನ್ನು ಕಳುಹಿಸಲು ವಿನ್ಯಾಸಗೊಳಿಸಿದ ಬಾಹ್ಯಾಕಾಶ ನೌಕೆ, ತನ್ನ ಮೊದಲ ಪರೀಕ್ಷಾರ್ಥ ಹಾರಾಟದ ಸಮಯದಲ್ಲಿ ಸ್ಫೋಟಿಸಿರುವುದು ನೋವಿನ ಸಂಗತಿಯಾಗಿದೆ.
ವಾಷಿಂಗ್ಟನ್: ಮಾನವ ಇದುವರೆಗೆ ನಿರ್ಮಿಸಿದ ಅತ್ಯಂತ ಶಕ್ತಿಶಾಲಿ ರಾಕೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ, ಸ್ಪೇಸ್‌ಎಕ್ಸ್‌ನ ಸ್ಟಾರ್‌ಶಿಪ್ ಪರೀಕ್ಷಾರ್ಥ ಉಡಾವಣೆ ವೇಳೆ ಸ್ಫೋಟಗೊಂಡಿದೆ. ಚಂದ್ರ, ಮಂಗಳ ಮತ್ತು ಅದರಾಚೆಗೆ ಗಗನಯಾತ್ರಿಗಳನ್ನು ಕಳುಹಿಸಲು ವಿನ್ಯಾಸಗೊಳಿಸಿದ ಬಾಹ್ಯಾಕಾಶ ನೌಕೆ, ತನ್ನ ಮೊದಲ ಪರೀಕ್ಷಾರ್ಥ ಹಾರಾಟದ ಸಮಯದಲ್ಲಿ ಸ್ಫೋಟಿಸಿರುವುದು, ಜಾಗತಿಕ ಖಗೋಳಪ್ರಿಯರ ನೋವಿಗೆ ಕಾರಣವಾಗಿದೆ.
ಟೆಕ್ಸಾಸ್‌ನ ಬೊಕಾ ಚಿಕಾದಲ್ಲಿರುವ ಖಾಸಗಿ ಸ್ಪೇಸ್‌ಎಕ್ಸ್ ಬಾಹ್ಯಾಕಾಶ ನಿಲ್ದಾಣವಾದ ಸ್ಟಾರ್‌ಬೇಸ್‌ನಿಂದ, ಬೆಳಗ್ಗೆ 8:33ಕ್ಕೆ ದೈತ್ಯಾಕಾರದ ಸ್ಟಾರ್‌ಶಿಪ್ ರಾಕೆಟ್‌ನ ಪರೀಕ್ಷಾರ್ಥ ಉಡಾವಣೆಗಾಗಿ ನಭಕ್ಕೆ ಚಿಮ್ಮಿತ್ತು. ಆದರೆ ಉಡಾವಣೆಗೊಂಡ ಕೆಲ ಸಮಯದಲ್ಲೇ ವಿಶ್ವದ ಅತ್ಯಂತ ಶಕ್ತಿಶಾಲಿ ರಾಕೆಟ್ ಸ್ಫೋಟಗೊಂಡಿತು ಎಂದು ಸ್ಪೇಸ್‌ಎಕ್ಸ್ ತಿಳಿಸಿದೆ.
"ಸ್ಟಾರ್‌ಶಿಪ್ ಕ್ಯಾಪ್ಸುಲ್ ಅನ್ನು ಮೊದಲ ಹಂತದ ರಾಕೆಟ್ ಬೂಸ್ಟರ್‌ನಿಂದ ಮೂರು ನಿಮಿಷಗಳ ಕಾಲ, ಸಿಬ್ಬಂದಿರಹಿತ ಹಾರಾಟಕ್ಕೆ ಪ್ರತ್ಯೇಕಿಸಲು ನಿಗದಿಪಡಿಸಲಾಗಿತ್ತು ಆದರೆ ಪ್ರತ್ಯೇಕತೆಯ ಪ್ರಕ್ರಿಯೆ ವಿಫಲಗೊಂಡ ಪರಿಣಾಮ ರಾಕೆಟ್ ಆಗಸದಲ್ಲಿ ಸ್ಫೋಟಿಸಿತು.." ಎಂದು ಸ್ಪೇಸ್‌ಎಕ್ಸ್ ಟ್ವೀಟ್ ಮಾಡಿದೆ.
ಸಂಪೂರ್ಣ ಹಾರಾಟ ಪರೀಕ್ಷೆಯನ್ನು ಪೂರ್ಣಗೊಳಿಸಲು ವಿಫಲವಾದರೂ, ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗಿರುವುದಾಗಿ ಸ್ಪೇಸ್‌ಎಕ್ಸ್ ಘೋಷಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸ್ಪೇಸ್‌ಎಕಜ್ಸ್ ಸಿಸ್ಟಮ್ಸ್ ಎಂಜಿನಿಯರ್ ಕೇಟ್ ಟೈಸ್, "ಇಂದಿನ ಪರೀಕ್ಷೆಯು ಸ್ಟಾರ್‌ಶಿಪ್‌ನ ವಿಶ್ವಾಸಾರ್ಹತೆಯನ್ನು ಸುಧಾರಿಸಲು ನಮಗೆ ಸಹಾಯ ಮಾಡುತ್ತದೆ. ಮಾನವರನ್ನು ಬಹುಗ್ರಹ ಜೀವಿಯನ್ನಾಗಿಸುವ ನಮ್ಮ ಪ್ರಯತ್ನ ಮುಂದುವರೆಯಲಿದೆ.." ಎಂದು ಹೇಳಿದ್ದಾರೆ.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ 2025ರ ಅಂತ್ಯದಲ್ಲಿ ಚಂದ್ರನ ಮೇಲೆ ಗಗನಯಾತ್ರಿಗಳನ್ನು ಕಳುಹಿಸಲು, ಸ್ಟಾರ್‌ಶಿಪ್ ಬಾಹ್ಯಾಕಾಶ ನೌಕೆಯನ್ನು ಆರಿಸಿಕೊಂಡಿದೆ. ಆರ್ಟೆಮಿಸ್ III ಎಂದು ಕರೆಯಲ್ಪಡುವ ಈ ಯೋಜನೆಯು, 1972ರಲ್ಲಿ ಕೊನೆಗೊಂಡ ಅಪೊಲೊ ಮೂನ್ ಮಿಷನ್ ಬಳಿಕ ಕೈಗೊಂಡ ಮೊದಲ ಚಂದ್ರ ಯೋಜನೆಯಾಗಿದೆ.
