Bharat Jodo Yatra: ಬಲವಂತದ ಹಣ ವಸೂಲಿಗೆ ನಿಂತ ಕಾರ್ಯಕರ್ತರನ್ನು ವಜಾಗೊಳಿಸಿದ ಕಾಂಗ್ರೆಸ್!
ಕೇರಳದಲ್ಲಿ ʼಭಾರತ್ ಜೋಡೋʼ ಯಾತ್ರೆಗಾಗಿ ತರಕಾರಿ ಅಂಗಡಿಯವರಿಂದ ಕಾಂಗ್ರೆಸ್ ಕಾರ್ಯಕರ್ತರು ಬಲವಂತವಾಗಿ ಹಣ ವಸೂಲಿ ಮಾಡಿದ ಘಟನೆ ನಡೆದಿದೆ. ಈ ಮೂಲಕ ಸದ್ಯ ಕೊಲ್ಲಂನಲ್ಲಿರುವ ʼಭಾರತ್ ಜೋಡೋʼ ಯಾತ್ರೆ ಹೊಸ ವಿವಾದವನ್ನು ಸೃಷ್ಟಿಸಿದೆ. ಬಲವಂತದಿಂದ ಹಣ ವಸೂಲಿ ಮಾಡಿದ ಮೂವರು ಕಾರ್ಯಕರ್ತರನ್ನು ಕೇರಳ ಕಾಂಗ್ರೆಸ್ ಘಟಕ, ಪಕ್ಷದಿಂದ ವಜಾಗೊಳಿಸಿದೆ.
ಕೊಲ್ಲಂ: ದೇಶದ ಕೋಮು ಸೌಹಾರ್ದತೆಗಾಗಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ʼಭಾರತ್ ಜೋಡೋʼ ಯಾತ್ರೆ ನಿತ್ಯವೂ ವಿವಾದದ ಸುಳಿಯಲ್ಲಿ ಸಿಲುಕುತ್ತಿದೆ. ರಾಹುಲ್ ಗಾಂಧಿ ಮತ್ತು ವಿವಾದಾತ್ಮಕ ಹೇಳಿಕೆ ನೀಡುವ ಕ್ರಿಶ್ಚಿಯನ್ ಪಾದ್ರಿ ನಡುವಿನ ಭೇಟಿ, ರಾಹುಲ್ ಗಾಂಧಿ ಅವರ ದುಬಾರಿ ಟೀ-ಶರ್ಟ್ ಮತ್ತು ಆರ್‌ಎಸ್‌ಎಸ್ ಸಮವಸ್ತ್ರ ಸುಡುವ ಟ್ವೀಟ್‌ನಿಂದ ʼಭಾರತ್ ಜೋಡೋ ಯಾತ್ರೆ ಈಗಾಗಲೇ ವಿವಾದಕ್ಕೀಡಾಗಿದೆ.
ಇದೀಗ ಕೇರಳದಲ್ಲಿ ʼಭಾರತ್ ಜೋಡೋʼ ಯಾತ್ರೆಗಾಗಿ ತರಕಾರಿ ಅಂಗಡಿಯವರಿಂದ ಕಾಂಗ್ರೆಸ್ ಕಾರ್ಯಕರ್ತರು ಬಲವಂತವಾಗಿ ಹಣ ವಸೂಲಿ ಮಾಡಿದ ಘಟನೆ ನಡೆದಿದೆ. ಈ ಮೂಲಕ ಸದ್ಯ ಕೊಲ್ಲಂನಲ್ಲಿರುವ ʼಭಾರತ್ ಜೋಡೋʼ ಯಾತ್ರೆ ಹೊಸ ವಿವಾದವನ್ನು ಸೃಷ್ಟಿಸಿದೆ.
ಕೊಲ್ಲಂನಲ್ಲಿ 'ಭಾರತ್ ಜೋಡೋ ಯಾತ್ರೆ'ಗೆ 2,000 ರೂಪಾಯಿ ನಿಧಿ ಸಂಗ್ರಹಕ್ಕೆ, ತರಕಾರಿ ವ್ಯಾಪಾರಸ್ಥರಿಗೆ ಕಾಂಗ್ರೆಸ್ ಕಾರ್ಯಕರ್ತರು ಬಲವಂತಪಡಿಸಿದ ಘಟನೆ ನಡೆದಿದೆ. ಹಣ ನೀಡಲು ಒಪ್ಪದ ತರಕಾರಿ ಅಂಗಡಿ ಮಾಲೀಕರಿಗೆ, ಕಾಂಗ್ರೆಸ್ ಕಾರ್ಯಕರ್ತರು ಬೆದರಿಕೆ ಕೂಡ ಹಾಕಿದ್ದಾರೆ ಎನ್ನಲಾಗಿದೆ.
ಈ ಕುರಿತಾದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್ ಕಾರ್ಯಕರ್ತರ ಬಲವಂತದ ಹಣ ವಸೂಲಿಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್ ʼಭಾರತ್ ಜೋಡೋʼ ಯಾತ್ರೆಯ ಹೆಸರಿನಲ್ಲಿ ಹಣ ವಸೂಲಿ ದಂಧೆಯಲ್ಲಿ ನಿರತವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಕೊಲ್ಲಂ ತಲುಪಿರುವ ʼಭಾರತ್ ಜೋಡೋʼ ಯಾತ್ರೆಗಾಗಿ ತಲಾ 2,000 ರೂಪಾಯಿ ನೀಡುವಂತೆ ಕಾಂಗ್ರೆಸ್ ಕಾರ್ಯಕರ್ತರು ತರಕಾರಿ ಅಂಗಡಿ ಮಾಲೀಕರನ್ನು ಒತ್ತಾಯಿಸಿದ್ದಾರೆ. ಇದಕ್ಕೆ ತರಕಾರಿ ಅಂಗಡಿ ಮಾಲೀಕರು ನಿರಾಕರಿಸಿದಾಗ, ಕಾಂಗ್ರೆಸ್ ಕಾರ್ಯಕರ್ತರು ಬೆದರಿಕೆಯೊಡ್ಡಿದ್ದಾರೆ.
ಕಾರ್ಯಕರ್ತರನ್ನು ವಜಾಗೊಳಿಸಿದ ಕಾಂಗ್ರೆಸ್:
ಇನ್ನು ʼಭಾರತ್ ಜೋಡೋʼ ಯಾತ್ರೆಗಾಗಿ 2,000 ರೂಪಾಯಿ ಹಣ ನೀಡುವಂತೆ ತರಕಾರಿ ಅಂಗಡಿ ಮಾಲೀಕರನ್ನು ಒತ್ತಾಯಿಸಿದ ಕಾರ್ಯಕರ್ತರನ್ನು, ಕಾಂಗ್ರೆಸ್ ಪಕ್ಷದಿಂದ ವಜಾಗೊಳಿಸಿದೆ. ಈ ಕುರಿತು ಮಹಿತಿ ನೀಡಿರುವ ಕೇರಳ ಕಾಂಗ್ರೆಸ್ ಘಟಕದ ಮುಖ್ಯಸ್ಥ ಕೆ. ಸುಧಾಕರನ್, ಜನರೊಂದಿಗೆ ಅನುಚಿತ ವರ್ತನೆ ತೋರಿದ ಮೂವರು ಕಾರ್ಯಕರ್ತರನ್ನು ವಜಾಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ʼಭಾರತ್ ಜೋಡೋʼ ಯಾತ್ರೆಗೆ ಕೇರಳದಲ್ಲಿ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದೆ. ಆದರೆ ಯಾತ್ರೆಗೆ ಬೆಂಬಲ ನೀಡುವಂತೆ ಪಕ್ಷವು ಯಾರನ್ನೂ ಬಲವಂತಪಡಿಸಿಲ್ಲ. ಕೊಲ್ಲಂನಲ್ಲಿ ನಡೆದ ಘಟನೆಯನ್ನು ಪಕ್ಷವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಜನರಿಗೆ ತೊಂದರೆ ನೀಡಿದ ಮೂವರು ಕಾರ್ಯಕರ್ತರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ ಎಂದು ಕೆ. ಸುಧಾಕರನ್ ಹೇಳಿದ್ದಾರೆ.