ಸ್ಪೇಸ್‌ಎಕ್ಸ್ ಕಳೆದ ಫೆಬ್ರವರಿಯಲ್ಲಿ ಮೊದಲ ಹಂತದ ಬೂಸ್ಟರ್‌ನಲ್ಲಿ, 33 ಬೃಹತ್ ರಾಪ್ಟರ್ ಎಂಜಿನ್‌ಗಳ ಯಶಸ್ವಿ ಪರೀಕ್ಷಾರ್ಥ ಉಡಾವಣೆ ನಡೆಸಿತ್ತು. ಆದರೆ ಸ್ಟಾರ್‌ಶಿಪ್ ಬಾಹ್ಯಾಕಾಶ ನೌಕೆ ಮತ್ತು ಸೂಪರ್ ಹೆವಿ ರಾಕೆಟ್‌ನ್ನು ಇದೇ ಮೊದಲ ಬಾರಿಗೆ ಒಟ್ಟಿಗೆ ಹಾರಿಸಲಾಗಿತ್ತು. ಸಂಯೋಜಿತ ಪರೀಕ್ಷಾ ಹಾರಾಟವು ರಾಕೆಟ್‌ನ ಕಾರ್ಯಕ್ಷಮತೆಯನ್ನು ನಿರ್ಣಯಿಸುವ ಉದ್ದೇಶವನ್ನು ಹೊಂದಿತ್ತು.
ಸ್ಪೇಸ್‌ಎಕ್ಸ್ ಸಂಸ್ಥಾಪಕ ಎಲಾನ್ ಮಸ್ಕ್ ಅವರು ಉಡಾವಣೆಗೆ ಮುಂಚಿತವಾಗಿ ತಾಂತ್ರಿಕ ಸಮಸ್ಯೆಗಳ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದರು. ಅಲ್ಲದೇ ಪರೀಕ್ಷಾ ಹಾರಾಟದ ನಿರೀಕ್ಷೆಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿದರು. "ಇದು ತುಂಬಾ ಅಪಾಯಕಾರಿ ಬಾಹ್ಯಾಕಾಶ ನೌಕೆಯಾಗಿದ್ದು, ಇದು ಅತ್ಯಂತ ಸಂಕೀರ್ಣವಾದ ಮತ್ತು ದೈತ್ಯಾಕಾರದ ರಾಕೆಟ್‌ನ ಮೊದಲ ಪರೀಕ್ಷಾರ್ಥ ಉಡಾವಣೆಯಾಗಿದೆ.." ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದರು.
ಸ್ಟಾರ್‌ಶಿಪ್ ರಾಕೆಟ್ ಗಾತ್ರದಲ್ಲಿ ಎಸ್‌ಎಲ್‌ಎಸ್ ರಾಕೆಟ್‌ಗಿಂತ ದೊಡ್ಡದಿದೆ. ಇದು 100 ಮೆಟ್ರಿಕ್ ಟನ್‌ಗಳಿಗಿಂತ ಹೆಚ್ಚು ಪೇಲೋಡ್ ಅನ್ನು ಕಕ್ಷೆಗೆ ಸೇರಿಸುವ ಸಾಮರ್ಥ್ಯ ಹೊಂದಿದೆ. ಸರಾಸರಿ 17 ಮಿಲಿಯನ್ ಪೌಂಡ್ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಈ ರಾಕೆಟ್, ಅಪೊಲೊ ಗಗನಯಾತ್ರಿಗಳನ್ನು ಚಂದ್ರನಿಗೆ ಕಳುಹಿಸಲು ಬಳಸಿದ ಸ್ಯಾಟರ್ನ್ V ರಾಕೆಟ್‌ಗಳಿಗಿಂತ ಎರಡು ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ.
ಚಂದ್ರ ಮತ್ತು ಮಂಗಳ ಗ್ರಹದ ಮೇಲೆ ಮಾನವ ನೆಲೆಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿರುವ ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಸಂಸ್ಥೆ, ಬಹು-ಗ್ರಹಗಳ ನಾಗರಿಕತೆಯ ನಿರ್ಮಾಣದ ಗುರಿಯನ್ನು ಹೊಂದಿದೆ. ಮಾನವನ ಬಾಹ್ಯಾಕಾಶ ದಂಡಯಾತ್ರೆಯನ್ನು ಮತ್ತಷ್ಟು ವಿಸ್ತರಿಸುವುದು ಮತ್ತು ಈ ದಂಡಯಾತ್ರೆಯಲ್ಲಿ ಅಂತಿಮವಾಗಿ ಜಯಗಳಿಸುವುದು ನನ್ನ ಕನಸು ಎಂದು ಎಲಾನ್ ಮಸ್ಕ್ ಹಲವು ಬಾರಿ ಹೇಳಿಕೊಂಡಿದ್ದಾರೆ.