ಇನ್ನು ಇದೇ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್ ಸಂಸದ ಕೆ. ಸುರೇಶ್, ʼಭಾರತ್ ಜೋಡೋʼ ಯಾತ್ರೆಗೆ ಸಾರ್ವಜನಿಕರಿಂದ ಪಕ್ಷವು ದೇಣಿಗಹೆ ಸಂಗ್ರಹಿಸುತ್ತಿದೆ. ಅನ್ಯ ಪಕ್ಷಗಳಂತೆ ಕಾರ್ಪೋರೇಟ್ ಹಣದ ಮೇಲೆ ಕಾಂಗ್ರೆಸ್ ಅವಲಂಬಿತವಾಗಿಲ್ಲ. ಆದರೆ ಯಾರನ್ನೂ ಹಣ ನೀಡುವಂಯತೆ ಒತ್ತಾಯ ಮಾಡುತ್ತಿಲ್ಲ. ಕೊಲ್ಲಂನಲ್ಲಿ ನಡೆದ ಈ ಘಟನೆ ಕ್ಷಮೆಗೆ ಅರ್ಹವಲ್ಲ. ಹೀಗಾಗಿ ತರಕಾರಿ ಅಂಗಡಿ ಮಾಲೀಕರಿಗೆ ಕಿರುಕುಳ ನೀಡಿದ ಮೂವರೂ ಕಾರ್ಯಕರ್ತರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಆರಂಭದಿಂದಲೂ ʼಭಾರತ್ ಜೋಡೋʼ ಯಾತ್ರೆಯ ಬಗ್ಗೆ ಅಪಪ್ರಚಾರ ನಡೆಸುತ್ತಿದೆ. ಸಣ್ಣ ಸಣ್ಣ ಘಟನೆಗಳನ್ನೂ ದೊಡ್ಡದಾಗಿ ಮಾಡಿ ತೋರಿಸುತ್ತಿದೆ. ಆದರೆ ಕೇರಳದ ಜನ ಬಿಜೆಪಿಯ ಸುಳ್ಳು ಪ್ರಚಾರವನ್ನು ನಂಬುವುದಿಲ್ಲ ಎಂದು ಕೆ. ಸುರೇಶ್ ತೀವ್ರ ವಾಗ್ದಾಳಿ ನಡೆಸಿದರು.
ʼಭಾರತ್ ಜೋಡೋʼ ಯಾತ್ರೆಗೆ ಜನರಿಂದ ಇಂತಹ ಬೆಂಬಲವನ್ನು ಬಿಜೆಪಿ ನಿರೀಕ್ಷಿಸಿರಲಿಲ್ಲ. ಕೇರಳದ ಆಡಳಿತಾರೂಢ ಸಿಪಿಎಂ ಸೇರಿದಂತೆ ಎಡಪಕ್ಷಗಳು ಸಹ ನಮಗೆ ದೊರೆಯುತ್ತಿರುವ ಜನಬೆಂಬಲ ಕಂಡು ಚಿಂತೆಗೀಡಾಗಿವೆ. ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳು ರಾಹುಲ್ ಗಾಂಧಿಯವರೊಂದಿಗೆ ಗಟ್ಟಿಯಾಗಿ ನಿಂತಿವೆ. ರಾಷ್ಟ್ರ ರಾಜಕಾರಣದಲ್ಲಿ ಪ್ರಧಾನಿ ಮೋದಿ ಅವರಿಗೆ ರಾಹುಲ್ ಗಾಂಧಿ ಮಾತ್ರ ಪರ್ಯಾಯ ನಾಯಕರಾಗಿದ್ದಾರೆ ಎಂದು ಕೆ. ಸುರೇಶ್ ಅಭಿಪ್ರಾಯಪಟ್ಟಿದ್ದಾರೆ.
ವಿಭಾಗ